Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹೋಶೇಯ 2 - ಕನ್ನಡ ಸತ್ಯವೇದವು C.L. Bible (BSI)

1 ನಿಮ್ಮ ಸಹೋದರರನ್ನು ‘ನಮ್ಮವರೇ' ಎಂದೂ ನಿಮ್ಮ ಸಹೋದರಿಯರನ್ನು’ಪ್ರೀತಿಪಾತ್ರರೇ’ ಎಂದೂ ಸಂಬೋಧಿಸಿರಿ.


“ಹಳೆಯ ಗಂಡನ ಪಾದವೇ ಗತಿ”

2 ಮಕ್ಕಳೇ, ವಾದಿಸಿರಿ; ನಿಮ್ಮ ತಾಯಿಯೊಡನೆ ವಾದಿಸಿರಿ. ಅವಳು ನನ್ನ ಪತ್ನಿಯಲ್ಲ, ನಾನು ಅವಳ ಪತಿಯಲ್ಲ. ತನ್ನ ಮುಖದಿಂದ ವೇಶ್ಯಾಚಾರದ ಸೋಗನ್ನೂ ಸ್ತನಮಧ್ಯದಿಂದ ವ್ಯಭಿಚಾರದ ಬೆಡಗನ್ನೂ ತ್ಯಜಿಸಲಿ.

3 ಇಲ್ಲವಾದರೆ ಅವಳನ್ನು ನಗ್ನವಾಗಿಸಿ (ಹುಟ್ಟಿದಾಗ ಇದ್ದಂತೆ) ಬೆತ್ತಲೆಯಾಗಿ ನಿಲ್ಲಿಸುವೆನು. ಅವಳನ್ನು ಬೆಂಗಾಡನ್ನಾಗಿ ಮಾಡಿ, ಮರುಭೂಮಿಯಂತೆ ಮಾರ್ಪಡಿಸಿ, ನೀರಡಿಕೆಯಿಂದ ಸಾಯುವಂತೆ ಮಾಡುವೆನು.

4 ಅವಳ ಮಕ್ಕಳಿಗೂ ಕರುಣೆಯನ್ನು ತೋರಿಸೆನು; ಅವರು ವ್ಯಭಿಚಾರದಿಂದ ಹುಟ್ಟಿದವರು.

5 ಅವರ ತಾಯಿ ವೇಶ್ಯೆಯಾಗಿದ್ದಾಳೆ. ಲಜ್ಜೆಗೆಟ್ಟ ಹೆಂಗಸಾಗಿ ವರ್ತಿಸಿದ್ದಾಳೆ. ‘ನನಗೆ ಅನ್ನಪಾನ, ಉಣ್ಣೆ ಉಡಿಗೆ, ಎಣ್ಣೆತೈಲ, ಪಾಯಸಪಾನಕಗಳನ್ನು ಕೊಡುವಂಥ ನಲ್ಲರ ಹಿಂದೆ ಹೋಗುವೆನು’ ಎಂದುಕೊಂಡಿದ್ದಾಳೆ.

6 ಆದುದರಿಂದ ನಾನು ಅವಳ ದಾರಿಗೆ ಮುಳ್ಳುಬೇಲಿಹಾಕುವೆನು. ಇಷ್ಟಬಂದ ದಾರಿಯನ್ನು ಹಿಡಿಯದಂತೆ ಅವಳ ಮುಂದೆ ಅಡ್ಡಗೋಡೆಯನ್ನು ಎಬ್ಬಿಸುವೆನು.

7 ಅವಳು ತನ್ನ ನಲ್ಲರನ್ನು ಹಿಂದಟ್ಟಿ ಹೋದರೂ ಅವರನ್ನು ಸಂಧಿಸಲಾರಳು; ಅವರನ್ನು ಹುಡುಕಿದರೂ ಕಂಡುಹಿಡಿಯಲಾರಳು. ಆಗ ಅವಳು: ‘ನನ್ನನ್ನು ಮದುವೆಯಾದ ಪತಿಯ ಬಳಿಗೆ ಹಿಂತಿರುಗುವೆನು. ಈಗಿನ ಸ್ಥಿತಿಗಿಂತ ಆಗಿನ ಸ್ಥಿತಿಯೇ ಉತ್ತಮವಾಗಿತ್ತು’ ಎಂದುಕೊಳ್ಳುವಳು.

8 ಅವಳಿಗೆ ದವಸಧಾನ್ಯ, ದ್ರಾಕ್ಷಾರಸ, ತೈಲಗಳನ್ನು ಕೊಟ್ಟವನು ನಾನೇ ಎಂಬುದನ್ನು ಅರಿತುಕೊಳ್ಳದೆಹೋದಳು. ನಾನು ಧಾರಾಳವಾಗಿ ಕೊಟ್ಟ ಬೆಳ್ಳಿಬಂಗಾರಗಳನ್ನು ಬಾಳನ ಪೂಜೆಗೆ ಉಪಯೋಗಿಸಿದಳು.

9 ಆದಕಾರಣ ನಾನು ದವಸಧಾನ್ಯ, ದ್ರಾಕ್ಷಾರಸಗಳನ್ನು ಆಯಾ ಕಾಲದಲ್ಲಿ ಹಿಂದಕ್ಕೆ ತೆಗೆದುಕೊಳ್ಳುವೆನು. ಅವಳ ಮಾನವನ್ನು ಮುಚ್ಚುತ್ತಿದ್ದ ಉಣ್ಣೆಉಡಿಗೆಗಳನ್ನು ಹಿಂತೆಗೆದುಕೊಳ್ಳುವೆನು.

10 ಅವಳ ನಲ್ಲರ ಕಣ್ಣೆದುರಿಗೆ ಅವಳ ಲಜ್ಜೆಗೇಡಿತನವನ್ನು ಬಯಲುಮಾಡುವೆನು. ಅವಳನ್ನು ನನ್ನ ಕೈಯಿಂದ ಯಾರೂ ಬಿಡಿಸರು.

11 ಅವಳ ಸಂಭ್ರಮಗಳನ್ನು - ಹಬ್ಬ, ಹುಣ್ಣಿಮೆ, ಸಬ್ಬತ್ ಆಚರಣೆ, ಸಭೆಸಮಾರಂಭಗಳು - ಇವೆಲ್ಲವನ್ನೂ ನಿಲ್ಲಿಸಿಬಿಡುವೆನು.

12 ‘ನನ್ನ ನಲ್ಲರು ನನಗೆ ಉಡುಗೊರೆಯಾಗಿ ಕೊಟ್ಟವುಗಳು’ ಎಂದು ಅವಳು ಹೇಳಿಕೊಳ್ಳುವ ದ್ರಾಕ್ಷಾಲತೆಗಳನ್ನೂ ಅಂಜೂರದ ವೃಕ್ಷಗಳನ್ನೂ ನಾಶಪಡಿಸುವೆನು. ಅವುಗಳನ್ನು ಕಾಡುಪೊದೆಗಳನ್ನಾಗಿ ಮಾರ್ಪಡಿಸುವೆನು. ಕಾಡುಮೃಗಗಳು ಅವುಗಳನ್ನು ಕಬಳಿಸುವುವು.

13 ಅವಳು ನನ್ನನ್ನು ಮರೆತುಬಿಟ್ಟಿದ್ದಾಳೆ; ಬಂಗಾರದ ಮೂಗುತಿ ಮುಂತಾದ ಒಡವೆಗಳಿಂದ ಶೃಂಗರಿಸಿಕೊಂಡು ನಲ್ಲರನ್ನು ವರಿಸುತ್ತಾ ಹೋಗಿದ್ದಾಳೆ. ಅಷ್ಟೇ ಅಲ್ಲ, ಬಾಳ್ ದೇವತೆಗಳ ಹಬ್ಬದಲ್ಲಿ ಧೂಪಾರತಿಯನ್ನು ಬೆಳಗಿದ್ದಾಳೆ. ಈ ಕಾರಣ ನಾನು ಅವಳನ್ನು ದಂಡಿಸುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ.


ಪುನರ್‍ಮಿಲನ

14 ಆದುದರಿಂದ ಇಗೋ, ನಾನು ಅವಳನ್ನು ಪುನಃ ಬೆಂಗಾಡಿಗೆ ಕರೆದೊಯ್ಯುವೆನು. ಹೃದಯಂಗಮವಾಗಿ ಅವಳನ್ನು ಒಲಿಸಿಕೊಂಡು ಮಾತಾಡುವೆನು.

15 ಅವಳ ದ್ರಾಕ್ಷಾತೋಟಗಳನ್ನು ಅಲ್ಲಿಯೇ ಅವಳಿಗೆ ಹಿಂದಿರುಗಿಕೊಡುವೆನು. ಆಕೋರಿನ ಕಣಿವೆಯನ್ನು ಅವಳ ಆಶಾದ್ವಾರವನ್ನಾಗಿ ಮಾಡುವೆನು. ಅವಳು ತನ್ನ ಯೌವನದ ದಿನಗಳಲ್ಲಿಯೂ ಈಜಿಪ್ಟಿನಿಂದ ಬಿಡುಗಡೆಯಾಗಿ ಬಂದ ಸಮಯದಲ್ಲಿಯೂ ಇದ್ದಂತೆ ಅಲ್ಲಿ ಒಲುಮೆಯಿಂದಿರುವಳು.

16 ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನಗಳಲ್ಲಿ ನೀನು ನನ್ನನ್ನು ‘ಬಾಳ್‍ದೇವತೆ’ ಎಂದು ಕರೆಯದೆ ‘ನನ್ನ ಪತಿ’ ಎಂದು ಕರೆಯುವೆ.

17 ಬಾಳ್‍ದೇವತೆಗಳ ಹೆಸರುಗಳನ್ನು ನಿನ್ನ ಬಾಯಿಂದ ತೊಲಗಿಸುವೆನು; ಇನ್ನೆಂದಿಗೂ ಅವುಗಳನ್ನು ನೀನು ಉಚ್ಛರಿಸದಂತೆ ಮಾಡುವೆನು.

18 ಆ ದಿನಗಳಲ್ಲಿ ನನ್ನ ಜನರಿಗೆ ಹಾನಿಮಾಡದಂತೆ ಕಾಡಿನ ಮೃಗಗಳೊಂದಿಗೂ, ಆಕಾಶದ ಪಕ್ಷಿಗಳೊಂದಿಗೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೊಂದಿಗೂ ಒಪ್ಪಂದಮಾಡಿಕೊಳ್ಳುವೆನು. ಬಿಲ್ಲುಬಾಣ, ಕತ್ತಿಕಠಾರಿಗಳು ಅವರ ನಾಡಿನಲ್ಲಿ ಇಲ್ಲದಂತೆ ಮಾಡುವೆನು; ನನ್ನ ಜನರು ಸುರಕ್ಷಿತವಾಗಿ ನೆಲಸುವಂತೆ ಮಾಡುವೆನು.

19 ನನ್ನವಳನ್ನಾಗಿ ಮಾಡಿಕೊಳ್ಳುವೆನು ನಿನ್ನನ್ನು ಅನವರತ ನಿನ್ನ ವರಿಸುವೆನು ಕರುಣೆಯಿಂದ, ನೀತಿನ್ಯಾಯದಿಂದ, ನಿಶ್ಚಲ ಪ್ರೀತಿಯಿಂದ.

20 ನಂಬಿಕೆಯಿಂದ ಸ್ವೀಕರಿಸುವೆನು ನಿನ್ನನು ಆಗ ನೀ ಅರಿತುಕೊಳ್ಳುವೆ ಸರ್ವೇಶ್ವರನಾದ ನನ್ನನು.

21 ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನದಂದು ಪ್ರೀತಿಸುವೆನು ನಿನ್ನನು; ಆಲಿಸುವೆನು ಆಗಸದ ಮೊರೆಯನು.

22 ಆಗಸವು ಆಲಿಸುವುದು ಭೂಮಿಯ ಮೊರೆಯನು ಇವು ಆಲಿಸುವುವು ಇಸ್ರಯೇಲಿನ ಮೊರೆಯನು.

23 ನನ್ನ ನಾಮದ ಪ್ರಯುಕ್ತವೇ, ಮಾಡುವೆನು ಇಸ್ರಯೇಲ್ ಏಳಿಗೆಯಾಗುವಂತೆ ಜಗದೊಳಗೆ ತೋರಿಸುವೆನು ಪ್ರೀತಿವಾತ್ಸಲ್ಯವನ್ನು ಲೋರುಹಾಮಳಿಗೆ ಹೇಳುವೆನು ‘ನೀನು ನನ್ನ ಪ್ರಜೆ’ಯೆಂದು ಲೋಅಮ್ಮಿಗೆ ಭಜಿಸುವರವರು ‘ನೀವೇ ನಮ್ಮ ದೇವರು’ ಎಂದು ನನಗೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು