Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 27 - ಕನ್ನಡ ಸತ್ಯವೇದವು C.L. Bible (BSI)


ಬಲಿಪೀಠ
( ವಿಮೋ. 38:1-7 )

1 “ಬಲಿಪೀಠವನ್ನು ಜಾಲೀಮರದಿಂದ ಮಾಡಿಸಬೇಕು. ಅದು ಐದು ಮೊಳ ಉದ್ದ, ಐದು ಮೊಳ ಅಗಲ ಹಾಗು ಮೂರು ಮೊಳ ಎತ್ತರವಿರಬೇಕು.

2 ಅದನ್ನು ಚಚ್ಚೌಕವಾಗಿ ಮಾಡಿಸಬೇಕು. ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿಸಬೇಕು. ಅವು ಬಲಿಪೀಠದ ಅಂಗವಾಗಿರಬೇಕು. ಆ ಪೀಠಕ್ಕೆ ತಾಮ್ರದ ತಗಡುಗಳನ್ನು ಹೊದಿಸಬೇಕು.

3 ಅದರಲ್ಲಿರುವ ಬೂದಿಯನ್ನು ತೆಗೆಯುವುದಕ್ಕಾಗಿ ಬಟ್ಟಲುಗಳನ್ನು ಮಾಡಿಸಬೇಕು. ಸಲಿಕೆಗಳನ್ನು, ಬೋಗುಣಿಗಳನ್ನು, ಮುಳ್ಳುಗಳನ್ನು ಹಾಗು ಅಗ್ಗಿಷ್ಟಿಕೆಗಳನ್ನು ಕೂಡ ಮಾಡಿಸಬೇಕು. ಈ ಉಪಕರಣಗಳೆಲ್ಲಾ ತಾಮ್ರದವುಗಳಾಗಿರಬೇಕು.

4 ಪೀಠಕ್ಕೆ ಹೆಣಿಗೆ ಕೆಲಸದಿಂದ ತಾಮ್ರದ ಜಾಳಿಗೆಯನ್ನು ಮಾಡಿಸಬೇಕು. ಆ ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ತಾಮ್ರದ ಬಳೆಗಳನ್ನು ಹಾಕಿಸಬೇಕು.

5 ಆ ಜಾಳಿಗೆಯು ಪೀಠದ ಸುತ್ತಲಿರುವ ಕಟ್ಟಿಗೆಯ ಕಟ್ಟೆಯ ಕೆಳಗೆ ಇದ್ದು, ಪೀಠದ ಬುಡದಿಂದ ನಡುವಿನ ತನಕ ಇರುವಂತೆ ಹಾಕಿಸಬೇಕು.

6 ಪೀಠವನ್ನು ಹೊರುವ ಗುದಿಗೆಗಳನ್ನು ಜಾಲೀಮರದಿಂದ ಮಾಡಿಸಿ ತಾಮ್ರದ ತಗಡುಗಳನ್ನು ಹೊದಿಸಬೇಕು.

7 ಆ ಗುದಿಗೆಗಳನ್ನು ಆ ಬಳೆಗಳಿಗೆ ಸೇರಿಸಿದಾಗ ಅವು ಬಲಿಪೀಠವನ್ನು ಹೊರುವುದಕ್ಕಾಗಿ ಅದರ ಎರಡು ಕಡೆಗಳಲ್ಲಿ ಇರುವುವು.

8 ಆ ಬಲಿಪೀಠವನ್ನು ಹಲಗೆಗಳಿಂದ ಪೆಟ್ಟಿಗೆಯಂತೆ ಮಾಡಿಸಬೇಕು. ನಾನು ಬೆಟ್ಟದಲ್ಲಿ ನಿನಗೆ ತೋರಿಸಿದಂತೆಯೇ ಅದನ್ನು ಮಾಡಿಸಬೇಕು.


ಗುಡಾರದ ಅಂಗಳ
( ವಿಮೋ. 38:9-20 )

9 “ಗುಡಾರಕ್ಕೆ ಅಂಗಳವನ್ನು ಏರ್ಪಡಿಸಬೇಕು. ಆ ಅಂಗಳದ ದಕ್ಷಿಣ ಕಡೆಯಲ್ಲಿ ತೆರೆಗಳು ಇರಬೇಕು. ಹುರಿನಾರಿನ ಬಟ್ಟೆಯಿಂದ ತಯಾರಿಸಿದ ಆ ತೆರೆಗಳು ನೂರು ಮೊಳ ಉದ್ದವಿರಬೇಕು.

10 ಆ ಕಡೆಯಲ್ಲಿ ಇಪ್ಪತ್ತು ಕಂಬಗಳು ಹಾಗು ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇ ಕಲ್ಲುಗಳೂ ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳೂ ಇರಬೇಕು.

11 ಅದೇ ರೀತಿ ಉತ್ತರ ಕಡೆಯಲ್ಲೂ ನೂರು ಮೊಳ ಉದ್ದದ ತೆರೆಗಳು, ಇಪ್ಪತ್ತು ಕಂಬಗಳು ಹಾಗು ಇಪ್ಪತ್ತು ತಾಮ್ರದ ಗದ್ದಿಗೇ ಕಲ್ಲುಗಳೂ ಇರಬೇಕು. ಕಂಬಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯಿಂದ ಮಾಡಿದವಾಗಿರಬೇಕು.

12 ಪಶ್ಚಿಮ ಕಡೆಯಲ್ಲಿ ಅಂಗಳದ ಅಗಲಕ್ಕೆ ಐವತ್ತು ಮೊಳ ಉದ್ದವಾದ ತೆರೆಗಳು, ಹತ್ತು ಕಂಬಗಳು ಹಾಗು ಹತ್ತು ಗದ್ದಿಗೇ ಕಲ್ಲುಗಳು ಇರಬೇಕು.

13 ಪೂರ್ವ ದಿಕ್ಕಿನಲ್ಲೂ ಅಂಗಳದ ಅಗಲವು ಐವತ್ತು ಮೊಳವಿರಬೇಕು.

14-15 ಅಲ್ಲೆ ಬಾಗಿಲಿನ ಎರಡು ಕಡೆಗಳಲ್ಲೂ ಹದಿನೈದು ಮೊಳ ಉದ್ದವಾದ ತೆರೆಗಳೂ ಅವುಗಳಿಗೆ ಮೂರು ಮೂರು ಕಂಬಗಳೂ ಮೂರು ಮೂರು ಗದ್ದಿಗೇ ಕಲ್ಲುಗಳೂ ಇರಬೇಕು.

16 ಅಂಗಳದ ಬಾಗಿಲಲ್ಲೇ ಇಪ್ಪತ್ತು ಮೊಳದ ಪರದೆ ಇರಬೇಕು. ಅದನ್ನು ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದ ಕಸೂತಿ ಕೆಲಸದವರ ಕೈಯಿಂದ ಮಾಡಿಸಬೇಕು. ಬಾಗಿಲಿಗೆ ನಾಲ್ಕು ಕಂಬಗಳು ಮತ್ತು ನಾಲ್ಕು ಗದ್ದಿಗೇ ಕಲ್ಲುಗಳು ಇರಬೇಕು.

17 ಅಂಗಳದ ಸುತ್ತಲಿರುವ ಎಲ್ಲ ಕಂಬಗಳಿಗೂ ಬೆಳ್ಳಿಯ ಕಟ್ಟುಗಳು, ಬೆಳ್ಳಿಯ ಕೊಂಡಿಗಳು ಹಾಗು ತಾಮ್ರದ ಗದ್ದುಗೇ ಕಲ್ಲುಗಳು ಇರಬೇಕು.

18 ಅಂಗಳವು ಮೂರು ಮೊಳ ಉದ್ದ ಹಾಗು ಐವತ್ತು ಮೊಳ ಅಗಲವಿರಬೇಕು. ಅದಕ್ಕೆ ಅದರ ಸುತ್ತಲಿರುವ ಪರದೆ ಹುರಿನಾರಿನ ಬಟ್ಟೆಯಿಂದ ಮಾಡಿದ್ದಾಗಿ ಐದು ಮೊಳ ಎತ್ತರವಿರಬೇಕು. ಅದಕ್ಕೆ ಸೇರಿದ ಗದ್ದಿಗೇ ಕಲ್ಲುಗಳು ತಾಮ್ರದವುಗಳಾಗಿರಬೇಕು.

19 ಗುಡಾರದ ಎಲ್ಲಾ ವಿಧ ಕೆಲಸಕ್ಕೆ ಬೇಕಾದ ಉಪಕರಣಗಳು, ಗುಡಾರದ ಹಾಗು ಅಂಗಳದ ಗೂಟಗಳು ತಾಮ್ರದವುಗಳಾಗಿರಬೇಕು.


ದೀಪವೃಕ್ಷದ ಸೇವೆ
( ಯಾಜ. 24:1-4 )

20 “ಆ ದೀಪವು ಯಾವಾಗಲೂ ಉರಿಯುತ್ತಿರಬೇಕು. ಅದಕ್ಕೆ ಎಣ್ಣೇ ಮರದ ಕಾಯಿಗಳನ್ನು ಕುಟ್ಟಿ ನಿರ್ಮಲವಾದ ಎಣ್ಣೆಯನ್ನು ತೆಗೆದುಕೊಡಬೇಕೆಂದು ಇಸ್ರಯೇಲರಿಗೆ ಅಪ್ಪಣೆ ಮಾಡು.

21 ದೇವದರ್ಶನದ ಗುಡಾರದಲ್ಲಿ, ಆಜ್ಞಾಶಾಸನಗಳ ಮಂಜೂಷದ ಮುಂದಿರುವ ತೆರೆಯ ಹೊರಗೆ, ಆರೋನನು ಮತ್ತು ಅವನ ಮಕ್ಕಳು ಸಂಜೆಯಿಂದ ಮುಂಜಾನೆಯವರೆಗೆ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವನ್ನು ಇಸ್ರಯೇಲರು ಮತ್ತು ಅವರ ಸಂತತಿಯವರು ತಲತಲಾಂತರದವರೆಗೂ ಅನುಸರಿಸಬೇಕು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು