ಹೋಶೇಯ 1 - ಕನ್ನಡ ಸತ್ಯವೇದವು C.L. Bible (BSI)1 ಜುದೇಯ ನಾಡಿನಲ್ಲಿ ಉಜ್ಜೀಯ, ಯೋತಾಮ, ಆಹಾಜ ಮತ್ತು ಹಿಜ್ಕೀಯ ಇವರು ಅರಸರಾಗಿದ್ದಾಗ ಹಾಗೂ ಇಸ್ರಯೇಲ್ ನಾಡಿನಲ್ಲಿ ಯೋವಾಷನ ಮಗ ಯಾರೊಬ್ಬಾಮನು ಆಳುತ್ತಿದ್ದ ಕಾಲದಲ್ಲಿ, ಬೆಯೇರಿಯನ ಮಗನಾದ ಹೊಶೇಯನಿಗೆ ದೇವರು ದಯಪಾಲಿಸಿದ ಸಂದೇಶವಿದು: ಹೊಶೇಯನ ಮಡದಿ ಮಕ್ಕಳು 2 ಸರ್ವೇಶ್ವರಸ್ವಾಮಿ ಪ್ರಥಮವಾಗಿ ಹೊಶೇಯನ ಸಂಗಡ ಮಾತನಾಡುತ್ತಾ ಆತನಿಗೆ ಹೇಳಿದ್ದೇನೆಂದರೆ: “ನೀನು ಹೋಗಿ ವ್ಯಭಿಚಾರಿಣಿಯೊಬ್ಬಳನ್ನು ಮದುವೆ ಮಾಡಿಕೊ. ಆಕೆಗೆ ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೊ. ಏಕೆಂದರೆ, ನನ್ನ ಪ್ರಜೆ ನನ್ನನ್ನು ತೊರೆದುಬಿಟ್ಟು ವ್ಯಭಿಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಇದು ನಿದರ್ಶನವಾಗಿರಲಿ.” 3 ಅಂತೆಯೇ ಹೊಶೇಯನು ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಅವನಿಗೆ ಒಂದು ಗಂಡುಮಗುವನ್ನು ಹೆತ್ತಳು. 4 ಆಗ ಸರ್ವೇಶ್ವರ, ಹೊಶೇಯನಿಗೆ, “ಈ ಮಗುವಿಗೆ ಜೆಸ್ರೀಲ್ ಎಂದು ಹೆಸರಿಡು. ಏಕೆಂದರೆ, ಇಸ್ರಯೇಲ್‍ನಲ್ಲಿ ಹರಿಸಿದ ರಕ್ತಪಾತಕ್ಕೆ ಪ್ರತಿಯಾಗಿ ಸ್ವಲ್ಪಕಾಲದಲ್ಲೆ ಯೇಹುವಿನ ಮನೆತನವನ್ನು ದಂಡಿಸುವೆನು; ಇಸ್ರಯೇಲ್ ರಾಜ್ಯವನ್ನು ಅಂತ್ಯಗೊಳಿಸುವೆನು. 5 ಅಷ್ಟೇ ಅಲ್ಲ, ಅಂದೇ ಜೆಸ್ರೀಲಿನ ಕಣಿವೆಯಲ್ಲಿ ಇಸ್ರಯೇಲಿನ ಬಿಲ್ಲುಶಕ್ತಿಯನ್ನು ಮುರಿದುಬಿಡುವೆನು,” ಎಂದರು. 6 ಗೋಮೆರಳು ಪುನಃ ಗರ್ಭಿಣಿಯಾಗಿ ಒಂದು ಹೆಣ್ಣುಮಗುವನ್ನು ಹೆತ್ತಳು. ಆಗ ಸರ್ವೇಶ್ವರ, ಹೊಶೇಯನಿಗೆ: “ಇವಳನ್ನು ‘ಲೋರುಹಾಮ’ ಎಂದು ಕರೆ. ಏಕೆಂದರೆ, ನಾನು ಇನ್ನು ಇಸ್ರಯೇಲರನ್ನು ಪ್ರೀತಿಸೆನು; ಇನ್ನು ಅವರನ್ನು ಕ್ಷಮಿಸೆನು. 7 ಆದರೆ ಯೆಹೂದ್ಯ ಮನೆತನವನ್ನು ಪ್ರೀತಿಸಿ ಉದ್ಧರಿಸುವೆನು. ಬಿಲ್ಲುಬಾಣ, ಕತ್ತಿಕಾಳಗ, ಕುದುರೆರಾಹುತರು ಇವುಗಳಿಂದಲ್ಲ, ದೇವರಾದ ಸರ್ವೇಶ್ವರನ ಶಕ್ತಿಯಿಂದಲೇ ಅವರನ್ನು ರಕ್ಷಿಸುವೆನು,” ಎಂದರು. 8 ಮಗುವು ಮೊಲೆಬಿಟ್ಟನಂತರ ಗೋಮೆರಳು ಪುನಃ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. 9 ಆಗ ಸರ್ವೇಶ್ವರ: “ಈ ಮಗುವಿಗೆ ‘ಲೋ-ಅಮ್ಮಿ’ ಎಂದು ನಾಮಕರಣ ಮಾಡು. ಏಕೆಂದರೆ, ಇನ್ನು ನೀವು ನನ್ನ ಪ್ರಜೆಯಲ್ಲ; ನಾನು ನಿಮ್ಮ ದೇವರಲ್ಲ,” ಎಂದರು. ಕಡಲತೀರದ ಮರಳಿನಂತೆ 10 ಆದರೂ ಇಸ್ರಯೇಲ್ ಜನಾಂಗ ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವುದು. ದೇವರು ಅವರಿಗೆ ಇಂದು, “ನೀವು ನನ್ನ ಪ್ರಜೆಯಲ್ಲ” ಎಂದಿದ್ದಾರೆ; ಆದರೂ, “ನೀವು ಜೀವಸ್ವರೂಪಿಯಾದ ದೇವರ ಮಕ್ಕಳು” ಎನಿಸಿಕೊಳ್ಳುವ ದಿನ ಬರುವುದು. 11 ಯೆಹೂದ್ಯಜನರೂ ಇಸ್ರಯೇಲಿನ ಜನರೂ ಪುನಃ ಒಂದುಗೂಡುವರು. ಒಬ್ಬನೇ ಅಧಿಪತಿಯನ್ನು ಆರಿಸಿಕೊಳ್ಳುವರು. ಅವರೆಲ್ಲರೂ ನಾನಾ ದೇಶಗಳಿಂದ ಹೊರಟುಬರುವರು. ಜೆಸ್ರೀಲಿನ ಆ ದಿನವು ಮಹತ್ತಾದುದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India