Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 7 - ಕನ್ನಡ ಸತ್ಯವೇದವು C.L. Bible (BSI)

1 ಆಗ ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು. “ನೋಡು, ನಾನು ನಿನ್ನನ್ನು ಫರೋಹನ ಮುಂದೆ ದೇವರ ಪ್ರತಿನಿಧಿಯನ್ನಾಗಿ ನೇಮಿಸಿದ್ದೇನೆ. ನಿನ್ನ ಅಣ್ಣ ಆರೋನನು ನಿನ್ನ ಪರವಾಗಿ ವಾದಿಸುವನು.

2 ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ನೀನು ಹೇಳಬೇಕು. ಇಸ್ರಯೇಲರು ಈ ದೇಶದಿಂದ ಹೊರಟುಹೋಗುವುದಕ್ಕೆ ಅಪ್ಪಣೆಕೊಡಬೇಕೆಂದು ನಿನ್ನ ಅಣ್ಣ ಆರೋನನೇ ಫರೋಹನ ಮುಂದೆ ಮಾತಾಡಬೇಕು.

3 ಆದರೂ ನಾನು ಫರೋಹನ ಹೃದಯವನ್ನು ಕಲ್ಲಾಗಿಸಿ ಈಜಿಪ್ಟ್ ದೇಶದಲ್ಲಿ ಅನೇಕ ಸೂಚಕಕಾರ್ಯಗಳನ್ನೂ ಪವಾಡಗಳನ್ನೂ ನಡೆಸಿ ನನ್ನ ಶಕ್ತಿಯನ್ನು ತೋರಿಸುವೆನು.

4 ಫರೋಹನು ನಿನ್ನ ಮಾತನ್ನು ಕೇಳುವುದಿಲ್ಲ. ಆಗ ನಾನು ಈಜಿಪ್ಟ್ ದೇಶದವರನ್ನು ಬಾಧಿಸಿ ಅವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುವೆನು. ನನ್ನ ಜನರಾದ ಇಸ್ರಯೇಲರ ಗೋತ್ರಗಳನ್ನೆಲ್ಲ ಈಜಿಪ್ಟ್ ದೇಶದಿಂದ ಹೊರತರುವೆನು.

5 ನಾನು ಈಜಿಪ್ಟಿನವರಿಗೆ ವಿರುದ್ಧ ಕೈಯೆತ್ತಿ ಅವರ ಮಧ್ಯೆಯಿಂದ ಇಸ್ರಯೇಲರನ್ನು ಹೊರತಂದಾಗ ನಾನು ಸರ್ವೇಶ್ವರನೆಂಬುದನ್ನು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು.

6 ಸರ್ವೇಶ್ವರ ಸ್ವಾಮಿಯ ಆಜ್ಞೆಯಂತೆಯೇ ಮೋಶೆ ಮತ್ತು ಆರೋನರು ಮಾಡಿದರು.

7 ಫರೋಹನೊಡನೆ ಮಾತುಕತೆ ನಡೆಸಿದಾಗ ಮೋಶೆಗೆ ಎಂಬತ್ತು, ಆರೋನನಿಗೆ ಎಂಬತ್ತಮೂರು ವರ್ಷ ವಯಸ್ಸಾಗಿತ್ತು.


ಆರೋನನ ಕೋಲು

8 ಮೋಶೆ ಮತ್ತು ಆರೋನರ ಸಂಗಡ ಸರ್ವೇಶ್ವರ ಮಾತಾಡಿ,

9 "ಫರೋಹನು ನಿಮಗೆ, ‘ನಾನು ನಿಮ್ಮ ಮಾತನ್ನು ನಂಬಬೇಕಾದರೆ ಮಹತ್ಕಾರ್ಯವೊಂದನ್ನು ನನ್ನ ಮುಂದೆ ಮಾಡಿ,’ ಎಂದು ಹೇಳಿದರೆ ಮೋಶೆ ಆರೋನನಿಗೆ, ‘ನಿನ್ನ ಕೈಯಲ್ಲಿರುವ ಕೋಲನ್ನು ಫರೋಹನ ಮುಂದೆ ನೆಲದ ಮೇಲೆ ಬಿಸಾಡು’ ಎಂದು ಹೇಳಲಿ. ಅದು ಸರ್ಪವಾಗುವುದು,” ಎಂದು ಹೇಳಿದರು.

10 ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋದರು. ಸರ್ವೇಶ್ವರ ತಮಗೆ ಹೇಳಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ನೆಲದಲ್ಲಿ ಬಿಸಾಡಿದಾಗ ಅದು ಸರ್ಪ ಆಯಿತು.

11 ಫರೋಹನು ಈಜಿಪ್ಟ್ ದೇಶದ ವಿದ್ವಾಂಸರನ್ನೂ ಮಂತ್ರಗಾರರನ್ನೂ ಕರೆಸಿದನು. ಆ ಮಾಟಗಾರರು ತಮ್ಮ ಮಂತ್ರತಂತ್ರಗಳಿಂದ ಅದೇ ರೀತಿಯಾಗಿ ಮಾಡಿದರು.

12 ಅವರು ತಮ್ಮ ತಮ್ಮ ಕೋಲುಗಳನ್ನು ನೆಲಕ್ಕೆ ಬಿಸಾಡಿದರು. ಅವೂ ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.

13 ಸರ್ವೇಶ್ವರ ಈ ಮೊದಲೇ ಹೇಳಿದ್ದಂತೆ ಫರೋಹನ ಹೃದಯ ಕಲ್ಲಾಯಿತು. ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.


ಹತ್ತು ಪಿಡುಗುಗಳು: ನೀರೆಲ್ಲಾ ರಕ್ತ

14 ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು: “ಫರೋಹನ ಹೃದಯ ಮೊಂಡಾಗಿದೆ. ಜನರು ಹೋಗಲು ಅಪ್ಪಣೆ ಕೊಡುವುದಿಲ್ಲವೆನ್ನುತ್ತಾನೆ.

15 ಬೆಳಿಗ್ಗೆ ನೀನು ಫರೋಹನ ಬಳಿಗೆ ಹೋಗು. ಆಗ ಅವನು ನದಿಗೆ ಹೋಗುತ್ತಿರುತ್ತಾನೆ. ಅವನನ್ನು ಭೇಟಿಯಾಗಲು ನೈಲ್ ನದಿ ತೀರದಲ್ಲೆ ನಿಂತುಕೊಂಡಿರು. ಸರ್ಪವಾಗಿ ಮಾರ್ಪಟ್ಟ ಆ ಕೋಲು ನಿನ್ನ ಕೈಯಲ್ಲಿರಲಿ.

16 ಅವನಿಗೆ “ಹಿಬ್ರಿಯರ ದೇವರಾದ ಸರ್ವೇಶ್ವರ ನನ್ನನ್ನು ನಿನ್ನ ಬಳಿಗೆ ಕಳಿಸಿದ್ದಾರೆ. ಅವರು ನಿನಗೆ ಹೇಳುವ ಮಾತಿದು: ಮರುಭೂಮಿಯಲ್ಲಿ ನನ್ನನ್ನು ಆರಾಧಿಸಲು ನನ್ನ ಜನರಿಗೆ ಅಪ್ಪಣೆ ಕೊಡಬೇಕೆಂದು ನಿನಗೆ ಆಜ್ಞಾಪಿಸಿದೆ. ಆದರೆ ನೀನು ಈವರೆಗೂ ಅದನ್ನು ಲಕ್ಷ್ಯಕ್ಕೆ ತಂದುಕೊಂಡಿಲ್ಲ.

17 ಆದುದರಿಂದ ಸರ್ವೇಶ್ವರನಾದ ನಾನು ಮತ್ತೆ ಹೇಳುತ್ತೇನೆ - ನೀನು ನನ್ನನ್ನು ಸರ್ವೇಶ್ವರನೆಂದು ತಿಳಿದುಕೊಳ್ಳುವಂತೆ ನನ್ನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡಿಸುವೆನು; ಆಗ ಅದು ರಕ್ತವಾಗುವುದು.

18 ನದಿಯಲ್ಲಿರುವ ಮೀನುಗಳು ಸಾಯುವುವು. ನದಿಯು ಹೊಲಸಾಗಿ ನಾರುವುದು. ಅದರಲ್ಲಿ ನೀರನ್ನು ಕುಡಿಯಲು ಈಜಿಪ್ಟಿನವರಿಗೆ ಹೇಸಿಗೆಯಾಗುವುದು'.”

19 ಸರ್ವೇಶ್ವರ ಮತ್ತೆ ಮೋಶೆಗೆ ಹೀಗೆಂದರು: “ನೀನು ಆರೋನನಿಗೆ, ‘ನಿನ್ನ ಕೋಲನ್ನು ತೆಗೆದುಕೊಂಡು ಈಜಿಪ್ಟ್ ದೇಶದಲ್ಲಿರುವ ಹೊಳೆ, ಕಾಲುವೆ, ಕೆರೆ, ಕೊಳ ಮೊದಲಾದ ನೀರಿರುವ ಎಲ್ಲ ಸ್ಥಳಗಳ ಮೇಲೆ ಅದನ್ನು ಚಾಚು’ ಎಂದು ಹೇಳು. ಅವನು ಚಾಚುವಾಗ ಆ ನೀರೆಲ್ಲ ರಕ್ತವಾಗುವುದು. ಈಜಿಪ್ಟ್ ದೇಶದಲ್ಲೆಲ್ಲೂ ಮರದ ತೊಟ್ಟಿಗಳಲ್ಲೂ ಕಲ್ಲಿನ ಬಾನೆಗಳಲ್ಲೂ ಕೂಡ ರಕ್ತ ತುಂಬಿರುವುದು.”

20 ಮೋಶೆ ಮತ್ತು ಆರೋನರು ಸರ್ವೇಶ್ವರ ಸ್ವಾಮಿ ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಫರೋಹನ ಹಾಗು ಅವನ ಪರಿವಾರದ ಮುಂದೆ ಆರೋನನು ಕೋಲನ್ನು ಎತ್ತಿ ನದಿಯಲ್ಲಿರುವ ನೀರನ್ನು ಹೊಡೆದನು. ಅದೆಲ್ಲ ರಕ್ತಮಯ ಆಯಿತು.

21 ಅದರಲ್ಲಿದ್ದ ಮೀನುಗಳು ಸತ್ತುಹೋದವು. ನದಿ ಹೊಲಸಾಗಿ ನಾರುತ್ತಿತ್ತು. ಈಜಿಪ್ಟಿನವರು ಅದರ ನೀರನ್ನು ಕುಡಿಯಲಾರದೆ ಹೋದರು. ಈಜಿಪ್ಟ್ ದೇಶವೆಲ್ಲಾ ರಕ್ತಮಯ ಆಯಿತು.

22 ಆದರೆ ಈಜಿಪ್ಟ್ ದೇಶದ ಮಾಟಗಾರರು ಕೂಡ ತಮ್ಮ ಮಂತ್ರತಂತ್ರಗಳಿಂದ ಅದೇ ರೀತಿ ಮಾಡಿದರು. ಆದ್ದರಿಂದ ಫರೋಹನ ಹೃದಯ ಕಠಿಣವಾಯಿತು. ಸರ್ವೇಶ್ವರ ಈ ಮೊದಲೇ ತಿಳಿಸಿದ್ದಂತೆ ಅವನು ಮೋಶೆ ಮತ್ತು ಆರೋನರ ಮಾತನ್ನು ಕೇಳದೆಹೋದನು.

23 ಈ ಸೂಚಕಕಾರ್ಯವನ್ನು ಕೂಡ ಗಣನೆಗೆ ತೆಗೆದುಕೊಳ್ಳದೆ ಫರೋಹನು ತನ್ನ ಅರಮನೆಗೆ ಹಿಂದಿರುಗಿದನು.

24 ಈಜಿಪ್ಟಿನವರೆಲ್ಲರು ಆ ನದಿಯ ನೀರನ್ನು ಕುಡಿಯಲಾಗದೆ, ಕುಡಿಯುವ ನೀರಿಗಾಗಿ ಅದರ ಸುತ್ತಲು ಅಗೆದರು.

25 ಸರ್ವೇಶ್ವರ ನೈಲ್ ನದಿಯನ್ನು ಹೊಡೆದ ಮೇಲೆ ಏಳು ದಿನಗಳು ಕಳೆದವು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು