ರೋಮಾಪುರದವರಿಗೆ 2 - ಕನ್ನಡ ಸತ್ಯವೇದವು C.L. Bible (BSI)ದೇವರ ನ್ಯಾಯತೀರ್ಪು 1 ಇತರರು ದೋಷಿಗಳೆಂದು ತೀರ್ಪುನೀಡುವ ಮಾನವನೇ, ನೀನು ಯಾರೇ ಆಗಿರು, ನೀನು ಮಾತ್ರ ನಿರ್ದೋಷಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇತರರಿಗೆ ತೀರ್ಪುನೀಡುವ ನೀನು ಅವರು ಮಾಡುವ ತಪ್ಪುಗಳನ್ನು ನೀನೂ ಮಾಡಿದೆಯಾದರೆ, ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. 2 ಇಂಥ ಅಪರಾಧಗಳನ್ನು ಮಾಡುವವರ ಬಗ್ಗೆ ದೇವರು ನೀಡುವ ತೀರ್ಪು ನ್ಯಾಯಬದ್ಧವಾದುದು ಎಂಬುದನ್ನು ನಾವು ಬಲ್ಲೆವು. 3 ಹೀಗಿರುವಾಗ, ಇತರರಿಗೆ ಯಾವ ಅಪರಾಧಕ್ಕಾಗಿ ತೀರ್ಪುನೀಡಿದೆಯೋ ಅಂಥ ಅಪರಾಧವನ್ನೇ ನೀನೂ ಮಾಡುತ್ತಿರುವೆಯಲ್ಲಾ! ದೇವರು ಕೊಡುವ ನ್ಯಾಯತೀರ್ಪಿನಿಂದ ನೀನು ಮಾತ್ರ ತಪ್ಪಿಸಿಕೊಳ್ಳುವಿಯೆಂದು ನೆನೆಸುತ್ತೀಯೋ? 4 ಅಥವಾ ದೇವರ ಅಪಾರ ದಯೆಯನ್ನೂ ಶಾಂತಿಸಹನೆಯನ್ನೂ ಉಪೇಕ್ಷಿಸುತ್ತೀಯೋ? ನೀನು ದೇವರಿಗೆ ಅಭಿಮುಖನಾಗಬೇಕೆಂಬ ಉದ್ದೇಶದಿಂದಲೇ ಅವರು ನಿನ್ನ ಮೇಲೆ ಅಷ್ಟು ದಯೆದಾಕ್ಷಿಣ್ಯದಿಂದ ಇದ್ದಾರೆ ಎಂಬುದು ನಿನಗೆ ತಿಳಿಯದೋ? 5 ಆದರೆ ನಿನ್ನದು ಕಠಿಣ ಹೃದಯ, ಮೊಂಡುಸ್ವಭಾವ. ಆದ್ದರಿಂದ ದೇವರ ಕೋಪ ಹಾಗು ನ್ಯಾಯವಾದ ತೀರ್ಪು ವ್ಯಕ್ತವಾಗುವ ದಿನದಂದು ನಿನಗೆ ವಿಧಿಸಲಾಗುವ ಶಿಕ್ಷೆಯನ್ನು ನೀನಾಗಿಯೇ ಸಂಗ್ರಹಿಸಿಕೊಳ್ಳುತ್ತಿದ್ದೀಯೆ. 6 ಪ್ರತಿಯೊಬ್ಬನಿಗೂ ದೇವರು ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುತ್ತಾರೆ. 7 ಸತ್ಕಾರ್ಯಗಳಲ್ಲಿ ನಿರತರಾಗಿದ್ದು, ಮಹಿಮೆಯನ್ನು, ಗೌರವವನ್ನು, ಅಮರತ್ವವನ್ನು ಅರಸುತ್ತಾ ಬಾಳುವವರಿಗೆ ದೇವರು ನಿತ್ಯಜೀವವನ್ನು ದಯಪಾಲಿಸುತ್ತಾರೆ. 8 ಸ್ವಾರ್ಥಸಾಧಕರಾಗಿದ್ದು, ಸತ್ಯಕ್ಕೆ ಮಣಿಯದೆ, ದುರ್ಮಾರ್ಗವನ್ನೇ ಅವಲಂಬಿಸಿ ನಡೆಯುವವರ ಮೇಲೆ ದೇವರ ಕೋಪವೂ ಆಕ್ರೋಶವೂ ಎರಗುತ್ತವೆ. 9 ಯೆಹೂದ್ಯರನ್ನು ಮೊದಲ್ಗೊಂಡು, ಇತರರಿಗೂ ಪಾಪಕೃತ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಕಷ್ಟಸಂಕಟಗಳು ಕಾದಿರುತ್ತವೆ. 10 ಅಂತೆಯೇ, ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ಸತ್ಕಾರ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಮಹಿಮೆ, ಗೌರವ, ಶಾಂತಿ ಲಭಿಸುತ್ತವೆ. 11 ದೇವರು ಪಕ್ಷಪಾತಿ ಅಲ್ಲ. 12 ಮೋಶೆಯ ಧರ್ಮಶಾಸ್ತ್ರದ ಅರಿವಿಲ್ಲದೆ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಒಳಗಾಗದೆಯೋ ನಾಶವಾಗುತ್ತಾರೆ. ಆ ಧರ್ಮಶಾಸ್ತ್ರದ ಅರಿವಿದ್ದೂ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಗುರಿಯಾಗುತ್ತಾರೆ. 13 ಧರ್ಮಶಾಸ್ತ್ರವನ್ನು ಆಲಿಸಿದ ಮಾತ್ರಕ್ಕೆ ಯಾರೂ ದೇವರೊಡನೆ ಸತ್ಸಂಬಂಧವನ್ನು ಪಡೆಯಲು ಸಾಧ್ಯವಿಲ್ಲ. ಅದನ್ನು ಆಲಿಸುವುದರ ಜೊತೆಗೆ ಪಾಲಿಸಲೂ ಬೇಕು. 14 ಯೆಹೂದ್ಯರಲ್ಲದವರಿಗೆ, ಮೋಶೆಯ ಧರ್ಮಶಾಸ್ತ್ರ ಇರುವುದಿಲ್ಲ. ಅವರು ಅದರ ವಿಧಿನಿಯಮಗಳನ್ನು ಸ್ವಾಭಾವಿಕವಾಗಿ ಅನುಸರಿಸಿದ್ದೇ ಆದರೆ, ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಅವರಿಗೆ ಧರ್ಮಶಾಸ್ತ್ರವಾಗುತ್ತದೆ. 15 ಧರ್ಮಶಾಸ್ತ್ರದ ವಿಧಿನಿಯಮಗಳು ಅವರ ಹೃದಯಗಳಲ್ಲಿ ಲಿಖಿತವಾಗಿವೆಯೆಂದು ಅವರ ನಡತೆಯಿಂದಲೇ ವೇದ್ಯವಾಗುತ್ತದೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ. 16 ನಾನು ಬೋಧಿಸುವ ಶುಭಸಂದೇಶದ ಪ್ರಕಾರ, ದೇವರು ಯೇಸುಕ್ರಿಸ್ತರ ಮುಖಾಂತರ ಮಾನವನ ಗುಟ್ಟುಗಳನ್ನು ರಟ್ಟುಮಾಡಿ, ತೀರ್ಪುಕೊಡುವ ದಿನ ಬಂದೇ ಬರುತ್ತದೆ. ಆ ದಿನ ಇದೆಲ್ಲಾ ಸಂಭವಿಸುತ್ತದೆ. ಧರ್ಮಶಾಸ್ತ್ರಜ್ಞರು ದೋಷರಹಿತರೆ? 17 “ನಾನು ಯೆಹೂದ್ಯನು” ಎಂದು ಹೇಳಿಕೊಳ್ಳುತ್ತಿರುವ ನಿನ್ನ ವಿಷಯವಾದರೂ ಏನು? ಧರ್ಮಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ದೇವರಿಗೆ ಸೇರಿದವನೆಂದು ಕೊಚ್ಚಿಕೊಳ್ಳುತ್ತೀಯೆ; 18 ದೇವರ ಚಿತ್ತವನ್ನು ಅರಿತಿರುವುದಾಗಿ ನೆನೆಸುತ್ತೀಯೆ: ಉತ್ತಮವಾದುದನ್ನು ಆರಿಸಿಕೊಳ್ಳಲು ಧರ್ಮಶಾಸ್ತ್ರದಿಂದ ಕಲಿತುಕೊಂಡಿರುವುದಾಗಿ ಹೇಳಿಕೊಳ್ಳುತ್ತೀಯೆ; 19 ನೀನು ಕುರುಡರಿಗೆ ದಾರಿ ತೋರಿಸುವವನೂ ಕತ್ತಲೆಯಲ್ಲಿರುವವರಿಗೆ ಬೆಳಕೂ ಬುದ್ಧಿಹೀನರಿಗೆ ಬೋಧಕನೂ 20 ಮಕ್ಕಳಿಗೆ ಶಿಕ್ಷಕನೂ ಆಗಿರುವುದಾಗಿ ದೃಢವಾಗಿ ನಂಬಿಕೊಂಡಿದ್ದೀಯೆ; ಧರ್ಮಶಾಸ್ತ್ರದಲ್ಲಿ ಜ್ಞಾನ ಮತ್ತು ಸತ್ಯ ಮೇಳೈಸಿರುವುದಾಗಿ ಭಾವಿಸುತ್ತೀಯೆ. 21 ಹೀಗೆ, ಇತರರಿಗೆ ಉಪದೇಶಿಸುವ ನೀನು, ನಿನಗೆ ನೀನೇ ಉಪದೇಶ ಮಾಡಿಕೊಳ್ಳಬಾರದೇನು? “ಕದಿಯಬಾರದು” ಎಂದು ಬೋಧಿಸುವ ನೀನೇ ಕಳ್ಳತನ ಮಾಡುತ್ತೀಯೇನು? 22 “ವ್ಯಭಿಚಾರ ಮಾಡಬಾರದು” ಎಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೇನು? ವಿಗ್ರಹಗಳನ್ನು ವಿರೋಧಿಸುವ ನೀನು ದೇವಾಲಯವನ್ನೇ ದೋಚುತ್ತೀಯೇನು? 23 ದೇವರಿಂದಲೇ ನಿಯಮಗಳನ್ನು ಪಡೆದಿರುವುದಾಗಿ ಕೊಚ್ಚಿಕೊಳ್ಳುವ ನೀನು ಆ ನಿಯಮಗಳನ್ನೇ ಉಲ್ಲಂಘಿಸಿ ದೇವರಿಗೆ ದ್ರೋಹಬಗೆಯುತ್ತೀಯೇನು? 24 ಈ ಕಾರಣದಿಂದ. “ನಿಮ್ಮ ದೆಸೆಯಿಂದಲೇ ಯೆಹೂದ್ಯರಲ್ಲದವರು ದೇವರ ಹೆಸರನ್ನು ದೂಷಿಸುತ್ತಾರೆ,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. 25 ನೀನು ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ನಡೆದರೆ, ನೀನು ಮಾಡಿಸಿಕೊಂಡಿರುವ ಸುನ್ನತಿಗೆ ಅರ್ಥವಿದೆ. ಆದರೆ ನಿನ್ನ ನಡತೆ ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾಗಿದ್ದರೆ ನೀನು ಸುನ್ನತಿ ಮಾಡಿಸಿಕೊಂಡಿದ್ದರೂ ಮಾಡಿಸಿಕೊಳ್ಳದಂತೆಯೇ ಸರಿ. 26 ಸುನ್ನತಿ ಮಾಡಿಸಿಕೊಳ್ಳದ ಮತ್ತೊಬ್ಬನು ಧರ್ಮಶಾಸ್ತ್ರದ ವಿಧಿಗಳನ್ನು ಪಾಲಿಸಿಕೊಂಡು ಬಂದವನಾಗಿದ್ದರೆ, ದೇವರು ಅವನನ್ನು ಸುನ್ನತಿ ಮಾಡಿಸಿಕೊಂಡವನಂತೆ ಪರಿಗಣಿಸುವುದಿಲ್ಲವೆ? 27 ನೀವು ಸುನ್ನತಿ ಮಾಡಿಸಿಕೊಂಡಿದ್ದೀರಿ; ಲಿಖಿತ ಧರ್ಮಶಾಸ್ತ್ರವನ್ನು ಇಟ್ಟುಕೊಂಡಿದ್ದೀರಿ; ಆದರೂ ಅದನ್ನು ಮೀರಿನಡೆಯುತ್ತೀರಿ. ಹೀಗಿರಲಾಗಿ, ಶಾರೀರಿಕವಾಗಿ ಸುನ್ನತಿಯನ್ನು ಮಾಡಿಸಿಕೊಳ್ಳದಿದ್ದರೂ ಸ್ವಾಭಾವಿಕವಾಗಿ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರು ಸುನ್ನತಿಮಾಡಿಸಿಕೊಂಡಿರುವ ನಿಮಗೆ ತೀರ್ಪುಕೊಡುತ್ತಾರೆ. 28 ಬಾಹ್ಯಾಚರಣೆಯಲ್ಲಿ ಮಾತ್ರ ಯೆಹೂದ್ಯನಾಗಿರುವವನು ನಿಜವಾದ ಯೆಹೂದ್ಯನಲ್ಲ. ಅಂತೆಯೇ, ನಿಜವಾದ ಸುನ್ನತಿಯು ಕೇವಲ ಬಾಹ್ಯಲಕ್ಷಣವುಳ್ಳ ಶಾರೀರಿಕ ಪದ್ಧತಿಯಲ್ಲ. 29 ಯಾರು ಅಂತರಂಗದಲ್ಲಿ ಯೆಹೂದ್ಯನಾಗಿರುತ್ತಾನೋ ಅವನೇ ನಿಜವಾದ ಯೆಹೂದ್ಯನು. ಅಂಥವನಿಗೆ ಅಂತರ್ಯದಲ್ಲಿ ಸುನ್ನತಿಯಾಗಿರುತ್ತದೆ. ಇದು ಲಿಖಿತ ಧರ್ಮಶಾಸ್ತ್ರದಿಂದ ಆದದ್ದಲ್ಲ, ದೇವರಾತ್ಮ ಅವರಿಂದ ಆದ ಕಾರ್ಯ; ಇಂಥವನು ಮೆಚ್ಚುಗೆಯನ್ನು ಪಡೆಯುವುದು ಮನುಷ್ಯನಿಂದಲ್ಲ, ದೇವರಿಂದ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India