Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹೋಶೇಯ 11 - ಕನ್ನಡ ಸತ್ಯವೇದವು C.L. Bible (BSI)


ನಾಶಮಾಡುವ ರೋಷ ನನ್ನದಲ್ಲ

1 ಸರ್ವೇಶ್ವರ ಇಂತೆನ್ನುತ್ತಾರೆ: “ಪ್ರೀತಿಸಿದೆನು ಇಸ್ರಯೇಲನ್ನು ಅದರ ಬಾಲ್ಯಾವಸ್ಥೆಯಿಂದ; ಕರೆದೆನು ನನ್ನ ಆ ಪುತ್ರನನು ಈಜಿಪ್ಟಿನಿಂದ.

2 ದೂರ ಸರಿದರು ಆ ಇಸ್ರಯೇಲರು ನಾ ಕರೆದರೂ ನನ್ನ ಬಳಿಗೆ ಅರ್ಪಿಸುತ್ತಾ ಬಂದರು ಯಜ್ಞವನ್ನು ಬಾಳ್ ದೇವತೆಗಳಿಗೆ ಧೂಪಾರತಿ ಬೆಳಗುತ್ತಾ ಬಂದರು ಆ ವಿಗ್ರಹಗಳಿಗೆ.

3 ಎಫ್ರಯಿಮಿಗೆ ಅಂಬೆಗಾಲಿಡಲು ಕಲಿಸಿದವನು ನಾನೇ ಅದನ್ನು ಕೈಗಳಲ್ಲಿ ಎತ್ತಿಕೊಂಡು ಆಡಿಸಿದವನು ನಾನೇ ಆ ಜನರನ್ನು ಸ್ವಸ್ಥಮಾಡಿದವನೂ ನಾನೇ; ಆದರೆ ಅರಿತುಕೊಳ್ಳದೆಹೋದರು ಈ ವಿಷಯವನೇ.

4 ಬೆಳೆಸಿದೆನು ಅವರನ್ನು ಕರುಣೆಯ ಕಟ್ಟುಗಳಲಿ, ಪ್ರೀತಿಯ ಬಂಧನದಲಿ ಸುಧಾರಿಸಿದೆ ಅವರ ಹೆಗಲಿಗೆ ಬಿಗಿದಿದ್ದ ನೊಗವನ್ನು ಬಿಚ್ಚಿ ಊಟ ಬಡಿಸಿದೆ ಅವರಿಗೆ ನೆಲಸಮ ಬಗ್ಗಿ.

5 “ಅವರು ನನ್ನ ಬಳಿಗೆ ಬಾರದ ಕಾರಣ, ಇಸ್ರಯೇಲ್ ಈಜಿಪ್ಟಿಗೆ ಹಿಂದಿರುಗುವುದು, ಅಸ್ಸೀರಿಯದ ಆಳ್ವಿಕೆಗೆ ಒಳಗಾಗುವುದು.

6 ತಮ್ಮ ಇಚ್ಛಾನುಸಾರ ಅವರು ನಡೆದ ಕಾರಣ, ಅವರ ಪಟ್ಟಣಗಳಲ್ಲಿ ಕತ್ತಿಯ ಕಾಳಗ ನಡೆಯುವುದು. ಅವರ ಪುರದ್ವಾರದ ಕತ್ತಿಯ ಕಬ್ಬಿಣದ ಅಗುಳಿಗಳನ್ನು ಮುರಿದು ಕೋಟೆಯಲ್ಲೇ ಅವರನ್ನು ಕಡಿದುಹಾಕುವರು.

7 ಅವರು ನನ್ನ ಕಡೆಯಿಂದ ದೂರಹೋಗುವ ಹಠಹಿಡಿದಿದ್ದಾರೆ; ಅವರು ನೊಗದ ಭಾರವನ್ನು ತಾಳದೆ ಕೂಗಿಕೊಂಡರೂ ಅದನ್ನು ಬಿಚ್ಚುವವರು ಯಾರೂ ಇಲ್ಲ.

8 “ಹೇಗೆ ತ್ಯಜಿಸಲಿ ಎಫ್ರಯಿಮೇ, ನಿನ್ನನು ಹೇಗೆ ಕೈಬಿಡಲಿ ಇಸ್ರಯೇಲೇ, ನಿನ್ನನು. ಹೇಗೆ ಈಡುಮಾಡಲಿ ದುರ್ಗತಿಗೆ ನಿನ್ನನು ಅದ್ಮದಂತೆ, ಹೇಗೆ ನಾಶಮಾಡಲಿ ನಿನ್ನನು ಚೆಬೋಯೀಮನಂತೆ?

9 ತಡೆಹಿಡಿಯುವೆನು ನನ್ನ ಉಗ್ರಕೋಪವನು ನಾಶಪಡಿಸಲಾರೆ ಮರಳಿ ಎಫ್ರಯಿಮನು. ನರಮಾನವನಲ್ಲ, ದೇವರು ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿಯು! ನನ್ನದಲ್ಲ ನಾಶಮಾಡುವ ರೋಷವು.

10 “ಶತ್ರುಗಳ ಕಡೆಗೆ ಸಿಂಹದಂತೆ ಗರ್ಜಿಸುವ ಸ್ವಾಮಿಯನ್ನು ಆ ಜನರು ಹಿಂಬಾಲಿಸುತ್ತಾರೆ. ಆತ ಆರ್ಭಟಿಸಲು ಅವರ ಮಕ್ಕಳು ನಡುನಡುಗುತ್ತಾ ಬರುತ್ತಾರೆ.

11 ಗುಬ್ಬಿಗಳಂತೆ ಈಜಿಪ್ಟಿನಿಂದಲೂ ಪಾರಿವಾಳಗಳಂತೆ ಅಸ್ಸೀರಿಯದಿಂದಲೂ ಅವರು ಬೆದರುತ್ತಾ ಓಡಿಬರುತ್ತಾರೆ. ಅವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವಂತೆ ಮಾಡುವೆನು.

12 “ಎಫ್ರಯಿಮಿನ ಸುಳ್ಳುತನ, ಇಸ್ರಯೇಲಿನ ಕಪಟತನ ನನ್ನನ್ನು ಮುತ್ತಿಕೊಂಡಿವೆ. ಸತ್ಯಸ್ವರೂಪಿಯೂ ಪರಮಪಾವನರೂ ಆದ ದೇವರಿಂದ ದೂರವಾಗಿ ಜುದೇಯವು ಅಲೆಯುತ್ತಿದೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು