ಹೋಶೇಯ 12 - ಕನ್ನಡ ಸತ್ಯವೇದವು C.L. Bible (BSI)ಜುದೇಯದ ಮೇಲೆ ಆಪಾದನೆ 1 “ಎಫ್ರಯಿಮ್ ಕೇವಲ ಗಾಳಿಗೆ ಕುರಿಗಾಹಿ; ಅದು ದಿನವಿಡೀ ಗುದ್ದಾಡುತ್ತಿರುವುದು ಮೂಡಣಗಾಳಿಯನ್ನೇ. ಅದು ಮೋಸವನ್ನೂ ಹಿಂಸೆಯನ್ನೂ ನಿರಂತರವಾಗಿ ಹೆಚ್ಚಿಸುತ್ತಿದೆ. ಅಸ್ಸೀರಿಯದೊಂದಿಗೆ ಒಪ್ಪಂದಮಾಡಿಕೊಳ್ಳುತ್ತಿದೆ. ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತಿದೆ.” 2 ಸರ್ವೇಶ್ವರ ಜುದೇಯದ ಮೇಲೆ ಆಪಾದನೆ ಹೊರಿಸಿದ್ದಾರೆ. ಯಕೋಬನನ್ನು ಅದರ ನಡತೆಗೆ ತಕ್ಕಂತೆ ದಂಡಿಸುತ್ತಾರೆ. ಅದರ ಕೃತ್ಯಗಳಿಗನುಸಾರವಾಗಿ ಪ್ರತೀಕಾರ ಮಾಡುತ್ತಾರೆ. 3 ಯಕೋಬನು ಅಣ್ಣನ ಜೊತೆ ತಾಯಿಯ ಗರ್ಭದಲ್ಲಿರುವಾಗಲೇ ಅವನ ಹಿಮ್ಮಡಿಯನ್ನು ಹಿಡಿದು ವಂಚಿಸಿದನು. ಪ್ರಾಯಕ್ಕೆ ಬಂದಮೇಲೆ ದೇವರೊಡನೆ ಹೋರಾಡಿದನು. 4 ಹೌದು, ಯಕೋಬನು ದೇವದೂತನ ಸಂಗಡ ಹೋರಾಡಿ ಗೆದ್ದನು. ಅಳುತ್ತಾ ಆತನ ಅನುಗ್ರಹಕ್ಕಾಗಿ ಯಾಚಿಸಿದನು. ಆತನು ಬೇತೇಲಿನಲ್ಲಿ ದೇವರನ್ನು ಕಂಡನು. ದೇವರು ಅಲ್ಲಿ ಆತನೊಂದಿಗೆ ಮಾತನಾಡಿದರು. 5 ಅವರೇ ಸರ್ವಶಕ್ತನಾದ ದೇವರು; ಸರ್ವೇಶ್ವರ ಎಂಬುದೇ ಅವರನ್ನು ಸ್ಮರಿಸುವ ನಾಮಧೇಯ. 6 ಆದುದರಿಂದ ಇಸ್ರಯೇಲ್, ನೀನು ದೇವರ ಕಡೆ ತಿರುಗಿಕೋ, ನೀತಿ ಪ್ರೀತಿಗಳಿಗೆ ಅನುಗುಣವಾಗಿ ನಡೆ. ನಿರಂತರವಾಗಿ ದೇವರನ್ನು ನಿರೀಕ್ಷಿಸಿಕೊಂಡಿರು. ಇಸ್ರಯೇಲರಿಗೆ ವನವಾಸ 7 ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲ್ ಮೋಸದ ತಕ್ಕಡಿ ಹಿಡಿದು ವ್ಯಾಪಾರಮಾಡುವ ಕಾನಾನ್ಯರಂತೆ ಇದೆ. ಇತರರಿಂದ ಕಸಿದುಕೊಳ್ಳಬೇಕೆಂಬುದೇ ಅದರ ದುರಾಸೆ.” 8 ಎಫ್ರಯಿಮ್ ಹೇಳಿಕೊಳ್ಳುವುದೇನೆಂದರೆ: “ನಾನು ಐಶ್ವರ್ಯವಂತನಾಗಿಬಿಟ್ಟೆ, ನನಗಾಗಿ ಆಸ್ತಿಪಾಸ್ತಿಯನ್ನು ಗಳಿಸಿಕೊಂಡಿದ್ದೇನೆ. ನನ್ನ ಗಳಿಕೆಯಲ್ಲಿ ಪಾಪವೆಂಬ ದೋಷವೇನೂ ಇಲ್ಲ.” 9 ಆದರೆ ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದಲೂ ನಿನ್ನ ಸರ್ವೇಶ್ವರನಾದ ದೇವರಾದ ನಾನು, ಯಾತ್ರಾದಿನಗಳಲ್ಲಿ ನೀನು ವನವಾಸ ಮಾಡಿದಂತೆ ನಿಮ್ಮನ್ನು ಪುನಃ ಗುಡಾರದವಾಸಕ್ಕೆ ಗುರಿಪಡಿಸುವೆನು. 10 “ಪ್ರವಾದಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೆ ಹಲವಾರು ದರ್ಶನಗಳನ್ನು ದಯಪಾಲಿಸಿದ್ದೇನೆ. ಅವರ ಮುಖಾಂತರ ಸಾಮತಿಗಳನ್ನು ಹೇಳಿ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದೇನೆ. 11 ಆದರೂ ಗಿಲ್ಯಾದಿನಲ್ಲಿ ಅಧರ್ಮ ನೆಲೆಗೊಂಡಿದೆ. ಅದಕ್ಕೆ ದುರ್ಗತಿ ಕಾದಿದೆ. ಗಿಲ್ಗಾಲಿನಲ್ಲಿ ಬಸವನಿಗೆ ಯಜ್ಞಗಳನ್ನು ಅರ್ಪಿಸಲಾಗುತ್ತಿದೆ. ಅಲ್ಲಿನ ಯಜ್ಞವೇದಿಗಳು ಪುಡಿಪುಡಿಯಾಗುವುವು; ಉಳುವ ನೇಗಿಲಿಗೆ ಸಿಕ್ಕುವ ಕಲ್ಲುಕುಪ್ಪೆಗಳಾಗುವುವು.” 12 ಯಕೋಬನು ಮೆಸಪಟೋಮಿಯಕ್ಕೆ ಓಡಿಹೋಗಬೇಕಾಯಿತು. ಅಲ್ಲಿ ಮದುವೆಗೋಸ್ಕರ ಜೀತಮಾಡಿದನು; ವಧುವಿಗೋಸ್ಕರ ಕುರಿ ಕಾಯ್ದನು. 13 ದೇವರು ಪ್ರವಾದಿಯನ್ನು ಕಳುಹಿಸಿ, ಇಸ್ರಯೇಲನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದರು. ಪ್ರವಾದಿಯ ಮುಖಾಂತರ ಇಸ್ರಯೇಲಿಗೆ ರಕ್ಷಣೆ ದೊರಕಿತು. 14 ಎಫ್ರಯಿಮ್ ದೇವರನ್ನು ಉಗ್ರವಾಗಿ ರೇಗಿಸಿದೆ; ರಕ್ತಾಪರಾಧವನ್ನು ಅದರ ಮೇಲೆ ಹೊರಿಸಲಾಗುವುದು. ಅದು ಮಾಡಿದ ಅವಮಾನಕ್ಕೆ ಪ್ರತಿಯಾಗಿ ದೇವರು ಅದನ್ನು ಅವಮಾನಕ್ಕೆ ಗುರಿಪಡಿಸುವರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India