ವಿಮೋಚನಕಾಂಡ 6 - ಕನ್ನಡ ಸತ್ಯವೇದವು C.L. Bible (BSI)1 ಅದಕ್ಕೆ ಸರ್ವೇಶ್ವರ ಸ್ವಾಮಿ ಮೋಶೆಗೆ, “ನಾನು ಫರೋಹನಿಗೆ ಮಾಡಲು ಹೋಗುವುದನ್ನು ನೀನು ಇಷ್ಟರಲ್ಲೇ ನೋಡುವೆ. ಅವನು ನನ್ನ ಭುಜಬಲವನ್ನು ಕಂಡು ಅವರನ್ನು ಹೋಗಲು ಬಿಡುವನು. ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ನಾಡಿನಿಂದ ಹೊರಡಿಸುವನು,” ಎಂದರು. ಮೋಶೆಗೆ ಬಂದ ದೈವಕರೆಯ ಮತ್ತೊಂದು ವರದಿ 2 ದೇವರು ಮೋಶೆಯ ಸಂಗಡ ಮಾತಾಡಿ ಇಂತೆಂದರು: 3 “ನಾನು ಸರ್ವೇಶ್ವರ, ಅಬ್ರಹಾಮ, ಇಸಾಕ ಹಾಗು ಯಕೋಬರಿಗೆ ನಾನು ‘ಸರ್ವಶಕ್ತನಾದ ದೇವರು ಎಂಬ ಹೆಸರುಳ್ಳವನಾಗಿ ಕಾಣಿಸಿಕೊಂಡನೇ ಹೊರತು ‘ಸರ್ವೇಶ್ವರ’ ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ. 4 ಅಲ್ಲದೆ ಅವರು ಪ್ರವಾಸಿಗಳಾಗಿ ತಂಗಿದ್ದ ಕಾನಾನ್ ನಾಡನ್ನು ಅವರಿಗೆ ಸ್ವಂತ ನಾಡಾಗಿ ಕೊಡುವೆನೆಂದು ದೃಢವಾಗ್ದಾನ ಮಾಡಿದವನು ನಾನೇ. 5 ಈಜಿಪ್ಟಿನವರು ಗುಲಾಮರನ್ನಾಗಿಸಿಕೊಂಡಿರುವ ಇಸ್ರಯೇಲರ ಗೋಳು ನನಗೆ ಕೇಳಿಸಿದೆ. ನಾನು ಮಾಡಿದ ವಾಗ್ದಾನವನ್ನು ನೆನಪಿಗೆ ತಂದುಕೊಂಡಿದ್ದೇನೆ. 6 ಆದುದರಿಂದ ನೀನು ಇಸ್ರಯೇಲರಿಗೆ ನನ್ನ ಪರವಾಗಿ ಹೀಗೆಂದು ಹೇಳು: ‘ನಾನೇ ಸರ್ವೇಶ್ವರ. ಈಜಿಪ್ಟಿನವರು ನಿಮ್ಮ ಮೇಲೆ ಹೊರಿಸಿರುವ ದುಡಿಮೆಯನ್ನು ನೀಗಿಸುವೆನು, ದಾಸತ್ವವನ್ನು ತೊಲಗಿಸುವೆನು. ಅವರಿಗೆ ಕಠಿಣಶಿಕ್ಷೆಗಳನ್ನು ವಿಧಿಸುವೆನು, ನಿಮ್ಮನ್ನು ಸಂರಕ್ಷಿಸುವೆನು. 7 ನಾನು ನಿಮ್ಮನ್ನು ನನ್ನ ಪ್ರಜೆಯಾಗಿ ಮಾಡುವೆನು; ನಾನು ನಿಮ್ಮ ದೇವರಾಗಿರುವೆನು. ಈಜಿಪ್ಟಿನವರು ಹೊರಿಸುವ ದುಡಿಮೆಯನ್ನು ನಾನು ನಿಮ್ಮಿಂದ ಬಿಡಿಸಿದಾಗ ಸರ್ವೇಶ್ವರ ಎಂಬ ನಾನೇ ನಿಮ್ಮ ದೇವರೆಂದು ನಿಮಗೆ ತಿಳಿದುಬರುವುದು. 8 ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಕೋಬರಿಗೆ ಕೊಡುವೆನೆಂದು ಪ್ರಮಾಣ ಪೂರ್ವಕವಾಗಿ ಹೇಳಿದ ನಾಡಿಗೆ ನಿಮ್ಮನ್ನು ಸೇರಿಸುವೆನು. ಅದನ್ನು ನಿಮಗೆ ಸ್ವಂತ ನಾಡಾಗಿ ಕೊಡುವೆನು. ಸರ್ವೇಶ್ವರನು ನಾನೇ’ ಎಂದು ಅವರಿಗೆ ಹೇಳು,” ಎಂದರು. 9 ಮೋಶೆ ಈ ಮಾತುಗಳನ್ನು ಇಸ್ರಯೇಲರಿಗೆ ತಿಳಿಸಿದನು. ಆದರೂ ಅವನ ಮಾತಿಗೆ ಕಿವಿಗೊಡಲಿಲ್ಲ. ಏಕೆಂದರೆ ಅವರ ಮನಸ್ಸು ಅಷ್ಟು ಕುಗ್ಗಿಹೋಗಿತ್ತು, ಅವರ ದಾಸತ್ವ ಅಷ್ಟು ಕ್ರೂರವಾಗಿತ್ತು. 10 ಆಗ ಸರ್ವೇಶ್ವರ ಮೋಶೆಯ ಸಂಗಡ ಮಾತನಾಡಿ, 11 “ನೀನು ಈಜಿಪ್ಟಿನವರ ಅರಸ ಫರೋಹನ ಬಳಿಗೆ ಹೋಗು. ಅವನಿಗೆ, ‘ಇಸ್ರಯೇಲರು ನಿನ್ನ ದೇಶದಿಂದ ಹೊರಟು ಹೋಗುವುದಕ್ಕೆ ಅಪ್ಪಣೆಕೊಡಬೇಕು’ ಎಂದು ಹೇಳು,” ಎಂದರು. 12 ಅದಕ್ಕೆ ಮೋಶೆ ಸರ್ವೇಶ್ವರನ ಸನ್ನಿಧಿಯಲ್ಲಿ, “ಆಲಿಸಬೇಕು, ಇಸ್ರಯೇಲರೇ ನನ್ನ ಮಾತನ್ನು ಕೇಳಲಿಲ್ಲ; ಇನ್ನು ಫರೋಹನು ಕಿವಿಗೊಟ್ಟಾನೆ? ನನಗಾದರೂ ಚುರುಕಾದ ನಾಲಿಗೆಯಿಲ್ಲ,” ಎಂದನು. 13 ಸರ್ವೇಶ್ವರ ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಬೇಕೆಂದು ಅವರಿಗೆ ಆಜ್ಞಾಪಿಸಿ ಅವರನ್ನು ಇಸ್ರಯೇಲರ ಬಳಿಗೂ ಅರಸ ಫರೋಹನ ಬಳಿಗೂ ಕಳಿಸಿದರು. ಮೋಶೆ ಮತ್ತು ಆರೋನರ ವಂಶಾವಳಿ 14 ಅವರ ಗೋತ್ರಗಳ ಮೂಲಪುರುಷರು ಇವರು: ಇಸ್ರಯೇಲನ ಜ್ಯೇಷ್ಠ ಪುತ್ರನಾದ ರೂಬೇನನಿಗೆ ಹನೋಕ್, ಫಲ್ಲು, ಹೆಚ್ರೋನ್ ಮತ್ತು ಕರ್ಮೀ ಎಂಬವರು ಮಕ್ಕಳು. ಇವರೇ ರೂಬೇನನಿಂದ ಉಂಟಾದ ಗೋತ್ರಗಳಿಗೆ ಮೂಲ ಪುರುಷರು. 15 ಸಿಮೆಯೋನನಿಗೆ ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಮಹಿಳೆಯಿಂದ ಹುಟ್ಟಿದ ಸೌಲ ಎಂಬವರು ಮಕ್ಕಳು. ಇವರೇ ಸಿಮೆಯೋನನಿಂದ ಉಂಟಾದ ಗೋತ್ರಗಳಿಗೆ ಮೂಲಪುರುಷರು. 16 ವಂಶಾವಳಿಗಳ ಪ್ರಕಾರ ಲೇವಿಯ ಮಕ್ಕಳು ಇವರು - ಗೇರ್ಷೋನ್, ಕೆಹಾತ್ ಮತ್ತು ಮೆರಾರೀ. ಲೇವಿ ನೂರಮೂವತ್ತೇಳು ವರ್ಷ ಬದುಕಿದ್ದನು. 17 ಗೋತ್ರಗಳನ್ನು ಸ್ಥಾಪಿಸಿದ ಗೇರ್ಷೋನನ ಮಕ್ಕಳು ಲಿಬ್ನೀ ಮತ್ತು ಶಿಮ್ಮೀ ಎಂಬವರು. 18 ಕೆಹಾತನ ಮಕ್ಕಳು - ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್. ಕೆಹಾತನು ನೂರ ಮೂವತ್ತ ಮೂರು ವರ್ಷ ಬದುಕಿದ್ದನು. 19 ಮೆರಾರೀಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ವಂಶಾವಳಿಗಳ ಪ್ರಕಾರ ಲೇವಿಯಿಂದುಂಟಾದ ಗೋತ್ರಗಳು ಇವೇ. 20 ಅಮ್ರಾಮನು ತನ್ನ ಸೋದರತ್ತೆಯಾದ ಯೋಕಬೆದಳನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಆರೋನನನ್ನು ಮತ್ತು ಮೋಶೆಯನ್ನು ಹೆತ್ತಳು. ಅಮ್ರಾಮನು ನೂರಮೂವತ್ತೇಳು ವರ್ಷ ಬದುಕಿದ್ದನು. 21 ಇಚ್ಹಾರನ ಮಕ್ಕಳು - ಕೋರಹ, ನೆಫೆಗೆ ಮತ್ತು ಜಿಕ್ರೀ. 22 ಉಜ್ಜೀಯೇಲನ ಮಕ್ಕಳು - ಮೀಷಾಯೇಲ್, ಎಲ್ಚಾಫಾನ್ ಸಿತ್ರೀ. 23 ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ತಂಗಿಯೂ ಆದ ಎಲೀಶೇಬಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರು ಹುಟ್ಟಿದರು. 24 ಕೋರಹನ ಮಕ್ಕಳು - ಅಸ್ಸೀರ್, ಎಲ್ಕಾನಾ ಮತ್ತು ಅಬಿಯಾಸಾಫ್. ಇವರೇ ಕೋರಹೀಯರ ಗೋತ್ರಸ್ಥಾಪಕರು. 25 ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಫಿನೇಹಾಸನನ್ನು ಹೆತ್ತಳು. ಅವರವರ ಗೋತ್ರದ ಮೇರೆಗೆ ಇವರೇ ಲೇವಿಯರ ಪೂರ್ವಿಕರು. 26 “ತಮ್ಮ ತಮ್ಮ ಗೋತ್ರದ ಪ್ರಕಾರ ಇಸ್ರಯೇಲ್ ಜನರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬರುವುದಕ್ಕೆ ಸರ್ವೇಶ್ವರನಿಂದ ಆಜ್ಞೆಹೊಂದಿದ ಆರೋನ್ ಮತ್ತು ಮೋಶೆ ಇವರೇ. 27 ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡುವುದಕ್ಕಾಗಿ ಈಜಿಪ್ಟಿನ ಅರಸ ಫರೋಹನ ಸಂಗಡ ಮಾತಾಡಿದಂಥ ಮೋಶೆ ಮತ್ತು ಆರೋನರು ಇವರೇ. ದೇವರ ಆಜ್ಞೆ 28 ಸರ್ವೇಶ್ವರ ಸ್ವಾಮಿ ಈಜಿಪ್ಟ್ ದೇಶದಲ್ಲಿ ಮೋಶೆಯ ಸಂಗಡ ಮಾತಾಡಿ, 29 “ನಾನು ಸರ್ವೇಶ್ವರ; ನಾನು ನಿನಗೆ ಹೇಳುವುದನ್ನೆಲ್ಲ ನೀನು ಈಜಿಪ್ಟಿನ ಅರಸ ಫರೋಹನ ಸನ್ನಿಧಿಯಲ್ಲಿ ಹೇಳಬೇಕು,” ಎಂದರು. 30 ಅದಕ್ಕೆ ಮೋಶೆ, “ಸ್ವಾಮೀ, ನಾನು ಮಾತಾಡುವುದರಲ್ಲಿ ಜಾಣನಲ್ಲ, ಫರೋಹನು ನನ್ನ ಮಾತನ್ನು ಹೇಗೆ ಕೇಳುತ್ತಾನೆ?” ಎಂದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India