Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 6 - ಕನ್ನಡ ಸತ್ಯವೇದವು C.L. Bible (BSI)


ಪಾಪದ ಪಾಲಿಗೆ ಮರಣ - ಯೇಸುಕ್ರಿಸ್ತರಿಗೆ ಶರಣ

1 ಹಾಗಾದರೆ ನಾವು ಏನು ಹೇಳೋಣ? ದೈವಾನುಗ್ರಹವು ಹೆಚ್ಚುವಂತೆ ನಾವು ಪಾಪದಲ್ಲೇ ನೆಲೆಗೊಂಡು ಇರೋಣವೇ?

2 ಖಂಡಿತವಾಗಿಯೂ ಕೂಡದು. ಪಾಪದ ಪಾಲಿಗೆ ಸತ್ತಿರುವ ನಾವು ಅದರಲ್ಲೇ ಜೀವಿಸುವುದು ಹೇಗೆ ತಾನೆ ಸಾಧ್ಯ?

3 ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ?

4 ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸಜೀವವನ್ನು ಹೊಂದಿ ಬಾಳುತ್ತೇವೆ.

5 ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ.

6 ನಮಗೆ ತಿಳಿದಿರುವಂತೆ, ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ.

7 ಹೀಗೆ ಸತ್ತವನು ಪಾಪಬಂಧದಿಂದ ಬಿಡುಗಡೆಹೊಂದಿದವನು.

8 ಕ್ರಿಸ್ತಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ.

9 ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ.

10 ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ.

11 ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.

12 ಆದ್ದರಿಂದ ದೈಹಿಕ ದುರಿಚ್ಛೆಗಳಿಗೆ ದಾಸರಾಗಿ ನೀವು ನಡೆಯದಂತೆ, ನಿಮ್ಮ ನಶ್ವರ ಶರೀರಗಳ ಮೇಲೆ ಪಾಪವು ತನ್ನ ದಬ್ಬಾಳಿಕೆಯನ್ನು ಇನ್ನೆಂದಿಗೂ ನಡೆಸದಿರಲಿ.

13 ನಿಮ್ಮ ದೇಹದ ಯಾವುದೇ ಅಂಗವು ದುಷ್ಕೃತ್ಯವನ್ನೆಸಗುವ ಸಾಧನವಾಗುವಂತೆ ಪಾಪದ ಕಾರ್ಯಕ್ಕೆ ಅದನ್ನು ಒಪ್ಪಿಸದಿರಿ. ಬದಲಾಗಿ ಸತ್ತು ಜೀವಕ್ಕೆ ಬಂದವರಂತೆ ದೇವರಿಗೆ ನಿಮ್ಮನ್ನೇ ಸಮರ್ಪಿಸಿಕೊಳ್ಳಿರಿ; ನಿಮ್ಮ ಅಂಗಗಳನ್ನು ಸತ್ಕಾರ್ಯ ಸಾಧನಗಳನ್ನಾಗಿ ದೇವರಿಗೆ ಒಪ್ಪಿಸಿಕೊಡಿರಿ.

14 ಏಕೆಂದರೆ ಪಾಪವು ಇನ್ನೆಂದಿಗೂ ನಿಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗದು; ನೀವಿನ್ನು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ದೈವಾನುಗ್ರಹಕ್ಕೆ ಮಾತ್ರ ಅಧೀನರು.


ಸತ್ಸಂಬಂಧಕ್ಕೆ ಶರಣರು

15 ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರಕ್ಕೆ ಅಧೀನರಾಗಿರದೆ ದೈವಾನುಗ್ರಹಕ್ಕೆ ಅಧೀನರಾಗಿರುವ ನಾವು ಪಾಪಮಾಡುತ್ತಲೆ ಜೀವಿಸೋಣವೆ? ಸರ್ವಥಾ ಇಲ್ಲ.

16 ಯಾರ ಕೈಕೆಳಗೆ ಗುಲಾಮರಾಗಿರಲು ನಿಮ್ಮನ್ನೇ ಒಪ್ಪಿಸಿಕೊಳ್ಳುತ್ತೀರೋ ಅವರಿಗೆ ನೀವು ಶರಣಾಗುತ್ತೀರಿ. ನೀವು ಪಾಪಕ್ಕೆ ಗುಲಾಮರಾದರೆ ಮರಣವೇ ನಿಮಗೆ ಗತಿ; ದೇವರಿಗೆ ಶರಣಾದರೆ ಸತ್ಸಂಬಂಧವೇ ಅದರ ಸತ್ಪರಿಣಾಮ.

17 ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ. ಏಕೆಂದರೆ, ಹಿಂದೊಮ್ಮೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಕಲಿಸಿದ ಬೋಧನೆಯನ್ನು ನೀವು ಮನಃಪೂರ್ವಕವಾಗಿ ಅಂಗೀಕರಿಸಿ ವಿಧೇಯರಾದಿರಿ;

18 ಪಾಪಬಂಧನದಿಂದ ಬಿಡುಗಡೆ ಹೊಂದಿ ದೇವಸಂಬಂಧಕ್ಕೆ ಒಳಗಾದಿರಿ.

19 ಇದನ್ನು ಅರ್ಥಮಾಡಿಕೊಳ್ಳಲು ನೀವು ಅಶಕ್ತರಾಗಿರುವುದರಿಂದ ನಾನು ಹೀಗೆ ಸಾಮಾನ್ಯ ರೀತಿಯಲ್ಲಿ ಮಾತನಾಡುತ್ತಿದ್ದೇನೆ. ಹಿಂದೊಮ್ಮೆ ನೀವು ನಿಮ್ಮ ಇಂದ್ರಿಯಗಳನ್ನು ಹೆಚ್ಚುಹೆಚ್ಚಾಗಿ ಅಶ್ಲೀಲತೆಗೂ ಅಕ್ರಮಕ್ಕೂ ಗುಲಾಮರನ್ನಾಗಿಸಿದಿರಿ; ಈಗಲಾದರೋ ಪರಿಶುದ್ಧತೆಗೂ ಸತ್ಸಂಬಂಧಕ್ಕೂ ನಿಮ್ಮ ಇಂದ್ರಿಯಗಳನ್ನು ಅಧೀನರಾಗಿಸಿರಿ.

20 ನೀವು ಪಾಪಕ್ಕೆ ಗುಲಾಮರಾಗಿದ್ದಾಗ ದೇವಸಂಬಂಧಕ್ಕೆ ಒಳಗಾಗಿರಲಿಲ್ಲ.

21 ಯಾವ ಕೃತ್ಯಗಳ ವಿಷಯದಲ್ಲಿ ಈಗ ನೀವು ನಾಚಿಕೆಪಡುತ್ತೀರೋ ಅವುಗಳನ್ನು ನೀವು ಹಿಂದೆ ಮಾಡುತ್ತಾ ಬಂದಿರಿ. ಅವುಗಳಿಂದ ನಿಮಗೆ ದೊರೆತ ಪ್ರತಿಫಲವಾದರೂ ಏನು? ಮೃತ್ಯುವೇ ಅವುಗಳ ಅಂತ್ಯಫಲ.

22 ಆದರೆ ನೀವು ಪಾಪದಿಂದ ಬಿಡುಗಡೆ ಹೊಂದಿರುವಿರಿ. ದೇವರಿಗೆ ದಾಸರಾಗಿರುವಿರಿ. ಇದರಿಂದ ನಿಮಗೆ ಸಿಕ್ಕಿರುವ ಪ್ರತಿಫಲ ಪರಿಶುದ್ಧಜೀವನ; ಅಂತಿಮವಾಗಿ ಅಮರ ಜೀವನ.

23 ಮರಣವೇ ಪಾಪದ ವೇತನ; ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ಇರುವ ನಿತ್ಯಜೀವವೇ ದೇವರ ಉಚಿತ ವರದಾನ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು