Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 3 - ಕನ್ನಡ ಸತ್ಯವೇದವು C.L. Bible (BSI)


ಪ್ರಜ್ವಲಿಸುವ ಪೊದೆ - ಮೋಶೆಗೆ ದೈವದರ್ಶನ

1 ಮೋಶೆ ಮಿದ್ಯಾನರ ಪೂಜಾರಿಯೂ ತನ್ನ ಮಾವನೂ ಆದ ಇತ್ರೋನನ ಮಂದೆಯನ್ನು ಮೇಯಿಸುತ್ತಿದ್ದನು. ಒಮ್ಮೆ ಆ ಮಂದೆಯನ್ನು ಕಾಡಿನ ಹಿಂಭಾಗಕ್ಕೆ ನಡೆಸಿಕೊಂಡು ‘ಹೋರೇಬ್’ ಎಂಬ ದೇವರ ಬೆಟ್ಟಕ್ಕೆ ಬಂದನು.

2 ಅಲ್ಲಿ ಮುಳ್ಳಿನ ಪೊದೆಯೊಂದರ ಒಳಗೆ ಉರಿಯುವ ಬೆಂಕಿಯಲ್ಲಿ ಸರ್ವೇಶ್ವರನ ದೂತನು ಅವನಿಗೆ ಕಾಣಿಸಿಕೊಂಡನು. ಮೋಶೆ ನೋಡಿದನು. ಆ ಮುಳ್ಳಿನ ಪೊದೆ ಉರಿಯುತ್ತಲೇ ಇತ್ತು; ಆದರೆ ಸುಟ್ಟುಹೋಗದೆ ಇತ್ತು.

3 ಆಗ ಮೋಶೆ, “ಇದೇನು ಆಶ್ಚರ್ಯ! ಪೊದೆ ಸುಟ್ಟುಹೋಗದೆ ಇರುವುದಕ್ಕೆ ಕಾರಣವೇನು? ನಾನು ಹತ್ತಿರ ಹೋಗಿ ತಿಳಿದುಕೊಳ್ಳುತ್ತೇನೆ,” ಎಂದುಕೊಂಡನು.

4 ಅದನ್ನು ನೋಡಲು ಅವನು ಮುಂದಕ್ಕೆ ಬರುವುದನ್ನು, ಸರ್ವೇಶ್ವರ ಸ್ವಾಮಿ ಕಂಡರು. ಪೊದೆಯೊಳಗಿಂದ, “ಮೋಶೇ, ಮೋಶೇ,” ಎಂದು ದೇವರು ಕರೆದರು. ಅದಕ್ಕವನು, “ಇಗೋ, ಇದ್ದೇನೆ,” ಎಂದು ಉತ್ತರಕೊಟ್ಟನು.

5 ದೇವರು ಅವನಿಗೆ, “ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರಭೂಮಿ,” ಎಂದು ಹೇಳಿದರು.

6 ಅದೂ ಅಲ್ಲದೆ, “ನಾನು ನಿನ್ನ ತಂದೆಯ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು,” ಎಂದರು. ಆಗ ಮೋಶೆ ದೇವರನ್ನು ದಿಟ್ಟಿಸಿ ನೋಡಲು ಭಯಪಟ್ಟು ಮುಖವನ್ನು ಮುಚ್ಚಿಕೊಂಡನು.


ಮೋಶೆಯ ಆಯೋಗ

7 ಆಗ ಸರ್ವೇಶ್ವರ, “ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ.

8 ಆದಕಾರಣ ಅವರನ್ನು ಈಜಿಪ್ಟಿನವರ ಕೈಯಿಂದ ಬಿಡಿಸುವುದಕ್ಕು ಮತ್ತು ಆ ದೇಶದಿಂದ ಹೊರತಂದು ಹಾಲೂ ಜೇನೂ ಹರಿಯುವ ಸವಿಸ್ತಾರವಾದ ಒಳ್ಳೆಯ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಆಮೋರಿಯರು, ಪೆರಿಜೀಯರು, ಹಿವ್ವಿಯರು ಹಾಗು ಯೆಬೂಸಿಯರು ವಾಸವಾಗಿರುವ ನಾಡಿಗೆ ನಡೆಸಿಕೊಂಡು ಹೋಗುವುದಕ್ಕು ಇಳಿದು ಬಂದಿದ್ದೇನೆ.

9 ಈಗ ಕೇಳು; “ಇಸ್ರಯೇಲರ ಮೊರೆ ನನಗೆ ಮುಟ್ಟಿದೆ. ಈಜಿಪ್ಟಿನವರು ಅವರಿಗೆ ಕೊಡುತ್ತಿರುವ ಉಪದ್ರವವನ್ನು ನಾನು ನೋಡಿದ್ದೇನೆ.

10 ಆದ್ದರಿಂದ ಹೋಗು; ನನ್ನ ಜನರಾಗಿರುವ ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಹೊರತರುವುದಕ್ಕಾಗಿ ನಿನ್ನನ್ನು ಫರೋಹನ ಬಳಿಗೆ ಕಳಿಸುತ್ತಿದ್ದೇನೆ,” ಎಂದರು.

11 ಮೋಶೆ ದೇವರಿಗೆ, “ಫರೋಹನ ಸನ್ನಿಧಾನಕ್ಕೆ ಹೋಗುವುದಕ್ಕಾಗಲಿ ಇಸ್ರಯೇಲರನ್ನು ಈಜಿಪ್ಟಿನಿಂದ, ಕರೆದುಕೊಂಡು ಬರುವುದಕ್ಕಾಗಲಿ ನಾನು ಎಷ್ಟರವನು?” ಎಂದನು.

12 ಅದಕ್ಕೆ ದೇವರು, “ನಾನೇ ನಿನ್ನ ಸಂಗಡ ಇರುವೆನು; ನೀನು ನನ್ನ ಜನರನ್ನು ಈಜಿಪ್ಟಿನಿಂದ ಹೊರಗೆ ತಂದಾಗ ನೀವು ಈ ಬೆಟ್ಟದಲ್ಲೇ ದೇವರನ್ನು ಆರಾಧಿಸುವಿರಿ. ನಿನ್ನನ್ನು ಕಳಿಸಿದವನು ನಾನೇ ಎಂಬುದಕ್ಕೆ ಇದೇ ನಿನಗೆ ಗುರುತಾಗಿ ಇರುವುದು,” ಎಂದರು.


ದೇವರ ಹೆಸರು?

13 ಮೋಶೆ ದೇವರಿಗೆ, “ನಾನು ಇಸ್ರಯೇಲರ ಬಳಿಗೆ ಹೋಗಿ, ‘ನಿಮ್ಮ ಪೂರ್ವಜರ ದೇವರು ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ,’ ಎಂದು ಹೇಳಿದಾಗ ಅವರು ಒಂದು ವೇಳೆ, ‘ಆತನ ಹೆಸರೇನು?’ ಎಂದು ನನ್ನನ್ನು ಕೇಳಿದರೆ ನಾನೇನು ಉತ್ತರ ಕೊಡಬೇಕು?” ಎಂದು ಕೇಳಿದನು.

14 ಆಗ ದೇವರು ಹೀಗೆಂದರು: “ಇರುವವನಾಗಿ ಇರುವವನು ನಾನೇ; ನೀನು ಇಸ್ರಯೇಲರಿಗೆ 'ತಾನಾಗಿ ಇರುವವನು,' ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾನೆ ಎಂದು ಹೇಳು.”

15 ದೇವರು ಮೋಶೆಗೆ ಮತ್ತೆ ಇಂತೆಂದರು: “ನೀನು ಇಸ್ರಯೇಲರಿಗೆ, ‘ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ’ ಎಂದು ಹೇಳು. ಇದು ಸದಾಕಾಲಕ್ಕೂ ನನ್ನ ಹೆಸರು. ಈ ಹೆಸರಿನಿಂದಲೆ ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕು.

16 ನೀನು ಹೋಗಿ ಇಸ್ರಯೇಲರ ಹಿರಿಯರನ್ನು ಕೂಡಿಸು. ಅವರಿಗೆ, “ನಿಮ್ಮ ಪೂರ್ವಜರ ದೇವರು, ಅಂದರೆ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರು ಆಗಿರುವ ಸರ್ವೇಶ್ವರ ನನಗೆ ದರ್ಶನಕೊಟ್ಟು ನಿಮ್ಮ ವಿಷಯದಲ್ಲಿ ಹೀಗೆಂದಿದ್ದಾರೆ: ನಿಮ್ಮನ್ನೂ ಈಜಿಪ್ಟ್ ದೇಶದಲ್ಲಿ ನಿಮಗೆ ಸಂಭವಿಸಿದ್ದೆಲ್ಲವನ್ನೂ ನಾನು ಕಣ್ಣಾರೆ ಕಂಡು ತಿಳಿದುಕೊಂಡಿದ್ದೇನೆ.

17 ಈಜಿಪ್ಟಿನಲ್ಲಿ ನಿಮಗುಂಟಾಗಿ ಇರುವ ಸಂಕಷ್ಟಗಳಿಂದ ನಿಮ್ಮನ್ನು ಪಾರುಮಾಡಿ ಹಾಲೂ ಜೇನೂ ಹರಿಯುವ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಹಾಗು ಯೆಬೂಸಿಯರು ವಾಸವಾಗಿರುವ ನಾಡಿಗೆ ಬರಮಾಡಬೇಕೆಂದು ತೀರ್ಮಾನಿಸಿದ್ದೇನೆ’ ಎಂದು ತಿಳಿಸು.

18 “ಅವರು ನಿನ್ನ ಮಾತಿಗೆ ಕಿವಿಗೊಡುವರು. ನೀನು ಮತ್ತು ಇಸ್ರಯೇಲಿನ ಹಿರಿಯರು ಈಜಿಪ್ಟ್ ದೇಶದ ಅರಸನ ಬಳಿಗೆ ಹೋಗಿ ಅವನಿಗೆ, “ಹಿಬ್ರಿಯರ ದೇವರಾಗಿರುವ ಸರ್ವೇಶ್ವರ ನಮಗೆ ಪ್ರತ್ಯಕ್ಷರಾದರು. ಆದುದರಿಂದ ನಾವು ಮರುಭೂಮಿಯಲ್ಲಿ ಮೂರು ದಿನದ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯೊಪ್ಪಿಸಬೇಕಾಗಿದೆ, ಅಪ್ಪಣೆಯಾಗಬೇಕು’ ಎಂದು ಕೇಳಿಕೊಳ್ಳಿ.

19 ಆ ಈಜಿಪ್ಟಿನ ಅರಸನು ಎಷ್ಟು ಬಲಾತ್ಕಾರ ಮಾಡಿದರೂ ನಿಮ್ಮನ್ನು ಬಿಡುವುದಿಲ್ಲವೆಂದು ತಿಳಿದಿದ್ದೇನೆ.

20 ಆದಕಾರಣ ನನ್ನ ಭುಜಬಲವನ್ನು ಪ್ರದರ್ಶಿಸುವೆನು. "ಅಲ್ಲಿ ಮಹಾತ್ಕಾರ್ಯಗಳನ್ನು ಮಾಡಿ, ಈಜಿಪ್ಟ್ ದೇಶವನ್ನೆ ನಾನಾವಿಧವಾಗಿ ಬಾಧಿಸುವೆನು. ಆಮೇಲೆ ಅರಸನು ನಿಮ್ಮನ್ನು ಬಿಡುಗಡೆಮಾಡುವನು.

21 “ನನ್ನ ಜನರಿಗೆ ಈಜಿಪ್ಟಿನವರು ಅನುಕಂಪ ತೋರಿಸುವಂತೆ ಮಾಡುವೆನು. ಆದ್ದರಿಂದ ನೀವು ಅಲ್ಲಿಂದ ಹೊರಡುವಾಗ ಬರಿಗೈಯಲ್ಲಿ ಹೋಗಬೇಕಾಗುವುದಿಲ್ಲ.

22 ನಿಮ್ಮ ಪ್ರತಿಯೊಬ್ಬ ಮಹಿಳೆ ನೆರೆಹೊರೆಯ ಮಹಿಳೆಯರಿಂದಲೂ ನಿಮ್ಮ ಮನೆಯಲ್ಲೇ ತಂಗಿರುವ ಮಹಿಳೆಯರಿಂದಲೂ ಬೆಳ್ಳಿಬಂಗಾರದ ಒಡವೆಗಳನ್ನು ಹಾಗು ಬಟ್ಟೆಬರೆಗಳನ್ನು ಕೇಳಿಕೊಳ್ಳಲಿ. ಅವುಗಳನ್ನು ನಿಮ್ಮ ಮಕ್ಕಳುಮರಿಗಳಿಗೆ ತೊಡಿಸಿರಿ. ಹೀಗೆ ಈಜಿಪ್ಟರನ್ನು ಸೂರೆಮಾಡಿ ಹೊರಡುವಿರಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು