Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 32 - ಕನ್ನಡ ಸತ್ಯವೇದವು C.L. Bible (BSI)


ಚಿನ್ನದ ಹೋರಿಕರು
( ಧರ್ಮೋ. 9:6-29 )

1 ‘ಮೋಶೆ ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಯೇಲರು ನೋಡಿ, ಆರೋನನ ಬಳಿಗೆ ಕೂಡಿಬಂದರು. ಅವನಿಗೆ, “ಈಜಿಪ್ಟ್ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಆ ಮೋಶೆ ಏನಾದನೋ ಗೊತ್ತಿಲ್ಲ. ಆದ್ದರಿಂದ ಏಳು, ನಮ್ಮನ್ನು ಮುನ್ನಡೆಸಿಕೊಂಡು ಹೋಗಲು ನಮಗೊಬ್ಬ ದೇವರನ್ನು ಮಾಡಿಸಿಕೊಡು,” ಎಂದು ಕೇಳಿದರು.

2 ಅದಕ್ಕೆ ಆರೋನನು, “ನಿಮ್ಮ ಹೆಂಡತಿಯರು, ಗಂಡುಮಕ್ಕಳು ಹಾಗು ಹೆಣ್ಣುಮಕ್ಕಳು ಹಾಕಿಕೊಂಡಿರುವ ಚಿನ್ನದ ಕಿವಿಯೋಲೆಗಳನ್ನು ಬಿಚ್ಚಿ ನನಗೆ ಒಪ್ಪಿಸಿರಿ,” ಎಂದನು.

3 ಜನರೆಲ್ಲರು ತಮ್ಮ ತಮ್ಮ ಕಿವಿಯೋಲೆಗಳನ್ನು ಬಿಚ್ಚಿ ಆರೋನನ ಬಳಿಗೆ ತಂದುಕೊಟ್ಟರು.

4 ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು, ಹೋರಿಕರುವಿನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯಿಸಿದನು. ಆಗ ಜನರು, “ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ಇದೇ” ಎಂದು ಹೇಳಿದರು.

5 ಆರೋನನು ಇದನ್ನು ನೋಡಿ ಆ ಹೋರಿಕರುವಿನ ಮುಂದೆ ಒಂದು ಬಲಿಪೀಠವನ್ನು ಕಟ್ಟಿಸಿ, “ನಾಳೆ ಸರ್ವೇಶ್ವರ ಸ್ವಾಮಿಯ ಗೌರವಾರ್ಥ ಹಬ್ಬವನ್ನು ಆಚರಿಸಬೇಕು,” ಎಂದು ಪ್ರಕಟಿಸಿದನು.

6 ಅಂತೆಯೇ ಮರುದಿನ ಬೆಳಿಗ್ಗೆ ಜನರು ಎದ್ದು ದಹನಬಲಿಗಳನ್ನೂ ಸಮಾಧಾನಬಲಿಗಳನ್ನೂ ಸಮರ್ಪಿಸಿದರು. ಬಳಿಕ ತಿನ್ನಲೂ ಕುಡಿಯಲೂ ಕುಳಿತುಕೊಂಡರು. ಆಮೇಲೆ ಎದ್ದು ಕುಣಿದಾಡಿದರು.

7 ಇತ್ತ ಸರ್ವೇಶ್ವರ ಮೋಶೆಗೆ, “ನೀನು ಕೂಡಲೆ ಬೆಟ್ಟದಿಂದ ಇಳಿದುಹೋಗು, ಈಜಿಪ್ಟಿನಿಂದ ನೀನು ಕರೆದುತಂದ ನಿನ್ನ ಜನರು ಕೆಟ್ಟುಹೋದರು.

8 ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದುಬಿಟ್ಟು ತಮಗೇ ಲೋಹದ ಹೋರಿಕರುವನ್ನು ಮಾಡಿಸಿಕೊಂಡು, ಅದಕ್ಕೆ ಅಡ್ಡಬಿದ್ದು, ಬಲಿಗಳನ್ನರ್ಪಿಸಿ, ‘ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುತಂದ ದೇವರು’ ಎಂದು ಹೇಳಿಕೊಳ್ಳುತ್ತಿದ್ದಾರೆ.

9 ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು.

10 ಆದಕಾರಣ ನೀನು ನನಗೆ ಅಡ್ಡಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮ ಮಾಡುವೆನು. ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು,” ಎಂದು ಹೇಳಿದರು.

11 ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: “ಸ್ವಾಮಿ ಸರ್ವೇಶ್ವರಾ, ಮಹಾಶಕ್ತಿಯಿಂದಲೂ ಭುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ?

12 ಈಜಿಪ್ಟಿನವರು ತಮ್ಮ ವಿಷಯದಲ್ಲಿ, ‘ಸರ್ವೇಶ್ವರನು ಕೇಡುಮಾಡಬೇಕೆಂಬ ಉದ್ದೇಶದಿಂದಲೇ ಇಸ್ರಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದದ್ದು; ಅವರನ್ನು ಬೆಟ್ಟಗುಡ್ಡಗಳಲ್ಲಿ ಸಾಯಿಸಿ ಇಳೆಯಲ್ಲಿ ಉಳಿಯದಂತೆ ನಿರ್ಮೂಲ ಮಾಡಬೇಕೆಂದೇ ಅವರನ್ನು ಕರೆದುಕೊಂಡು ಹೋದದ್ದು ಎಂದು ಆಡಿಕೊಳ್ಳುವುದಕ್ಕೆ ಎಡೆಮಾಡಿಕೊಳ್ಳಬೇಕೆ? ತಾವು ಕೋಪಾಗ್ನಿಯನ್ನು ಬಿಟ್ಟು ತಮ್ಮ ಪ್ರಜೆಗೆ ಕೇಡುಮಾಡಬೇಕೆಂಬ ಮನಸ್ಸನ್ನು ಮಾರ್ಪಡಿಸಿಕೊಳ್ಳಿ.

13 ತಮ್ಮ ದಾಸರಾದ ಅಬ್ರಹಾಮ್, ಇಸಾಕ್ ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ. ತಾವು ತಮ್ಮ ಜೀವದಾಣೆ ಪ್ರಮಾಣ ಮಾಡಿ ಅವರಿಗೆ, ‘ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು’ ಎಂದು ತಾವು ಮಾತುಕೊಡಲಿಲ್ಲವೆ?” ಎಂದನು.

14 ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು.

15 ಮೋಶೆ ಆಜ್ಞಾಶಾಸನಗಳಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದುಬಂದನು. ಆ ಹಲಗೆಗಳ ಎರಡು ಪಕ್ಕಗಳಲ್ಲೂ ಅಕ್ಷರಗಳು ಬರೆದಿದ್ದವು. ಇಕ್ಕಡೆಗಳಲ್ಲೂ ಬರಹವಿತ್ತು.

16 ಆ ಶಿಲಾಶಾಸನಗಳು ದೇವರ ಕೆಲಸವೇ ಆಗಿದ್ದವು. ಅವುಗಳಲ್ಲಿ ಬರೆದಿದ್ದು ದೇವರು ಕೆತ್ತಿದ ಅಕ್ಷರಗಳೇ ಆಗಿದ್ದವು.

17 ಇತ್ತ ಇಸ್ರಯೇಲರು ಕೇಕೆ ಹಾಕುತ್ತಾ ಕೂಗಾಡುತ್ತಿದ್ದುದನ್ನು ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಕಾಳಗದ ಧ್ವನಿ ಕೇಳಿಸುತ್ತಿದೆ,” ಎಂದು ಹೇಳಿದನು.

18 ಅದಕ್ಕೆ ಮೋಶೆ, ನನಗೆ ಕೇಳಿಸುವುದು ವಿಜಯ ಗೀತೆಯಲ್ಲ ಅದು ಅಪಜಯದ ಶೋಕ ಗೀತೆಯೂ ಅಲ್ಲ ಕೇಳಿಸುತ್ತಿದೆ ನನಗೆ ಸಂಗೀತ ಶ್ಲೋಕ.

19 ಮೋಶೆ ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಜನರ ಕುಣಿದಾಟವನ್ನೂ ಕಂಡಾಗ ಕಡುಕೋಪಗೊಂಡನು. ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ಬುಡಕ್ಕೆ ಬಿಸಾಡಿ ಒಡೆದುಹಾಕಿಬಿಟ್ಟನು.

20 ಜನರು ಮಾಡಿಸಿಕೊಂಡಿದ್ದ ಆ ಹೋರಿಕರುವನ್ನು ತೆಗೆದು ಬೆಂಕಿಯಿಂದ ಸುಟ್ಟು, ಅರೆದು, ಪುಡಿಪುಡಿಮಾಡಿ, ನೀರಿನಲ್ಲಿ ಕಲಸಿ, ಇಸ್ರಯೇಲರಿಗೆ ಆ ನೀರನ್ನು ಕುಡಿಸಿದನು.

21 ಅಲ್ಲದೆ, ಆರೋನನನ್ನು ಉದ್ದೇಶಿಸಿ, “ನೀನು ಈ ಜನರಿಂದ ಮಹಾಪಾಪವನ್ನು ಮಾಡಿಸಿರುವೆ. ಹೀಗೆ ಮಾಡಿಸಲು ಇವರು ನಿನಗೇನು ಮಾಡಿದರು,” ಎಂದು ವಿಚಾರಿಸಿದನು. ಅದಕ್ಕೆ ಆರೋನನು,

22 ಒಡೆಯಾ, ಕೋಪಗೊಳ್ಳಬೇಡಿ. ಈ ಜನರು ಎಂಥ ಹಟಮಾರಿಗಳೆಂದು ನೀವೇ ಬಲ್ಲಿರಿ.

23 ಅವರು ನನ್ನ ಬಳಿಗೆ ಬಂದು, “ನಮ್ಮನ್ನು ಮುನ್ನಡೆಸಿಕೊಂಡು ಹೋಗಲು ನಮಗೊಬ್ಬ ದೇವರನ್ನು ಮಾಡಿಸಿಕೊಡು. ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಬಂದ ಮೋಶೆ ಏನಾದನೋ ಗೊತ್ತಿಲ್ಲ,” ಎಂದರು

24 ಅದಕ್ಕೆ ನಾನು, “ಯಾರಲ್ಲಿ ಚಿನ್ನದ ಒಡವೆ ಇದೆಯೋ ಅವರೆಲ್ಲರು ಅದನ್ನು ತೆಗೆದು ನನಗೆ ಕೊಡಬೇಕು,” ಎಂದೆ. ಅವರು ಹಾಗೆಯೇ ಕೊಟ್ಟರು. ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಹೋರಿಕರು ಹೊರಗೆ ಬಂತು,” ಎಂದನು.

25 ಇಸ್ರಯೇಲರು ಅಂಕೆಮೀರಿ ಇಷ್ಟಬಂದಂತೆ ನಡೆದುಕೊಳ್ಳಲು ಆರೋನನು ಬಿಟ್ಟುಬಿಟ್ಟಿದ್ದನು. ಈ ಕಾರಣ ಅವರು ವಿರೋಧಿಗಳ ಅಪಹಾಸ್ಯಕ್ಕೆ ಗುರಿಯಾಗಿದ್ದರು.

26 ಹೀಗೆ ಅವರು ಕ್ರಮವಿಲ್ಲದೆ ಸ್ವೇಚ್ಛಾಚಾರದಿಂದ ನಡೆದುಕೊಳ್ಳುವುದನ್ನು ಮೋಶೆ ನೋಡಿ, ಪಾಳೆಯದ ಹೊರಬಾಗಿಲಲ್ಲಿ ನಿಂತುಕೊಂಡು, “ಸರ್ವೇಶ್ವರನ ಪರವಾಗಿರುವವರೆಲ್ಲರು ನನ್ನ ಬಳಿಗೆ ಬರಬೇಕು,” ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರು ಅವನ ಬಳಿಗೆ ಕೂಡಿಬಂದರು.

27 ಮೋಶೆ ಅವರಿಗೆ, “ಇಸ್ರಯೇಲರ ದೇವರಾದ ಸರ್ವೇಶ್ವರನ ಅಪ್ಪಣೆ ಇದು: ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದ ನಡುವೆ ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿನವರೆಗೆ ಹೋಗುತ್ತಾ ಬರುತ್ತಾ ಅಣ್ಣ-ತಮ್ಮ, ಗೆಳೆಯ-ನೆರೆಯವ ಎಂದು ಲಕ್ಷಿಸದೆ ಈ ಜನರನ್ನು ಸಂಹರಿಸಬೇಕು,” ಎಂದು ಹೇಳಿದನು.

28 ಲೇವಿಯ ಕುಲದವರು ಮೋಶೆಯ ಆಜ್ಞೆಯ ಮೇರೆಗೆ ಮಾಡಿದರು. ಆ ದಿನ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಹತರಾದರು.

29 ಮೋಶೆ ಆ ಲೇವಿಯರಿಗೆ, “ಈದಿನ ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಅಣ್ಣತಮ್ಮಂದಿರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ನಿಮ್ಮನ್ನೇ ಸರ್ವೇಶ್ವರನ ಸೇವೆಗೆ ಪ್ರತಿಷ್ಠಾಪಿಸಿಕೊಂಡಿದ್ದೀರಿ. ಆದ್ದರಿಂದ ಅವರು ಈ ದಿನ ನಿಮ್ಮನ್ನು ಆಶೀರ್ವದಿಸಿರುವರು,” ಎಂದು ಹೇಳಿದನು.

30 ಮರುದಿನ ಮೋಶೆ ಜನರಿಗೆ, “ನೀವು ಮಹಾಪಾಪವನ್ನು ಮಾಡಿದಿರಿ. ಆದರೂ ನಾನು ಬೆಟ್ಟಹತ್ತಿ ಸರ್ವೇಶ್ವರನ ಸನ್ನಿಧಿಗೆ ಹೋಗುವೆನು. ಬಹುಶಃ ನೀವು ಮಾಡಿದ ಪಾಪಕೃತ್ಯಕ್ಕೆ ಕ್ಷಮಾಪಣೆ ನನ್ನ ಮುಖಾಂತರ ದೊರಕೀತು,” ಎಂದು ಹೇಳಿದನು.

31 ಅಂತೆಯೇ ಮೋಶೆ ಸರ್ವೇಶ್ವರನ ಬಳಿಗೆ ಮರಳಿ ಬಂದು, “ಅಕಟಕಟಾ, ಚಿನ್ನದಿಂದ ದೇವರನ್ನು ಮಾಡಿಕೊಂಡು ಈ ಜನರು ಮಹಾಪಾಪವನ್ನು ಕಟ್ಟಿಕೊಂಡಿದ್ದಾರೆ! ಆದರೂ ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಿಬಿಡಿ.

32 ಇಲ್ಲವಾದರೆ ನೀವು ಬರೆದಿರುವ (ಜೀವಿತರ) ಪಟ್ಟಿಯಿಂದ ನನ್ನ ಹೆಸರನ್ನು ಅಳಿಸಿಬಿಡಿಯೆಂದು ಕೇಳಿಕೊಳ್ಳುತ್ತೇನೆ,” ಎಂದು ಪ್ರಾರ್ಥಿಸಿದನು.

33 ಅದಕ್ಕೆ ಸರ್ವೇಶ್ವರ, “ಯಾರ್ಯಾರು ನನ್ನ ಮಾತನ್ನು ಮೀರಿ ಪಾಪಮಾಡಿದ್ದಾರೋ ಅವರ ಹೆಸರುಗಳನ್ನೇ ನನ್ನಲ್ಲಿರುವ ಪಟ್ಟಿಯಿಂದ ಅಳಿಸಿಬಿಡುತ್ತೇನೆ.

34 ನೀನಾದರೋ ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ನಾಡಿಗೆ ಈ ಜನರನ್ನು ನಡೆಸಿಕೊಂಡು ಹೋಗು. ನನ್ನ ದೂತನು ನಿನ್ನ ಮುಂದುಗಡೆ ನಡೆಯುವನು. ಆದರೂ ನಾನು ಅವರನ್ನು ದಂಡಿಸುವ ದಿನದಂದು ಅವರ ಪಾಪಕ್ಕೆ ತಕ್ಕಂತೆ ದಂಡಿಸುವೆನು.

35 ಇಸ್ರಯೇಲರು ಆರೋನನ ಕೈಯಿಂದ ಆ ಹೋರಿಕರುವನ್ನು ಮಾಡಿಸಿದ್ದರಿಂದ ಸರ್ವೇಶ್ವರ ಅವರನ್ನು ದಂಡಿಸಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು