Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 16 - ಕನ್ನಡ ಸತ್ಯವೇದವು C.L. Bible (BSI)


ವೈಯಕ್ತಿಕ ಶುಭಾಶಯಗಳು

1 ನಾನು ನಿಮ್ಮ ಬಳಿಗೆ ಕಳುಹಿಸುತ್ತಿರುವ ಸಹೋದರಿ ಫೊಯಿಬೆಯನ್ನು ಪ್ರೀತಿಯಿಂದ ಸ್ವಾಗತಿಸಿರಿ. ಈಕೆ ಕೆಂಕ್ರೆಯ ಪಟ್ಟಣದ ಸಭಾಸೇವಕಳು.

2 ದೇವಜನರ ಯೋಗ್ಯತೆಗೆ ತಕ್ಕಂತೆ ಈಕೆಯನ್ನು ಪ್ರಭುವಿನ ಹೆಸರಿನಲ್ಲಿ ಬರಮಾಡಿಕೊಳ್ಳಿ. ನನಗೂ ಅನೇಕರಿಗೂ ನೆರವು ನೀಡಿರುವ ಈಕೆಗೆ ನಿಮ್ಮಿಂದಾದ ಎಲ್ಲಾ ಸಹಾಯವನ್ನು ಮಾಡಿ.

3 ಕ್ರಿಸ್ತಯೇಸುವಿನ ಸೇವೆಯಲ್ಲಿ ನನ್ನ ಸಹೋದ್ಯೋಗಿಗಳಾದ ಪ್ರಿಸಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.

4 ಅವರು ನನ್ನ ಪ್ರಾಣರಕ್ಷಣೆಗಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಈಡಾಗಿಸಿದವರು. ಅದಕ್ಕಾಗಿ ನಾನು ಅವರಿಗೆ ಚಿರಋಣಿ. ನಾನು ಮಾತ್ರವಲ್ಲ, ಯೆಹೂದ್ಯೇತರ ಸಭೆಗಳ ಎಲ್ಲರೂ ಅವರು ಮಾಡಿದ ಉಪಕಾರಕ್ಕೆ ಚಿರಋಣಿಗಳಾಗಿದ್ದಾರೆ.

5 ಅವರ ಮನೆಯಲ್ಲಿ ಸೇರುವ ಸಭೆಗೂ ನನ್ನ ಶುಭಾಶಯಗಳು. ನನ್ನ ಆಪ್ತಗೆಳೆಯ ಎಪೈನೆತನಿಗೆ ನನ್ನ ಪ್ರಣಾಮಗಳು; ಏಷ್ಯಾಸೀಮೆಯಲ್ಲಿ ಮೊತ್ತಮೊದಲಿಗೆ ಕ್ರಿಸ್ತಯೇಸುವನ್ನು ವಿಶ್ವಾಸಿಸಿದವನು ಆತನೇ.

6 ನಿಮಗಾಗಿ ಬಹಳ ಶ್ರಮವಹಿಸಿದ ಮರಿಯಳಿಗೂ ನನ್ನ ನಮಸ್ಕಾರಗಳು.

7 ನನ್ನ ಸ್ವದೇಶೀಯರೂ ನನ್ನೊಡನೆ ಸೆರೆಯಲ್ಲಿ ಇದ್ದವರೂ ಆದ ಅಂದ್ರೋನಿಕನಿಗೂ ಯೂನ್ಯನಿಗೂ ನನ್ನ ನಮನಗಳು. ಅವರು ಪ್ರೇಷಿತರಂತೆ ಸನ್ಮಾನಿತರು; ಕ್ರಿಸ್ತಯೇಸುವನ್ನು ವಿಶ್ವಾಸಿಸುವುದರಲ್ಲಿ ನನಗಿಂತಲೂ ಮೊದಲಿಗರು.

8 ಪ್ರಭುವಿನಲ್ಲಿ ನನ್ನ ಆಪ್ತಗೆಳೆಯನಾದ ಅಂಪ್ಲಿಯಾತನಿಗೆ ನನ್ನ ವಂದನೆಗಳು.

9 ಯೇಸುಕ್ರಿಸ್ತರ ಸೇವೆಯಲ್ಲಿ ನನ್ನ ಸಹೋದ್ಯೋಗಿಯಾದ ಉರ್ಬಾನನಿಗೂ ನನ್ನ ಮಿತ್ರ ಸ್ತಾಕುನಿಗೂ ವಂದನೆಗಳು.

10 ಕ್ರಿಸ್ತಯೇಸುವಿನ ಸೇವೆಯಲ್ಲಿ ಪರಿಷ್ಕೃತನಾದ ಅಪೆಲ್ಲನಿಗೆ ಮತ್ತು ಅರಿಸ್ತೊಬೂಲನ ಕುಟುಂಬದವರಿಗೆ ನನ್ನ ನೆನಪುಗಳು.

11 ನನ್ನ ಸ್ವದೇಶೀಯರಾದ ಹೆರೋಡಿಯೊನನಿಗೂ ನಾರ್ಕಿಸ್ಸನ ಕುಟುಂಬದವರಲ್ಲಿ ಕ್ರೈಸ್ತರಾದವರಿಗೂ ನನ್ನ ವಂದನೆಗಳು.

12 ಪ್ರಭು ಸೇವೆಯಲ್ಲಿ ನಿರತರಾದ ತ್ರುಫೈನಳಿಗೂ ತ್ರುಫೋಸಳಿಗೂ ಮತ್ತು ಪ್ರಭುವಿಗಾಗಿ ಶ್ರದ್ಧೆಯಿಂದ ಸೇವೆಸಲ್ಲಿಸಿದ ಪ್ರಿಯ ಪೆರ್ಸಿಸಳಿಗೂ ನನ್ನ ನೆನಕೆಗಳು.

13 ಪ್ರಭುವಿನ ಭಕ್ತರಲ್ಲಿ ಹೆಸರುವಾಸಿಯಾದ ರೂಫನಿಗೂ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡ ಅವರ ತಾಯಿಗೂ ನನ್ನ ವಂದನೆಗಳು.

14 ಅಸುಂಕ್ರಿತನಿಗೂ ಫ್ಲೆಗೋನನಿಗೂ ಹೆರ್ಮೇಯನಿಗೂ ಪತ್ರೊಬನಿಗೂ ಹೆರ್ಮಾನನಿಗೂ ಮತ್ತು ಅವರೊಡನಿರುವ ಸಹೋದರರೆಲ್ಲರಿಗೂ ನನ್ನ ವಂದನೆಗಳು.

15 ಫಿಲೊಲೋಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ತಂಗಿಗೂ ಒಲುಂಪನಿಗೂ ಮತ್ತು ಇವರೊಂದಿಗೆ ಇರುವ ದೇವಜನರೆಲ್ಲರಿಗೂ ನನ್ನ ವಂದನೆಗಳು.

16 ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಎಲ್ಲಾ ಕ್ರೈಸ್ತಸಭೆಗಳವರು ನಿಮಗೆ ತಮ್ಮ ವಂದನೆಗಳನ್ನು ಕಳುಹಿಸಿದ್ದಾರೆ.


ವಿದಾಯ ವಂದನೆ

17 ಸಹೋದರರೇ, ನೀವು ಪಡೆದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರ ಸಹವಾಸವನ್ನೇ ಮಾಡಬೇಡಿರೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.

18 ಅಂಥವರು ಮಾಡುವುದು ತಮ್ಮ ಉದರಸೇವೆಯನ್ನೇ ಹೊರತು ಪ್ರಭುವಿನ ಸೇವೆಯನ್ನಲ್ಲ, ತಮ್ಮ ನಯನಾಜೂಕಿನ ನುಡಿಗಳಿಂದಲೂ ಮುಖಸ್ತುತಿಯ ಮಾತುಗಳಿಂದಲೂ ನಿಷ್ಕಪಟ ಮನಸ್ಕರನ್ನು ಮರುಳುಗೊಳಿಸುತ್ತಾರೆ.

19 ನೀವು ಶುಭಸಂದೇಶಕ್ಕೆ ವಿಧೇಯರಾಗಿ ನಡೆಯುವವರೆಂಬ ಸಮಾಚಾರ ಎಲ್ಲೆಲ್ಲೂ ಹರಡಿದೆ. ಇದರಿಂದಾಗಿ ನಾನು ನಿಮ್ಮ ವಿಷಯದಲ್ಲಿ ಸಂತೋಷಪಡುತ್ತೇನೆ. ನೀವು ಒಳ್ಳೆಯ ವಿಷಯದಲ್ಲಿ ಜಾಣರೂ ಕೆಟ್ಟ ವಿಷಯದಲ್ಲಿ ಕಳಂಕರಹಿತರೂ ಆಗಿರಬೇಕು.

20 ಆಗ ಶಾಂತಿದಾತ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಪಾದದಡಿಯಲ್ಲಿ ನಸುಕಿಬಿಡುವರು. ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೊಡನೆ ಇರಲಿ!

21 ನನ್ನ ಸಹೋದ್ಯೋಗಿಯಾದ ತಿಮೊಥೇಯನು ಮತ್ತು ನನ್ನ ಸ್ವದೇಶೀಯರಾದ ಲೂಕ್ಯ, ಯಾಸೋನನು, ಸೋಸಿಪತ್ರನು ಇವರುಗಳು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ.

22 ಈ ಪತ್ರವನ್ನು ಬರೆದುಕೊಟ್ಟ ತೆರ್ತ್ಯನೆಂಬ ನಾನೂ ನಿಮ್ಮನ್ನು ಪ್ರಭುವಿನಲ್ಲಿ ವಂದಿಸುತ್ತೇನೆ.

23 ನನಗೂ ಸಮಸ್ತ ಸಭೆಗೂ ಅತಿಥಿಸತ್ಕಾರ ನೀಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾಂಚಿ ಎರಸ್ತನೂ ಸಹೋದರ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳಿದ್ದಾರೆ.

24 ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೆಲ್ಲರೊಡನೆ ಇರಲಿ! ಆಮೆನ್.


ಆಶೀರ್ವಚನ

25 “ಅನಾದಿಯಿಂದಲೂ ಗುಪ್ತವಾಗಿದ್ದ ರಹಸ್ಯವು ಈಗ ಪ್ರಕಟವಾಗಿದೆ. ಶಾಶ್ವತ ದೇವರ ಆಜ್ಞೆಯ ಮೇರೆಗೆ ಅನ್ಯಧರ್ಮೀಯರೂ ವಿಧೇಯರಾಗಿ ವಿಶ್ವಾಸಿಸುವಂತೆ ಪ್ರವಾದನಾ ಗ್ರಂಥಗಳ ಮೂಲಕ ಆ ರಹಸ್ಯವನ್ನು ಈಗ ಅವರಿಗೆ ತಿಳಿಸಲಾಗುತ್ತಿದೆ.

26 ಇದನ್ನು ಬೆಳಕಿಗೆ ತರುವ ನನ್ನ ಸಂದೇಶದ ಮೂಲಕ ಮತ್ತು ಯೇಸುಕ್ರಿಸ್ತರನ್ನು ಕುರಿತ ಬೋಧನೆಯ ಮೂಲಕ ದೇವರು ನಿಮ್ಮನ್ನು ವಿಶ್ವಾಸದಲ್ಲಿ ದೃಢಪಡಿಸಲು ಶಕ್ತರು.

27 ಜ್ಞಾನಾಂಬುದಿಯಾದ ಆ ಏಕೈಕ ದೇವರಿಗೆ ಯೇಸುಕ್ರಿಸ್ತರ ಮುಖಾಂತರ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು