Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 15 - ಕನ್ನಡ ಸತ್ಯವೇದವು C.L. Bible (BSI)


ಸ್ವಹಿತವನ್ನಲ್ಲ, ಪರಹಿತವನ್ನೇ ಬಯಸು

1 ವಿಶ್ವಾಸದಲ್ಲಿ ದೃಢವಾಗಿರುವ ನಾವು ನಮ್ಮ ಹಿತವನ್ನೇ ಬಯಸದೆ ವಿಶ್ವಾಸದಲ್ಲಿ ದೃಢವಲ್ಲದವರ ಲೋಪದೋಷಗಳನ್ನು ಸಹಿಸಿಕೊಳ್ಳಬೇಕು.

2 ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೇ ಬಯಸಿ, ವಿಶ್ವಾಸದಲ್ಲಿ ಅವನು ಮತ್ತಷ್ಟು ಪ್ರವರ್ಧಿಸುವಂತೆ ನೆರವಾಗಬೇಕು.

3 ಕ್ರಿಸ್ತಯೇಸು ತಮ್ಮ ಸ್ವಂತ ಹಿತವನ್ನು ಎಂದಿಗೂ ಬಯಸಲಿಲ್ಲ. “ದೇವರೇ, ನಿಮ್ಮನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೆ ಎರಗಿವೆ,” ಎಂದು ಲಿಖಿತವಾಗಿರುವ ವಾಕ್ಯ ಅವರಿಗೆ ಅನ್ವಯಿಸುತ್ತದೆ.

4 ಪ್ರಾಚೀನ ಗ್ರಂಥಗಳಲ್ಲಿ ಬರೆದಿರುವುದೆಲ್ಲವೂ ನಮ್ಮ ಉಪದೇಶಕ್ಕಾಗಿಯೇ ಬರೆಯಲಾಗಿದೆ. ಪವಿತ್ರಗ್ರಂಥ ಪಠನದಿಂದ ದೊರಕುವ ಸ್ಥೈರಣೆ ಮತ್ತು ಉತ್ತೇಜನದಿಂದಾಗಿ ನಾವು ನಿರೀಕ್ಷೆಯುಳ್ಳವರಾಗಬೇಕೆಂದೇ ಇವೆಲ್ಲಾ ಬರೆಯಲಾಗಿದೆ.

5 ಆ ಸ್ಥೈರಣೆ ಮತ್ತು ಉತ್ತೇಜನದ ಮೂಲವಾಗಿರುವ ದೇವರು, ನೀವೆಲ್ಲರು ಕ್ರಿಸ್ತಯೇಸುವನ್ನು ಅನುಸರಿಸುತ್ತಾ ಒಮ್ಮನಸ್ಸಿನಿಂದ ಬಾಳುವಂತೆ ಮಾಡಲಿ.

6 ಹೀಗೆ ಒಮ್ಮನಸ್ಸಿನಿಂದಲೂ ಒಕ್ಕೊರಲಿನಿಂದಲೂ ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರನ್ನು ಕೊಂಡಾಡುವಂತಾಗಲಿ.


ಅನ್ಯಧರ್ಮೀಯರಿಗೆ ಆನಂದ ಸಂದೇಶ

7 ಕ್ರಿಸ್ತಯೇಸು ನಿಮ್ಮನ್ನು ಅಂಗೀಕರಿಸಿದಂತೆ ದೇವರ ಮಹಿಮೆಗಾಗಿ ನೀವು ಸಹ ಒಬ್ಬರನ್ನು ಒಬ್ಬರು ಅಂಗೀಕರಿಸಿರಿ.

8 ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳನ್ನು ನೆರವೇರಿಸಿ ತಮ್ಮ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸುವಂತೆ

9 ಮತ್ತು ದೇವರು ತೋರಿದ ಕರುಣೆಗಾಗಿ ಅವರನ್ನು ಯೆಹೂದ್ಯರಲ್ಲದವರು ಸಹ ಸ್ತುತಿಸಲು ಸಾಧ್ಯವಾಗುವಂತೆ ಕ್ರಿಸ್ತಯೇಸು ಯೆಹೂದ್ಯರಿಗೆ ಅಧೀನರಾದರು. ಇದಕ್ಕೆ ಸಾದೃಶ್ಯವಾಗಿ ಪವಿತ್ರಗ್ರಂಥದಲ್ಲಿ ಹೀಗೆಂದು ಹೇಳಲಾಗಿದೆ: “ಈ ಕಾರಣದಿಂದ ನಾನು ಯೆಹೂದ್ಯರಲ್ಲದವರ ನಡುವೆ ನಿಮ್ಮನ್ನು ಕೊಂಡಾಡುವೆನು ನಿಮ್ಮ ನಾಮವನು ಸಂಕೀರ್ತಿಸುವೆನು.”

10 ಇನ್ನೊಂದು ಕಡೆ: ಅನ್ಯಧರ್ಮೀಯರೇ, ದೇವಜನರೊಡನೆ ಸೇರಿ ಆನಂದಿಸಿರಿ.”

11 ಮತ್ತೊಂದು ಕಡೆ: “ಅನ್ಯಧರ್ಮೀಯರೇ, ನೀವೆಲ್ಲರೂ ಪ್ರಭುವನ್ನು ಸ್ತುತಿಸಿರಿ ಸರ್ವಜನಾಂಗಗಳೇ, ಅವರನ್ನು ಹೊಗಳಿ ಹಾಡಿರಿ,”

12 ಮಗದೊಂದು ಕಡೆ ಯೆಶಾಯನು ಹೀಗೆನ್ನುತ್ತಾನೆ: “ಜೆಸ್ಸೆಯನ ವಂಶಜನು ಬರುವನು ಅನ್ಯಜನಾಂಗಗಳನ್ನು ಆಳುವವನು ಉದಯಿಸುವನು ಆ ಜನಾಂಗಗಳು ಆತನಲ್ಲೇ ಭರವಸೆಯನ್ನಿಡುವುವು.”

13 ಭರವಸೆಯ ಮೂಲವಾಗಿರುವ ದೇವರಲ್ಲಿರುವ ನಮ್ಮ ವಿಶ್ವಾಸದ ಮೂಲಕ ಲಭಿಸುವ ಆನಂದವನ್ನೂ ಶಾಂತಿಸಮಾಧಾನವನ್ನೂ ನಿಮಗೆ ಸಮೃದ್ಧಿಯಾಗಿ ದಯಪಾಲಿಸಲಿ. ನಿಮ್ಮ ಭರವಸೆ ಪವಿತ್ರಾತ್ಮ ಅವರ ಪ್ರಭಾವದಿಂದ ಪ್ರವರ್ಧಿಸುವಂತಾಗಲಿ.


ಪೌಲನ ಅಧಿಕಾರಯುತ ಆದೇಶ

14 ಸಹೋದರರೇ, ನೀವು ಗುಣಸಂಪನ್ನರೂ ಜ್ಞಾನಸಂಪನ್ನರೂ ಒಬ್ಬರಿಗೊಬ್ಬರು ಬುದ್ಧಿಹೇಳಿಕೊಳ್ಳಲು ಸಮರ್ಥರೂ ಆಗಿದ್ದೀರಿ ಎಂದು ನಾನು ಚೆನ್ನಾಗಿ ಬಲ್ಲೆ.

15 ಆದರೂ ಕೆಲವು ವಿಷಯಗಳತ್ತ ನಿಮ್ಮ ಗಮನ ಸೆಳೆಯುವ ಉದ್ದೇಶದಿಂದ ಅಲ್ಲಲ್ಲಿ ಹೆಚ್ಚಿನ ಧೈರ್ಯವಹಿಸಿ ಬರೆದಿದ್ದೇನೆ. ದೇವರು ನನಗೆ ದಯಪಾಲಿಸಿರುವ ವಿಶೇಷ ವರದಾನದಿಂದಾಗಿ ಈ ಪ್ರಕಾರ ಬರೆದಿದ್ದೇನೆ.

16 ಈ ವರದಿಂದಲೇ ಯೆಹೂದ್ಯರಲ್ಲದ ಜನರಿಗೆ ನಾನು ಕ್ರಿಸ್ತಯೇಸುವಿನ ದಾಸನಾದೆ. ಯೆಹೂದ್ಯರಲ್ಲದವರು ಪವಿತ್ರಾತ್ಮರ ಮೂಲಕ ಪರಿಶುದ್ಧರಾಗಿ, ದೇವರಿಗೆ ಸಮರ್ಪಕ ಕಾಣಿಕೆಯಾಗುವಂತೆ ದೇವರ ಶುಭಸಂದೇಶವನ್ನು ಸಾರುವುದೇ ನನ್ನ ಪೂಜ್ಯಸೇವೆ, ಅದುವೇ ನನ್ನ ಯಾಜಕಸೇವೆ.

17 ದೇವರಿಗಾಗಿ ಸಲ್ಲಿಸುವ ಈ ಸೇವೆಯನ್ನು ಕುರಿತು ನಾನು ಕ್ರಿಸ್ತಯೇಸುವಿನಲ್ಲಿ ಹೆಮ್ಮೆಪಡಲು ಕಾರಣ ಉಂಟು.

18 ಕ್ರಿಸ್ತಯೇಸು ನನ್ನ ಮುಖಾಂತರ ಅಂದರೆ, ನನ್ನ ಬೋಧನೆ ಹಾಗು ಸಾಧನೆಗಳ ಮೂಲಕ, ಸೂಚಕ ಹಾಗೂ ಅದ್ಭುತಕಾರ್ಯಗಳ ಮೂಲಕ ಮತ್ತು ಪವಿತ್ರಾತ್ಮರ ಶಕ್ತಿಯ ಮೂಲಕ ಯೆಹೂದ್ಯರಲ್ಲದವರನ್ನೂ ತಮ್ಮ ಶರಣರನ್ನಾಗಿಸಿಕೊಂಡಿದ್ದಾರೆ. ಇದೊಂದನ್ನು ಬಿಟ್ಟು ಬೇರೆ ಯಾವುದನ್ನು ಕುರಿತು ಹೊಗಳಿಕೊಳ್ಳಲು ನಾನು ಧೈರ್ಯಗೊಳ್ಳುವುದಿಲ್ಲ.

19 ಜೆರುಸಲೇಮಿನಿಂದ ಪ್ರಾರಂಭಿಸಿ ಇಲ್ಲುರಿಕ ಪ್ರಾಂತ್ಯದವರೆಗೂ ಸುತ್ತಮುತ್ತಿನಲ್ಲೂ ನಾನು ಸಂಚಾರಮಾಡಿ, ಕ್ರಿಸ್ತಯೇಸುವಿನ ಶುಭಸಂದೇಶವನ್ನು ಪೂರ್ತಿಯಾಗಿ ಪ್ರಚಾರಮಾಡಿದ್ದೇನೆ.

20 ಮತ್ತೊಬ್ಬನು ಹಾಕಿದ ಅಸ್ತಿವಾರದ ಮೇಲೆ ನಾನು ಕಟ್ಟುವುದು ಸರಿ ಅಲ್ಲವೆಂಬುದು ನನ್ನ ಅಭಿಪ್ರಾಯ. ಆದಕಾರಣ ಕ್ರಿಸ್ತಯೇಸುವಿನ ನಾಮವು ಪ್ರಚಾರವಾಗದಕಡೆ ಹೋಗಿ ಶುಭಸಂದೇಶವನ್ನು ಸಾರಬೇಕೆಂಬುದೇ ನನ್ನ ಆಕಾಂಕ್ಷೆ.

21 “ಯಾರಿಗೆ ಆತನ ಸುದ್ದಿ ಮುಟ್ಟಿಲ್ಲವೋ ಅವರು ಆತನನು ನೋಡುವರು; ಯಾರು ಆತನ ವರ್ತಮಾನ ಕೇಳಿಲ್ಲವೋ ಅವರು ಆತನನು ಗ್ರಹಿಸಿಕೊಳ್ಳುವರು,” ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ನನ್ನ ಕಾರ್ಯವನ್ನು ನಡೆಸಿದ್ದೇನೆ.


ಪೌಲನ ಪ್ರಯಾಣದ ಯೋಜನೆ

22 ಈ ಕಾರಣದಿಂದಲೇ ನಾನು ನಿಮ್ಮ ಬಳಿಗೆ ಬರಲು ಅನೇಕ ಸಾರಿ ಮಾಡಿದ ಪ್ರಯತ್ನಗಳು ವಿಫಲವಾದವು.

23 ಆದರೆ ಈಗ ಈ ಪ್ರಾಂತ್ಯಗಳಲ್ಲಿ ನಾನು ಮಾಡಬೇಕಾಗಿದ್ದ ಸೇವೆಯನ್ನು ಮುಗಿಸಿದ್ದೇನೆ. ಅನೇಕ ವರ್ಷಗಳಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದ ನನ್ನ ಹಂಬಲವು ಈಗ ಕೈಗೂಡಲಿದೆ.

24 ನಾನು ಸ್ಪೇಯಿನ್ ದೇಶಕ್ಕೆ ಹೋಗುವ ಮಾರ್ಗದಲ್ಲಿ ಮೊದಲು ನಿಮ್ಮನ್ನು ಕಾಣಬೇಕೆಂದಿದ್ದೇನೆ. ಸ್ವಲ್ಪಕಾಲ ನಿಮ್ಮೊಡನೆ ಸಂತೋಷವಾಗಿ ತಂಗಿದ್ದು ಬಳಿಕ ನಿಮ್ಮ ಸಹಾಯದಿಂದ ಆ ದೇಶಕ್ಕೆ ಪ್ರಯಾಣವನ್ನು ಮುಂದುವರಿಸುತ್ತೇನೆ.

25 ಸದ್ಯಕ್ಕೆ ನಾನು ಜೆರುಸಲೇಮಿನಲ್ಲಿರುವ ದೇವಜನರಿಗೆ ಸಹಾಯಧನವನ್ನು ಕೊಂಡೊಯ್ಯಬೇಕಾಗಿದೆ.

26 ಅಲ್ಲಿನ ದೇವಜನರಲ್ಲಿ ಬಡವರಾದವರಿಗೆ ಸಹಾಯನೀಡಲು ಮಕೆದೋನಿಯ ಮತ್ತು ಅಖಾಯದ ಸಹೋದರರು ಮುಂದೆ ಬಂದಿದ್ದಾರೆ.

27 ಅವರ ಸ್ವಂತ ಇಷ್ಟದಿಂದಲೇ ಮುಂದೆ ಬಂದಿದ್ದಾರೆ. ಹಾಗೆ ಮಾಡುವುದು ಅವರ ಕರ್ತವ್ಯವೂ ಹೌದು. ಏಕೆಂದರೆ, ಯೆಹೂದ್ಯರ ಆಧ್ಯಾತ್ಮಿಕ ಸಂಪತ್ತಿನಲ್ಲಿ ಪಾಲುಗಾರರಾಗಿರುವ ಅನ್ಯಧರ್ಮೀಯರು ತಮ್ಮ ಐಹಿಕಸಂಪತ್ತಿನಲ್ಲಿ ಅವರಿಗೆ ಪಾಲು ನೀಡಲು ಕರ್ತವ್ಯಬದ್ಧರಾಗಿದ್ದಾರೆ.

28 ದೇವಜನರಿಗೆ ಸಂಗ್ರಹಿಸಲಾದ ಧನಸಹಾಯವನ್ನು ಸುರಕ್ಷಿತವಾಗಿ ಅವರಿಗೆ ತಲುಪಿಸಿದ ಮೇಲೆ ನನ್ನ ಈ ಕಾರ್ಯವನ್ನು ಮುಗಿಸಿಕೊಂಡು ಸ್ಪೇಯಿನ್ ದೇಶಕ್ಕೆ ಹೋಗುವ ಮಾರ್ಗದಲ್ಲಿ ನಿಮ್ಮ ಬಳಿಗೆ ಬರುತ್ತೇನೆ.

29 ಹಾಗೆ ಬರುವಾಗ ನಿಮಗೆ ಕ್ರಿಸ್ತಯೇಸುವಿನ ಅಮೂಲ್ಯ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂಬ ಭರವಸೆ ನನಗಿದೆ.

30 ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲೂ ಪವಿತ್ರಾತ್ಮ ಪ್ರೇರಿತವಾದ ಪ್ರೀತಿಯಿಂದಲೂ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ: ನೀವು ನನಗೋಸ್ಕರ ದೇವರಲ್ಲಿ ಪ್ರಾರ್ಥಿಸಿ ನನ್ನ ಹೋರಾಟದಲ್ಲಿ ಸಹಕರಿಸಿರಿ.

31 ಜುದೇಯದಲ್ಲಿರುವ ಅವಿಶ್ವಾಸಿಗಳ ಕೈಯಿಂದ ನಾನು ಪಾರಾಗುವಂತೆ ಪ್ರಾರ್ಥಿಸಿರಿ; ಜೆರುಸಲೇಮಿನ ದೇವಜನರು ನನ್ನ ಸೇವೆಯನ್ನು ಸಂತೋಷದಿಂದ ಸ್ವೀಕರಿಸುವಂತೆ ಪ್ರಾರ್ಥಿಸಿರಿ.

32 ಅನಂತರ ದೇವರ ಚಿತ್ತವಾದಲ್ಲಿ ನಾನು ಸಂತೋಷದಿಂದ ನಿಮ್ಮಲ್ಲಿ ಬರುತ್ತೇನೆ. ನಿಮ್ಮ ಸಂಗಡವಿದ್ದು ವಿಶ್ರಾಂತಿಪಡೆಯುತ್ತೇನೆ.

33 ಶಾಂತಿದಾತ ದೇವರು ನಿಮ್ಮೆಲ್ಲರೊಡನೆ ಇರಲಿ! ಆಮೆನ್.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು