Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 26 - ಕನ್ನಡ ಸತ್ಯವೇದವು C.L. Bible (BSI)


ದೇವರದರ್ಶನದ ಗುಡಾರ
( ವಿಮೋ. 36:8-38 )

1 “ನನ್ನ ನಿವಾಸಕ್ಕಾಗಿ ಒಂದು ಗುಡಾರವನ್ನು ಹತ್ತು ತಾನು ಬಟ್ಟೆಗಳಿಂದ ಮಾಡಿಸಬೇಕು. ಅವು ಹೊಸೆದ ನಾರಿನ ಬಟ್ಟೆಗಳಾಗಿರಬೇಕು. ಅವುಗಳಲ್ಲಿ ನೀಲಿ ಊದ ಹಾಗು ಕಡುಗೆಂಪು ವರ್ಣಗಳ ದಾರದಿಂದ ಕೆರೂಬಿಗಳ ಚಿತ್ರವನ್ನು ಚಮಾತ್ಕಾರವಾಗಿ ಕಸೂತಿ ಹಾಕಿಸಬೇಕು.

2 ಒಂದೊಂದು ತಾನು ಬಟ್ಟೆ ಇಪ್ಪತ್ತೆಂಟು ಮೊಳ ಉದ್ದ ಹಾಗು ನಾಲ್ಕು ಮೊಳ ಅಗಲವಾಗಿರಬೇಕು.

3 ಇಂತಹ ಐದೈದು ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಬೇಕು.

4 ಆ ಎರಡು ಜೋಡನೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿಸಬೇಕು.

5 ಆ ಕುಣಿಕೆಗಳು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರುಬದರಾಗಿರಬೇಕು.

6 ಇದೂ ಅಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿಸಿ ಆ ಬಟ್ಟೆಗಳನ್ನು ಒಂದಕ್ಕೊಂದು ಕೂಡಿಸಬೇಕು. ಹೀಗೆ ಒಂದೇ ಗುಡಾರವಾಗುವುದು.

7 ಈ ಗುಡಾರದ ಮೇಲೆ ಹೊರಿಸುವುದಕ್ಕಾಗಿ ಆಡು ಕೂದಲಿನ ಹನ್ನೊಂದು ತಾನು ಬಟ್ಟೆಗಳನ್ನು ಮಾಡಿಸಬೇಕು.

8 ಇಂತಹ ಒಂದೊಂದು ಬಟ್ಟೆ ಮೂವತ್ತು ಮೊಳ ಉದ್ದ ಹಾಗೂ ನಾಲ್ಕು ಮೊಳ ಅಗಲವಾಗಿರಬೇಕು. ಎಲ್ಲ ಬಟ್ಟೆಗಳು ಒಂದೇ ಅಳತೆಯಾಗಿರಬೇಕು.

9 ಐದು ಬಟ್ಟೆಗಳನ್ನು ಒಂದಾಗಿ ಜೋಡಿಸಿ ಮಿಕ್ಕ ಆರು ಬಟ್ಟೆಗಳನ್ನು ಒಂದಾಗಿ ಜೋಡಿಸಿ ಆರನೇಯ ಬಟ್ಟೆಯನ್ನು ಡೇರೆಯ ಮುಂಭಾಗದಲ್ಲಿ ಮಡಿಸಿ ತೂಗಾಡುವಂತೆ ಬಿಡಬೇಕು.

10 ಒಂದೊಂದು ಕೊನೇ ಬಟ್ಟೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿಸಬೇಕು.

11 ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿಸಿ ಒಂದೇ ಡೇರೆಯಾಗುವಂತೆ ಆ ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ ಎಲ್ಲವನ್ನು ಕೂಡಿಸಬೇಕು.

12 ಹೊದಿಕೆಯ ಬಟ್ಟೆಗಳಲ್ಲಿ ಅರ್ಧ ಬಟ್ಟೆ ಹೆಚ್ಚಾಗಿರುತ್ತದೆ. ಆ ಹೆಚ್ಚಿನ ಭಾಗವು ಗುಡಾರದ ಹಿಂಭಾಗದಲ್ಲಿ ಮಡಿಸಿ ತೂಗಾಡುವಂತೆ ಬಿಡಬೇಕು.

13 ಹೊದಿಕೆಯ ಬಟ್ಟೆಗಳ ಉದ್ದದಲ್ಲಿ ಈ ಕಡೆ ಒಂದು ಮೊಳ ಆ ಕಡೆ ಒಂದು ಮೊಳ ಹೆಚ್ಚಾಗಿರುತ್ತದೆ. ಅವು ಒಳಗಿನ ಗುಡಾರವನ್ನು ಮುಚ್ಚುವಂತೆ ಈ ಕಡೆಯೂ ಆ ಕಡೆಯೂ ಇರಬೇಕು.

14 ಈ ಹೊದಿಕೆಗೆ ಹೊದಿಸುವುದಕ್ಕಾಗಿ ಹದಮಾಡಿರುವ ಕೆಂಪುಬಣ್ಣದ ಕುರಿದೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನು ಹಾಗು ಕಡಲುಹಂದಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನೂ ಮಾಡಿಸಬೇಕು.

15 ಗುಡಾರಕ್ಕೆ ಬೇಕಾದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿಸಬೇಕು.

16 ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದ ಒಂದುವರೆ ಮೊಳ ಅಗಲವಿರಬೇಕು ಮತ್ತು

17 ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟು ಎರಡು ನಿಲವು ಪಟ್ಟಿಗಳುಳ್ಳದ್ದಾಗಿರಬೇಕು. ಗುಡಾರದ ಎಲ್ಲ ಚೌಕಟ್ಟುಗಳನ್ನು ಹಾಗೇ ಮಾಡಿಸಬೇಕು.

18 ಅದರ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ನಿಲ್ಲಿಸಬೇಕು.

19 ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿಸಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಡಬೇಕು. ಒಂದೊಂದು ಚೌಕಟ್ಟಿನಲ್ಲಿರುವ ಎರಡು ಪಟ್ಟಿಗಳಿಗೆ ಒಂದೊಂದು ಗದ್ದಿಗೇ ಕಲ್ಲು ಇರಬೇಕು.

20 ಹಾಗೆಯೇ ಗುಡಾರದ ಉತ್ತರ ದಿಕ್ಕಿನಲ್ಲಿಯೂ ಇಪ್ಪತ್ತು ಚೌಕಟ್ಟುಗಳೂ ಮತ್ತು

21 ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಗದ್ದಿಗೇ ಕಲ್ಲುಗಳು ಇರಬೇಕು.

22 ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮ ದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿಸಬೇಕು.

23 ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿಸಬೇಕು.

24 ಅವು ಬುಡದಿಂದ ತುದಿಯವರೆಗೂ, ಅಂದರೆ ಮೊದಲನೆಯ ಬಳೆಯ ತನಕ ಜೋಡಿಸಿರಬೇಕು. ಹಾಗೆ ಎರಡು ಮೂಲೆಗಳಿಗೂ ಮಾಡಿಸಬೇಕು.

25 ಹೀಗೆ ಹಿಂಭಾಗದಲ್ಲಿ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೇ ಕಲ್ಲುಗಳೂ, ಅಂತೂ ಹದಿನಾರು ಗದ್ದಿಗೇ ಕಲ್ಲುಗಳೂ ಇರುವುವು.

26 ಜಾಲೀಮರದಿಂದ ಅಗುಳಿಗಳನ್ನು ಮಾಡಿಸಬೇಕು. ಗುಡಾರದ ಎರಡು ಕಡೆಗಳ ಚೌಕಟ್ಟುಗಳಿಗೂ

27 ಅದರ ಹಿಂದುಗಡೆಯ ಅಂದರೆ ಪಶ್ಚಿಮ ಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿಸಬೇಕು.

28 ಚೌಕಟ್ಟುಗಳ ನಟ್ಟನಡುವೆಯಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಮುಟ್ಟಬೇಕು.

29 ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿಸಬೇಕು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಬೇಕು.

30 ನಾನು ಬೆಟ್ಟದಲ್ಲಿ ನಿನಗೆ ತೋರಿಸಿಕೊಟ್ಟ ರೀತಿಯಲ್ಲೇ ಗುಡಾರವನ್ನು ನಿಲ್ಲಿಸಬೇಕು.

31 ಹುರಿನಾರಿನ ಬಟ್ಟೆಯಲ್ಲಿ ನೀಲಿ, ಧೂಮ್ರ, ರಕ್ತವರ್ಣಗಳುಳ್ಳ ದಾರದಿಂದ ಕೆರೂಬಿಗಳನ್ನು ಕಲಾತ್ಮಕವಾಗಿ ಕಸೂತಿಹಾಕಿ ಒಂದು ತೆರೆಯ ಚಿತ್ರವನ್ನು ಮಾಡಿಸಬೇಕು.

32 ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿಸಿ, ಚಿನ್ನದ ತಗಡುಗಳನ್ನು ಹೊದಿಸಿ, ನಾಲ್ಕು ಬೆಳ್ಳಿಯ ಗದ್ದಿಗೇ ಕಲ್ಲುಗಳ ಮೇಲೆ ನಿಲ್ಲಿಸಿ ಚಿನ್ನದ ಕೊಂಡಿಗಳಿಂದ ಆ ತೆರೆಯನ್ನು ಆ ನಾಲ್ಕು ಕಂಬಗಳಿಗೆ ಸಿಕ್ಕಿಸಬೇಕು.

33 ಆ ತೆರೆಯನ್ನು ಕೊಂಡಿಗಳಿಗೆ ಸಿಕ್ಕಿಸಿದಾಗ ಅದರೊಳಗೆ ಆಜ್ಞಾಶಾಸನಗಳ ಮಂಜೂಷವನ್ನು ತರಿಸಿಡಬೇಕು. ಆ ತೆರೆಯು ಪವಿತ್ರಸ್ಥಾನವೆಂಬುದನ್ನೂ ಮಹಾಪವಿತ್ರಸ್ಥಾನವೆಂಬುದನ್ನೂ ಬೇರೆ ಬೇರೆ ಮಾಡುವುದು.

34 ಮಹಾಪವಿತ್ರಸ್ಥಾನದಲ್ಲಿ ಆಜ್ಞಾಶಾಸನಗಳ ಮಂಜೂಷದ ಮೇಲೆ ಕೃಪಾಸನವನ್ನು ತಂದಿಡಬೇಕು.

35 ತೆರೆಯ ಹೊರಗಡೆಯಲ್ಲಿ ಮೇಜನ್ನೂ ಮೇಜಿನ ಎದುರಾಗಿ ಗುಡಾರದ ದಕ್ಷಿಣ ದಿಕ್ಕಿನಲ್ಲಿ ದೀಪವೃಕ್ಷವನ್ನೂ ಇಡಬೇಕು; ಮೇಜು ಉತ್ತರ ಕಡೆಯಲ್ಲಿರಬೇಕು.

36 ಡೇರೆಯ ಬಾಗಲಿಗೆ ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ, ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದ ವಿಚಿತ್ರವಾಗಿ ಕಸೂತಿಹಾಕಿ ತೆರೆಯನ್ನು ಮಾಡಿಸಬೇಕು.

37 ತೆರೆ ತೂಗಿಸುವುದಕ್ಕಾಗಿ ಜಾಲೀಮರದಿಂದ ಐದು ಕಂಬಗಳನ್ನು ಮಾಡಿಸಿ ಚಿನ್ನದ ತಗಡುಗಳನ್ನು ಹೊದಿಸಬೇಕು. ಅವುಗಳ ಕೊಂಡಿಗಳನ್ನು ಚಿನ್ನದಿಂದ ಮಾಡಿಸಿ ಅವುಗಳಿಗೋಸ್ಕರ ಐದು ತಾಮ್ರದ ಗದ್ದಿಗೇ ಕಲ್ಲುಗಳನ್ನು ಎರಕಹೊಯ್ಯಿಸಬೇಕು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು