ವಿಮೋಚನಕಾಂಡ 17 - ಕನ್ನಡ ಸತ್ಯವೇದವು C.L. Bible (BSI)ಬಂಡೆಯಿಂದ ಬಂದ ನೀರು ( ಸಂಖ್ಯಾ. 20:1-13 ) 1 ಇಸ್ರಯೇಲರು ಸರ್ವೇಶ್ವರನ ಅಪ್ಪಣೆಯ ಪ್ರಕಾರ ಸೀನ್ ಎಂಬ ಮರುಭೂಮಿಯಿಂದ ಹೊರಟು ಮುಂದಕ್ಕೆ ಪ್ರಯಾಣ ಮಾಡಿ ರೆಫೀದೀಮಿನಲ್ಲಿ ಇಳಿದುಕೊಂಡರು. 2 ಅಲ್ಲಿ ಕುಡಿಯುವುದಕ್ಕೆ ನೀರಿರಲಿಲ್ಲ. ಜನರು ಮೋಶೆಯ ಸಂಗಡ ಜಗಳವಾಡುತ್ತಾ, “ನಮಗೆ ಕುಡಿಯುವುದಕ್ಕೆ ನೀರು ತೋರಿಸಬೇಕು,” ಎಂದು ಹೇಳಿದರು. ಆಗ ಮೋಶೆ, “ನೀವು ನನ್ನ ಸಂಗಡ ವಾದಿಸುವುದೇಕೆ? ಸರ್ವೇಶ್ವರನನ್ನು ಏಕೆ ಪರೀಕ್ಷಿಸುತ್ತೀರಿ?” ಎಂದನು. 3 ಅಲ್ಲಿ ಜನರು ನೀರಿಲ್ಲದೆ ಬಾಯಾರಿಕೆಯ ಬೇಸರದಿಂದ ಮೋಶೆಯ ವಿರುದ್ಧ ಗೊಣಗುಟ್ಟಿದರು. “ನೀನು ನಮ್ಮನ್ನು, ನಮ್ಮ ಮಕ್ಕಳನ್ನು ಹಾಗು ದನಕರುಗಳನ್ನು ಈಜಿಪ್ಟಿನಿಂದ ಕರೆದು ತಂದದ್ದು ಏಕೆ? ನೀರಿಲ್ಲದೆ ಸಾಯಿಸುವುದಕ್ಕೋ?” ಎಂದು ದೂರಿದರು. 4 ಆಗ ಮೋಶೆ ಸರ್ವೇಶ್ವರನಿಗೆ ಮೊರೆಯಿಟ್ಟನು, “ಈ ಜನರಿಗಾಗಿ ನಾನೇನು ಮಾಡಲಿ? ಅವರು ನನ್ನನ್ನು ಕಲ್ಲೆಸೆದು ಕೊಲ್ಲುವಂತಿದ್ದಾರೆ” ಎಂದು ಪ್ರಾರ್ಥಿಸಿದನು. 5 ಅದಕ್ಕೆ ಸರ್ವೇಶ್ವರ, “ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಇಸ್ರಯೇಲರ ಹಿರಿಯರಲ್ಲಿ ಕೆಲವರನ್ನು ಕರೆದುಕೊಂಡು, ನಾನು ತೋರಿಸುವ ಸ್ಥಳಕ್ಕೆ ಜನರ ಮುಂದೆ ಹೋಗು. 6 ಅಲ್ಲೇ ಹೋರೇಬಿನಲ್ಲಿರುವ ಬಂಡೆಯೊಂದರ ಮೇಲೆ ನಾನೇ ನಿನ್ನ ಮುಂದೆ ನಿಲ್ಲುವೆನು. ಆ ಬಂಡೆಯನ್ನು ನೀನು ಹೊಡೆ. ಆಗ ಅದರಿಂದ ನೀರು ಹೊರಡುವುದು; ಜನರು ಕುಡಿಯಲಿ,” ಎಂದು ಅಪ್ಪಣೆಕೊಟ್ಟರು. ಹಾಗೆಯೇ ಮೋಶೆ ಇಸ್ರಯೇಲರ ಹಿರಿಯರ ಕಣ್ಣೆದುರಿನಲ್ಲೆ ಮಾಡಿದನು. 7 ಸರ್ವೇಶ್ವರ ಸ್ವಾಮಿ ತಮ್ಮ ಮಧ್ಯೆ ಇದ್ದಾರೋ ಇಲ್ಲವೋ ಎಂದು ಇಸ್ರಯೇಲರು ಅಲ್ಲಿ ಪರೀಕ್ಷಿಸಿದ್ದರಿಂದ ಮೋಶೆ ಆ ಸ್ಥಳಕ್ಕೆ ‘ಮಸ್ಸಾ’ ಎಂತಲೂ ಜನರು ತನ್ನೊಡನೆ ವಾಗ್ವಾದ ಮಾಡಿದ್ದರಿಂದ ‘ಮೆರೀಬಾ’ ಎಂತಲೂ ಹೆಸರಿಟ್ಟನು. ಅಮಾಲೇಕ್ಯರ ವಿರುದ್ಧ ಜಯಗಳಿಕೆ 8 ಅಮಾಲೇಕ್ಯರು ರೆಫೀದೀಮಿನಲ್ಲಿ ಇಸ್ರಯೇಲರ ಮೇಲೆ ಯುದ್ಧಮಾಡುವುದಕ್ಕೆ ಬಂದರು. 9 ‘ಮೋಶೆ ಯೆಹೋಶುವನಿಗೆ, “ನೀನು ಯೋಧರನ್ನು ಆರಿಸಿಕೊಂಡು ನಾಳೆ ನಮ್ಮ ಪರವಾಗಿ ಹೊರಟು ಅಮಾಲೇಕ್ಯರೊಡನೆ ಯುದ್ಧಮಾಡು. ನಾನು ದೇವದಂಡವನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ತುದಿಯಲ್ಲಿ ನಿಂತುಕೊಳ್ಳುವೆನು,” ಎಂದು ಹೇಳಿದನು. 10 ಮೋಶೆಯ ಅಪ್ಪಣೆಯ ಮೇರೆಗೆ ಯೆಹೋಶುವನು ಅಮಾಲೇಕ್ಯರ ಸಂಗಡ ಯುದ್ಧಮಾಡಲು ಹೊರಟನು. ಮೋಶೆ, ಆರೋನ ಹಾಗು ಹೂರ ಈ ಮೂವರು ಗುಡ್ಡದ ತುದಿಗೆ ಏರಿದರು. 11 ಮೋಶೆ ತನ್ನ ಕೈಗಳನ್ನು ಮೇಲಕ್ಕೆ ಎತ್ತಿರುವಾಗಲೆಲ್ಲಾ ಇಸ್ರಯೇಲರು ಜಯಶೀಲರಾಗುತ್ತಿದ್ದರು, ಇಳಿಸುವಾಗಲೆಲ್ಲಾ ಅಮಾಲೇಕ್ಯರು ಜಯಶೀಲರಾಗುತ್ತಿದ್ದರು. 12 ಹೀಗಿರಲು ಮೋಶೆಯ ಕೈಗಳು ಆಯಾಸಗೊಳ್ಳುತ್ತಿದ್ದುದರಿಂದ ಆರೋನ ಮತ್ತು ಹೂರನು ಒಂದು ಕಲ್ಲನ್ನು ತಂದಿಟ್ಟು ಅದರ ಮೇಲೆ ಮೋಶೆಯನ್ನು ಕುಳ್ಳಿರಿಸಿದರು. ಅಲ್ಲದೆ ಬಲಗಡೆ ಒಬ್ಬನು ಎಡಗಡೆ ಒಬ್ಬನು ನಿಂತು ಅವನ ಕೈಗಳಿಗೆ ಆಧಾರಕೊಟ್ಟರು. ಈ ರೀತಿಯಾಗಿ ಅವನ ಕೈಗಳು ಹೊತ್ತು ಮುಳುಗುವ ತನಕ ಇಳಿಯದೆ ನಿಂತೇ ಇರುವಂತೆ ಮಾಡಿದರು. 13 ಹೀಗೆ ಯೆಹೋಶುವನು ಅಮಾಲೇಕ್ಯರ ಯೋಧರನ್ನು ಕತ್ತಿಗೆ ತುತ್ತಾಗಿಸಿ ಅವರನ್ನು ಸೋಲಿಸಿದನು. 14 ಆಗ ಸರ್ವೇಶ್ವರ, “ಭೂಮಿಯ ಮೇಲೆ ಅಮಾಲೇಕ್ಯರ ಹೆಸರೇ ಇಲ್ಲದಂತೆ ಮಾಡುವೆನು ಎಂಬ ಈ ಮಾತನ್ನು ಜ್ಞಾಪಕಾರ್ಥವಾಗಿ ಪುಸ್ತಕದಲ್ಲಿ ಬರೆ ಮತ್ತು ಯೆಹೋಶುವನಿಗೆ ಮನದಟ್ಟಾಗುವಂತೆ ಮಾಡು” ಎಂದು ಮೋಶೆಗೆ ಹೇಳಿದರು. 15 ಆ ಸ್ಥಳದಲ್ಲಿ ಮೋಶೆ ಒಂದು ಬಲಿಪೀಠವನ್ನು ಕಟ್ಟಿಸಿ ಅದಕ್ಕೆ, ‘ಯಾವ್ವೆನಿಸ್ಸಿ’ ಎಂದು ಹೆಸರಿಟ್ಟನು. 16 ಅಲ್ಲದೆ, “ಸರ್ವೇಶ್ವರನ ಪತಾಕೆಯನ್ನು ಎತ್ತಿಹಿಡಿಯಿರಿ. ಅಮಾಲೇಕ್ಯರ ಮೇಲೆ ಸರ್ವೇಶ್ವರನಿಗೆ ತಲತಲಾಂತರಕ್ಕೂ ಯುದ್ಧವಿರುವುದು,” ಎಂದು ಹೇಳಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India