ಮುನ್ನುಡಿ
“ರೋಮನರಿಗೆ ಬರೆದ ಪತ್ರ"ವನ್ನು ಪೌಲನು ತಾನು ರೋಮಿನಲ್ಲಿರುವ ಧರ್ಮಸಭೆಯನ್ನು ಸಂದರ್ಶಿಸುವ ಮುನ್ನ ಅಲ್ಲಿಯ ಭಕ್ತಾದಿಗಳನ್ನು ಸಿದ್ಧಗೊಳಿಸುವ ಉದ್ದೇಶದಿಂದ ಬರೆದನು. ರೋಮಿನಲ್ಲಿ ಕೆಲಕಾಲ ಇದ್ದು ಅಲ್ಲಿ ಶುಭಸಂದೇಶವನ್ನು ಸಾರಿದ ಬಳಿಕ, ಅಲ್ಲಿನ ಕ್ರೈಸ್ತಜನರ ನೆರವಿನಿಂದ ಸ್ಪೆಯಿನ್ ನಾಡಿಗೆ ಹೋಗುವ ಯೋಜನೆಯನ್ನು ಪೌಲನು ಹಾಕಿಕೊಂಡಿದ್ದನು. ಕ್ರೈಸ್ತಧರ್ಮದ ತತ್ವಗಳನ್ನು ಧ್ಯಾನಿಸಿ ಚೆನ್ನಾಗಿ ಗ್ರಹಿಸಿಕೊಂಡಿದ್ದ ಪೌಲನು, ಆ ಧರ್ಮವು ನಮ್ಮ ದಿನನಿತ್ಯ ಜೀವನದಲ್ಲಿ ಬೀರಬೇಕಾದ ಪರಿಣಾಮಗಳನ್ನು ವಿವರಿಸುತ್ತಾನೆ. ಪೌಲನ ಕ್ರೈಸ್ತಾಭಿಪ್ರಾಯಗಳು ಲಿಖಿತವಾಗಿರುವುದು ಈ ಪತ್ರದಲ್ಲೇ.
ಪ್ರಾರಂಭದಲ್ಲಿ ಪೌಲನು ರೋಮಿನ ಕ್ರೈಸ್ತಸಭೆಯ ದೇವಜನರಿಗೆ ಶುಭಾಶಯಗಳನ್ನು ಕೋರಿ, ಅವರಿಗಾಗಿ ತಾನು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸುತ್ತಾನೆ. ಅನಂತರ ತನ್ನ ಪತ್ರದ ಮುಖ್ಯ ವಿಷಯವನ್ನು ಕುರಿತು ಹೀಗೆ ಪ್ರಸ್ತಾಪಿಸುತ್ತಾನೆ: “ದೇವರು ಜನರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಹೇಗೆ ಇರಿಸಿಕೊಳ್ಳುತ್ತಾರೆ ಎಂಬುದು ಶುಭಸಂದೇಶದಿಂದ ವ್ಯಕ್ತವಾಗುತ್ತದೆ. ಪ್ರಾರಂಭದಿಂದ ಕೊನೆಯವರೆಗೂ ವಿಶ್ವಾಸವೇ ಈ ಸತ್ಸಂಬಂಧಕ್ಕೆ ಆಧಾರ” (1:17).
ಯೆಹೂದ್ಯರು-ಯೆಹೂದ್ಯರಲ್ಲದವರು ಎಂಬ ತಾರತಮ್ಯ ಇಲ್ಲದೆ ಇಡೀ ಮಾನವಕೋಟಿಯೇ ಪಾಪಕ್ಕೆ ಅಧೀನವಾಗಿದೆ. ಆದ್ದರಿಂದ ಸರ್ವರೂ ದೇವರೊಂದಿಗೆ ಸತ್ಸಂಬಂಧ ಹೊಂದಬೇಕಾದುದು ಅತ್ಯಗತ್ಯ. ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಡುವುದರಿಂದ ಈ ಸತ್ಸಂಬಂಧ ದೊರಕುತ್ತದೆ. ಈ ಸತ್ಸಂಬಂಧದ ಪರಿಣಾಮವಾಗಿ ಮಾನವನು ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಹೊಸ ಜೀವವನ್ನು ಪಡೆಯುತ್ತಾನೆ. ಪವಿತ್ರಾತ್ಮ ಅವರ ಸಹಾಯದಿಂದ ಅವನು ಪಾಪ ಹಾಗೂ ಮರಣದ ಸಂಕೋಲೆಗಳಿಂದ ಬಿಡುಗಡೆಯಾಗುತ್ತಾನೆ; ದೇವರೊಂದಿಗೆ ಶಾಂತಿಸಮಾಧಾನದಿಂದಿರುತ್ತಾನೆ. ಪತ್ರದ ಮೊದಲಿನ ನಾಲ್ಕು ಅಧ್ಯಾಯಗಳಲ್ಲಿ ಇದೆಲ್ಲವನ್ನು ಸ್ವಾರಸ್ಯವಾಗಿ ಬಣ್ಣಿಸಲಾಗಿದೆ.
ದೇವರು ಯೆಹೂದ್ಯರಿಗೆ ನೀಡಿದ ಧರ್ಮಶಾಸ್ತ್ರದ ಉದ್ದೇಶವೇನು? ಕ್ರೈಸ್ತವಿಶ್ವಾಸಿಯ ಜೀವನದಲ್ಲಿ ದೇವರ ಪಾತ್ರವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಾದರೆ 5ರಿಂದ 8ನೇ ಅಧ್ಯಾಯದವರೆಗೆ ಓದಬೇಕು. ಮಾನವಕುಲದ ಬಗ್ಗೆ ದೇವರು ಮಾಡಿದ ಯೋಜನೆಯಲ್ಲಿ ಯೆಹೂದ್ಯರೂ ಯೆಹೂದ್ಯೇತರರೂ ಯಾವ ರೀತಿಯಲ್ಲಿ ಹೊಂದಿಕೆಯಾಗುತ್ತಾರೆ ಎಂಬ ಸಮಸ್ಯೆಯನ್ನು ಪೌಲನು ಬಗೆಹರಿಸುತ್ತಾನೆ. ಯೆಹೂದ್ಯರು ಲೋಕೋದ್ಧಾರಕನಾದ ಯೇಸುಕ್ರಿಸ್ತರನ್ನು ನಿರಾಕರಿಸಿದರು. ಇದು ಆಕಸ್ಮಿಕವೇನೂ ಅಲ್ಲ. ಬೇರೆಲ್ಲಾ ಮಾನವರು ದೇವಾನುಗ್ರಹದ ಸುಧೆಯನ್ನು ಸ್ವಾಮಿಯೇಸುವಿನಲ್ಲಿ ಸವಿಯಬೇಕೆಂಬುದು ದೇವರ ಸಂಕಲ್ಪವಾಗಿತ್ತು. ಎಂದಾದರೂ ಯೆಹೂದ್ಯರು ಕೂಡ ಉದ್ಧಾರಕ ಯೇಸುವಿನ ಬಳಿಗೆ ಮರಳಿಬರುವರು ಎಂಬುದು ಪೌಲನ ದೃಢವಾದ ನಂಬಿಕೆ.
ಕ್ರೈಸ್ತವಿಶ್ವಾಸಿ ಹೇಗೆ ಬಾಳಬೇಕು? ಮುಖ್ಯವಾಗಿ ಇತರರೊಂದಿಗೆ ಎಷ್ಟು ಸ್ನೇಹ ಸೌಹಾರ್ದದಿಂದಿರಬೇಕು? ದೇವರ ಸೇವೆ, ಸರ್ಕಾರದ ಸೇವೆ, ಪರಸ್ಪರ ಸೇವೆ, ಶುದ್ಧ ಮನಸ್ಸಾಕ್ಷಿ ಇವೇ ಮುಂತಾದ ವಿಚಾರಗಳನ್ನು ಪೌಲನು ತನ್ನದೇ ಆದ ಶೈಲಿಯಲ್ಲಿ, ಓದುಗರಿಗೆ ಮನವರಿಕೆಯಾಗುವ ರೀತಿಯಲ್ಲಿ ವರ್ಣಿಸುತ್ತಾನೆ.
ಕೊನೆಯದಾಗಿ, ವೈಯಕ್ತಿಕ ಶುಭಾಶಯ ಹಾಗೂ ದೈವಸ್ತುತಿಯೊಂದಿಗೆ ಈ ಪತ್ರ ಮುಕ್ತಾಯಗೊಳ್ಳುತ್ತದೆ.
ಪರಿವಿಡಿ
ಪೀಠಿಕೆ 1:1-17
ಮಾನವರಿಗೆ ಜೀವೋದ್ಧಾರದ ಅವಶ್ಯಕತೆ 1:18—3:20
ಲೋಕೋದ್ಧಾರದ ರೀತಿನೀತಿ 3:21—4:25
ಕ್ರಿಸ್ತಯೇಸುವಿನಲ್ಲಿ ಹೊಸ ಬಾಳ್ವೆ 5:1—8:39
ದೈವಯೋಜನೆಯಲ್ಲಿ ಯೆಹೂದ್ಯರ ಪಾತ್ರ 9:1—11:36
ಕ್ರೈಸ್ತಜನರ ಸನ್ನಡತೆ 12:1—15:13
ವೈಯಕ್ತಿಕ ಶುಭಾಶಯಗಳು 15:14—16:27