ವಿಮೋಚನಕಾಂಡ 10 - ಕನ್ನಡ ಸತ್ಯವೇದವು C.L. Bible (BSI)ಮಿಡತೆಗಳ ದಂಡು 1 ಬಳಿಕ ಸರ್ವೇಶ್ವರ ಸ್ವಾಮಿ ಮೋಶೆಗೆ: “ಫರೋಹನ ಬಳಿಗೆ ಮತ್ತೆ ಹೋಗು. ನಾನು ಅವನ ಮತ್ತು ಅವನ ಪರಿವಾರದವರ ಹೃದಯಗಳನ್ನು ಮೊಂಡಾಗಿಸಿದ್ದೇನೆ. ಏಕೆಂದರೆ ಈ ಸೂಚಕಕಾರ್ಯಗಳನ್ನು ಅವರ ಮುಂದೆ ನಡೆಸಲು ಆಸ್ಪದವಾಗಬೇಕು; 2 ಇಸ್ರಯೇಲರು ತಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ಈ ಸೂಚಕಕಾರ್ಯಗಳನ್ನು ತಿಳಿಸಬೇಕು; ಅಲ್ಲದೆ ಸರ್ವೇಶ್ವರ ಆದ ನಾನು ಈಜಿಪ್ಟಿನವರನ್ನು ಇಷ್ಟಬಂದ ಹಾಗೆ ಆಡಿಸಿ ದಂಡಿಸಿದೆನೆಂದು ತಿಳಿಸಬೇಕು. ಹೀಗೆ ನಾನೇ ಸರ್ವೇಶ್ವರನೆಂದು ಈ ಸೂಚಕಕಾರ್ಯಗಳಿಂದ ನೀವು ತಿಳಿದುಕೊಳ್ಳುವಿರಿ,” ಎಂದರು. 3 ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋಗಿ ಅವನಿಗೆ, "ಹಿಬ್ರಿಯರ ದೇವರಾಗಿರುವ ಸರ್ವೇಶ್ವರನ ಮಾತುಗಳಿವು: ‘ಎಲ್ಲಿಯವರೆಗೆ ನೀನು ನನಗೆ ತಲೆ ತಗ್ಗಿಸದಿರುವೆ? ನನ್ನನ್ನು ಆರಾಧಿಸ ಹೋಗಲು ನನ್ನ ಜನರಿಗೆ ಅಪ್ಪಣೆ ಕೊಡು. 4 ಕೊಡದೆ ಹೋದರೆ ನಾಳೆ ನಿನ್ನ ರಾಜ್ಯದೊಳಗೆ ಮಿಡತೆಗಳನ್ನು ಬರಮಾಡುವೆನು. 5 ನೆಲ ಕರ್ರಗೆ ಕಾಣಿಸುವಷ್ಟು ಅವು ಭೂಮಿಯನ್ನೆಲ್ಲಾ ಆವರಿಸಿಕೊಳ್ಳುವುವು; ಆನೆಕಲ್ಲಿನ ಮಳೆಯಿಂದ ನಾಶ ಆಗದೆ ಉಳಿದದ್ದೆಲ್ಲವನ್ನು ಮಿಡತೆಗಳು ತಿಂದುಬಿಡುವವು. ಹೊಲದಲ್ಲಿರುವ ನಿಮ್ಮ ಎಲ್ಲ ಮರಗಳ ಎಲೆಚಿಗುರುಗಳನ್ನು ತಿಂದುಬಿಡುವುವು. 6 ನಿನ್ನ ಮನೆಗಳಲ್ಲೂ ನಿನ್ನ ಪರಿವಾರದವರ ಮನೆಗಳಲ್ಲೂ ಈಜಿಪ್ಟಿನವರ ಮನೆಗಳಲ್ಲೂ ಅವು ತುಂಬಿಕೊಳ್ಳುವುವು. ನಿಮ್ಮ ತಂದೆ ತಾತಂದಿರ ಕಾಲದಿಂದ ಇಂದಿನವರೆಗೂ ಅಂಥ ಮಿಡಿತೆದಂಡನ್ನು ಯಾರೂ ನೋಡಿಲ್ಲ.” ಹೀಗೆಂದು ಹೇಳಿ ಮೋಶೆ ಫರೋಹನ ಬಳಿಯಿಂದ ಹೊರಟುಹೋದನು. 7 ಆಗ ಪರಿವಾರದವರು ಫರೋಹನಿಗೆ, “ಈ ಮನುಷ್ಯ ಇನ್ನೆಷ್ಟುಕಾಲ ನಮಗೆ ಉರುಳಾಗಿರುವನೋ! ಆ ಜನರು ಹೋಗಿ ತಮ್ಮ ದೇವರಾದ ಸರ್ವೇಶ್ವರನನ್ನು ಆರಾಧಿಸಲು ಅಪ್ಪಣೆಕೊಟ್ಟುಬಿಡಿ. ಈಜಿಪ್ಟ್ ದೇಶವೇ ಹಾಳಾಗುತ್ತಿದೆಯೆಂದು ತಮ್ಮ ಮನಸ್ಸಿಗೆ ತೋಚಿರಬೇಕಲ್ಲವೆ?” ಎಂದು ಹೇಳಿದರು. 8 ಇದನ್ನು ಕೇಳಿದ ಫರೋಹನು ಮೋಶೆ ಮತ್ತು ಆರೋನರನ್ನು ಪುನಃ ಕರೆಸಿ, “ನೀವು ಹೋಗಿ ನಿಮ್ಮ ದೇವರಾದ ಸರ್ವೇಶ್ವರನನ್ನು ಆರಾಧಿಸಬಹುದು. ಆದರೆ ಯಾರ್ಯಾರು ಹೋಗಬೇಕೆನ್ನುತ್ತೀರಿ?” ಎಂದು ಕೇಳಿದನು. 9 ಅದಕ್ಕೆ ಮೋಶೆ, “ನಾವು ಸರ್ವೇಶ್ವರ ಸ್ವಾಮಿಗಾಗಿ ಹಬ್ಬವನ್ನು ಆಚರಿಸಬೇಕಾಗಿದೆ. ಆದಕಾರಣ ಚಿಕ್ಕವರು, ಮುದುಕರು ಎಲ್ಲರು ಹೋಗುತ್ತೇವೆ; ಗಂಡುಹೆಣ್ಣು ಮಕ್ಕಳನ್ನೂ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ,” ಎಂದು ಉತ್ತರಕೊಟ್ಟನು. 10 ಆಗ ಫರೋಹನು, “ನೀವು ನಿಮ್ಮ ಮನೆಯವರೆಲ್ಲರನ್ನು ಕರೆದುಕೊಂಡು ಹೋಗುವುದಕ್ಕೆ ನಾನೆಂದಿಗೂ ಅಪ್ಪಣೆಕೊಡುವುದಿಲ್ಲ. ಕೊಟ್ಟೆನಾದರೆ ಸರ್ವೇಶ್ವರನ ದಯೆಯೊಂದೇ ನಿಮ್ಮನ್ನು ಕಾಪಾಡಬೇಕಾಗುವುದು. ನೋಡಿ, ನೀವು ದುರಾಲೋಚನೆಯಿಂದ ಕೂಡಿದವರು ಎಂಬುದು ಸರಿಯಷ್ಟೆ! 11 ನಿಮ್ಮಲ್ಲಿ ಗಂಡಸರು ಮಾತ್ರ ಹೋಗಿ ಸರ್ವೇಶ್ವರನನ್ನು ಆರಾಧಿಸಬಹುದು. ನೀವು ಕೇಳಿಕೊಂಡದ್ದು ಅಷ್ಟೇ ಅಲ್ಲವೆ?” ಎಂದು ಹೇಳಿ ಅವರನ್ನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು. 12 ಸರ್ವೇಶ್ವರ ಮೋಶೆಗೆ, “ಈಜಿಪ್ಟ್ ದೇಶದ ಮೇಲೆ ಕೈಚಾಚಿ ಮಿಡಿತೆಗಳನ್ನು ಬರಮಾಡು. ಆನೆಕಲ್ಲಿನ ಮಳೆಯಿಂದ ನಾಶ ಆಗದೆ ಉಳಿದಿರುವ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡಲಿ,” ಎಂದು ಹೇಳಿದರು. 13 ಅಂತೆಯೇ ಮೋಶೆ ತನ್ನ ಕೋಲನ್ನು ಈಜಿಪ್ಟ್ ದೇಶದ ಮೇಲೆ ಚಾಚಿದನು. ಸರ್ವೇಶ್ವರ ಹಗಲಿರುಳು ಪೂರ್ವದಿಕ್ಕಿನಿಂದ ಗಾಳಿ ಬೀಸುವಂತೆ ಮಾಡಿದರು. ಆ ಗಾಳಿಯಿಂದಾಗಿ ಮುಂಜಾನೆಯಲ್ಲೇ ಮಿಡತೆಗಳು ಬಂದಿದ್ದವು. 14 ಅಪರಿಮಿತ ಸಂಖ್ಯೆಯಲ್ಲಿ ಅವು ಇಡೀ ಈಜಿಪ್ಟ್ ದೇಶದಲ್ಲಿ ಬಂದಿಳಿದು ಅದರ ಎಲ್ಲಾ ಕಡೆಗಳಲ್ಲಿ ಹರಡಿಕೊಂಡವು. ಅಂಥ ಮಿಡಿತೆಯ ದಂಡು ಹಿಂದೆಂದೂ ಬಂದಿರಲಿಲ್ಲ, ಮುಂದೆಯೂ ಬರುವಂತಿಲ್ಲ. 15 ನೆಲವೆಲ್ಲ ಕರ್ರಗೆ ಕಾಣಿಸುವಷ್ಟು ಅವು ಭೂಮಿಯನ್ನೆಲ್ಲಾ ಆವರಿಸಿಕೊಂಡವು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದ ಪಚ್ಚೆ ಪೈರುಗಳನ್ನೂ ಗಿಡಮರ ಕಾಯಿಗಳನ್ನೂ ತಿಂದುಬಿಟ್ಟವು. ಈಜಿಪ್ಟ್ ದೇಶದಲ್ಲೆಲ್ಲಾ ಹಸುರಾದ ಗಿಡಮರಗಳೊಂದೂ ಉಳಿಯಲಿಲ್ಲ. 16 ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕೂಡಲೆ ಕರೆಯಿಸಿ, “ನಾನು ನಿಮ್ಮ ದೇವರಾದ ಸರ್ವೇಶ್ವರನಿಗೂ ನಿಮಗೂ ದ್ರೋಹಮಾಡಿದ್ದೇನೆ. 17 ಈ ಒಂದು ಸಾರಿ ನನ್ನನ್ನು ಕ್ಷಮಿಸಬೇಕು. ನಿಮ್ಮ ದೇವರಾದ ಸರ್ವೇಶ್ವರ ಈ ಮಾರಕ ವಿಪತ್ತನ್ನು ನನ್ನಿಂದ ತೊಲಗಿಸುವಂತೆ ಆತನನ್ನು ಪ್ರಾರ್ಥಿಸಬೇಕು,” ಎಂದು ವಿನಂತಿಸಿದನು. 18 ಮೋಶೆ ಫರೋಹನ ಬಳಿಯಿಂದ ಹೊರಟುಹೋಗಿ ಸರ್ವೇಶ್ವರ ಸ್ವಾಮಿಯನ್ನು ಬೇಡಿಕೊಂಡನು. 19 ಸರ್ವೇಶ್ವರ ಪಶ್ಚಿಮದಿಂದ ಬಿರುಗಾಳಿ ಬೀಸುವಂತೆ ಮಾಡಿದರು. ಅದು ಆ ಮಿಡಿತೆಗಳನ್ನು ಬಡಿದುಕೊಂಡು ಹೋಗಿ ಕೆಂಪು ಸಮುದ್ರದೊಳಗೆ ಹಾಕಿಬಿಟ್ಟಿತು. ಈಜಿಪ್ಟ್ ದೇಶದ ಮೇರೆಗಳೊಳಗೆ ಒಂದು ಮಿಡಿತೆಯನ್ನೂ ನಿಲ್ಲಲು ಬಿಡಲಿಲ್ಲ. 20 ಆದರೂ ಫರೋಹನ ಹೃದಯವನ್ನು ಸರ್ವೇಶ್ವರ ಕಠಿಣವಾಗಿಸಿದರು. ಅವನು ಇಸ್ರಯೇಲರನ್ನು ಹೋಗಲು ಬಿಡಲಿಲ್ಲ. ಕಾರ್ಗತ್ತಲೆಯಲ್ಲಿ ತಡಕಾಟ 21 ಆ ಬಳಿಕ ಸರ್ವೇಶ್ವರ ಮೋಶೆಗೆ, “ಆಕಾಶದತ್ತ ನಿನ್ನ ಕೈಚಾಚು. ಆಗ ಈಜಿಪ್ಟ್ ದೇಶದಲ್ಲೆಲ್ಲಾ ಕತ್ತಲೆಯುಂಟಾಗುವುದು. ಜನರು ತಡವರಿಸಿ ನಡೆಯಬೇಕಾಗುವಷ್ಟು ಕತ್ತಲೆ ಉಂಟಾಗುವುದು. 22 ಮೋಶೆ ಆಕಾಶದತ್ತ ಕೈಚಾಚಿದಾಗ ಈಜಿಪ್ಟ್ ದೇಶದಲ್ಲೆಲ್ಲಾ ಮೂರು ದಿವಸ ಕಾರ್ಗತ್ತಲು ಮುಚ್ಚಿಕೊಂಡಿತು. 23 ಆ ಮೂರು ದಿವಸ ಒಬ್ಬರನ್ನೊಬ್ಬರು ನೋಡಲಾಗಲಿಲ್ಲ; ತಾವಿದ್ದ ಸ್ಥಳದಿಂದ ಏಳಲಿಲ್ಲ. ಆದರೆ ಇಸ್ರಯೇಲರೆಲ್ಲರು ವಾಸವಾಗಿದ್ದ ಸ್ಥಳಗಳಲ್ಲಿ ಬೆಳಕಿತ್ತು. 24 ಫರೋಹನು ಮೋಶೆಯನ್ನು ಕರೆಯಿಸಿ, “ನೀವು ಹೋಗಿ ಸರ್ವೇಶ್ವರನಿಗೆ ಆರಾಧನೆ ಮಾಡಿಬರಬಹುದು; ನಿಮ್ಮ ಮಡದಿ ಮಕ್ಕಳೂ ಹೋಗಿಬರಬಹುದು; ನಿಮ್ಮ ದನಕುರಿಗಳನ್ನು ಮಾತ್ರ ಇಲ್ಲೇ ಬಿಟ್ಟು ಹೋಗಬೇಕು,” ಎಂದನು. 25 ಅದಕ್ಕೆ ಮೋಶೆ, “ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಗೆ ನಾವು ಸಮರ್ಪಿಸಬೇಕಾದ ಬಲಿಗಳಿಗೂ ದಹನಬಲಿಗಳಿಗೂ ಬೇಕಾದ ಪ್ರಾಣಿಗಳನ್ನು ತೆಗೆದುಕೊಂಡು ಹೋಗುವುದನ್ನು ನಮಗೆ ಬಿಡಿ. 26 ಅದು ಮಾತ್ರವಲ್ಲ, ನಮ್ಮ ಎಲ್ಲ ಪಶುಪ್ರಾಣಿಗಳನ್ನೂತೆಗೆದುಕೊಂಡು ಹೋಗಲು ಅಪ್ಪಣೆ ಕೊಡಿ. ಒಂದು ಗೊರಸನ್ನೂ ನಾವು ಬಿಟ್ಟುಹೋಗಲು ಆಗದು. ಈ ಪಶುಪ್ರಾಣಿಗಳಿಂದಲೇ ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಗೆ ಬಲಿಯೊಪ್ಪಿಸಬೇಕಾಗಿದೆ ಅಲ್ಲವೆ? ಯಾವ ಯಾವ ಪ್ರಾಣಿಗಳನ್ನು ಅರ್ಪಿಸಬೇಕೋ ಅದು ನಾವು ಅಲ್ಲಿಗೆ ಸೇರುವುದಕ್ಕೆ ಮುಂಚೆ ನಮಗೆ ತಿಳಿಯದು,” ಎಂದನು. 27 ಸರ್ವೇಶ್ವರ ಫರೋಹನ ಹೃದಯವನ್ನು ಕಠಿಣಪಡಿಸಿದ್ದರಿಂದ ಅವನು ಅವರಿಗೆ ಅಪ್ಪಣೆಕೊಡಲು ಒಪ್ಪಲಿಲ್ಲ. 28 ಅವನು ಮೋಶೆಗೆ, “ಇಲ್ಲಿಂದ ಹೊರಡು; ಇನ್ನು ಮುಂದೆ ನನ್ನ ಸಮ್ಮುಖಕ್ಕೆ ಬರಲೇ ಬೇಡ, ಎಚ್ಚರಿಕೆ! ತಿರುಗಿ ಬಂದೆಯಾದರೆ ಮರಣದಂಡನೆ ಆಗುವುದು,” ಎಂದು ಹೇಳಿದನು. 29 ಅದಕ್ಕೆ ಮೋಶೆ, “ಅಪ್ಪಣೆ, ಇನ್ನು ಸಮ್ಮುಖಕ್ಕೆ ಬರುವುದೇ ಇಲ್ಲ,” ಎಂದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India