ಹಗ್ಗಾಯ 2 - ಕನ್ನಡ ಸತ್ಯವೇದವು C.L. Bible (BSI)ಹೊಸ ದೇವಾಲಯದ ವೈಭವ 1 ಅದೇ ವರ್ಷದ ಏಳನೇ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಸರ್ವೇಶ್ವರ ಈ ಸಂದೇಶವನ್ನು ದಯಪಾಲಿಸಿದರು: 2 ಶೆಯಲ್ತೀಯೇಲನ ಮಗನೂ ಜುದೇಯ ನಾಡಿನ ಅಧಿಪತಿಯೂ ಆದ ಜೆರುಬ್ಬಾಬೆಲನಿಗೆ ಮತ್ತು ಮಹಾಯಾಜಕ ಯೆಹೋಶುವನಿಗೆ ಮತ್ತು ಅಳಿದುಳಿದ ಜನರೆಲ್ಲರಿಗೆ ಹೀಗೆ ತಿಳಿಸು - 3 “ಈ ದೇವಾಲಯದ ಪೂರ್ವ ವೈಭವವನ್ನು ನೋಡಿದವರು ನಿಮ್ಮಲ್ಲಿ ಎಷ್ಟುಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿ ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲದಂತೆ ಕಾಣಿಸುತ್ತದಲ್ಲವೇ? ಸರ್ವೇಶ್ವರ ಆದ ನಾನು ಹೇಳುವುದನ್ನು ಕೇಳಿ: 4 ಜೆರುಬ್ಬಾಬೆಲನೇ, ಈಗ ಧೈರ್ಯದಿಂದಿರು. ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನೇ, ಎದೆಗುಂದಬೇಡ. ನಾಡಿನ ಜನರೇ, ನೀವೆಲ್ಲರು ಧೈರ್ಯದಿಂದ ಕೆಲಸಮಾಡಿ. ಇದು ಸೇನಾಧೀಶ್ವರ ಸರ್ವೇಶ್ವರ ಆದ ನನ್ನ ನುಡಿ. ನಾನು ನಿಮ್ಮೊಡನೆ ಇದ್ದೇನೆ. 5 ನೀವು ಈಜಿಪ್ಟ್ ದೇಶದಿಂದ ಹೊರಟುಬಂದಾಗ ನಾನು ನಿಮಗೆ ಪ್ರಮಾಣವಾಗಿ ಕೊಟ್ಟ ಮಾತನ್ನು ನೆರವೇರಿಸುವೆನು. ನನ್ನ ಆತ್ಮವು ನಿಮ್ಮಲ್ಲಿ ನೆಲೆಗೊಂಡಿದೆ; ಭಯಪಡದಿರಿ. 6 “ಸ್ವಲ್ಪಕಾಲದಲ್ಲೇ ಮತ್ತೊಮ್ಮೆ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಮರುಭೂಮಿಯನ್ನೂ ಅದರಿಸುವೆನು. 7 ಸಕಲ ಜನಾಂಗಗಳನ್ನು ನಡುಗಿಸುವೆನು. ಆಗ ಎಲ್ಲ ರಾಷ್ಟ್ರಗಳ ಸಿರಿಸಂಪತ್ತು ಇಲ್ಲಿಗೆ ಬರುವುದು. ಈ ಆಲಯವನ್ನು ವೈಭವದಿಂದ ತುಂಬಿಸುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ. 8 ಬೆಳ್ಳಿ ನನ್ನದು, ಬಂಗಾರವೆಲ್ಲ ನನ್ನದು. 9 ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ಶ್ರೇಷ್ಠವಾಗಿರುವುದು. ಈ ಸ್ಥಳದಲ್ಲಿ ಶಾಂತಿ ಸಮೃದ್ಧಿಯನ್ನು ಅನುಗ್ರಹಿಸುವೆನು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. ಯಾಜಕರೊಡನೆ ಸಮಾಲೋಚನೆ 10 ಡೇರಿಯಸ್ ಚಕ್ರವರ್ತಿಯ ಆಳ್ವಿಕೆಯ ಎರಡನೇ ವರ್ಷದ ಒಂಬತ್ತನೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಈ ಸಂದೇಶವನ್ನು ಸರ್ವೇಶ್ವರ ದಯಪಾಲಿಸಿದರು. 11 ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ - “ನೀನು ಯಾಜಕರ ಬಳಿಗೆ ಹೋಗು. 12 ಒಬ್ಬನು ತನ್ನ ಬಟ್ಟೆಯ ಸೆರಗಿನಲ್ಲಿ ಪ್ರತಿಷ್ಠಿತ ಮಾಂಸವನ್ನು ಕಟ್ಟಿಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನಾಗಲಿ, ಅನ್ನವನ್ನಾಗಲಿ, ದ್ರಾಕ್ಷಾರಸವನ್ನಾಗಲೀ, ಎಣ್ಣೆಯನ್ನಾಗಲೀ ಅಥವಾ ಯಾವ ಆಹಾರ ಪದಾರ್ಥವನ್ನೇ ಆಗಲಿ ಸೋಕಿದರೆ ಅದು ಪವಿತ್ರವಾಗುತ್ತದೋ? ಎಂದು ಧರ್ಮವಿಧಿಯನ್ನು ವಿಚಾರಿಸು.” ಪ್ರವಾದಿ ಹಾಗೆ ವಿಚಾರಿಸಲು ಯಾಜಕರು ‘ಇಲ್ಲ’ ಎಂದು ಉತ್ತರಕೊಟ್ಟರು. 13 ಆಗ ಹಗ್ಗಾಯನು, “ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವುದನ್ನಾದರೂ ಸೋಕಿದರೆ ಅದು ಅಶುದ್ಧವಾಗುತ್ತದೋ” ಎಂದು ಕೇಳಿದನು. ಅದಕ್ಕೆ ಯಾಜಕರು: “ಖಂಡಿತವಾಗಿ ಅಶುದ್ಧವಾಗುತ್ತದೆ” ಎಂದು ಉತ್ತರಕೊಟ್ಟರು. 14 ಆಗ ಹಗ್ಗಾಯನು ಮುಂದುವರಿಸುತ್ತಾ, “ಸರ್ವೇಶ್ವರ ಇಂತೆನ್ನುತ್ತಾರೆ: ಇದರಂತೆಯೇ ಈ ಪ್ರಜೆ, ಈ ಜನಾಂಗ ಕೈಹಾಕುವ ಪ್ರತಿಯೊಂದು ಕೆಲಸ, ಇಲ್ಲಿಗೆ ತರುವ ಕಾಣಿಕೆ, ನೈವೇದ್ಯ, ಎಲ್ಲವೂ ನನಗೆ ಹೊಲೆಯಾಗಿಯೇ ಇದೆ,” ಎಂದನು. ಸಮೃದ್ಧಿಯ ದಿನಗಳು ಬರಲಿವೆ 15 ಸರ್ವೇಶ್ವರ ಇಂತೆನ್ನುತ್ತಾರೆ: “ಸರ್ವೇಶ್ವರನ ಆಲಯ ನಿವೇಶನದಲ್ಲಿ ಕಲ್ಲಿನ ಮೇಲೆ ಕಲ್ಲಿಡುವ ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿ; 16 ಆ ಕಾಲದಲ್ಲಿ ಒಬ್ಬನು ಇಪ್ಪತ್ತು ಸೇರಿನ ಮೆದೆಗೆ ಬಂದಾಗ ಹತ್ತು ಸೇರು ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೆ? ಐವತ್ತು ಸೇರು ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಸೇರು ಮಾತ್ರ ದೊರೆಯುತ್ತಿತ್ತಷ್ಟೆ. 17 ನಾನು ನಿಮ್ಮ ದುಡಿಮೆಯ ಫಲವನ್ನು ಆನೆಕಲ್ಲು, ಬೂಷ್ಟು, ಬಿಸಿಗಾಳಿ - ಇವುಗಳಿಂದ ಹಾಳುಮಾಡಿ ನಿಮ್ಮನ್ನು ಬಾಧಿಸಿದೆನು. ಆದರೂ ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ, ಇದನ್ನು ನೆನಪಿನಲ್ಲಿಡಿ. ಇದು ಸರ್ವೇಶ್ವರನ ನುಡಿ. 18 ಮಹಾದೇವಾಲಯಕ್ಕೆ ಅಸ್ತಿಭಾರಹಾಕಿದ ಅಂದರೆ, ಒಂಬತ್ತನೇ ತಿಂಗಳಿನ ಇಪ್ಪತ್ತನಾಲ್ಕನೇ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿ. 19 ಇನ್ನು ಮುಂದಕ್ಕೂ ಕಣಜದಲ್ಲಿ ಕಾಳಿಲ್ಲದೆ ಇರುವುದೋ? ದ್ರಾಕ್ಷೆ, ಅಂಜೂರ, ದಾಳಿಂಬೆ, ಓಲಿವ್ ಗಿಡಗಳು ಫಲಿಸದೆಹೋಗುವವೋ? ಇಲ್ಲ. ಈ ದಿನ ಮೊದಲ್ಗೊಂಡು ನಾನು ನಿಮ್ಮನ್ನು ಆಶೀರ್ವದಿಸುವೆನು.” ಜೆರುಬ್ಬಾಬೆಲನಿಗಿತ್ತ ವಾಗ್ದಾನ 20 ಅದೇ ಒಂಬತ್ತನೆಯ ತಿಂಗಲಿನ ಇಪ್ಪತ್ತನಾಲ್ಕನೇ ದಿನದಲ್ಲಿ ಸರ್ವೆಶ್ವರ ಹಗ್ಗಾಯನಿಗೆ ಈ ಎರಡನೆಯ ಸಂದೇಶವನ್ನು ದಯಪಾಲಿಸಿದರು: 21 “ಜುದೇಯ ನಾಡಿನ ಅಧಿಪತಿಯಾದ ಜೆರುಬ್ಬಾಬೆಲನಿಗೆ ಹೀಗೆಂದು ನುಡಿ: ನಾನು ಭೂಮ್ಯಾಕಾಶಗಳನ್ನು ಅದರಿಸುವೆನು. 22 ರಾಜ್ಯಗಳ ಸಿಂಹಾಸನವನ್ನು ಕೆಡವಿಬಿಡುವೆನು. ರಾಷ್ಟ್ರಗಳ ಸಂಸ್ಥಾನಬಲವನ್ನು ಧ್ವಂಸಮಾಡುವೆನು. ರಥಗಳನ್ನೂ ರಥಾರೂಢರನ್ನೂ ದಬ್ಬಿಬಿಡುವೆನು. ಕುದುರೆಗಳೂ ರಾಹುತರೂ ಬಿದ್ದುಹೋಗುವರು; ಒಬ್ಬನು ಮತ್ತೊಬ್ಬನ ಕತ್ತಿಗೆ ತುತ್ತಾಗುವನು.” 23 ಸೇನಾಧಿಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಶೆಯಲ್ತೀಯೇಲನ ಮಗನೂ ನನ್ನ ದಾಸನೂ ಆದ ಜೆರುಬ್ಬಾಬೆಲನೇ, ಆ ದಿನಗಳಲ್ಲಿ ನಾನು ನಿನ್ನನ್ನು ಆರಿಸಿ ತೆಗೆದುಕೊಳ್ಳುವೆನು. ನನ್ನ ಮುದ್ರೆ ಉಂಗುರವನ್ನು ತೊಟ್ಟ ರಾಜನನ್ನಾಗಿ ನಿನ್ನನ್ನು ನೇಮಿಸುವೆನು,” ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿಯಿದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India