Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 13 - ಕನ್ನಡ ಸತ್ಯವೇದವು C.L. Bible (BSI)


ಚೊಚ್ಚಲು ಮಕ್ಕಳು ದೇವರಿಗೆ ಮೀಸಲು

1 ಸರ್ವೇಶ್ವರ ಸ್ವಾಮಿ ಮೋಶೆಗೆ,

2 “ಚೊಚ್ಚಲಾಗಿ ಹುಟ್ಟಿದ್ದೆಲ್ಲವನ್ನು ನನಗೆ ಮೀಸಲಾಗಿಡು; ಇಸ್ರಯೇಲರಲ್ಲಿ ಮನುಷ್ಯರಿಗಾಗಲಿ ಪಶುಪ್ರಾಣಿಗಳಿಗಾಗಲಿ ಹುಟ್ಟಿದ ಪ್ರಥಮ ಗರ್ಭಫಲ ನನ್ನದೇ,” ಎಂದು ಹೇಳಿದರು.


ಹುಳಿರಹಿತ ರೊಟ್ಟಿಯ ಹಬ್ಬ

3 ಮೋಶೆ ಇಸ್ರಯೇಲರಿಗೆ, “ಗುಲಾಮತನದಲ್ಲಿದ್ದು ಈಜಿಪ್ಟ್ ದೇಶದಿಂದ ಬಿಡುಗಡೆಯಾದ ಈ ದಿನವನ್ನು ನೀವು ಸ್ಮರಿಸಬೇಕು. ಈ ದಿನದಲ್ಲೇ ಸರ್ವೇಶ್ವರ ಸ್ವಾಮಿ ತಮ್ಮ ಭುಜಬಲ ಪ್ರಯೋಗಿಸಿ ನಿಮ್ಮನ್ನು ಅಲ್ಲಿಂದ ವಿಮೋಚಿಸಿದರು. ಈ ದಿನದಂದು ನೀವು ಹುಳಿಬೆರತದ್ದನ್ನು ತಿನ್ನಕೂಡದು.

4 ಚೈತ್ರಮಾಸದ ಈ ದಿನದಂದು ನೀವು ಹೊರಟವರು.

5 ಸರ್ವೇಶ್ವರ ನಿಮ್ಮ ಪೂರ್ವಜರಿಗೆ ಪ್ರಮಾಣವಾಗಿ ಹೇಳಿದಂತೆ ನಿಮ್ಮನ್ನು ಹಾಲೂ ಜೇನೂ ಹರಿಯುವ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು ಹಾಗು ಯೆಬೂಸಿಯರು ವಾಸವಾಗಿರುವ ನಾಡಿಗೆ ಕರೆದು ತಂದು ಅದನ್ನು ನಿಮಗೆ ಕೊಟ್ಟಾಗ, ನೀವು ಈ ಆಚರಣೆಯನ್ನು ಈ ತಿಂಗಳಿನಲ್ಲೇ ನಡೆಸಬೇಕು.

6 ಏಳು ದಿವಸ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳನೆಯ ದಿನದಲ್ಲಿ ಸರ್ವೇಶ್ವರನ ಗೌರವಾರ್ಥ ಹಬ್ಬ ಮಾಡಬೇಕು.

7 ಆ ಏಳು ದಿವಸವು ಹಿಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು. ಮಾತ್ರವಲ್ಲ ನಿಮ್ಮ ಬಳಿಯಲ್ಲಿ ಅಥವಾ ನಿಮ್ಮ ನಾಡಿನಲ್ಲಿ ಹುಳಿಯಾಗಲಿ ಹುಳಿ ಹಿಟ್ಟಾಗಲಿ ಇರಕೂಡದು.

8 ಆ ದಿನ ನೀವು ನಿಮ್ಮ ಮಕ್ಕಳಿಗೆ, “ನಮ್ಮ ಜನರು ಈಜಿಪ್ಟಿನಿಂದ ಹೊರಟು ಬಂದಾಗ ಸರ್ವೇಶ್ವರ ನಮಗೋಸ್ಕರ ಮಾಡಿದ ಉಪಕಾರವನ್ನು ಸ್ಮರಿಸುವುದಕ್ಕಾಗಿ ಈ ಆಚರಣೆಯನ್ನು ನಡೆಸುತ್ತಿದ್ದೇವೆ” ಎಂದು ತಿಳಿಸಬೇಕು. ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದ್ದರಿಂದ ಅವರ ನಿಯಮ ನಮ್ಮ ಬಾಯಿಗೆ ಬರುತ್ತಿರಬೇಕು.

9 ಇದಕ್ಕೆ ಈ ಆಚರಣೆಯು ನಮ್ಮ ಕೈಗೆ ಕಟ್ಟಿದ ಕಂಕಣದಂತೆ, ಹಣೆಗೆ ಕಟ್ಟಿದ ಜ್ಞಾಪಕ ಪಟ್ಟಿಯಂತೆ ಇರುತ್ತದೆ.

10 ವರ್ಷವರ್ಷವೂ ನಿಯಮಿತ ಕಾಲದಲ್ಲಿ ಈ ಆಚರಣೆಯನ್ನು ನಡೆಸಬೇಕು.


ಚೊಚ್ಚಲು ಫಲದ ಸಮರ್ಪಣೆ

11 “ಸರ್ವೇಶ್ವರ ಸ್ವಾಮಿ ನಿಮಗೂ ನಿಮ್ಮ ಪೂರ್ವಜರಿಗೂ ಕೊಟ್ಟ ವಾಗ್ದಾನದ ಮೇರೆಗೆ ನಿಮ್ಮನ್ನು ಕಾನಾನ್ಯರ ನಾಡಿಗೆ ಬರಮಾಡಿ ಆ ನಾಡನ್ನು ನಿಮಗೆ ಕೊಟ್ಟನಂತರ

12 ನಿಮಗೂ ನಿಮ್ಮ ಪಶುಪ್ರಾಣಿಗಳಿಗೂ ಹುಟ್ಟುವ ಚೊಚ್ಚಲು ಫಲವನ್ನೆಲ್ಲ, ಅವು ಗಂಡಾದ ಪಕ್ಷಕ್ಕೆ, ಸರ್ವೇಶ್ವರನ ಪಾಲೆಂದು ತಿಳಿದು ಅವರಿಗೆ ಸಮರ್ಪಿಸಬೇಕು.

13 ಆದರೆ ಕತ್ತೆಯ ಚೊಚ್ಚಲು ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೇಮರಿಯನ್ನು ಬಿಡಿಸಿಕೊಳ್ಳಬಹುದು; ಹಾಗೆ ಬಿಡಿಸಲಾಗದೆ ಹೋದರೆ ಅದರ ಕುತ್ತಿಗೆ ಮುರಿದು ಕೊಲ್ಲಬೇಕು. ಮನುಷ್ಯರ ಚೊಚ್ಚಲ ಗಂಡನ್ನಾದರೋ ಬದಲುಕೊಟ್ಟು ಬಿಡಿಸಿಕೊಳ್ಳಲೇಬೇಕು.

14 ಇನ್ನು ಮುಂದೆ ನಿಮ್ಮ ಮಕ್ಕಳು, ಇದರ ಅರ್ಥವೇನೆಂದು ವಿಚಾರಿಸುವಾಗ ನೀವು ಅವರಿಗೆ, ‘ನಾವು ಗುಲಾಮತನದಲ್ಲಿದ್ದಾಗ ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ಈಜಿಪ್ಟಿನಿಂದ ನಮ್ಮನ್ನು ಬಿಡುಗಡೆ ಮಾಡಿದರು.

15 ಫರೋಹನು ಹಟಹಿಡಿದು ನಮ್ಮನ್ನು ಹೋಗಗೊಡಿಸದೆ ಇದ್ದಾಗ ಸರ್ವೇಶ್ವರ ಈಜಿಪ್ಟಿನಲ್ಲಿದ್ದ ಚೊಚ್ಚಲು ಮಕ್ಕಳನ್ನು ಹಾಗು ಪಶುಪ್ರಾಣಿಗಳ ಚೊಚ್ಚಲು ಮರಿಗಳನ್ನೂ ಅಂತೂ ಈ ದೇಶದಲ್ಲಿ ಚೊಚ್ಚಲಾಗಿದ್ದುದೆಲ್ಲವನ್ನು ಸಂಹಾರ ಮಾಡಿದರು. ಆದಕಾರಣ ಗಂಡಾದ ಪ್ರಥಮ ಗರ್ಭಫಲವನ್ನೆಲ್ಲಾ ನಾವು ಸರ್ವೇಶ್ವರನಿಗೆ ಸಮರ್ಪಿಸುತ್ತೇವೆ. ಮನುಷ್ಯರಿಗೆ ಹುಟ್ಟಿದ ಪ್ರಥಮ ಗರ್ಭಫಲವನ್ನಾದರೋ ಬದಲು ಕೊಟ್ಟು ಬಿಡಿಸಿಕೊಳ್ಳುತ್ತೇವೆ,” ಎಂದು ಹೇಳಬೇಕು.

16 ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದರು. ಈ ಸಂದೇಶವನ್ನು ನೀವು ನೆನಪಿನಲ್ಲಿಡಬೇಕು. ಇದಕ್ಕೆ ಈ ಪದ್ಧತಿಯು ನಿಮ್ಮ ಕೈಗೆ ಕಟ್ಟಿದ ಕಂಕಣದಂತಿರುತ್ತದೆ, ಹಣೆಗೆ ಕಟ್ಟಿದ ಜ್ಞಾಪಕಪಟ್ಟಿಯಂತಿರುತ್ತದೆ.


ಮೇಘಸ್ತಂಭ - ಅಗ್ನಿಸ್ತಂಭ

17 ಫರೋಹನು ಇಸ್ರಯೇಲರಿಗೆ ಹೋಗಲು ಅಪ್ಪಣೆಕೊಟ್ಟಾಗ ದೇವರು ಅವರನ್ನು ಹತ್ತಿರವಾಗಿದ್ದ ಫಿಲಿಷ್ಟಿಯರ ಪ್ರಾಂತ್ಯದ ಮಾರ್ಗವಾಗಿ ಕರೆದುತರಲಿಲ್ಲ. ಬದಲಿಗೆ ಕೆಂಪು ಸಮುದ್ರದ ಬಳಿಯಿರುವ ಮರುಳುಗಾಡಿನ ಬಳಸು ದಾರಿಯಲ್ಲೇ ನಡೆಸಿಕೊಂಡು ಬಂದರು. ಏಕೆಂದರೆ, “ಯುದ್ಧ ತೊಡಗಿದರೆ ಇವರು ಎದೆಗೆಟ್ಟು ಈಜಿಪ್ಟಿಗೆ ಹಿಂದಿರುಗಿಯಾರು” ಎಂದುಕೊಂಡರು ದೇವರು.

18 ಇಸ್ರಯೇಲರು ಯುದ್ಧಸನ್ನದ್ಧ ಆಗಿಯೇ ಈಜಿಪ್ಟಿನಿಂದ ಹೊರಟರು.

19 ಇದಲ್ಲದೆ ಜೋಸೆಫನು ಇಸ್ರಯೇಲರಿಗೆ, “ಖಂಡಿತವಾಗಿ ದೇವರು ನಿಮ್ಮ ನೆರವಿಗೆ ಬರುವರು; ತಮ್ಮ ವಾಗ್ದಾನವನ್ನು ಈಡೇರಿಸುವರು. ನೀವು ಹೋಗುವಾಗ ನನ್ನ ಶವವನ್ನು ನಿಮ್ಮ ಸಂಗಡ ತೆಗೆದುಕೊಂಡು ಹೋಗಬೇಕು” ಎಂದು ಹೇಳಿ ಅವರಿಂದ ದೃಢಪ್ರಮಾಣ ಮಾಡಿಸಿದ್ದನು. ಆದುದರಿಂದಲೆ ಮೋಶೆ ಅವನ ಶವವನ್ನು ತನ್ನ ಸಂಗಡ ತೆಗೆದುಕೊಂಡು ಹೋದನು.

20 ಇಸ್ರಯೇಲರು ಸುಕ್ಕೋತಿನಿಂದ ಪ್ರಯಾಣಮಾಡಿ ಮರುಳುಗಾಡಿನ ಅಂಚಿನಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.

21 ಸರ್ವೇಶ್ವರ ಸ್ವಾಮಿ ಅವರಿಗೆ ಹಗಲು ಹೊತ್ತಿನಲ್ಲಿ ದಾರಿತೋರಿಸಲು ಮೇಘಸ್ತಂಭ ರೂಪದಲ್ಲೂ ರಾತ್ರಿವೇಳೆಯಲ್ಲಿ ಬೆಳಕನ್ನೀಯಲು ಅಗ್ನಿಸ್ತಂಭ ರೂಪದಲ್ಲೂ ಅವರ ಮುಂದೆ ಸಾಗಿದರು. ಹೀಗೆ ಅವರು ಹಗಲಿರುಳು ಪ್ರಯಾಣ ಮಾಡಿದರು.

22 ಹಗಲಿನಲ್ಲಿ ಮೇಘಸ್ತಂಭ, ರಾತ್ರಿಯಲ್ಲಿ ಅಗ್ನಿಸ್ತಂಭ ತಪ್ಪದೆ ಕಾಣಿಸುತ್ತಿದ್ದವು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು