Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹೋಶೇಯ 6 - ಕನ್ನಡ ಸತ್ಯವೇದವು C.L. Bible (BSI)


ದುಷ್ಕೃತ್ಯಕ್ಕೆ ತಕ್ಕ ದುರ್ಭಿಕ್ಷ

1 ನನ್ನನ್ನು ಜನರು ಮರೆಹೋಗುತ್ತಾ ಹೀಗೆನ್ನುವರು: “ಬನ್ನಿ, ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿಸಿದವರು. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ; ಅವರೇ ನಮ್ಮ ಗಾಯಗಳನ್ನು ಕಟ್ಟಿ ಗುಣಪಡಿಸುವರು. ಒಂದೆರಡು ದಿನಗಳ ನಂತರ ಅವರು ನಮ್ಮನ್ನು ಬದುಕಿಸುವರು.

2 ಮೂರನೆಯ ದಿನದಲ್ಲಿ ಅವರು ನಮ್ಮನ್ನು ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು.

3 ನಿರಂತರವಾಗಿ ಹುಡುಕಿ ಅವರನ್ನು ಕಂಡುಕೊಳ್ಳೋಣ; ಸರ್ವೇಶ್ವರಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದಂತೆ ನಿಶ್ಚಯ. ಭೂಮಿಯನ್ನು ತಣಿಸುವ ಮುಂಗಾರು ಹಿಂಗಾರು ಮಳೆಗಳಂತೆ ಅವರು ನಮ್ಮ ಬಳಿಗೆ ಬಂದೇ ಬರುವರು.

4 ಆದರೆ ಸರ್ವೇಶ್ವರ ಹೇಳುವುದೇನೆಂದರೆ: “ಎಫ್ರಯಿಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದಂತಿದೆ; ಬೇಗನೆ ಮಾಯವಾಗುವ ಇಬ್ಬನಿಯಂತಿದೆ.

5 ಖಂಡತುಂಡವಾದ ತೀರ್ಪುನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯದಂಡನೆ ಮಿಂಚಿನಂತೆ ಹೊರಡುವುದು.

6 ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ; ನನಗೆ ಬೇಕಾದುದು ದೈವಜ್ಞಾನ, ದಹನಬಲಿ ದಾನವಲ್ಲ.

7 “ಆದಾಮನಂತೆ ಅವರು ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದ್ದಾರೆ. ಅವನಂತೆ ಅವರು ನನಗೆ ದ್ರೋಹವೆಸಗಿದ್ದಾರೆ.

8 ಗಿಲ್ಯಾದು ದುಷ್ಟಜನರಿಂದ ತುಂಬಿದೆ. ಅವರು ತುಳಿಯುವ ಹಾದಿಗಳಲ್ಲೆಲ್ಲ ರಕ್ತಕಲೆಗಳೇ.

9 ದರೋಡೆಗಾರರು ದಾರಿಹೋಕರಿಗಾಗಿ ಹೊಂಚುಹಾಕುವಂತೆ ಯಾಜಕರು ಗುಂಪುಗೂಡಿ ಹೊಂಚುಹಾಕುತ್ತಾ, ಶೆಖೆಮಿಗೆ ಯಾತ್ರೆಹೋಗುವವರನ್ನು ಕೊಂದುಹಾಕುತ್ತಾರೆ. ಅವರು ಮಾಡುವುದು ನಿಜಕ್ಕೂ ಘೋರಕೃತ್ಯ.

10 ಇಸ್ರಯೇಲ್ ಮನೆತನದಲ್ಲಿ ಘೋರಕೃತ್ಯಗಳು ಕಾಣಿಸಿಕೊಂಡಿವೆ. ಅಲ್ಲಿ ಎಫ್ರಯಿಮಿನೊಳಗೆ ವೇಶ್ಯಾಚಾರ ನಡೆಯುತ್ತಿದೆ. ಇಸ್ರಯೇಲ್ ಕಲುಷಿತವಾಗಿದೆ.

11 “ಜುದೇಯವೇ, ನೀನು ಮಾಡುವ ದುಷ್ಕೃತ್ಯಗಳಿಗೆ ತಕ್ಕ ಸುಗ್ಗಿ ಕಾದಿದೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು