ವಿಮೋಚನಕಾಂಡ 31 - ಕನ್ನಡ ಸತ್ಯವೇದವು C.L. Bible (BSI)ಗುಡಾರ ನಿರ್ಮಾಣಕ್ಕೆ ಕೆಲಸಗಾರರ ಆಯ್ಕೆ ( ವಿಮೋ. 35:30—36:1 ) 1 ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು: 2 “ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯ ಮಗನೂ ಆದ ಬೆಚಲೇಲನೆಂಬುವನನ್ನು ಗುರುತಿಸಿ ನಾನು ಆರಿಸಿಕೊಂಡಿದ್ದೇನೆ; 3 ಮತ್ತು ಅವನಿಗೆ ದೈವಾತ್ಮಶಕ್ತಿಯನ್ನು ಕೊಟ್ಟು, ತಕ್ಕಜ್ಞಾನ, ವಿವೇಕ ವಿವಿಧ ಶಿಲ್ಪಶಾಸ್ತ್ರ ಕುಶಲತೆಯನ್ನು ಅನುಗ್ರಹಿಸಿದ್ದೇನೆ. 4 ಅವನು ಸುಂದರವಾದ, ನಯನವಿರಾದ ಕೆಲಸಗಳನ್ನು ಕಲ್ಪಿಸುವನು; ಚಿನ್ನ, ಬೆಳ್ಳಿ, ತಾಮ್ರಗಳಿಂದ ಅವುಗಳನ್ನು ರೂಪಿಸುವನು; 5 ರತ್ನಗಳನ್ನು ಕೆತ್ತಿ ಮರದಲ್ಲಿ ವಿಚಿತ್ರವಾದ ಕೆತ್ತನೆ ಕೆಲಸವನ್ನು ಮಾಡುವನು; ಇವೇ ಮೊದಲಾದ ಸಮಸ್ತ ಶೃಂಗಾರ ಕೆಲಸವನ್ನು ಮಾಡುವನು. 6 ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗ ಒಹೋಲೀಯಾಬನನ್ನು ನೇಮಿಸಿದ್ದೇನೆ. ಇದು ಮಾತ್ರವಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡಲು ಕಲಾನಿಪುಣರಿಗೆ ಬೇಕಾದ ಜ್ಞಾನವನ್ನು ಕೊಟ್ಟಿದ್ದೇನೆ. 7 ದೇವದರ್ಶನದ ಗುಡಾರ, ಆಜ್ಞಾಶಾಸನಗಳಿರುವ ಮಂಜೂಷ, ಅದರ ಮೇಲಿರುವ ಕೃಪಾಸನ, ಗುಡಾರದ ಎಲ್ಲ ಉಪಕರಣಗಳು; 8 ಮೇಜು, ಅದರ ಉಪಕರಣಗಳು, ಚೊಕ್ಕಬಂಗಾರದ ದೀಪವೃಕ್ಷ, ಅದರ ಉಪಕರಣಗಳು, 9 ಧೂಪವೇದಿಕೆ, ಬಲಿಪೀಠ, ಅದರ ಉಪಕರಣಗಳು, 10 ನೀರಿನ ತೊಟ್ಟಿ, ಅದರ ಪೀಠ, ಅಲಂಕಾರವಾದ ದೀಕ್ಷಾವಸ್ತ್ರಗಳು, ಅಂದರೆ ಮಹಾಯಾಜಕ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಯಾಜಕ ವಸ್ತ್ರಗಳು, 11 ಪಟ್ಟಾಭಿಷೇಕ ತೈಲ, ಪವಿತ್ರಸ್ಥಾನದ ಸೇವೆಗೆ ಬೇಕಾದ ಪರಿಮಳಧೂಪ ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು. ಸಬ್ಬತ್ ದಿನಾಚರಣೆ 12-13 ಮೋಶೆ ಮುಖಾಂತರ ಸರ್ವೇಶ್ವರ ಇಸ್ರಯೇಲರಿಗೆ ಇತ್ತ ಆಜ್ಞೆ: “ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ನೀವು ತಪ್ಪದೆ ಆಚರಿಸಬೇಕು. ನಿಮ್ಮನ್ನು ದೇವಜನರನ್ನಾಗಿ ಮಾಡಿರುವ ಸರ್ವೇಶ್ವರನು ನಾನೇ ಎಂದು ನೀವು ತಿಳಿದುಕೊಳ್ಳುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಇರುವ ಗುರುತು. 14 ಆದಕಾರಣ ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಭಾವಿಸಿ ಆಚರಿಸಬೇಕು. ಅದನ್ನು ಅಪವಿತ್ರವೆಂದು ವರ್ತಿಸುವವನಿಗೆ ಮರಣಶಿಕ್ಷೆಯಾಗಬೇಕು. ಆ ದಿನದಲ್ಲಿ ದುಡಿಯುವವನನ್ನು ತನ್ನ ಕುಲದಿಂದ ತೆಗೆದುಹಾಕಬೇಕು. 15 ಆರು ದಿನಗಳು ಕೆಲಸ ಮಾಡಬಹುದು. ಏಳನೆಯ ದಿನ ವಿಶ್ರಾಂತಿದಿನವಾದ ಸಬ್ಬತ್, ಸರ್ವೇಶ್ವರನಾದ ನನಗೆ ಪರಿಶುದ್ಧ ದಿನ. ಇಂಥ ಸಬ್ಬತ್ ದಿನದಲ್ಲಿ ದುಡಿಯುವವನಿಗೆ ಮರಣ ಶಿಕ್ಷೆಯಾಗಬೇಕು. 16 ಆದುದರಿಂದ ಇಸ್ರಯೇಲರು ಸಬ್ಬತ್ ದಿನವನ್ನು ಆಚರಿಸಬೇಕು. ಈ ಆಚರಣೆ ಅವರಿಗೂ ಅವರ ಪೀಳಿಗೆಗೂ ಶಾಶ್ವತವಾದ ಒಂದು ನಿಬಂಧನೆ. 17 ನನಗೂ ಇಸ್ರಯೇಲರಿಗೂ ನಡುವೆ ಇದೊಂದು ಸದಾಕಾಲದ ಗುರುತು. ಆರು ದಿನಗಳಲ್ಲಿ ಸರ್ವೇಶ್ವರನಾದ ನಾನು ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿ ಏಳನೆಯ ದಿನದಲ್ಲಿ ದುಡಿಯದೆ ವಿಶ್ರಮಿಸಿಕೊಂಡೆನಲ್ಲವೆ?” 18 ಸರ್ವೇಶ್ವರ ಸೀನಾಯಿ ಬೆಟ್ಟದಲ್ಲಿ ಮೋಶೆಯ ಸಂಗಡ ಮಾತಾಡುವುದನ್ನು ಮುಗಿಸಿದ ಮೇಲೆ ಅವನಿಗೆ ತಮ್ಮ ಕೈಯಿಂದ ಕೆತ್ತಲ್ಪಟ್ಟ ಶಿಲಾಶಾಸನಗಳಾದ ಎರಡು ಆಜ್ಞಾಶಾಸನಗಳನ್ನು ಕೊಟ್ಟರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India