Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹೋಶೇಯ 4 - ಕನ್ನಡ ಸತ್ಯವೇದವು C.L. Bible (BSI)


ಭಕ್ತಿಹೀನ ಜನತೆ

1 ಇಸ್ರಯೇಲಿನವರೇ, ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಆಲಿಸಿರಿ: “ಈ ದೇಶದಲ್ಲಿ ಸತ್ಯ, ಪ್ರೀತಿ, ಭಕ್ತಿ ಎಂಬುದೇ ಇಲ್ಲ. ಇಲ್ಲಿನ ನಿವಾಸಿಗಳ ಮೇಲೆ ಸರ್ವೇಶ್ವರ ಆಪಾದನೆ ಹೊರಿಸಿದ್ದಾರೆ.

2 ಸುಳ್ಳುಸಾಕ್ಷಿ, ನರಹತ್ಯೆ, ಕಳ್ಳತನ, ವ್ಯಭಿಚಾರ ಇವೆಲ್ಲ ತುಂಬಿಕೊಂಡಿವೆ; ದೊಂಬಿದಾಂಧಲೆಗಳು ನಡೆಯುತ್ತಿವೆ, ನಾಡೆಲ್ಲ ರಕ್ತಮಯವಾಗಿದೆ.

3 ಇದರಿಂದ ನಾಡು ಶೋಕಸಾಗರದಲ್ಲಿ ಮುಳುಗಿದೆ. ಅದರ ನಿವಾಸಿಗಳೆಲ್ಲ ನರಳುತ್ತಿದ್ದಾರೆ. ನೆಲದ ಮೇಲಿನ ಜಂತುಗಳು, ಆಕಾಶದ ಪಕ್ಷಿಗಳು ಬಳಲುತ್ತಿವೆ. ಜಲಜಂತುಗಳು ಸಹ ನಶಿಸಿಹೋಗುತ್ತಿವೆ.


ಯಾಜಕರ ಮೇಲೆ ಆಪಾದನೆ

4 “ಯಾರೂ ಪ್ರತಿಭಟಿಸದಿರಲಿ, ಯಾರೂ ಜನರನ್ನು ಖಂಡಿಸದಿರಲಿ. ನನ್ನ ಆಪಾದನೆ ಇರುವುದು, ಎಲೈ ಯಾಜಕರೇ, ನಿಮ್ಮ ಮೇಲೆಯೇ.

5 ಹಗಲಿನಲ್ಲೇ ನೀವು ಮುಗ್ಗರಿಸುತ್ತೀರಿ. ರಾತ್ರಿಯಲ್ಲಿ ಪ್ರವಾದಿಗಳು ಸಹ ನಿಮ್ಮೊಂದಿಗೆ ಮುಗ್ಗರಿಸುತ್ತಾರೆ. ನಿಮ್ಮ ವಂಶವೃಕ್ಷವನ್ನೇ ನಾನು ನಿರ್ಮೂಲಮಾಡುವೆನು.

6 ಜನರು ಜ್ಞಾನಹೀನರಾಗಿ ಅಳಿದುಹೋಗುತ್ತಿದ್ದಾರೆ. “ನೀವು ದೈವಜ್ಞಾನವನ್ನು ತಿರಸ್ಕರಿಸಿದ್ದೀರಿ; ನಾನು ಸಹ ಯಾಜಕವರ್ಗದಿಂದ ನಿಮ್ಮನ್ನು ವರ್ಜಿಸಿಬಿಡುತ್ತೇನೆ. ನೀವು ದೇವರ ಧರ್ಮೋಪದೇಶವನ್ನು ಮರೆತುಬಿಟ್ಟಿದ್ದೀರಿ; ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ.

7 “ಅವರ ಸಂತಾನ ಹೆಚ್ಚಿದ ಹಾಗೆಲ್ಲ ಅವರು ನನ್ನ ವಿರುದ್ಧ ಪಾಪಮಾಡುತ್ತಾ ಬಂದಿದ್ದಾರೆ. ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುತ್ತೇನೆ.

8 ನನ್ನ ಜನರ ಪಾಪವೇ ಅವರಿಗೆ ಜೀವನಾಧಾರ. ಎಂತಲೇ ಅವರು ಪಾಪಕೃತ್ಯಗಳನ್ನೇ ಅಧಿಕವಾಗಿ ಬಯಸುತ್ತಾರೆ.

9 ಪ್ರಜೆಗಳಂತೆಯೇ ಯಾಜಕ, ನಿಮ್ಮ ದುಷ್ಕೃತ್ಯಗಳಿಗೆ ತಕ್ಕ ದಂಡನೆಯನ್ನು ವಿಧಿಸುತ್ತೇನೆ. ಅವುಗಳ ಪ್ರತಿಫಲವನ್ನು ನೀವೇ ಅನುಭವಿಸುವಂತೆ ಮಾಡುತ್ತೇನೆ.

10 ಎಷ್ಟು ತಿಂದರೂ ನಿಮಗೆ ತೃಪ್ತಿಯಾಗದು. ಎಷ್ಟು ವ್ಯಭಿಚಾರಗೈದರೂ ನಿಮಗೆ ಸಂತಾನ ಪ್ರಾಪ್ತಿಯಾಗದು. ಕಾರಣ, ನೀವು ವೇಶ್ಯಾಚಾರಕ್ಕಾಗಿ ಸರ್ವೇಶ್ವರನನ್ನೇ ತಿರಸ್ಕರಿಸಿದ್ದೀರಿ.


ಮತಿಹೀನರು ಗತಿಸಿಹೋಗುವರು

11 “ಮದ್ಯಪಾನ, ದ್ರಾಕ್ಷಾರಸ - ಇವು ಜನರನ್ನು ಬುದ್ಧಿಹೀನರನ್ನಾಗಿ ಮಾಡುತ್ತವೆ.

12 ನನ್ನ ಜನರು ಮರದ ತುಂಡನ್ನು ಹಿಡಿದು ಕಣಿ ಕೇಳುತ್ತಾರೆ; ಕೈಯಲ್ಲಿ ಹಿಡಿದ ದೊಣ್ಣೆಯಿಂದ ವಿವೇಕವಾಣಿಯನ್ನು ಪಡೆಯಲೆತ್ನಿಸುತ್ತಾರೆ. ವ್ಯಭಿಚಾರಗುಣ ಅವರನ್ನು ತಪ್ಪುದಾರಿಗೆ ಎಳೆದಿದೆ. ದೇವರ ಸದ್ಭಕ್ತಿಯನ್ನು ತೊರೆದು ಅವರು ಧರ್ಮಭ್ರಷ್ಠರಾಗಿದ್ದಾರೆ.

13 ಅವರು ಗಿರಿಶಿಖರಗಳ ಮೇಲೆ ಬಲಿಯನರ್ಪಿಸುತ್ತಾರೆ. ಬೆಟ್ಟಗುಡ್ಡಗಳ ಮೇಲೆ ಧೂಪಹಾಕುತ್ತಾರೆ. ದಟ್ಟ ನೆರಳಿನ ಅಲ್ಲೋನ್, ಲಿಬ್ನೆ, ಏಲಾ ವೃಕ್ಷಗಳ ಅಡಿಯಲ್ಲಿ ಇಂತಹುದನ್ನೆಲ್ಲ ಮಾಡುತ್ತಾರೆ. ಹೀಗಿರಲು ನಿಮ್ಮ ಪುತ್ರಿಯರು ಸೂಳೆಯರಾಗುವರು. ನಿಮ್ಮ ಸೊಸೆಗಳು ವ್ಯಭಿಚಾರಿಣಿಗಳಾಗುವರು. ಇದರಲ್ಲಿ ಆಶ್ಚರ್ಯವೇನಿಲ್ಲ.

14 ಸೂಳೆಯರಾಗಿ ನಡೆಯುವ ಪುತ್ರಿಯರನ್ನು ನಾನು ದಂಡಿಸುವುದಿಲ್ಲ, ವ್ಯಭಿಚಾರ ಮಾಡುವ ಸೊಸೆಗಳನ್ನು ನಾನು ಶಿಕ್ಷಿಸುವುದಿಲ್ಲ. ಕಾರಣ, ನೀವೇ ಸೂಳೆಯರನ್ನು ಸೇರಿಕೊಂಡು ಅಡ್ಡದಾರಿ ಹಿಡಿಯುತ್ತೀರಿ. ದೇವದಾಸಿಯರೊಂದಿಗೆ ಸೇರಿ ಬಲಿಯನ್ನು ಅರ್ಪಿಸುತ್ತೀರಿ. ‘ಮತಿಹೀನರು ಗತಿಸಿಹೋಗುವರು’ ಎಂಬ ಹೇಳಿಕೆ ಖಂಡಿತವಾಗಿ ನಿಮಗೆ ಅನ್ವಯಿಸುತ್ತದೆ.

15 “ಓ ಇಸ್ರಯೇಲ್ ನೀನು ವೇಶ್ಯೆಯಾಗಿ ನಡೆದರೂ ಜುದೇಯ ನಾಡು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಬರಬೇಡಿ. ಬೇತಾವೆನಿಗೆ ಯಾತ್ರೆ ಹೋಗಬೇಡಿ. ‘ಜೀವಸ್ವರೂಪನಾದ ಸರ್ವೇಶ್ವರನಾಣೆ’ ಎಂದು ಪ್ರಮಾಣಮಾಡಬೇಡಿ.

16 ಇಸ್ರಯೇಲಿನವರು ಹತೋಟಿಗೆ ಬಾರದ ಹೋರಿಯಂತೆ ಮೊಂಡಾಗಿದ್ದಾರೆ. ಸರ್ವೇಶ್ವರ ಅವರನ್ನು ಈಗ ವಿಶಾಲವಾದ ಹುಲ್ಲುಗಾವಲುಗಳಲ್ಲಿ ಕುರಿಗಳಂತೆ ಮೇಯಿಸಲು ಸಾಧ್ಯವೇ?

17 ಎಫ್ರಯಿಮ್ ವಿಗ್ರಹಗಳ ಪ್ರಭಾವಕ್ಕೆ ಒಳಗಾಗಿದೆ. ಅದನ್ನು ಅದರಷ್ಟಕ್ಕೆ ಬಿಟ್ಟುಬಿಡಿ.

18 ಅವರು ಮದ್ಯಪಾನವನ್ನು ಮಾಡಿದ ನಂತರ ವ್ಯಭಿಚಾರಕ್ಕೆ ಇಳಿಯುತ್ತಾರೆ. ಮಾನಕ್ಕಿಂತ ಅವಮಾನವೇ ಅವರಿಗೆ ಅತಿ ಪ್ರಿಯ.

19 ಬಿರುಗಾಳಿ ಅವರನ್ನು ಬಡಿದೆತ್ತಿಕೊಂಡು ಹೋಗುವುದು. ಅವರು ವಿಗ್ರಹಗಳಿಗೆ ಅರ್ಪಿಸುತ್ತಿದ್ದ ಬಲಿಗಳಿಗಾಗಿ ನಾಚಿಕೆಪಡುವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು