Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 14 - ಕನ್ನಡ ಸತ್ಯವೇದವು C.L. Bible (BSI)


ಊಟೋಪಚಾರದಲ್ಲಿ ತಾರತಮ್ಯವೇಕೆ?

1 ವಿಶ್ವಾಸದಲ್ಲಿ ಸ್ಥಿರವಿಲ್ಲದವರನ್ನೂ ನಿಮ್ಮ ಸಂಗಡ ಸೇರಿಸಿಕೊಳ್ಳಿರಿ. ಆದರೆ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ವಾಗ್ವಾದ ನಡೆಸಬೇಡಿ.

2 ಒಬ್ಬನು ಎಂಥ ಆಹಾರವನ್ನಾದರೂ ಭುಜಿಸಬಹುದೆಂದು ಭಾವಿಸುತ್ತಾನೆ. ವಿಶ್ವಾಸದಲ್ಲಿ ಸ್ಥಿರವಿಲ್ಲದವನು ಸಸ್ಯಾಹಾರಿ ಆಗಿಯೇ ಇರುತ್ತಾನೆ.

3 ಮಾಂಸಾಹಾರಿಯು ಸಸ್ಯಾಹಾರಿಯನ್ನು ಹೀನೈಸಬಾರದು; ಸಸ್ಯಾಹಾರಿಯು ಮಾಂಸಾಹಾರಿಯನ್ನು ದೋಷಿಯೆಂದು ತೀರ್ಪುಕೊಡಬಾರದು. ಏಕೆಂದರೆ, ಇಬ್ಬರೂ ದೇವರಿಂದ ಅಂಗೀಕೃತರು.

4 ಮತ್ತೊಬ್ಬನ ದಾಸನ ಮೇಲೆ ದಂಡನೆಯ ತೀರ್ಪುಕೊಡಲು ನೀನು ಯಾರು? ಅವನು ಸಮರ್ಥನು ಅಥವಾ ಅಸಮರ್ಥನು ಎಂದು ತೀರ್ಪುಕೊಡುವುದು ಅವನ ಯಜಮಾನನಿಗೆ ಸೇರಿದ್ದು. ಅವನು ಸಮರ್ಥನಾಗುವಂತೆ ಮಾಡಲು ಪ್ರಭು ಶಕ್ತರು.

5 ಒಂದು ದಿನಕ್ಕಿಂತ ಮತ್ತೊಂದು ದಿನ ಮಂಗಳಕರವಾದುದು ಎಂದು ಒಬ್ಬನು ಭಾವಿಸಬಹುದು. ಮತ್ತೊಬ್ಬನು, ಎಲ್ಲಾ ದಿನಗಳು ಮಂಗಳಕರವಾದುವು ಎಂದು ಹೇಳಬಹುದು. ಈ ವಿಷಯದಲ್ಲಿ ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಂತೆ ನಡೆಯಲಿ.

6 ಒಂದು ದಿನವನ್ನು ಮಂಗಳಕರವೆಂದು ಭಾವಿಸುವವನು ಪ್ರಭುವಿಗಾಗಿಯೇ ಆ ರೀತಿ ಭಾವಿಸುತ್ತಾನೆ. ಮಾಂಸವನ್ನು ತಿನ್ನುವವನು ಪ್ರಭುವಿಗಾಗಿಯೇ ತಿನ್ನುತ್ತಾನೆ. ಹೇಗೆಂದರೆ, ತಿನ್ನುವ ಆ ಪದಾರ್ಥಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ. ಸಸ್ಯಾಹಾರಿಯೂ ಪ್ರಭುವಿಗಾಗಿಯೇ ಮಾಂಸವನ್ನು ತಿನ್ನದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ.

7 ನಮ್ಮಲ್ಲಿ ಯಾರೂ ತನಗಾಗಿಯೇ ಬದುಕುವುದಿಲ್ಲ; ತನಗಾಗಿಯೇ ಸಾಯುವುದಿಲ್ಲ. ನಾವು ಬದುಕಿದರೂ ಪ್ರಭುವಿಗಾಗಿಯೇ; ಸತ್ತರೂ ಅವರಿಗಾಗಿಯೇ.

8 ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು.

9 ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತಯೇಸು ಸತ್ತು ಜೀವಂತರಾದದ್ದು.

10 ಹೀಗಿರುವಲ್ಲಿ ಸಸ್ಯಾಹಾರಿಯೇ, ನೀನು ನಿನ್ನ ಸಹೋದರನನ್ನು ದೋಷಿಯೆಂದು ತೀರ್ಪಿಡುವುದೇಕೆ? ಮಾಂಸಹಾರಿಯೇ, ನಿನ್ನ ಸಹೋದರನನ್ನು ಹೀನೈಸುವುದೇಕೆ? ನಾವೆಲ್ಲರೂ ದೇವರ ನ್ಯಾಯಸ್ಥಾನದ ಮುಂದೆ ನಿಲ್ಲಬೇಕಲ್ಲವೆ?

11 ಪವಿತ್ರಗ್ರಂಥದಲ್ಲಿ : ಎಲ್ಲರೂ ನನಗೆ ಸಾಷ್ಟಾಂಗವೆರಗುವರು ಎಲ್ಲರೂ ನನ್ನನ್ನು ದೇವರೆಂದು ನಿವೇದಿಸುವರು ಇದಕ್ಕೆ ಜೀವಸ್ವರೂಪನಾದ ನಾನೇ ಸಾಕ್ಷಿ,” ಎಂದು ಸರ್ವೇಶ್ವರಸ್ವಾಮಿ ಹೇಳಿದ್ದಾರೆ.

12 ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕು.


ಯಾವ ಪದಾರ್ಥವು ಸ್ವತಃ ಅಶುದ್ಧವಲ್ಲ

13 ಆದಕಾರಣ ಒಬ್ಬರ ವಿಷಯದಲ್ಲಿ ಒಬ್ಬರು ತೀರ್ಪುಮಾಡದೆ ಇರೋಣ. ಬದಲಾಗಿ ಸಹೋದರನಿಗೆ ಯಾವ ರೀತಿಯ ಅಡ್ಡಿಯನ್ನಾಗಲೀ ಅಡಚಣೆಗಳನ್ನಾಗಲೀ ಉಂಟುಮಾಡುವುದಿಲ್ಲವೆಂದು ತೀರ್ಮಾನಿಸಿಕೊಳ್ಳಿ.

14 ಯಾವ ಪದಾರ್ಥವು ಸ್ವತಃ ಅಶುದ್ಧವಲ್ಲವೆಂದು ಪ್ರಭುಯೇಸುವಿನಲ್ಲಿ ನಾನು ಖಚಿತವಾಗಿ ಹೇಳಬಲ್ಲೆ. ಆದರೆ, ಒಂದು ಪದಾರ್ಥವನ್ನು ಅಶುದ್ಧವೆಂದು ಯಾರಾದರೂ ಭಾವಿಸಿದರೆ ಅದು ಅವನಿಗೆ ಅಶುದ್ಧವೇ ಆಗುತ್ತದೆ.

15 ನೀನು ಏನನ್ನಾದರೂ ತಿನ್ನುವುದರಿಂದ ನಿನ್ನ ಸಹೋದರನ ಮನಸ್ಸಿಗೆ ನೋವುಂಟಾಗುವುದಾದರೆ ನಿನ್ನ ಆ ವರ್ತನೆ ಪ್ರೀತಿಪ್ರೇರಿತವಾದುದಲ್ಲ. ಯಾರಿಗೋಸ್ಕರ ಕ್ರಿಸ್ತಯೇಸು ಪ್ರಾಣಾರ್ಪಣೆ ಮಾಡಿದರೋ ಅಂಥವನಿಗೆ ನೀನು ತಿನ್ನುವ ಆಹಾರದಿಂದಾಗಿ ನಾಶವನ್ನು ತರಬಾರದು.

16 ನಿನಗೆ ರುಚಿಕರವಾದದ್ದು ಪರರಿಗೆ ದೂಷಣಾಸ್ಪದವಾಗದಿರಲಿ.

17 ಏಕೆಂದರೆ, ದೇವರ ಸಾಮ್ರಾಜ್ಯ ತಿನ್ನುವುದರಲ್ಲಿ, ಕುಡಿಯುವುದರಲ್ಲಿ ಅಲ್ಲ, ಪವಿತ್ರಾತ್ಮ ಅವರಿಂದ ಬರುವ ಸತ್ಸಂಬಂಧ, ಶಾಂತಿಸಮಾಧಾನ ಮತ್ತು ಸಂತೋಷ ಇವುಗಳಲ್ಲಿ ಅಡಗಿದೆ.

18 ಹೀಗೆ ಕ್ರಿಸ್ತಯೇಸುವಿಗೆ ಸೇವೆಮಾಡುವವನು, ದೇವರಿಂದ ಮೆಚ್ಚುಗೆಯನ್ನು ಮತ್ತು ಮನುಷ್ಯರಿಂದ ಮಾನ್ಯತೆಯನ್ನು ಪಡೆಯುತ್ತಾನೆ.

19 ಆದ್ದರಿಂದ ಶಾಂತಿಸಮಾಧಾನಕ್ಕೂ ಪರಸ್ಪರ ಅಭ್ಯುದಯಕ್ಕೂ ಹಿತಕರವಾದವುಗಳನ್ನೇ ಅರಸೋಣ.

20 ಕೇವಲ ಆಹಾರಕ್ಕಾಗಿ, ದೇವರು ಕಟ್ಟಿದ್ದನ್ನು ನೀನು ಕೆಡವಬೇಡ. ಆಹಾರಪದಾರ್ಥಗಳೆಲ್ಲಾ ಒಳ್ಳೆಯವೇ. ಆದರೆ ಅವುಗಳಲ್ಲಿ ಯಾವುದಾದರೂ ಒಂದನ್ನು ತಿನ್ನುವುದರಿಂದ ಮತ್ತೊಬ್ಬನಿಗೆ ವಿಘ್ನವನ್ನು ಒಡ್ಡುವುದಾದರೆ, ಅದು ತಪ್ಪು.

21 ಮಾಂಸವನ್ನು ತಿನ್ನುವುದಾಗಲಿ, ದ್ರಾಕ್ಷಾರಸವನ್ನು ಕುಡಿಯುವುದಾಗಲಿ, ಅಥವಾ ಇನ್ನಾವುದೇ ಆಗಲಿ, ನಿನ್ನ ಸಹೋದರನಿಗೆ ಪಾಪಕ್ಕೆ ಕಾರಣವಾಗುವುದಾದರೆ ಅದನ್ನು ಬಿಟ್ಟುಬಿಡುವುದೇ ಲೇಸು.

22 ಈ ವಿಷಯದಲ್ಲಿ ನಿನಗಿರುವ ವೈಯಕ್ತಿಕ ನಂಬಿಕೆ ದೇವರಿಗೆ ಮತ್ತು ನಿನಗೆ ಮಾತ್ರ ತಿಳಿದಿರಲಿ. ತಾನು ಅನುಮೋದಿಸಿ ಮಾಡಿದುದರ ಬಗ್ಗೆ ಅನುಮಾನಪಡದವನು ಧನ್ಯನು.

23 ಅನುಮಾನದಿಂದ ಊಟಮಾಡುವವನು ದೇವರ ಮುಂದೆ ಅಪರಾಧಿಯಾಗುತ್ತಾನೆ. ಏಕೆಂದರೆ, ಅವನು ವಿಶ್ವಾಸದ ಆಧಾರದ ಮೇಲೆ ವರ್ತಿಸುತ್ತಿಲ್ಲ. ವಿಶ್ವಾಸದ ಆಧಾರವಿಲ್ಲದೆ ಮಾಡುವುದೆಲ್ಲವೂ ಪಾಪವೇ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು