Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹಬಕ್ಕೂಕ 3 - ಕನ್ನಡ ಸತ್ಯವೇದವು C.L. Bible (BSI)


ಪ್ರವಾದಿ ಹಬಕ್ಕೂಕನ ಪ್ರಾರ್ಥನೆ

1 ಸರ್ವೇಶ್ವರಾ, ಕೇಳಿರುವೆ ನಿನ್ನ ಕೀರ್ತಿಯನು ಬೆರಗಾದೆ ಕೇಳಿ ನಿನ್ನ ಮಹತ್ಕಾರ್ಯವನು.

2 ಮರಳಿ ಮಾಡು ನಮ್ಮೀಕಾಲದಲಿ ಅವುಗಳನು ಪ್ರಚುರಪಡಿಸು ಪ್ರಸ್ತುತಕಾಲದಲಿ ಅವುಗಳನು ರೋಷಗೊಂಡರೂ ಮರೆಯದಿರು ಕರುಣೆಯನು

3 ಬರುತಿಹನು ದೇವನು ಎದೋಮಿನಿಂದ ಆ ಪರಮಪಾವನಸ್ವಾಮಿ ಪಾರಾನ್ ಪರ್ವತದಿಂದ. ಆವರಿಸುವುದು ಆತನ ಪ್ರಭಾವ ಆಕಾಶಮಂಡಲವನು ತುಂಬಿಹುದು ಆತನ ಮಹಿಮೆ ಭೂಮಂಡಲವನು.

4 ರವಿಯಂತಿದೆ ಆತನ ತೇಜಸ್ಸಿನ ಮೆರೆತ ಕಿರಣಗಳು ಹೊರಹೊಮ್ಮುತಿವೆ ಆತನ ಕರಗಳಿಂದ ಮರೆಯಾಗಿದೆ ಅಲ್ಲೇ ಆತನ ಶಕ್ತಿಸಾಮರ್ಥ್ಯ.

5 ಸಾಗುತಿದೆ ವ್ಯಾಧಿ ಆತನ ಮುಂದೆ ಬರುತಿದೆ ಮೃತ್ಯು ಆತನ ಹಿಂದೆ.

6 ಕಂಪಿಸುತ್ತದೆ ಭೂಮಿ ಆತ ನಿಂತಾಗ ಅದರುತ್ತದೆ ಲೋಕ ಆತ ದಿಟ್ಟಿಸಿದಾಗ ಸೀಳಿಹೋಗುತ್ತವೆ ಪುರಾತನಪರ್ವತಗಳು ಕುಸಿದುಬೀಳುತ್ತವೆ ಸನಾತನ ಗಿರಿಗಳು ಅನಾದಿಯಿಂದ ಹಾಗೆಯೆ ಆತನ ಆಗಮನಗಳು.

7 ಇಗೋ, ತಳಮಳಗೊಂಡಿವೆ ಕೂಷಾನಿನ ಗುಡಾರಗಳು ನಡುಗುತ್ತಿವೆ ಮಿದ್ಯಾನ್ ನಾಡಿನ ಡೇರೆಗಳು.

8 ಮೋಡಗಳ ಮೇಲೆ ನೀ ಆಗಮಿಸಿದೆ ಏಕೆ? ಜಯರಥಗಳಲ್ಲಿ ಆಸೀನನಾಗಿ ಬಂದೆ ಏಕೆ? ಸರ್ವೇಶ, ನಿನಗೆ ರೌದ್ರವೇ ನದಿಗಳ ಮೇಲೆ? ಸಿಟ್ಟುಸಿಡುಕವೇ ಹೊಳೆಗಳ ಮೇಲೆ? ರೋಷಾವೇಷವೇ ಸಮುದ್ರದ ಮೇಲೆ?

9 ತೆಗೆದಿಟ್ಟೆ ಬಿಲ್ಲನು ತೋಳಿನಿಂದ ಹೊರಡಿಸಿದೆ ಬಾಣಗಳನು ಅದರಿಂದ ಸೀಳಿರುವೆ ಭೂಮಿಯನು ನದಿಗಳಿಂದ.

10 ನಿನ್ನ ನೋಡಿ ತಳಮಳಗೊಳ್ಳುತ್ತವೆ ಬೆಟ್ಟಗಳು ಹರಿಯುತ್ತವೆ ಆಗಸದಿಂದ ಪ್ರವಾಹಗಳು ಕೈಯೆತ್ತಿ ಭೋರ್ಗರೆಯುತ್ತವೆ ಸಾಗರಗಳು.

11 ಹಾರಿ ಓಡುವ ನಿನ್ನ ಬಾಣಗಳ ಬೆಳಕಿಗೆ ಥಳಥಳಿಸುವ ನಿನ್ನ ಈಟಿಯ ಹೊಳಪಿಗೆ ಸೂರ್ಯಚಂದ್ರ ಅಡಗುತ್ತವೆ ಗೂಡಿನೊಳಗೆ.

12 ಧರೆಯನು ನೀ ಹಾದುಹೋಗುವೆ ರೌದ್ರದಿಂದ ರಾಷ್ಟ್ರಗಳನು ತುಳಿದುಹಾಕುವೆ ರೋಷದಿಂದ.

13 ಹೊರಟಿರುವೆ ನಿನ್ನ ಪ್ರಜೆಗಳ ರಕ್ಷಣೆಗೆ ನಿನ್ನ ಅಭಿಷಿಕ್ತನ ಜೀವೋದ್ಧಾರಕೆ. ಬಡಿದುಹಾಕಿರುವೆ ದುರುಳನ ಬುರುಡೆಯನು ನೆಲಸಮಮಾಡಿರುವೆ ಅವನ ಮನೆಯನು.

14 ದೀನರನು ಗುಟ್ಟಾಗಿ ದಮನಮಾಡಿ ಹಿಗ್ಗುವವರಂತೆ ನನ್ನ ಚದರಿಸಲು ಬಂದರು ಅವನ ಭಟರು ಬಿರುಗಾಳಿಯಂತೆ ಅವನ ಆಯುಧಗಳಿಂದಲೆ ಅವರ ತಲೆಯನು ನೀ ಬಡಿದೆ.

15 ಅಶ್ವಗಳನ್ನೇರಿ ನೀ ಸಮುದ್ರವನು ದಾಟಿದೆ ನೊರೆಗರೆಯುವ ಜಲರಾಶಿಯನು ಹಾದುಹೋದೆ.

16 ಇದಕೇಳಿ ನಡುನಡುಗಿತು ನನ್ನ ಒಡಲು ಅದುರಿದವು ಆ ಶಬ್ದಕ್ಕೆ ನನ್ನ ತುಟಿಗಳು ಕೊಳೆತಂತಾದವು ನನ್ನೆಲುಬುಗಳು ನಿಂತಲ್ಲೇ ತತ್ತರಿಸಿದವು ನನ್ನ ಕಾಲುಗಳು ಆಪತ್ತು ಬಂದೊದಗುವುದು ನಮ್ಮನ್ನು ಆಕ್ರಮಿಸುವವರಿಗೆ ಕಾದಿರುವೆ ನಾನು ಸಹನಶೀಲನಾಗಿ ಅಂದಿನವರೆಗೆ.

17 ಅಂಜೂರದ ಮರ ಚಿಗುರದೆಹೋದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಕಾಣದೆಹೋದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರ ಕೊಡದೆಹೋದರೂ ಕುರಿಹಟ್ಟಿಗಳು ಬರಿದಾಗಿಹೋದರೂ ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,

18 ಸಂತೋಷಿಸುವೆ ನಾನು ಸರ್ವೇಶ್ವರನಲಿ ಆನಂದಿಸುವೆ ನನ್ನ ಉದ್ಧಾರಕ ದೇವನಲಿ.

19 ಸ್ವಾಮಿ ಸರ್ವೇಶ್ವರ ನೀಡುವನೆನಗೆ ಧೀರತೆ ಚುರುಕುಗೊಳಿಸುವನಾತ ನನ್ನ ಕಾಲುಗಳನು ಜಿಂಕೆಯಂತೆ ಮಾಡುವನು ಬೆಟ್ಟಗುಡ್ಡಗಳಲಿ ನಾನು ಓಡಾಡುವಂತೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು