ವಿಮೋಚನಕಾಂಡ 2 - ಕನ್ನಡ ಸತ್ಯವೇದವು C.L. Bible (BSI)ಮೋಶೆಯ ಜನನ 1 ಲೇವಿಯ ವಂಶಸ್ಥನಾದ ಒಬ್ಬನು ಲೇವಿಯ ಕುಲದ ಕನ್ಯೆಯನ್ನು ಮದುವೆಯಾದನು. 2 ಆಕೆ ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆತ್ತಳು. ಅದು ಅತಿ ಚೆಲುವಾದ ಕೂಸೆಂದು ತಿಳಿದು ಮೂರು ತಿಂಗಳು ಬಚ್ಚಿಟ್ಟಳು. 3 ಆದರೆ ಹೆಚ್ಚು ಕಾಲ ಮರೆಮಾಡಲಾಗಲಿಲ್ಲ. ಎಂತಲೆ ಆಕೆ ಆಪಿನ ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು, ಜೇಡಿ ಮಣ್ಣನ್ನೂ ರಾಳವನ್ನೂ ಅದಕ್ಕೆ ಮೆತ್ತಿ, ಮಗುವನ್ನು ಅದರಲ್ಲಿ ಮಲಗಿಸಿ, ನೈಲ್ ನದಿಯ ಅಂಚಿನಲ್ಲಿದ್ದ ಜಂಬು ಹುಲ್ಲಿನ ನಡುವೆ ಇಟ್ಟಳು. 4 ಮಗುವಿಗೆ ಏನಾಗುವುದೋ ಎಂದು ತಿಳಿದುಕೊಳ್ಳುವುದಕ್ಕಾಗಿ ಆ ಮಗುವಿನ ಅಕ್ಕ ಸ್ವಲ್ಪ ದೂರದಲ್ಲಿ ನಿಂತುಕೊಂಡಳು. 5 ಅಷ್ಟರಲ್ಲಿ ಫರೋಹನ ಪುತ್ರಿ ಸ್ನಾನಕ್ಕಾಗಿ ಆ ನದಿಯ ಬಳಿಗೆ ಇಳಿದು ಬಂದಳು. ಆಕೆಯ ಗೆಳತಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬುಹುಲ್ಲಿನ ನಡುವೆ ಪೆಟ್ಟಿಗೆಯೊಂದನ್ನು ಕಂಡಳು. ದಾಸಿಯೊಬ್ಬಳನ್ನು ಕಳಿಸಿ ಅದನ್ನು ತರಿಸಿದಳು. 6 ಪೆಟ್ಟಿಗೆಯನ್ನು ತೆರೆದು ನೋಡುವಾಗ ಏನಾಶ್ಚರ್ಯ! ಅದರಲ್ಲಿ ಅಳುವ ಕೂಸು! ಆಕೆಗೆ ಅದರ ಮೇಲೆ ಕನಿಕರ ಹುಟ್ಟಿತು. “ಇದು ಹಿಬ್ರಿಯರ ಮಕ್ಕಳಲ್ಲಿ ಒಂದಾಗಿರಬೇಕು,” ಎಂದುಕೊಂಡಳು. 7 ಆ ಮಗುವಿನ ಅಕ್ಕ ಬಂದು, “ನಿಮ್ಮ ಪರವಾಗಿ ಈ ಕೂಸನ್ನು ಮೊಲೆಕೊಟ್ಟು ಸಾಕಲು ಹಿಬ್ರಿಯ ಮಹಿಳೆಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಬಹುದೇ?” ಎಂದು ಫರೋಹನ ಪುತ್ರಿಯನ್ನು ವಿಚಾರಿಸಿದಳು. 8 “ಹೌದು, ಹಾಗೆಯೆ ಮಾಡು,” ಎಂದಳು ಫರೋಹನ ಪುತ್ರಿ. ಆ ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರೆದು ತಂದಳು. 9 ಅವಳಿಗೆ ಆ ರಾಜಪುತ್ರಿ, “ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನ್ನ ಪರವಾಗಿ ಸಾಕು. ನಾನೇ ನಿನಗೆ ಸಂಬಳವನ್ನು ಕೊಡುತ್ತೇನೆ,” ಎಂದಳು. ಅಂತೆಯೇ ಆ ಮಹಿಳೆ ಕೂಸನ್ನು ತೆಗೆದುಕೊಂಡು ಹೋಗಿ ಸಾಕಿದಳು. 10 ಆ ಹುಡುಗನು ಬೆಳೆದಾಗ ಅವನನ್ನು ಫರೋಹನ ಪುತ್ರಿಯ ಬಳಿಗೆ ಕರೆದುಕೊಂಡು ಬಂದಳು. ಅವನು ಆಕೆಗೆ ಮಗನಾದನು. “ನೀರಿನಿಂದ ನಾನು ಇವನನ್ನು ಎತ್ತಿದೆ” ಎಂದು ಹೇಳಿ ಆಕೆ ಅವನಿಗೆ “ಮೋಶೆ" ಎಂದು ಹೆಸರಿಟ್ಟಳು. ಮಿದ್ಯಾನ್ ನಾಡಿಗೆ ಮೋಶೆಯ ಪಲಾಯನ 11 ಮೋಶೆ ದೊಡ್ಡವನಾದ ಮೇಲೆ ಸ್ವಜನರಾದ ಹಿಬ್ರಿಯರ ಬಳಿಗೆ ಹೋಗಿ ಅವರು ಮಾಡುತ್ತಿದ್ದ ಬಿಟ್ಟೀ ಕೆಲಸಗಳನ್ನು ನೋಡುತ್ತಿದ್ದನು. 12 ಒಮ್ಮೆ ಒಬ್ಬ ಈಜಿಪ್ಟಿನವನು ತನ್ನ ದೇಶೀಯನಾದ ಹಿಬ್ರಿಯನನ್ನು ಹೊಡೆಯುವುದನ್ನು ಕಂಡನು. ಅತ್ತಿತ್ತ ನೋಡಿ, ಯಾರೂ ಇಲ್ಲ ಎಂದು ತಿಳಿದು, ಆ ಈಜಿಪ್ಟನನ್ನು ಹೊಡೆದು ಹಾಕಿ ಅವನ ಶವವನ್ನು ಮರಳಿನಲ್ಲಿ ಮುಚ್ಚಿಬಿಟ್ಟನು. 13 ಮಾರನೆಯ ದಿನ ಕೂಡ ಮೋಶೆ ಹೊರಗೆ ಹೋಗಿ ನೋಡಿದನು. ಈ ಸಾರಿ ಇಬ್ಬರು ಹಿಬ್ರಿಯರೇ ಜಗಳವಾಡುತ್ತಿದ್ದರು. ತಪ್ಪಿತಸ್ಥನಿಗೆ, “ಏನಯ್ಯಾ ಸ್ವಕುಲದವನನ್ನೇ ಹೊಡೆಯುತ್ತಿರುವೆ ಏಕೆ?” ಎಂದು ಕೇಳಿದನು. 14 ಅದಕ್ಕೆ ಅವನು, “ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿ ಹಾಗೂ ನ್ಯಾಯಾಧಿಪತಿಯನ್ನಾಗಿ ನೇಮಿಸಿದವರು ಯಾರು? ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನು ಕೊಂದುಹಾಕಬೇಕೆಂದಿರುವೆಯಾ?” ಎಂದನು. ಈ ಮಾತನ್ನು ಕೇಳಿದ್ದೇ ಮೋಶೆ, “ನಾನು ಮಾಡಿದ ಕಾರ್ಯ ಬಯಲಾಗಿಬಿಟ್ಟಿತಲ್ಲಾ!” ಎಂದು ಅಂಜಿದನು. 15 ನಡೆದ ಸಂಗತಿ ಫರೋಹನಿಗೆ ಮುಟ್ಟಿತು. ಅವನು ಮೋಶೆಯನ್ನು ಕೊಲ್ಲಿಸಬೇಕೆಂದು ಆಲೋಚಿಸುತ್ತಿದ್ದನು. ಆದುದರಿಂದ ಮೋಶೆ ಫರೋಹನ ಬಳಿಯಿಂದ ಪಲಾಯನಗೈದು ಮಿದ್ಯಾನ್ ನಾಡನ್ನು ಸೇರಿದನು. 16 ಒಂದು ದಿನ ಮೋಶೆ ಆ ನಾಡಿನ ಬಾವಿಯೊಂದರ ಬಳಿ ಕುಳಿತಿದ್ದನು. ಮಿದ್ಯಾನರ ಪೂಜಾರಿಯ ಏಳು ಮಂದಿ ಹೆಣ್ಣು ಮಕ್ಕಳು ಅಲ್ಲಿಗೆ ಬಂದರು. ತಮ್ಮ ತಂದೆಯ ಕುರಿಗಳಿಗೆ ನೀರು ಕುಡಿಸುವುದಕ್ಕಾಗಿ ನೀರು ಸೇದಿ ತೊಟ್ಟಿಗಳಲ್ಲಿ ತುಂಬುತ್ತಿದ್ದರು. 17 ಕುರುಬರು ಬಂದು ಅವರನ್ನು ಬಾವಿಯ ಬಳಿಯಿಂದ ಓಡಿಸಲೆತ್ನಿಸಿದರು. ಮೋಶೆ ಆ ಹುಡುಗಿಯರಿಗೆ ಸಹಾಯವಾಗಿ ಬಂದು ಅವರ ಕುರಿಗಳಿಗೆ ನೀರನ್ನು ಕುಡಿಸಿದನು. 18 ಹುಡುಗಿಯರು ತಮ್ಮ ತಂದೆ ರೆಗೂವೇಲನ ಬಳಿಗೆ ಹಿಂದಿರುಗಿದಾಗ ಅವನು, “ಈ ಹೊತ್ತು ಬಲುಬೇಗ ಬಂದು ಇದ್ದೀರಿ, ಏನು ಕಾರಣ?” ಎಂದು ವಿಚಾರಿಸಿದನು. 19 ಅವರು, “ಈಜಿಪ್ಟಿನವನಾದ ಒಬ್ಬ ಮನುಷ್ಯ ನಮ್ಮನ್ನು ಕುರುಬರ ಕಾಟದಿಂದ ತಪ್ಪಿಸಿದ; ಅದು ಮಾತ್ರವಲ್ಲ, ಅವನು ನಮಗಾಗಿ ನೀರು ಸೇದಿ ಕುರಿಗಳಿಗೆ ಕುಡಿಸಿದ,” ಎಂದು ವಿವರಿಸಿದರು. 20 ಅವರ ತಂದೆ, “ಆ ಮನುಷ್ಯನೆಲ್ಲಿ? ಅವನನ್ನು ಏಕೆ ಬಿಟ್ಟುಬಂದಿರಿ? ಹೋಗಿ ಅವನನ್ನು ಊಟಕ್ಕೆ ಕರೆದುಕೊಂಡುಹೋಗಿ ತನ್ನಿ,” ಎಂದು ಹೇಳಿದನು. 21 ಮೋಶೆ ಆ ಮನುಷ್ಯನ ಸಂಗಡ ವಾಸಮಾಡಲು ಒಪ್ಪಿಕೊಂಡನು. ಅವನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಮದುವೆಮಾಡಿಕೊಟ್ಟನು. 22 ಆಕೆ ಒಂದು ಗಂಡು ಮಗುವನ್ನು ಹೆತ್ತಳು. ಮೋಶೆ, “ನಾನು ಅನ್ಯದೇಶದಲ್ಲಿ ಒಬ್ಬ ಪ್ರವಾಸಿ,” ಎಂದು ಹೇಳಿ ಆ ಮಗುವಿಗೆ ‘ಗೇರ್ಷೋಮ್’ ಎಂದು ಹೆಸರಿಟ್ಟನು. 23 ಹೀಗೆ ಬಹಳ ದಿನಗಳು ಕಳೆದ ಮೇಲೆ ಈಜಿಪ್ಟ್ ದೇಶದ ಅರಸನು ಕಾಲವಾದನು. ಇಸ್ರಯೇಲರು ತಾವು ಮಾಡಬೇಕಾಗಿದ್ದ ಬಿಟ್ಟೀ ಕೆಲಸಕ್ಕಾಗಿ ನಿಟ್ಟುಸಿರು ಬಿಟ್ಟು ಗೋಳಾಡುತ್ತಿದ್ದರು. ಆ ಗೋಳು ದೇವರಿಗೆ ಮುಟ್ಟಿತು. 24 ದೇವರು ಆ ಜನರ ನರಳಾಟವನ್ನು ಕೇಳಿ ತಾವು ಅಬ್ರಹಾಮ, ಇಸಾಕ, ಯಕೋಬರಿಗೆ ಮಾಡಿದ್ದ ವಾಗ್ದಾನವನ್ನು ನೆನಪಿಗೆ ತಂದುಕೊಂಡರು. 25 ಇಸ್ರಯೇಲರನ್ನು ನೋಡಿ ಅವರಲ್ಲಿ ಕನಿಕರಗೊಂಡರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India