Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 5 - ಕನ್ನಡ ಸತ್ಯವೇದವು C.L. Bible (BSI)


ಫರೋಹರಾಜನ ಮುಂದೆ ಮೋಶೆ ಮತ್ತು ಆರೋನರು

1 ಬಳಿಕ ಮೋಶೆ ಮತ್ತು ಆರೋನರು ಫರೋಹನ ಸನ್ನಿಧಿಗೆ ಬಂದರು. “ಇಸ್ರಯೇಲರ ದೇವರಾದ ಸರ್ವೇಶ್ವರನ ಮಾತುಗಳಿವು: ‘ನನ್ನ ಜನರು ಮರುಭೂಮಿಯಲ್ಲಿ ನನ್ನ ಗೌರವಾರ್ಥ ಒಂದು ಹಬ್ಬವನ್ನು ಆಚರಿಸಬೇಕಾಗಿದೆ. ಅದಕ್ಕೆ ಅವರಿಗೆ ಅಪ್ಪಣೆಕೊಡಬೇಕು’," ಎಂದರು.

2 ಅದಕ್ಕೆ ಫರೋಹನು, “ 'ಸರ್ವೇಶ್ವರ' ಎಂಬುವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಯೇಲರನ್ನು ಹೋಗಬಿಡಬೇಕೊ? ಆ ಸರ್ವೇಶ್ವರನು ಯಾರೋ ನನಗೆ ಗೊತ್ತಿಲ್ಲ. ಇಸ್ರಯೇಲರನ್ನು ನಾನು ಹೋಗಬಿಡುವುದಿಲ್ಲ,” ಎಂದು ಬಿಟ್ಟನು.

3 ಮೋಶೆ ಮತ್ತು ಆರೋನರು, “ಹಿಬ್ರಿಯರ ದೇವರು ನಮಗೆ ದರ್ಶನವಿತ್ತರು. ಅಪ್ಪಣೆ ಆದರೆ ನಾವು ಮರುಭೂಮಿಯಲ್ಲಿ ಮೂರು ದಿವಸದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯರ್ಪಿಸಿ ಬರುತ್ತೇವೆ. ಹಾಗೆ ಮಾಡದೆಹೋದರೆ ಅವರು ನಮ್ಮನ್ನು ವ್ಯಾಧಿಯಿಂದಲೋ ಕತ್ತಿಯಿಂದಲೋ ಸಂಹಾರ ಮಾಡುವರು,” ಎಂದರು.

4 ಅವರಿಗೆ ಆ ಈಜಿಪ್ಟರ ಅರಸನು, “ಎಲೈ ಮೋಶೆ - ಆರೋನರೇ, ನೀವು ಮಾಡುತ್ತಾ ಇರುವುದೇನು? ಈ ಜನರು ತಮ್ಮ ಕೆಲಸವನ್ನು ಬಿಡುವಂತೆ ಮಾಡುತ್ತಿದ್ದೀರಿ. ನಡೆಯಿರಿ ಗುಲಾಮಗಿರಿಗೆ” ಎಂದುಬಿಟ್ಟನು.

5 ಇದೂ ಅಲ್ಲದೆ ಆ ಫರೋಹನು, “ನೋಡಿ, ನಾಡಿನಲ್ಲಿ ಈ ಜನರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ! ಇವರು ತಮ್ಮ ಕೆಲಸದಿಂದ ತಪ್ಪಿಸಿಕೊಳ್ಳುವುದಕ್ಕೆ ನೀವೇ ಕಾರಣ ಆಗುತ್ತಿದ್ದೀರಿ,” ಎಂದನು.

6 ಅದೇ ದಿನ, ಕೆಲಸಮಾಡಿಸುವವರನ್ನೂ ಮೇಸ್ತ್ರಿಗಳನ್ನೂ ಕರೆಯಿಸಿ,

7 "ಇನ್ನು ಮೇಲೆ ನೀವು ಈ ಜನರಿಗೆ ಇಟ್ಟಿಗೆ ಮಾಡುವುದಕ್ಕೆ ಹುಲ್ಲನ್ನು ಕೊಡಕೂಡದು; ಅವರೇ ಹೋಗಿ ಹುಲ್ಲನ್ನು ಹುಡುಕಿಕೊಳ್ಳಲಿ.

8 ಆದರೆ ಇಟ್ಟಿಗೆಗಳ ಲೆಕ್ಕವನ್ನು ಎಂದಿನಂತೆ ಒಪ್ಪಿಸಲಿ.ಅದನ್ನು ಕಡಿಮೆ ಮಾಡಕೂಡದು. ಇವರು ಮೈಗಳ್ಳರು. ಆದ್ದರಿಂದಲೇ, ‘ನಾವು ಹೋಗಿ ನಮ್ಮ ದೇವರಿಗೆ ಬಲಿಯರ್ಪಿಸಿ ಬರುವುದಕ್ಕೆ ಅಪ್ಪಣೆಯಾಗಬೇಕು,’ ಎಂದು ಬೊಬ್ಬೆಹಾಕುತ್ತಾ ಇದ್ದಾರೆ.

9 ನೀವು ಅವರಿಂದ ಇನ್ನೂ ಕಷ್ಟಕರವಾದ ಕೆಲಸ ಮಾಡಿಸಬೇಕು. ಕೆಲಸ ಹೆಚ್ಚಾದರೆ ಸುಳ್ಳುಪೊಳ್ಳು ಮಾತುಗಳಿಗೆ ಕಿವಿಗೊಡಲು ಆಸ್ಪದಯಿರುವುದಿಲ್ಲ,” ಎಂದು ಆಜ್ಞಾಪಿಸಿದನು.

10 ಆದುದರಿಂದ ಕೆಲಸದ ಮೇಲ್ವಿಚಾರಕರೂ ಮೇಸ್ತ್ರಿಗಳೂ ಆ ಜನರಿಗೆ, “ನಿಮಗೆ ಹುಲ್ಲು ಕೊಡಕೂಡದೆಂದು ಫರೋಹನ ಅಪ್ಪಣೆಯಾಗಿದೆ.

11 ನೀವೇ ಹೋಗಿ ಎಲ್ಲಿಂದಾದರು ತಂದುಕೊಳ್ಳಿ. ಆದರೂ ನೀವು ಮಾಡಬೇಕಾದ ಕೆಲಸ ಮಾತ್ರ ಕಿಂಚಿತ್ತೂ ಕಡಿಮೆಯಾಗಕೂಡದು,” ಎಂದು ವಿಧಿಸಿದರು.

12 ಆ ಜನರು ಈಜಿಪ್ಟ್ ದೇಶದಲ್ಲೆಲ್ಲಾ ಸುತ್ತಿ, ಹುಲ್ಲು ಸಿಕ್ಕದೆ ಕೂಳೆಕಿತ್ತು ಕೂಡಿಸಿದರು.

13 ಮೇಲ್ವಿಚಾರಕರು, “ನಿಮಗೆ ಹುಲ್ಲಿದ್ದ ಕಾಲದಲ್ಲಿ ಹೇಗೋ ಹಾಗೆ ಪ್ರತಿದಿನದ ಕೆಲಸವನ್ನು ಆಯಾ ದಿನದಲ್ಲಿ ಮುಗಿಸಬೇಕು" ಎಂದು ಹೇಳಿ ಅವಸರಪಡಿಸುತ್ತಿದ್ದರು.

14 “ನೀವು ಇಟ್ಟಿಗೆಗಳ ಲೆಕ್ಕವನ್ನು ಹಿಂದೆ ಒಪ್ಪಿಸುತ್ತಿದ್ದಂತೆ ನಿನ್ನೆ ಮತ್ತು ಇಂದು ಏಕೆ ಒಪ್ಪಿಸಲಿಲ್ಲ,” ಎಂದು ಹೇಳಿ ಫರೋಹನ ಅಧಿಕಾರಿಗಳು ತಾವೇ ನೇಮಿಸಿದ್ದ ಇಸ್ರಯೇಲ್ ಮೇಸ್ತ್ರಿಗಳನ್ನು ಹೊಡೆಸುತ್ತಿದ್ದರು.

15 ಈ ಇಸ್ರಯೇಲ್ ಮೇಸ್ತ್ರಿಗಳು ಫರೋಹನ ಬಳಿಗೆ ಬಂದು, “ಒಡೆಯಾ, ತಮ್ಮ ದಾಸರಾದ ನಮಗೆ ಹೀಗೆ ಮಾಡುವುದು ಸರಿಯೇ?

16 ಅಧಿಕಾರಿಗಳು ಹುಲ್ಲು ಒದಗಿಸದೆ ಇಟ್ಟಿಗೆಗಳನ್ನು ಮಾಡಬೇಕೆನ್ನುತ್ತಾರೆ. ಇದರಿಂದ ದಾಸರಾದ ನಾವು ಏಟು ತಿನ್ನಬೇಕಾಯಿತು. ತಪ್ಪು ತಮ್ಮ ಜನರದೇ,” ಎಂದು ದೂರಿತ್ತರು.

17 ಅದಕ್ಕೆ ಅವನು, “ನೀವು ಒಳ್ಳೆಯ ಮೈಗಳ್ಳರು! ನಾವು ಹೋಗಿ ಸರ್ವೇಶ್ವರನಿಗೆ ಬಲಿಯರ್ಪಿಸಿಬರಬೇಕು, ಎನ್ನುವುದಕ್ಕೆ ಇದೇ ಕಾರಣ.

18 ನಡೆಯಿರಿ ಕೆಲಸಕ್ಕೆ; ನಿಮಗೆ ಹುಲ್ಲು ಕೊಡುವುದಿಲ್ಲ; ಆದರೂ ಇಟ್ಟಿಗೆಗಳ ಲೆಕ್ಕವನ್ನು ತಪ್ಪದೆ ಒಪ್ಪಿಸಲೇಬೇಕು,” ಎಂದನು.

19 ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಕಟ್ಟಪ್ಪಣೆ ಆದುದರಿಂದ ಇಸ್ರಯೇಲ್ ಮೇಸ್ತ್ರಿಗಳು ತಾವು ಎಂಥ ಬಿಕ್ಕಟ್ಟಿಗೆ ಸಿಕ್ಕಿಕೊಂಡೆವೆಂದು ಗ್ರಹಿಸಿಕೊಂಡರು.

20 ಫರೋಹನ ಬಳಿಯಿಂದ ಹಿಂದಿರುಗಿದಾಗ ಅವರನ್ನು ಎದುರುಗೊಳ್ಳಲು ಮೋಶೆ ಮತ್ತು ಆರೋನರು ಕಾದಿದ್ದರು .

21 ಅವರಿಗೆ ಆ ಮೇಸ್ತ್ರಿಗಳು, “ನೀವು ಮಾಡಿದ ದುಷ್ಕೃತ್ಯವನ್ನು ವಿಚಾರಿಸಿ ಸರ್ವೇಶ್ವರ ನಿಮಗೆ ತಕ್ಕ ಶಿಕ್ಷೆಯನ್ನು ವಿಧಿಸಲಿ. ಏಕೆಂದರೆ ಫರೋಹನಿಗೂ ಅವನ ಸೇವಕರಿಗೂ ನಾವು ಅಸಹ್ಯರಾಗುವಂತೆ ಮಾಡಿಬಿಟ್ಟಿರಿ. ನಮ್ಮನ್ನು ಕೊಲ್ಲಲು ಅವರ ಕೈಗೆ ಕತ್ತಿಯನ್ನೇ ಕೊಟ್ಟಂತಾಗಿದೆ,” ಎಂದು ನಿಂದಿಸಿದರು.


ದೇವರಿಗೆ ಮೊರೆ

22 ಆಗ ಮೋಶೆ ಸರ್ವೇಶ್ವರನ ಸನ್ನಿಧಿಗೆ ಮತ್ತೆ ಬಂದು, “ಸ್ವಾಮೀ, ಈ ಜನರಿಗೆ ಹೀಗೇಕೆ ಮಾಡಿದಿರಿ? ನನ್ನನ್ನೇಕೆ ಇಲ್ಲಿಗೆ ಕಳಿಸಿದಿರಿ?

23 ನಾನು ಫರೋಹನ ಬಳಿಗೆ ಹೋಗಿ ನಿಮ್ಮ ಹೆಸರಿನಲ್ಲಿ ಮಾತಾಡಿದಂದಿನಿಂದ ಅವನು ಈ ಜನರಿಗೆ ಕೇಡನ್ನೇ ಮಾಡುತ್ತಿದ್ದಾನೆ. ನೀವಾದರೋ ಅವರನ್ನು ಬಿಡುಗಡೆ ಮಾಡಲು ಏನನ್ನೂ ಮಾಡಿಲ್ಲ,” ಎಂದು ಮೊರೆಯಿಟ್ಟನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು