ರೋಮಾಪುರದವರಿಗೆ 7 - ಕನ್ನಡ ಸತ್ಯವೇದವು C.L. Bible (BSI)ವಿವಾಹ ಬಂಧನದಂಥ ಕ್ರಿಸ್ತಬಂಧನ 1 ಸಹೋದರರೇ, ಒಬ್ಬ ಮನುಷ್ಯನು ಜೀವದಿಂದಿರುವವರೆಗೆ ಮಾತ್ರ ಧರ್ಮಶಾಸ್ತ್ರದ ನೇಮನಿಯಮಗಳಿಗೆ ಒಳಪಟ್ಟಿರುತ್ತಾನೆ. ಧರ್ಮಶಾಸ್ತ್ರವನ್ನು ಅರಿತಿರುವ ನೀವು ಇದನ್ನು ಗ್ರಹಿಸಿಕೊಳ್ಳಬಲ್ಲಿರಿ. 2 ಉದಾಹರಣೆಗೆ, ಪತಿಯು ಬದುಕಿರುವವರೆಗೆ ಸತಿ ಅವನಿಗೆ ಶಾಸನಾನುಸಾರವಾಗಿ ಬದ್ಧಳು. ಒಂದು ವೇಳೆ, ಆಕೆಯ ಪತಿ ಸತ್ತುಹೋದರೆ, ಆಕೆ ವಿವಾಹಬಂಧನದಿಂದ ಬಿಡುಗಡೆ ಹೊಂದುತ್ತಾಳೆ. 3 ಪತಿ ಬದುಕಿರುವಾಗಲೇ ಸತಿಯು ಇನ್ನೊಬ್ಬನೊಡನೆ ಸಂಬಂಧ ಬೆಳೆಸಿದರೆ ಆಕೆ ವ್ಯಭಿಚಾರಿಣಿ ಎನಿಸಿಕೊಳ್ಳುತ್ತಾಳೆ. ಪತಿಯು ಸತ್ತುಹೋದರೆ ಆಕೆ ವಿವಾಹಬಂಧನದಿಂದ ಮುಕ್ತಳು. ಅಂಥವಳು ಇನ್ನೊಬ್ಬನನ್ನು ಮದುವೆ ಆದರೂ ವ್ಯಭಿಚಾರಿಣಿ ಎನಿಸಿಕೊಳ್ಳುವುದಿಲ್ಲ. 4 ಅಂತೆಯೇ, ಪ್ರಿಯ ಸಹೋದರರೇ, ನೀವು ಕ್ರಿಸ್ತಯೇಸುವಿನ ದೇಹದೊಂದಿಗೆ ಒಂದಾಗಿರುವುದರಿಂದ ಧರ್ಮಶಾಸ್ತ್ರದ ಪಾಲಿಗೆ ಸತ್ತವರಾದಿರಿ. ಇದರ ಪರಿಣಾಮವಾಗಿ, ಮರಣದಿಂದ ಪುನರುತ್ಥಾನ ಹೊಂದಿದ ಕ್ರಿಸ್ತಯೇಸುವಿನೊಂದಿಗೆ ಬಂಧಿತರಾಗಿದ್ದೀರಿ. ಹೀಗೆ, ದೇವರಿಗೆ ನಾವು ಸತ್ಫಲವನ್ನು ಈಯುವವರಾಗಿದ್ದೇವೆ. 5 ನಾವು ಶರೀರ ಸ್ವಭಾವಕ್ಕನುಸಾರವಾಗಿ ಬಾಳುತ್ತಿದ್ದಾಗ ಪಾಪಕರವಾದ ದುರಿಚ್ಛೆಗಳು ಧರ್ಮಶಾಸ್ತ್ರದಿಂದಲೇ ಪ್ರಚೋದಿತವಾಗಿ ನಮ್ಮ ಇಂದ್ರಿಯಗಳಲ್ಲಿ ಕಾರ್ಯನಿರತವಾಗಿದ್ದವು. ಪರಿಣಾಮವಾಗಿ, ನಾವು ಮೃತ್ಯುವಿಗೆ ಫಲವನ್ನು ಈಯುತ್ತಿದ್ದೆವು. 6 ಈಗಲಾದರೋ ನಮ್ಮನ್ನು ಬಂಧನದಲ್ಲಿಟ್ಟಿದ್ದ ಆ ಧರ್ಮಶಾಸ್ತ್ರದ ಪಾಲಿಗೆ ನಾವು ಸತ್ತು, ಬಿಡುಗಡೆ ಹೊಂದಿದ್ದೇವೆ. ಆದ್ದರಿಂದ ಲಿಖಿತವಾದ ಹಳೆಯ ಶಾಸ್ತ್ರಕ್ಕೆ ಬದ್ಧರಾಗದೆ ಪವಿತ್ರಾತ್ಮಪ್ರೇರಿತವಾದ ನವೀನ ಮಾರ್ಗದಲ್ಲಿ ನಡೆಯುತ್ತಾ ಇದ್ದೇವೆ. ಧರ್ಮಶಾಸ್ತ್ರದಿಂದ ಪಾಪದ ಪ್ರಜ್ಞೆ 7 ಹಾಗಾದರೆ ಧರ್ಮಶಾಸ್ತ್ರವೇ ಪಾಪ ಎಂದು ಹೇಳೋಣವೆ? ಖಂಡಿತವಾಗಿ ಇಲ್ಲ. ಧರ್ಮಶಾಸ್ತ್ರ ಇಲ್ಲದಿದ್ದರೆ ಪಾಪದ ಅರಿವು ನನಗಾಗುತ್ತಿರಲಿಲ್ಲ. ‘ದುರಾಶೆಪಡಬೇಡ’ ಎಂದು ಧರ್ಮಶಾಸ್ತ್ರ ವಿಧಿಸದೆಹೋಗಿದ್ದರೆ ದುರಾಶೆ ಎಂದರೆ ಏನೆಂಬುದೇ ನನಗೆ ತಿಳಿಯುತ್ತಿರಲಿಲ್ಲ. 8 ಆದರೆ ಈ ಆಜ್ಞೆಯ ಮೂಲಕ ಪಾಪವು ಸಮಯ ಸಾಧಿಸಿ ನನ್ನಲ್ಲಿ ಎಲ್ಲಾ ವಿಧದ ದುರಾಶೆಗಳನ್ನು ಕೆರಳಿಸಿತು. ಧರ್ಮಶಾಸ್ತ್ರವಿಲ್ಲದೆ ಇದ್ದರೆ ಪಾಪವು ಸತ್ತಂತೆಯೇ ಸರಿ. 9 ಧರ್ಮಶಾಸ್ತ್ರದ ಅರಿವಿಲ್ಲದೆ ಒಮ್ಮೆ ನಾನು ಜೀವಿಸುತ್ತಿದ್ದೆನು; ಆಜ್ಞೆ ಎಂಬುದು ತಲೆದೋರಿದ ಕೂಡಲೇ ಪಾಪಕ್ಕೆ ಜೀವ ಬಂದಿತು. 10 ನಾನಾದರೋ ಸತ್ತೆನು. ಜೀವದಾಯಕವಾಗಬೇಕಿದ್ದ ಆಜ್ಞೆಯೇ ನನಗೆ ಮೃತ್ಯುಕಾರಕವಾಯಿತು. 11 ಆಜ್ಞೆಯ ಮೂಲಕವೇ ಪಾಪವು ಸಮಯ ಸಾಧಿಸಿ ನನ್ನನ್ನು ವಂಚಿಸಿತು; ಅದರಿಂದಲೇ ನನ್ನನ್ನು ಕೊಂದುಹಾಕಿತು. 12 ಧರ್ಮಶಾಸ್ತ್ರ ಪವಿತ್ರವಾದುದು. ಅಂತೆಯೇ, ಆಜ್ಞೆಯೂ ಪವಿತ್ರವಾದುದು. ನ್ಯಾಯವಾದುದು ಮತ್ತು ಹಿತಕರವಾದುದು. 13 ಹಾಗಾದರೆ ಹಿತಕರವಾದದ್ದೇ ನನಗೆ ಮೃತ್ಯುಕಾರಕವಾಯಿತೇ? ಇಲ್ಲವೇ ಇಲ್ಲ! ಹಾಗೆ ಮೃತ್ಯುಕಾರಕವಾದುದು ಪಾಪವೇ. ತನ್ನ ನಿಜಸ್ವರೂಪವನ್ನು ತೋರಿಸುವುದಕ್ಕಾಗಿ ಪಾಪವು ನನಗೆ ಹಿತಕರವಾದುದನ್ನು ಉಪಯೋಗಿಸಿಕೊಂಡು ನನಗೆ ಮರಣವನ್ನು ತಂದಿತು. ಹೀಗೆ ಪಾಪವು ಅದೆಷ್ಟು ಭೀಕರವಾದುದೆಂದು ಆಜ್ಞೆಯ ಮೂಲಕ ವ್ಯಕ್ತವಾಗುತ್ತದೆ. ಅಂತರಂಗದಲ್ಲಿ ಆಂದೋಲನ 14 ಧರ್ಮಶಾಸ್ತ್ರ ಪಾರಮಾರ್ಥಿಕವಾದುದೆಂದು ನಾವು ಬಲ್ಲೆವು. ನಾನಾದರೋ ನರಮಾನವನು; ಪಾಪಕ್ಕೆ ನನ್ನನ್ನೇ ಗುಲಾಮನನ್ನಾಗಿ ಮಾರಿಕೊಂಡವನು. 15 ನಾನು ಮಾಡುವುದು ನನಗೇ ಅರ್ಥವಾಗುತ್ತಿಲ್ಲ. ಏನನ್ನು ಮಾಡಲು ಅಪೇಕ್ಷಿಸುತ್ತೇನೋ ಅದನ್ನು ಮಾಡುತ್ತಿಲ್ಲ. ಏನನ್ನು ದ್ವೇಷಿಸುತ್ತೇನೋ ಅದನ್ನೇ ಮಾಡುತ್ತೇನೆ. 16 ನಾನು ಮಾಡುವುದನ್ನು ಮನಸ್ಸು ಒಪ್ಪದಿದ್ದರೆ, ಧರ್ಮಶಾಸ್ತ್ರ ಸರಿಯಾದುದೆಂದು ನಾನು ಒಪ್ಪಿಕೊಂಡ ಹಾಗಾಯಿತು. 17 ಹೀಗಿರಲಾಗಿ ನಾನು ಬಯಸದೆ ಇರುವುದನ್ನು ಮಾಡುವವನು ಇನ್ನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ. 18 ನನ್ನಲ್ಲಿ, ಅಂದರೆ ನನ್ನ ಶಾರೀರಿಕ ಸ್ವಭಾವದಲ್ಲಿ ಒಳ್ಳೆಯತನವೆಂಬುದೇನೂ ನೆಲೆಗೊಂಡಿಲ್ಲ. ಇದು ನನಗೆ ಗೊತ್ತು. ಏಕೆಂದರೆ, ಒಳಿತನ್ನು ಮಾಡಬೇಕೆಂಬ ಮನಸ್ಸು ನನಗಿದ್ದರೂ ಅದನ್ನು ಮಾಡಲು ನನ್ನಿಂದ ಆಗುತ್ತಿಲ್ಲ. 19 ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಬಯಸದ ಕೆಟ್ಟದ್ದನ್ನೇ ಮಾಡುವವನಾಗಿದ್ದೇನೆ. 20 ನಾನು ಬಯಸದೆ ಇರುವುದನ್ನೇ ಮಾಡಿದರೆ ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು. 21 ನಾನು ಒಳಿತನ್ನು ಮಾಡಬಯಸಿದರೂ ಕೇಡು ನನ್ನ ಕೈಬಿಡುತ್ತಿಲ್ಲ. ಇದೇ ಒಂದು ನಿಯಮವಾಗಿ ನನ್ನಲ್ಲಿ ಕಂಡುಬರುತ್ತದೆ. 22 ನನ್ನ ಅಂತರಂಗದಲ್ಲಿ ದೈವನಿಯಮವನ್ನು ಕುರಿತು ಆನಂದಿಸುತ್ತೇನೆ. 23 ನನ್ನ ಇಂದ್ರಿಯಗಳಲ್ಲಿಯಾದರೋ ಬೇರೊಂದು ನಿಯಮವನ್ನು ಕಾಣುತ್ತೇನೆ. ಇದು ನನ್ನ ಅಂತರಂಗ ನಿಯಮಕ್ಕೆ ತದ್ವಿರುದ್ಧವಾಗಿ ಕಾದಾಡುತ್ತದೆ; ನನ್ನ ಇಂದ್ರಿಯಗಳಲ್ಲಿ ನೆಲೆಗೊಂಡಿರುವ ಪಾಪನಿಯಮಕ್ಕೆ ನನ್ನನ್ನು ಕೈದಿಯನ್ನಾಗಿಸುತ್ತದೆ. 24 ಅಯ್ಯೋ, ನಾನೆಂಥ ನಿರ್ಭಾಗ್ಯನು! ಸಾವಿನ ದವಡೆಗೆ ಸಿಕ್ಕಿರುವ ಈ ಶರೀರದಿಂದ ನನ್ನನ್ನು ಬಿಡಿಸುವವರು ಯಾರು? 25 ದೇವರೇ; ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಕೃತಜ್ಞತೆ ಸಲ್ಲಲಿ! ನನ್ನಷ್ಟಕ್ಕೆ ನಾನೇ ದೇವರ ನಿಯಮವನ್ನು ಮನಃಪೂರ್ವಕವಾಗಿ ಪಾಲಿಸಲು ಬಯಸುತ್ತೇನೆ. ನನ್ನ ಈ ದೇಹದಲ್ಲಾದರೋ ಪಾಪದ ನಿಯಮಕ್ಕೆ ಬದ್ಧನಾಗಿದ್ದೇನೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India