Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 22 - ಕನ್ನಡ ಸತ್ಯವೇದವು C.L. Bible (BSI)


ಈಡು ಕೊಡುವ ಬಗ್ಗೆ

1 “ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದುಕೊಂಡು ಕೊಯ್ದರೆ, ಇಲ್ಲವೆ ಮಾರಿದರೆ ಅವನು ಒಂದು ಎತ್ತಿಗೆ ಪ್ರತಿಯಾಗಿ ಐದು ಎತ್ತುಗಳನ್ನು ಒಂದು ಕುರಿಗೆ ಪ್ರತಿಯಾಗಿ ನಾಲ್ಕು ಕುರಿಗಳನ್ನು ಕೊಡಬೇಕು.

2 ಕಳ್ಳನು ಕನ್ನ ಕೊರೆಯುತ್ತಿರುವಾಗಲೆ ಕೈಗೆ ಸಿಕ್ಕಿ ಕೊಲ್ಲಲ್ಪಟ್ಟರೆ ಅದನ್ನು ನರಹತ್ಯವೆಂದು ಎಣಿಸಕೂಡದು.

3 ಸೂರ್ಯೋದಯವಾದ ನಂತರ ಒಬ್ಬನು ಕಳ್ಳನನ್ನು ಹೊಡೆದುಕೊಂದರೆ ಅದು ನರಹತ್ಯವೇ ಸರಿ. ಕಳ್ಳನು ಕದ್ದದ್ದನ್ನೆಲ್ಲಾ ಪೂರ್ತಿಯಾಗಿ ಕೊಡಬೇಕು. ಅವನಲ್ಲಿ ಕೊಡಲು ಏನೂ ಇಲ್ಲದಿದ್ದರೆ ಮಾಡಿದ ಕಳ್ಳತನಕ್ಕಾಗಿ ಅವನನ್ನು ಗುಲಾಮನನ್ನಾಗಿ ಮಾರಬೇಕು.

4 ಕಳ್ಳನು ಕದ್ದದ್ದು ಎತ್ತೋ, ಕತ್ತೆಯೋ, ಆಡುಕುರಿಯೋ ಆಗಿದ್ದು, ಅದು ಜೀವದಿಂದಲೇ ಅವನ ಬಳಿ ಸಿಕ್ಕಿದರೆ, ಅವನು ಎರಡರಷ್ಟು ಈಡು ಕೊಡಬೇಕು.

5 “ಒಬ್ಬನು ತನ್ನ ಹೊಲದಲ್ಲಾಗಲಿ, ದ್ರಾಕ್ಷಿತೋಟದಲ್ಲಾಗಲಿ ದನಗಳನ್ನು ಮೇಯಿಸಿ ಅವು ಮತ್ತೊಬ್ಬನ ಹೊಲಕ್ಕೆ ಹೋಗಿ ಮೇಯುವಂತೆ ಮಾಡಿದರೆ, ತನ್ನ ಹೊಲದ ಅಥವಾ ದ್ರಾಕ್ಷಿತೋಟದ ಉತ್ತಮ ಫಸಲಿನಿಂದ ಅವನಿಗೆ ಈಡು ಕೊಡಬೇಕು.

6 “ಒಬ್ಬನು ಹೊತ್ತಿಸಿದ ಬೆಂಕಿ ಆಕಸ್ಮಿಕವಾಗಿ ಮುಳ್ಳಿನ ಗಿಡಗಳಿಗೆ ಹತ್ತಿ ಅಲ್ಲಿಂದ ಮತ್ತೊಬ್ಬನ ದವಸದ ರಾಶಿಗಳಾಗಲಿ, ಬೆಳೆಯಾಗಲಿ, ಹೊಲವಾಗಲಿ ಸುಟ್ಟುಹೋದರೆ, ಬೆಂಕಿ ಹೊತ್ತಿಸಿದವನು ಈಡುಕೊಡಬೇಕು.

7 “ಒಬ್ಬನು ಹಣವನ್ನಾಗಲಿ, ಒಡವೆಗಳನ್ನಾಗಲಿ ಸುರಕ್ಷಿತವಾಗಿಡಲು ಮತ್ತೊಬ್ಬನಿಗೆ ಒಪ್ಪಿಸಿದಾಗ ಅದು ಆ ವ್ಯಕ್ತಿಯ ಮನೆಯಲ್ಲಿ ಕಳುವಾಗಿ ಹೋದರೆ ಕಳ್ಳನು ಸಿಕ್ಕಿಕೊಂಡರೆ, ಎರಡರಷ್ಟು ದಂಡ ಕೊಡಬೇಕು.

8 ಕಳ್ಳನು ಸಿಕ್ಕದೆ ಹೋದರೆ ಆ ಮನೆಯ ಯಜಮಾನ ತಾನೇ ಆ ಒಡವೆಗಳನ್ನು ಕದ್ದನೋ ಇಲ್ಲವೋ ಎಂಬುದನ್ನು ನಿಶ್ಚಯಿಸುವುದಕ್ಕಾಗಿ ದೇವರ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.

9 “ವಂಚನೆಯಾಯಿತೆಂಬ ಅನುಮಾನ ಹುಟ್ಟಿದ ಪ್ರತಿಯೊಂದು ವಿಷಯದಲ್ಲೂ, ಅದು ಎತ್ತು, ಕತ್ತೆ, ಕುರಿ ಅಥವಾ ಬಟ್ಟೆ ವಿಷಯವಾದರೂ ಸರಿಯೇ ಕಳೆದುಕೊಂಡ ಬೇರೆ ಯಾವ ವಸ್ತುವಿನ ವಿಷಯವಾದರೂ ಸರಿಯೇ, ಇಬ್ಬರೂ ಅದು ತಮ್ಮದೆಂದು ಹೇಳುವಾಗ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ದೇವರು ಯಾರನ್ನು ದ್ರೋಹಿಯೆಂದು ನಿರ್ಣಯಿಸುತ್ತಾರೋ ಅವನು ಆ ಮತ್ತೊಬ್ಬನಿಗೆ ಎರಡರಷ್ಟು ಕೊಡಬೇಕು.

10 “ಒಬ್ಬನು ಮತ್ತೊಬ್ಬನ ಕತ್ತೆಯನ್ನಾಗಲಿ ಎತ್ತನ್ನಾಗಲಿ ಕುರಿಯನ್ನಾಗಲಿ, ಬೇರೆ ಯಾವ ಪ್ರಾಣಿಯನ್ನೇ ಆಗಲಿ ತನ್ನ ಬಳಿಯಿಂದ ಸುರಕ್ಷಿತವಾಗಿಟ್ಟುಕೊಳ್ಳಲು ಒಪ್ಪಿಕೊಂಡ ಮೇಲೆ ಅದು ಸತ್ತರೆ, ಗಾಯಗೊಂಡರೆ, ಇಲ್ಲವೆ ಯಾರೂ ತಿಳಿಯದಂತೆ ಸುಲಿಗೆಯಾದರೆ

11 ಆ ವ್ಯಕ್ತಿ ತಾನೇ ಆ ಸೊತ್ತಿನ ವಿಷಯದಲ್ಲಿ ಮೋಸಮಾಡಲಿಲ್ಲವೆಂಬುದನ್ನು ದೃಢಪಡಿಸಲು ಸರ್ವೇಶ್ವರನ ಮೇಲೆ ಪ್ರಮಾಣ ಮಾಡಬೇಕು. ಪ್ರಾಣಿಯ ಒಡೆಯನು ಆ ಪ್ರಮಾಣ ವಾಕ್ಯವನ್ನು ನಂಬಬೇಕು. ಪ್ರಮಾಣ ಮಾಡುವವನು ಈಡು ಕೊಡಬೇಕಾದ ಅಗತ್ಯವಿರುವುದಿಲ್ಲ.

12 ಆದರೆ ಪ್ರಾಣಿಯು ಕಳವಾದರೆ ಆ ವ್ಯಕ್ತಿ ಅದರ ಒಡೆಯನಿಗೆ ಈಡು ಕೊಡಬೇಕು.

13 ಕಾಡುಮೃಗ ಅದನ್ನು ಕೊಂದಿದ್ದರೆ ಅದರ ಅವಶೇಷವನ್ನು ಆಧಾರವಾಗಿ ತೋರಿಸಲಿ. ಕಾಡುಮೃಗದಿಂದ ಕೊಂದುದಕ್ಕೆ ಈಡುಕೊಡಬೇಕಾದ ಅವಶ್ಯಕತೆ ಇಲ್ಲ.

14 “ಒಬ್ಬನು ಮತ್ತೊಬ್ಬನಿಂದ ಪಶುಪ್ರಾಣಿಯನ್ನು ಕೊಂಚಕಾಲಕ್ಕೆ ಎರವಲಾಗಿ ತೆಗೆದುಕೊಂಡಿರುವಾಗ ಆ ಪ್ರಾಣಿಯ, ಒಡೆಯನು ಹತ್ತಿರವಿಲ್ಲದ ಸಮಯದಲ್ಲಿ ಗಾಯಗೊಂಡರೆ ಅಥವಾ ಸತ್ತುಹೋದರೆ ಸಾಲ ತೆಗೆದುಕೊಂಡವನು ಈಡುಕೊಡಬೇಕು.

15 ಒಡೆಯನು ಅದರ ಹತ್ತಿರದಲ್ಲೇ ಇದ್ದರೆ ಅವನಿಗೆ ಈಡು ಕೊಡಬೇಕಾದ ಅವಶ್ಯಕತೆ ಇಲ್ಲ. ಅದನ್ನು ಬಾಡಿಗೆಗೆ ತೆಗೆದುಕೊಂಡಿದ್ದರೆ ಅದಕ್ಕೆ ಉಂಟಾದ ನಷ್ಟವು ಬಾಡಿಗೆಯ ಲೆಕ್ಕಕ್ಕೆ ಎಣಿಕೆಯಾಗಿರಬೇಕು.


ನೈತಿಕ ನಿಯಮಗಳ ಬಗ್ಗೆ

16 “ನಿಶ್ಚಿತಾರ್ಥವಾಗದ ಹೆಣ್ಣನ್ನು ಒಬ್ಬನು ಮರುಳುಗೊಳಿಸಿ ಅವಳನ್ನು ಕೂಡಿದರೆ ಅವಳಿಗಾಗಿ ತೆರವನ್ನು ಕೊಟ್ಟು ಅವಳನ್ನು ಮದುವೆ ಮಾಡಿಕೊಳ್ಳಬೇಕು.

17 ಅವಳ ತಂದೆ ಅವಳನ್ನು ಅವನಿಗೆ ಕೊಡಲು ಒಪ್ಪದೆ ಹೋದರೆ ಆ ವ್ಯಕ್ತಿ ತಕ್ಕ ತೆರವನ್ನು ಹೇಗೂ ಕೊಡಬೇಕು.

18 “ಮಾಟಗಾರ್ತಿಯನ್ನು ಬದುಕಲು ಬಿಡಬಾರದು.

19 “ಪ್ರಾಣಿಪಶು ಸಂಗಮಾಡಿದವನಿಗೆ ಮರಣದಂಡನೆಯಾಗಬೇಕು.

20 “ಸರ್ವೇಶ್ವರನಾದವನಿಗೆ ಹೊರತಾಗಿ ಬೇರೊಬ್ಬ ದೇವರಿಗೆ ಬಲಿ ಕೊಡುವವನು ನಾಶಕ್ಕೆ ಅರ್ಹನು.

21 “ಪರದೇಶೀಯನಿಗೆ ಅನ್ಯಾಯ ಮಾಡಬಾರದು, ಅವನನ್ನು ಪೀಡಿಸಬಾರದು. ನೀವು ಕೂಡ ಈಜಿಪ್ಟಿನಲ್ಲಿ ಪರದೇಶೀಯರಾಗಿದ್ದೀರಲ್ಲವೆ?

22 ವಿಧವೆಯರನ್ನಾಗಲಿ ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು.

23 ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು. ಆ ಮೊರೆಗೆ ನಾನು ಕಿವಿಗೊಡದೆ ಇರೆನೆಂಬುದು ನಿಮಗೆ ತಿಳಿದಿರಲಿ.

24 ನಾನು ಕೋಪಗೊಂಡು ನಿಮ್ಮನ್ನು ಶತ್ರುಗಳ ಕೈಯಿಂದ ಸಂಹಾರ ಮಾಡಿಸುವೆನು. ನಿಮ್ಮ ಹೆಂಡತಿಯರು ವಿಧವೆಗಳಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.

25 “ನನ್ನ ಜನರಲ್ಲಿ ಒಬ್ಬ ಬಡವನಿಗೆ ನೀನು ಸಾಲಕೊಟ್ಟರೆ ಅವನನ್ನು ಸಾಲಗಾರನಂತೆ ಕಾಣಬಾರದು. ಅವನಿಂದ ಬಡ್ಡಿಯನ್ನು ಕೇಳಬಾರದು.

26 “ನೀನು ಒಬ್ಬನ ಕಂಬಳಿಯನ್ನು ಅಡವು ಇಟ್ಟುಕೊಂಡರೆ ಸೂರ್ಯನು ಮುಳುಗುವಷ್ಟರಲ್ಲಿ ಅದನ್ನು ಹಿಂದಕ್ಕೆ ಕೊಡು.

27 ಏಕೆಂದರೆ ಅವನಿಗಿರುವ ಹೊದಿಕೆ ಅದೊಂದೇ; ಅದನ್ನೇ ಮೈಗೆ ಸುತ್ತಿಕೊಳ್ಳಬೇಕು; ಬೇರೆ ಯಾವುದನ್ನು ಹೊದ್ದುಕೊಂಡು ಮಲಗಾನು? ಅವನು ನನಗೆ ಮೊರೆಯಿಟ್ಟರೆ ಕಿವಿಗೊಡುವೆನು. ಏಕೆಂದರೆ ನಾನು ದಯಾಮಯನು.

28 “ದೇವರನ್ನು ದೂಷಿಸಬಾರದು; ನಿಮ್ಮ ಜನನಾಯಕನನ್ನು ಶಪಿಸಬಾರದು.

29 “ನಿಮ್ಮ ಕಣದಿಂದ ಹಾಗು ಆಲೆಯಿಂದ ನನಗೆ ಸಲ್ಲಿಸತಕ್ಕದ್ದನ್ನು ಸಮರ್ಪಿಸಲು ತಡಮಾಡಬಾರದು.

30 “ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ನನಗೆ ಸಮರ್ಪಿಸಬೇಕು. ಅಂತೆಯೇ ನಿಮ್ಮ ದನಕುರಿಗಳ ಚೊಚ್ಚಲು ಮರಿಗಳನ್ನು ನನಗೆ ಸಮರ್ಪಿಸಬೇಕು. ಏಳುದಿವಸ ಆ ಮರಿ ತಾಯಿಯ ಹತ್ತಿರ ಇರಲಿ. ಎಂಟನೆಯ ದಿನದಲ್ಲಿ ಅದನ್ನು ನನಗೆ ಸಮರ್ಪಿಸಬೇಕು.

31 “ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಆದ್ದರಿಂದ ಕಾಡುಮೃಗ ಕೊಂದದ್ದನ್ನು ತಿನ್ನಬಾರದು; ಅದನ್ನು ನಾಯಿಗಳಿಗೆ ಬಿಡಬೇಕು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು