ಹೋಶೇಯ 13 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲಿನ ಮೇಲೆ ತೀರ್ಪು 1 ಪೂರ್ವದಲ್ಲಿ ಎಫ್ರಯಿಮ್ ಮಾತನಾಡಿದಾಗ ಎಲ್ಲರೂ ನಡುಗುತ್ತಿದ್ದರು. ಅದು ಇಸ್ರಯೇಲಿನಲ್ಲಿ ಅಷ್ಟು ಉನ್ನತ ಸ್ಥಿತಿಗೆ ಏರಿತ್ತು. ಆದರೆ ಅದು ಬಾಳ್ ದೇವತೆಗೆ ಆರಾಧನೆ ಸಲ್ಲಿಸಿದ್ದರಿಂದ ಪಾಪಕಟ್ಟಿಕೊಂಡು ಪತನವಾಯಿತು. 2 ಈಗ ಎಫ್ರಯಿಮರ ಪಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರು ಬೆಳ್ಳಿಬಂಗಾರವನ್ನು ಕರಗಿಸಿ ಇಷ್ಟಬಂದಂತೆ ಬೊಂಬೆಗಳನ್ನು ಮಾಡಿಕೊಂಡಿದ್ದಾರೆ. ಅವೆಲ್ಲವು ಶಿಲ್ಪಿಗಳ ಕೈಕೆಲಸವೇ ಹೊರತು ಮತ್ತೇನು ಅಲ್ಲ. ಇಂಥ ವಿಗ್ರಹಗಳನ್ನು ಪೂಜೆಗಾಗಿ ಪ್ರತಿಷ್ಠಾಪನೆಮಾಡುತ್ತಾರೆ. ಬುದ್ಧಿಜೀವಿಗಳಾದ ಇವರು ಬಸವನಿಗೆ ಮುದ್ದಿಡುತ್ತಾರೆ. 3 ಇವರು ಪ್ರಾತಃಕಾಲದ ಮೋಡದಂತೆ ಮಾಯವಾಗುತ್ತಾರೆ. ಇಬ್ಬನಿಯಂತೆ ಕರಗಿಹೋಗುತ್ತಾರೆ. ಬಿರುಗಾಳಿಗೆ ಸಿಕ್ಕಿದ ಹೊಟ್ಟಿನಂತೆ ತೂರಿಹೋಗುತ್ತಾರೆ; ಗವಾಕ್ಷಿಯ ಹೊಗೆಯಂತೆ ಗಾಳಿಯಲ್ಲಿ ತೇಲಿಹೋಗುತ್ತಾರೆ. 4 ಸರ್ವೇಶ್ವರ ಇಂತೆನ್ನುತ್ತಾರೆ: “ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಲಿಂದ ನಾನೇ ನಿನ್ನ ಸರ್ವೇಶ್ವರನಾದ ದೇವರು. ನಾನಲ್ಲದೆ ಬೇರೆ ದೇವರುಗಳು ನಿನಗಿಲ್ಲ. ನಾನಲ್ಲದೆ ನಿನಗೆ ಬೇರೆ ಉದ್ಧಾರಕರಿಲ್ಲ. 5 ಬೆಂಗಾಡಿನಲ್ಲಿ, ಘೋರ ಮರುಭೂಮಿಯಲ್ಲಿ ನಿನ್ನನ್ನು ಕಾಪಾಡಿದವನು ನಾನೇ. 6 ಅನ್ನ ಆಹಾರ ಯಥೇಚ್ಛವಾಗಿ ಸಿಕ್ಕಿದಾಗ ನಿನ್ನವರು ತಿಂದು ತೃಪ್ತರಾದರು; ಅಹಾಂಭಾವ ಅವರ ನೆತ್ತಿಗೇರಿತು. ಆಗ ಅವರು ನನ್ನನ್ನು ಮರೆತುಬಿಟ್ಟರು. 7 ಆದುದರಿಂದ ನಾನು ಅವರಿಗೆ ಸಿಂಹದಂತಿರುವೆನು. ದಾರಿಯ ಮಗ್ಗುಲಲ್ಲಿ ಹೊಂಚುಹಾಕುವ ಚಿರತೆಯಂತಿರುವೆನು. 8 ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರ ಮೇಲೆ ಬೀಳುವೆನು. ಅವರ ಎದೆಯನ್ನು ಬಗಿದುಹಾಕುವೆನು. ಮೃಗರಾಜರಂತೆ ಅವರನ್ನು ನುಂಗಿಬಿಡುವೆನು. ಕಾಡುಮೃಗದಂತೆ ಅವರನ್ನು ಸೀಳಿಬಿಡುವೆನು. 9 “ಇಸ್ರಯೇಲ್, ನಿನ್ನನ್ನು ನಾಶಮಾಡುವೆನು, ನಿನಗೆ ನೆರವಾಗಬಲ್ಲವರು ಯಾರು? 10 ‘ನನಗೆ ರಾಜನು ಬೇಕು, ರಾಜಾಧಿಕಾರಿಗಳು ಬೇಕು’ ಎಂದು ಹೇಳಿಕೊಂಡಿದ್ದಿಯಲ್ಲಾ; ನಿನ್ನನ್ನು ರಕ್ಷಿಸಬಲ್ಲ ರಾಜನೆಲ್ಲಿ? ನಿನ್ನನ್ನು ಕಾಪಾಡಬಲ್ಲ ನಗರಪಾಲಕರೆಲ್ಲಿ? 11 ಇಷ್ಟವಿಲ್ಲದೆ ಸಿಟ್ಟಿನಿಂದ ನಿನಗೆ ರಾಜನನ್ನು ಕೊಟ್ಟೆ. ಈಗ ಕಡುಕೋಪದಿಂದ ಆ ರಾಜರನ್ನು ತೆಗೆದುಬಿಡುತ್ತೇನೆ. 12 “ಎಫ್ರಯಿಮಿನ ಅಕ್ರಮಗಳೆಲ್ಲ ದಾಖಲಾಗಿವೆ. ಅದರ ಪಾಪಕೃತ್ಯಗಳನ್ನೆಲ್ಲ ಒಂದೂ ಬಿಡದೆ ಲೆಕ್ಕಹಾಕಿಡಲಾಗಿದೆ. 13 ಎಫ್ರಯಿಮಿಗೆ ಪ್ರಸವವೇದನೆ ಬಂದಿದೆ. ಅಷ್ಟೇ ಅಲ್ಲ. ಅದೊಂದು ಮಂಕು ಮಗುವಿನಂತಿದೆ. ಹುಟ್ಟಿ, ಹೊರಗೆ ಬರಬಹುದಾದರೂ, ಅದು ಬಾರದೆ ಇದೆ. 14 ಅದನ್ನು ಪಾತಾಳದ ಹಿಡಿತದಿಂದ ನಾನು ಬಿಡಿಸಲಾರೆ. ಮರಣದ ಬಾಧೆಯಿಂದ ಅವರನ್ನು ರಕ್ಷಿಸಲಾರೆ. ‘ಮರಣವೇ, ನಿನ್ನ ಮಾರಕ ವ್ಯಾಧಿಗಳಿಂದ ಅವರನ್ನು ಬಾಧಿಸು. ಪಾತಾಳವೇ, ಅವರನ್ನು ಕಬಳಿಸಿ ನಾಶಗೊಳಿಸು. ಕರುಣೆ ನನ್ನಿಂದ ದೂರವಾಗಿದೆ. 15 ಎಫ್ರಯಿಮ್ ಕಳೆಗಳ ನಡುವೆ ಸೊಂಪಾಗಿ ಬೆಳೆದ ಜೊಂಡಿನಂತಿದೆ. ಆದರೆ ಸರ್ವೇಶ್ವರ ಮರುಭೂಮಿಯಿಂದ ಮೂಡಣಗಾಳಿ ಬೀಸುವಂತೆ ಮಾಡುವರು. ಅದರ ಬುಗ್ಗೆ ಬತ್ತಿಹೋಗುವುದು. ಅದರ ಒರತೆ ಒಣಗಿಹೋಗುವುದು. ಅದರ ಸಿರಿಸಂಪತ್ತಿನ ನಿಧಿಯನ್ನು ಶತ್ರುಗಳು ಸೂರೆಮಾಡುವರು. 16 ಸಮಾರ್ಯವು ತನ್ನ ದೇವರಿಗೆ ವಿರುದ್ಧ ದಂಗೆ ಎದ್ದಿದೆ. ಅದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಲೇಬೇಕು. ಅದರ ಜನರು ಖಡ್ಗದಿಂದ ಹತರಾಗುವರು; ಶತ್ರುಗಳು ಅಲ್ಲಿನ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳಿಹಾಕುವರು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India