Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 3 - ಕನ್ನಡ ಸತ್ಯವೇದವು C.L. Bible (BSI)

1 ಹಾಗಾದರೆ ಯೆಹೂದ್ಯರ ವೈಶಿಷ್ಟ್ಯವೇನು? ಅವರು ಸುನ್ನತಿ ಮಾಡಿಸಿಕೊಂಡುದರಿಂದ ಪಡೆದ ಪ್ರಯೋಜನವೇನು?

2 ಹೌದು, ಎಲ್ಲಾ ವಿಧದಲ್ಲಿಯೂ ಹೆಚ್ಚು ಪ್ರಯೋಜನವಿದೆ. ಮೊದಲನೆಯದಾಗಿ, ದೇವರು ತಮ್ಮ ಸಂದೇಶವನ್ನು ವಹಿಸಿಕೊಟ್ಟದ್ದು ಯೆಹೂದ್ಯರಿಗೆ ತಾನೆ?

3 ಅವರಲ್ಲಿ ಕೆಲವರು ಅಪ್ರಾಮಾಣಿಕರಾಗಿ ನಡೆದುಕೊಂಡಿದ್ದರೆ ಏನಾಯಿತು? ದೇವರ ಪ್ರಾಮಾಣಿಕತನಕ್ಕೆ ಭಂಗಬರಲು ಸಾಧ್ಯವೆ?

4 ಎಂದಿಗೂ ಇಲ್ಲ. ಮಾನವರೆಲ್ಲರು ಸುಳ್ಳುಗಾರರಾದರೂ ದೇವರು ಮಾತ್ರ ಸತ್ಯವಂತರೇ ಸರಿ. ಪವಿತ್ರಗ್ರಂಥದಲ್ಲಿ ಹೀಗೆಂದು ಬರೆದಿದೆ: “ನಿನ್ನ ಮಾತಿನಲ್ಲೇ ನೀನು ನೀತಿವಂತನೆಂದು ವ್ಯಕ್ತವಾಗಬೇಕು, ವ್ಯಾಜ್ಯವೆದ್ದಾಗ ನೀನು ವಿಜಯಶಾಲಿ ಆಗಬೇಕು.”

5 ನಮ್ಮ ಅಕ್ರಮ ನಡತೆ ದೇವರ ನ್ಯಾಯನೀತಿಯನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುವ ಸಾಧನವಾದರೆ ಆಗ ಏನು ಹೇಳುವುದು? ಆ ಅಕ್ರಮವಾಗಿ ದೇವರು ನಮ್ಮ ಮೇಲೆ ಕೋಪ ಕಾರಿದರೆ ಅದು ಅನ್ಯಾಯವೆಂದು ನಾವು ಹೇಳಬಹುದೆ? (ಮನುಷ್ಯನಿಗೆ ಸಹಜವಾಗಿ ಏಳುವ ಪ್ರಶ್ನೆಯಿದು)

6 ಎಂದಿಗೂ ಇಲ್ಲ! ದೇವರು ನ್ಯಾಯವಂತರಲ್ಲದಿದ್ದರೆ ಲೋಕಕ್ಕೆ ನ್ಯಾಯತೀರ್ಪು ಕೊಡಲು ಹೇಗೆ ತಾನೆ ಸಾಧ್ಯ?

7 ನಮ್ಮ ಅಸತ್ಯತೆಯಿಂದ ದೇವರ ಸತ್ಯತೆ ವ್ಯಕ್ತವಾಗಿ ಅವರ ಮಹಿಮೆ ಬೆಳಗುವುದಾದರೆ ನನಗೇಕೆ ಪಾಪಿಯೆಂದು ತೀರ್ಪಾಗಬೇಕು?

8 “ಒಳ್ಳೆಯದಾಗುವಂತೆ, ಕೆಟ್ಟದ್ದನ್ನೇ ಏಕೆ ಮಾಡಬಾರದು?” - ಈ ರೀತಿ ಸ್ವತಃ ನಾನೇ ಬೋಧಿಸುತ್ತಿರುವುದಾಗಿ ಕೆಲವರು ನನ್ನನ್ನು ದೂಷಿಸಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆಯಾಗುವುದು ನ್ಯಾಯಸಮ್ಮತವಾದುದು.


ದೇವರೊಡನೆ ಸತ್ಸಂಬಂಧಿತರು ಯಾರು?

9 ಹಾಗಾದರೆ, ಯೆಹೂದ್ಯರಾದ ನಾವು ಇತರರಿಗಿಂತಲೂ ಶ್ರೇಷ್ಠರೋ? ಎಷ್ಟುಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ, ಇತರರೇ ಆಗಲಿ, ಎಲ್ಲರೂ ಪಾಪದ ಆಳ್ವಿಕೆಗೆ ಅಧೀನರು. ಇದನ್ನು ನಾನು ಈಗಾಗಲೇ ಸ್ಪಷ್ಟೀಕರಿಸಿದ್ದೇನೆ.

10 ಪವಿತ್ರಗ್ರಂಥದಲ್ಲಿ ಹೀಗಿದೆ:

11 ದೇವರೊಡನೆ ಸತ್ಸಂಬಂಧಿತರಾರೂ ಇಲ್ಲ ಸನ್ಮತಿಗಳು ಒರ್ವರೂ ಇಲ್ಲ ಆತನನ್ನು ಅರಸುವವರಂತೂ ಇಲ್ಲವೇ ಇಲ್ಲ.

12 ಸರಿದರು ದೂರ, ದೇವರಿಂದ ದೂರ ದಾರಿತಪ್ಪಿ ನಡೆದರೆಲ್ಲರೂ ಬಲುದೂರ ಒಳಿತನು ಮಾಳ್ಪರೊರ್ವನೂ ಇಲ್ಲ.

13 ಅವರ ಗಂಟಲೇ ತೆರೆದ ಸಮಾಧಿಯಾಗಿದೆ ನಾಲಗೆಗಳಲಿ ಮರೆಮೋಸ ತುಂಬಿತುಳುಕುತಿದೆ. ತುಟಿಯ ಕಂಪನದಲಿ ಘೋರ ವಿಷವಿದೆ.

14 ಶಾಪಕೋಪ ಅವರ ಬಾಯಲಿ ತುಂಬಿದೆ

15 ಕಾಲುಕೆರೆದು ನಿಂತಿಹರು ರಕುತ ಪಾತಕೆ

16 ನಾಶಪರಿವಿನಾಶ ಅವರು ಹೋದೆಡೆ.

17 ಶಾಂತಿಪಥವನು ಅರಿಯರವರು

18 ಅವರೆದೆಯಲಿಲ್ಲ ದೇವಭಯವು.

19 ಧರ್ಮಶಾಸ್ತ್ರದ ನೇಮನಿಯಮಗಳು ಆ ಶಾಸ್ತ್ರಕ್ಕೆ ಅಧೀನರಾದವರಿಗೆ ಮಾತ್ರ ಅನ್ವಯಿಸುತ್ತವೆಂದು ನಾವು ಬಲ್ಲೆವು. ಆದ್ದರಿಂದ ಯಾರೂ ಯಾವ ನೆಪವನ್ನು ಹೇಳಲೂ ಬಾಯಿ ತೆರೆಯುವಂತಿಲ್ಲ. ಜಗತ್ತೆಲ್ಲವೂ ದೇವರ ನ್ಯಾಯತೀರ್ಪಿಗೆ ಗುರಿಯಾಗಿದೆ.

20 ಏಕೆಂದರೆ, ಈ ನೇಮನಿಯಮಗಳನ್ನು ಅನುಸರಿಸಿದ ಮಾತ್ರಕ್ಕೇ ಯಾರೂ ದೇವರೊಡನೆ ಸತ್ಸಂಬಂಧವನ್ನು ಪಡೆಯುವುದಿಲ್ಲ. ಧರ್ಮಶಾಸ್ತ್ರ ಮಾನವನಿಗೆ ಪಾಪಪ್ರಜ್ಞೆಯನ್ನು ಉಂಟುಮಾಡುತ್ತದೆ, ಅಷ್ಟೆ.


ವಿಶ್ವಾಸದ ಮೂಲಕ ಸತ್ಸಂಬಂಧ

21 ಈಗಲಾದರೋ ಧರ್ಮಶಾಸ್ತ್ರದ ನೆರವಿಲ್ಲದೆಯೇ ದೇವರಿಂದ ದೊರಕುವ ಸತ್ಸಂಬಂಧವು ಪ್ರಕಟವಾಗಿದೆ. ಇದಕ್ಕೆ ಧರ್ಮಶಾಸ್ತ್ರವೂ ಪ್ರವಾದನಾಗ್ರಂಥವೂ ಸಾಕ್ಷಿಯಾಗಿವೆ.

22 ಯೇಸುಕ್ರಿಸ್ತರಲ್ಲಿ ವಿಶ್ವಾಸವಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರನ್ನೂ ದೇವರು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ. ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ.

23 ಮಾನವರೆಲ್ಲರೂ ಪಾಪಿಗಳೇ, ಎಲ್ಲರೂ ದೇವದತ್ತ ಮಹಿಮೆಯನ್ನು ಕಳೆದುಕೊಂಡವರೇ.

24 ಆದರೆ ದೇವರು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಪಾಪವಿಮೋಚನೆಯನ್ನು ದಯಪಾಲಿಸಿ, ತಮ್ಮ ಉಚಿತಾರ್ಥ ಅನುಗ್ರಹದಿಂದ ಅವರನ್ನು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ.

25 ಪೂರ್ವಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ವಿಶ್ವಾಸವುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತರು ರಕ್ತಧಾರೆ ಎರೆಯುವಂತೆ ಮಾಡಿದರು. ತಾವು ನೀತಿಸ್ವರೂಪರೆಂದು ತೋರಿಸುವುದಕ್ಕಾಗಿ ಹೀಗೆ ಮಾಡಿದರು.

26 ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯೂ ತಾವು ಸತ್ಯಸ್ವರೂಪರು ಮತ್ತು ನ್ಯಾಯವಂತರು ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಈ ರೀತಿ ಮಾಡಿದರು.

27 ಹೀಗಿರುವಲ್ಲಿ ಮಾನವನು ಕೊಚ್ಚಿಕೊಳ್ಳುವುದಕ್ಕೆ ಆಸ್ಪದವಿದೆಯೆ? ಇಲ್ಲವೇ ಇಲ್ಲ. ಹಾಗಾದರೆ ಸತ್ಸಂಬಂಧಕ್ಕೆ ಆಧಾರವೇನು? ಸತ್ಕಾರ್ಯಗಳ ಸಾಧನೆಯೆ? ಇಲ್ಲ. ವಿಶ್ವಾಸವೇ? ಹೌದು.

28 ಮಾನವನಿಗೆ ದೇವರೊಡನೆ ಸತ್ಸಂಬಂಧ ದೊರಕುವುದು ಧರ್ಮಶಾಸ್ತ್ರಗಳ ನೇಮನಿಯಮಗಳನ್ನು ಪಾಲಿಸುವುದರಿಂದ ಅಲ್ಲ, ವಿಶ್ವಾಸದಿಂದಲೇ ಎಂಬುದು ನಮ್ಮ ಸಿದ್ಧಾಂತ.

29 ದೇವರು ಕೇವಲ ಯೆಹೂದ್ಯರಿಗೆ ಮಾತ್ರ ದೇವರೋ ಅಥವಾ ಇತರರಿಗೂ ದೇವರೋ? ಹೌದು, ಇತರರಿಗೂ ದೇವರೇ.

30 ಯೆಹೂದ್ಯರನ್ನು ಅವರ ವಿಶ್ವಾಸದ ಆಧಾರದ ಮೇಲೂ ಇತರರನ್ನು ಅವರ ವಿಶ್ವಾಸದ ಮೂಲಕವೂ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವ ದೇವರು ಒಬ್ಬರೇ.

31 ‘ವಿಶ್ವಾಸದ ಮೂಲಕ’ ಎಂದು ಒತ್ತಿ ಹೇಳುವಾಗ ಧರ್ಮಶಾಸ್ತ್ರವನ್ನು ನಾವು ಅಲ್ಲಗಳೆಯುತ್ತೇವೆಂದು ಅರ್ಥವೆ? ಎಂದಿಗೂ ಇಲ್ಲ. ಬದಲಿಗೆ ಧರ್ಮಶಾಸ್ತ್ರದ ನಿಲುವನ್ನು ಸಮರ್ಥಿಸುತ್ತೇವೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು