Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 8 - ಕನ್ನಡ ಸತ್ಯವೇದವು C.L. Bible (BSI)


ಕಪ್ಪೆಗಳ ಕಾಟ

1 ತರುವಾಯ ಸರ್ವೇಶ್ವರ ಸ್ವಾಮಿ ಮೋಶೆಗೆ ಇಂತೆಂದರು: “ನೀನು ಫರೋಹನ ಬಳಿಗೆ ಹೋಗಿ ಹೀಗೆಂದು ಹೇಳು - ‘ಸರ್ವೇಶ್ವರ ನಿನಗೆ ಮಾಡುವ ಆಜ್ಞೆ ಇದು - ನನ್ನನ್ನು ಆರಾಧಿಸಲು ನನ್ನ ಜನರಿಗೆ ಹೋಗಲು ಅಪ್ಪಣೆ ಕೊಡು.

2 ಕೊಡದೆ ಹೋದರೆ ನಿನ್ನ ದೇಶಕ್ಕೆಲ್ಲಾ ಕಪ್ಪೆಗಳ ಕಾಟ ತಗಲುವಂತೆ ಮಾಡುವೆನು.

3 ನೈಲ್ ನದಿಯಲ್ಲಿ ಕಪ್ಪೆಗಳು ತುಂಬಿಹೋಗುವುವು. ಅವು ಹೊರಟುಬಂದು ನಿನ್ನ ಅರಮನೆಯಲ್ಲೂ ಮಲಗುವ ಕೋಣೆಯಲ್ಲೂ ನಿನ್ನ ಹಾಸಿಗೆಯಲ್ಲೂ ನಿನ್ನ ಪರಿವಾರದವರ ಹಾಗು ಪ್ರಜೆಗಳ ಮನೆಗಳಲ್ಲೂ ಒಲೆಗಳಲ್ಲೂ ಹಿಟ್ಟುನಾದುವ ಹರಿವಾಣಗಳಲ್ಲೂ ಕಾಣಿಸಿಕೊಳ್ಳುವುವು.

4 ನಿನ್ನ ಮೇಲೆ, ನಿನ್ನ ಪ್ರಜೆಗಳ ಮೇಲೆ ಹಾಗೂ ಪರಿವಾರದವರ ಮೇಲೆ ಆ ಕಪ್ಪೆಗಳು ಏರಿ ಬರುವುವು'.”

5 ಸರ್ವೇಶ್ವರ, ಮೋಶೆಯ ಸಂಗಡ ಮಾತಾಡಿ ಹೀಗೆಂದರು: “ನೀನು ಆರೋನನಿಗೆ, ‘ನಿನ್ನ ಕೋಲನ್ನು ಕಾಲುವೆ, ಹೊಳೆ, ಕೆರೆ ಇವುಗಳ ಮೇಲೆ ಚಾಚು. ಆಗ ಈಜಿಪ್ಟ್ ದೇಶದ ಮೇಲೆಲ್ಲಾ ಕಪ್ಪೆಗಳು ಏರಿಬರುವುವು, ಎಂದು ಹೇಳು.”

6 ಆರೋನನು ಈಜಿಪ್ಟ್ ದೇಶದಲ್ಲಿ ನೀರಿರುವ ಎಲ್ಲ ಸ್ಥಳಗಳ ಮೇಲೆ ಕೈಚಾಚಲು ಕಪ್ಪೆಗಳು ಹೊರಟುಬಂದು ದೇಶವನ್ನೆಲ್ಲಾ ತುಂಬಿಕೊಂಡವು.

7 ಮಾಟಗಾರರು ತಮ್ಮ ಮಂತ್ರತಂತ್ರಗಳಿಂದ ಹಾಗೆಯೇ ಮಾಡಿ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.

8 ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, “ನೀವು ಸರ್ವೇಶ್ವರನನ್ನು ಪ್ರಾರ್ಥನೆಮಾಡಿ ಈ ಕಪ್ಪೆಗಳನ್ನು ನನ್ನ ಬಳಿಯಿಂದಲೂ ನನ್ನ ಪ್ರಜೆಗಳ ಬಳಿಯಿಂದಲೂ ತೊಲಗಿಸಿರಿ. ಹಾಗೆ ಮಾಡಿದರೆ ಸರ್ವೇಶ್ವರನಿಗೆ ಬಲಿ ಒಪ್ಪಿಸುವಂತೆ ನಿಮ್ಮ ಜನರಿಗೆ ನಾನು ಹೋಗಲು ಅಪ್ಪಣೆ ಕೊಡುತ್ತೇನೆ,” ಎಂದನು.

9 ಅದಕ್ಕೆ ಮೋಶೆ, "ಈ ಕಪ್ಪೆಗಳು ತಮ್ಮ ಬಳಿಯಿಂದಲೂ ತಮ್ಮ ಮನೆ ಮಾರುಗಳಿಂದಲೂ ತೊಲಗಿಹೋಗಿ ನದಿಯಲ್ಲಿ ಮಾತ್ರ ಉಳಿಯುವಂತೆ ನಾನು ಯಾವಾಗ ತಮ್ಮ ಪರವಾಗಿ, ತಮ್ಮ ಪ್ರಜಾಪರಿವಾರದ ಪರವಾಗಿ ಪ್ರಾರ್ಥನೆ ಸಲ್ಲಿಸಬೇಕು? ತಮ್ಮ ಘನಚಿತ್ತಕ್ಕೆ ಸರಿತೋರಿದಂತೆ ತಾವೇ ಅದಕ್ಕೊಂದು ಕಾಲವನ್ನು ನಿಗದಿಮಾಡಬೇಕು,” ಎಂದು ಫರೋಹನನ್ನು ವಿನಂತಿಸಿದನು.

10 ಅವನು, “ನಾಳೆಯೇ ಆಗಲಿ” ಎಂದನು. ಅದಕ್ಕೆ ಮೋಶೆ, “ತಮ್ಮ ಮಾತಿನ ಪ್ರಕಾರವೇ ಆಗುವುದು.

11 ಕಪ್ಪೆಗಳು ತಮ್ಮನ್ನೂ ತಮ್ಮ ಮನೆಮಾರುಗಳನ್ನೂ ತಮ್ಮ ಪ್ರಜಾಪರಿವಾರಗಳನ್ನೂ ಬಿಟ್ಟು ನದಿಯಲ್ಲಿ ಮಾತ್ರ ಇರುವುವು. ಇದರಿಂದ ನಮ್ಮ ದೇವರಾದ ಸರ್ವೇಶ್ವರನಿಗೆ ಸಮಾನರು ಯಾರೂ ಇಲ್ಲವೆಂದು ತಾವೇ ತಿಳಿದುಕೊಳ್ಳುವಿರಿ,” ಎಂದನು.

12 ಮೋಶೆ ಮತ್ತು ಆರೋನರು ಫರೋಹನ ಬಳಿಯಿಂದ ಹೊರಟುಹೋದರು. ಫರೋಹನ ಮೇಲೆ ಬರಮಾಡಿದ್ದ ಕಪ್ಪೆಗಳ ಕಾಟವನ್ನು ತೊಲಗಿಸಬೇಕೆಂದು ಮೋಶೆ ಪ್ರಾರ್ಥನೆ ಮಾಡಿದನು.

13 ಸರ್ವೇಶ್ವರ ಅವನ ಪ್ರಾರ್ಥನೆಯ ಪ್ರಕಾರವೇ ಮಾಡಿದರು. ಮನೆಗಳಲ್ಲೂ ಅಂಗಳಗಳಲ್ಲೂ ಹೊಲಗದ್ದೆಗಳಲ್ಲೂ ಇದ್ದ ಕಪ್ಪೆಗಳು ಸತ್ತುಹೋದವು.

14 ಜನರು ಅವುಗಳನ್ನು ರಾಶಿರಾಶಿಯಾಗಿ ಕೂಡಿಸಿದರು. ದೇಶವೆಲ್ಲ ದುರ್ವಾಸನೆಯಿಂದ ತುಂಬಿಹೋಯಿತು.

15 ಕಾಟ ತೀರಿತೆಂದು ತಿಳಿದುಕೊಂಡಾಗ ಫರೋಹನು ತನ್ನ ಹೃದಯವನ್ನು ಮೊಂಡಾಗಿಸಿಕೊಂಡನು. ಸರ್ವೇಶ್ವರ ಮುಂತಿಳಿಸಿದಂತೆಯೇ ಅವನು ಅವರ ಮಾತನ್ನು ಕೇಳದೆಹೋದನು.


ಹೇನುಗಳ ಕಾಟ

16 ಬಳಿಕ ಸರ್ವೇಶ್ವರ ಮೋಶೆಯ ಸಂಗಡ ಮಾತಾಡಿ ಹೀಗೆಂದರು: “ನೀನು ಆರೋನನಿಗೆ, ‘ನಿನ್ನ ಕೋಲನ್ನು ಚಾಚಿ ನೆಲದ ಧೂಳನ್ನು ಹೊಡೆ. ಆಗ ಈಜಿಪ್ಟಿನ ದೇಶದಲ್ಲೆಲ್ಲ ನೆಲದ ಧೂಳು ಹೇನುಗಳಾಗುವುದು' ಎಂದು ಹೇಳು.”

17 ಅವರು ಹಾಗೆಯೆ ಮಾಡಿದರು. ಆರೋನನು ಕೋಲನ್ನು ಹಿಡಿದು ಕೈಚಾಚಿ ಧೂಳನ್ನು ಹೊಡೆದನು. ಹೇನುಗಳು ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಮುತ್ತಿಕೊಂಡವು. ಈಜಿಪ್ಟ್ ದೇಶದಲ್ಲೆಲ್ಲಾ ನೆಲದ ಧೂಳು ಹೇನುಗಳಾದವು.

18 ಮಾಟಗಾರರು ತಮ್ಮ ತಂತ್ರ ಮಂತ್ರಗಳಿಂದ ಹಾಗೆಯೇ ಹೇನುಗಳನ್ನು ಉಂಟುಮಾಡಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಆ ಹೇನುಗಳು ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಮುತ್ತಿದ್ದವು.

19 ಆಗ ಆ ಮಾಟಗಾರರು, “ಇದು ದೇವರ ಕೆಲಸವೇ ಸರಿ,” ಎಂದು ಫರೋಹನಿಗೆ ತಿಳಿಸಿದರು. ಆದರೂ ಫರೋಹನ ಹೃದಯ ಕಲ್ಲಾಗಿತ್ತು. ಸರ್ವೇಶ್ವರ ಮುಂತಿಳಿಸಿದಂತೆಯೇ ಅವನು ಅವರ ಮಾತನ್ನು ಕೇಳದೆಹೋದನು.


ನೊಣ ಕೀಟಗಳ ಪೀಡೆ

20 ತರುವಾಯ ಸರ್ವೇಶ್ವರ ಮೋಶೆಗೆ ಇಂತೆಂದರು: “ನೀನು ಬೆಳಿಗ್ಗೆ ಎದ್ದು ಫರೋಹನಿಗಾಗಿ ಕಾದು ನಿಂತುಕೊ. ಅವನು ನದಿಗೆ ಹೋಗಲು ಬರುತ್ತಾನೆ. ಅವನಿಗೆ ಹೀಗೆಂದು ಹೇಳು: ‘ಸರ್ವೇಶ್ವರ ನಿಮಗೆ ಆಜ್ಞಾಪಿಸುವ ಮಾತುಗಳಿವು - ನನ್ನನ್ನು ಆರಾಧಿಸಲು ನನ್ನ ಜನರಿಗೆ ಅಪ್ಪಣೆಕೊಡು.

21 ಕೊಡದೆ ಹೋದರೆ ನಿನಗೂ ನಿನ್ನ ಪ್ರಜಾಪರಿವಾರದವರಿಗೂ ನಿನ್ನ ಮನೆಮಾರುಗಳಿಗೂ ನೊಣಗಳ ಕಾಟವನ್ನು ಉಂಟುಮಾಡುವೆನು. ಈಜಿಪ್ಟಿನವರು ವಾಸಿಸುವ ಮನೆಗಳಲ್ಲೂ ಅವರು ಕಾಲೂರುವ ನೆಲಗಳಲ್ಲೂ ಆ ನೊಣಗಳು ತುಂಬಿಕೊಳ್ಳುವುವು.

22 ಆ ದಿನದಲ್ಲಿ ನನ್ನ ಜನರು ವಾಸವಾಗಿರುವ ಗೋಷೆನ್ ಪ್ರಾಂತ್ಯಕ್ಕೆ ಈ ಪಿಡುಗು ತಗಲದಂತೆ ಮಾಡುವೆನು. ಅಲ್ಲಿ ಈ ಕಾಟ ಇರುವುದಿಲ್ಲ. ಇದರಿಂದ ಭೂಲೋಕವನ್ನಾಳುವ ಸರ್ವೇಶ್ವರನು ನಾನೇ ಎಂದು ನೀನು ಅರಿತುಕೊಳ್ಳಬೇಕು.

23 ಹೀಗೆ ನನ್ನ ಜನರಿಗೂ ನಿನ್ನ ಜನರಿಗೂ ವ್ಯತ್ಯಾಸ ಉಂಟುಮಾಡುವೆನು. ನಾಳೆಯೇ ಈ ಸೂಚಕಕಾರ್ಯ ನಡೆಯುವುದು, ಎಂದು ಹೇಳು."

24 ಸರ್ವೇಶ್ವರ ಹಾಗೆಯೇ ಮಾಡಿದರು. ನೊಣಗಳು ಫರೋಹನ ಅರಮನೆಯಲ್ಲೂ ಅವನ ಪರಿವಾರದವರ ಮನೆಗಳಲ್ಲೂ ಸಮಸ್ತ ಈಜಿಪ್ಟ್ ದೇಶದಲ್ಲೂ ಬಹಳವಾಗಿ ತುಂಬಿಕೊಂಡವು. ಅವುಗಳಿಂದ ದೇಶ ಹಾಳಾಯಿತು.

25 ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಸಿ, “ನೀವು ಹೋಗಿ ಈ ದೇಶದಲ್ಲೇ ನಿಮ್ಮ ದೇವರಿಗೆ ಬಲಿಯನ್ನೊಪ್ಪಿಸಬಹುದು,” ಎಂದನು.

26 ಆದರೆ ಮೋಶೆ, “ಹಾಗೆ ಮಾಡುವುದು ಸರಿಯಲ್ಲ. ನಮ್ಮ ದೇವರಾದ ಸರ್ವೇಶ್ವರನಿಗೆ ನಾವು ಬಲಿಯಾಗಿ ಕೊಡುವ ಆಹುತಿ ಈಜಿಪ್ಟಿನವರಿಗೆ ನಿಷಿದ್ಧವಾದದ್ದು. ನಿಷಿದ್ಧವೆಂದು ಈಜಿಪ್ಟಿನವರು ತಿಳಿದುಕೊಂಡು ಇರುವ ಆಹುತಿಯನ್ನು ನಾವು ಅವರ ಕಣ್ಮುಂದೆಯೇ ಮಾಡಿದರೆ ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವರಲ್ಲವೆ?

27 ನಾವು ಮರುಭೂಮಿಯಲ್ಲಿ ಮೂರು ದಿವಸದ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸುವ ಪ್ರಕಾರ ಬಲಿಯೊಪ್ಪಿಸಬೇಕಾಗಿದೆ’." ಎಂದನು.

28 ಅದಕ್ಕೆ ಫರೋಹನು, “ಒಳ್ಳೆಯದು, ಮರುಭೂಮಿಯಲ್ಲಿ ನಿಮ್ಮ ದೇವರಾದ ಸರ್ವೇಶ್ವರನಿಗೆ ಬಲಿ ಒಪ್ಪಿಸಲು ನಿಮಗೆ ಅಪ್ಪಣೆಕೊಡುತ್ತೇನೆ. ಆದರೆ ದೂರ ಹೋಗಕೂಡದು. ನನಗಾಗಿ ಪ್ರಾರ್ಥನೆ ಮಾಡಬೇಕು,” ಎಂದನು.

29 ಆಗ ಮೋಶೆ, “ನಿಮ್ಮ ಬಳಿಯಿಂದ ಹೊರಟಾಗಲೆ ಫರೋಹನಾದ ನಿಮಗೂ ನಿಮ್ಮ ಪ್ರಜಾಪರಿವಾರದವರಿಗೂ ನೊಣಗಳ ಕಾಟ ನಾಳೆಯಿಂದ ಇರಬಾರದೆಂದು ಸರ್ವೇಶ್ವರನಿಗೆ ಪ್ರಾರ್ಥನೆ ಮಾಡುತ್ತೇನೆ. ಆದರೆ ಸರ್ವೇಶ್ವರನಿಗೆ ಬಲಿ ಒಪ್ಪಿಸಲು ನೀವು ಜನರಿಗೆ ಅಪ್ಪಣೆಕೊಡದೆ ವಂಚನೆ ಮಾಡಬಾರದು,” ಎಂದನು.

30 ಮೋಶೆ ಫರೋಹನ ಬಳಿಯಿಂದ ಹೊರಟು ಸರ್ವೇಶ್ವರ ಸ್ವಾಮಿಗೆ ಪ್ರಾರ್ಥನೆ ಮಾಡಿದನು.

31 ಅವನ ಪ್ರಾರ್ಥನೆಯ ಮೇರೆಗೆ ಸರ್ವೇಶ್ವರ ಮಾಡಿದರು. ಆ ನೊಣಗಳೆಲ್ಲ ಫರೋಹನ ಹಾಗು ಅವನ ಪ್ರಜಾಪರಿವಾರದವರ ಬಳಿಯಿಂದ ತೊಲಗಿಹೋದವು. ಒಂದೂ ಉಳಿಯಲಿಲ್ಲ.

32 ಆದರೂ ಫರೋಹನು ಮತ್ತೆ ತನ್ನ ಹೃದಯವನ್ನು ಮೊಂಡುಮಾಡಿಕೊಂಡು ಜನರಿಗೆ ಹೋಗಲು ಅಪ್ಪಣೆಕೊಡದೆ ಹೋದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು