ರೋಮಾಪುರದವರಿಗೆ 13 - ಕನ್ನಡ ಸತ್ಯವೇದವು C.L. Bible (BSI)ಸರ್ಕಾರಕ್ಕೆ ಸಲ್ಲತಕ್ಕ ಸೇವೆ 1 ಪ್ರತಿಯೊಬ್ಬನು ತನ್ನ ಮೇಲಿನ ಅಧಿಕಾರಿಗಳಿಗೆ ಅಧೀನನಾಗಿರಬೇಕು. ಅಧಿಕಾರವೆಲ್ಲವೂ ಬರುವುದು ದೇವರಿಂದಲೇ. ಈಗಿರುವ ಅಧಿಕಾರಿಗಳೂ ದೇವರಿಂದಲೇ ನೇಮಕಗೊಂಡವರು. 2 ಆದುದರಿಂದ ಅಧಿಕಾರವನ್ನು ವಿರೋಧಿಸುವವರು ದೇವರ ಆ ನೇಮಕವನ್ನೇ ವಿರೋಧಿಸುತ್ತಾರೆ. ಅಂಥವರು ಶಿಕ್ಷೆಗೆ ಗುರಿಯಾಗುತ್ತಾರೆ. 3 ಕೆಟ್ಟದ್ದನ್ನು ಮಾಡುವವನೇ ಹೊರತು ಒಳ್ಳೆಯದನ್ನು ಮಾಡುವವನು ಅಧಿಕಾರಿಗೆ ಭಯಪಡಬೇಕಾಗಿಲ್ಲ. ಅಧಿಕಾರಿಯ ಮುಂದೆ ನಿರ್ಭಯನಾಗಿರಲು ನಿನಗೆ ಇಷ್ಟವಿದ್ದರೆ ಒಳ್ಳೆಯದನ್ನೇ ಮಾಡುತ್ತಿರು. ಆಗ ಆತನು ನಿನ್ನನ್ನು ಪ್ರಶಂಶಿಸುವನು. 4 ಆತನು ನಿನ್ನ ಹಿತಕ್ಕಾಗಿ ದೇವರಿಂದ ನೇಮಕಗೊಂಡ ದಾಸನಾಗಿದ್ದಾನೆ. ಆದರೆ ನೀನು ಕೆಟ್ಟದ್ದನ್ನು ಮಾಡಿದೆ ಆದರೆ ಭಯಪಡಲೇಬೇಕು. ಏಕೆಂದರೆ, ಆತನ ಕೈಯಲ್ಲಿರುವ ಅಧಿಕಾರದಂಡವು ವ್ಯರ್ಥವಾದುದೇನೂ ಅಲ್ಲ. ದೇವರ ದಾಸನಾಗಿರುವ ಆತನು ಕೆಟ್ಟದ್ದನ್ನು ಮಾಡುವವರಿಗೆ ದೇವರದಂಡನೆಯನ್ನು ವಿಧಿಸುತ್ತಾನೆ. 5 ಆದ್ದರಿಂದ ನಿಮ್ಮ ಅಧಿಕಾರಿಗಳಿಗೆ ಅಧೀನರಾಗಿರಿ. ಕೇವಲ ದಂಡನೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲ, ನಿಮ್ಮ ಮನಸ್ಸಾಕ್ಷಿಯ ಸಲುವಾಗಿ. 6 ನೀವು ಕಂದಾಯವನ್ನು ಕಟ್ಟುತ್ತಿರುವುದೂ ಈ ಕಾರಣದಿಂದಲೇ. ಅಧಿಕಾರಿಗಳು ದೇವರ ದಾಸರು. ಅವರು ತಮ್ಮ ಪ್ರಸ್ತುತ ಕಾರ್ಯಗಳನ್ನು ನಿರ್ವಹಿಸುವಾಗ ದೇವರ ಸೇವೆಯನ್ನು ಮಾಡುತ್ತಾರೆ. 7 ಆದ್ದರಿಂದ ಸಲ್ಲಿಸಬೇಕಾದುದನ್ನು ಅವರಿಗೆ ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು, ಯಾರಿಗೆ ವಿಧೇಯತೆಯೋ ಅವರಿಗೆ ವಿಧೇಯತೆಯನ್ನು, ಯಾರಿಗೆ ಗೌರವವೋ ಅವರಿಗೆ ಗೌರವವನ್ನು ಸಲ್ಲಿಸಿರಿ. ಕ್ರಿಸ್ತಂಬರರಾಗಿರಿ 8 ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ವಿಧವಾದ ಋಣವೂ ನಿಮಗಿರಬಾರದು. ಏಕೆಂದರೆ ಪರರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ಪೂರ್ಣವಾಗಿ ನೆರವೇರಿಸಿದವನು. 9 “ವ್ಯಭಿಚಾರ ಮಾಡಬೇಡ, ಕೊಲಬೇಡ, ಕಳಬೇಡ, ದುರಾಶೆ ಪಡಬೇಡ,” - ಈ ಮುಂತಾದ ಆಜ್ಞೆಗಳೆಲ್ಲವೂ “ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ಅಡಗಿವೆ. 10 ಪ್ರೀತಿಯು ಪರರಿಗೆ ಕೇಡು ಬಗೆಯದು. ಆದಕಾರಣ ಪ್ರೀತಿಯೇ ಧರ್ಮಶಾಸ್ತ್ರದ ಪೂರೈಕೆ. 11 ಇದೆಂಥ ಕಾಲವೆಂದು ತಿಳಿದಿರುವ ನೀವು ಇದೆಲ್ಲವನ್ನು ಮಾಡಬೇಕು. ನಿದ್ರೆಯಿಂದ ಎಚ್ಚೆತ್ತುಕೊಳ್ಳುವ ವೇಳೆಯು ಸಮೀಪಿಸಿತು. ನಾವು ಕ್ರಿಸ್ತಯೇಸುವನ್ನು ವಿಶ್ವಾಸಿಸಲು ಆರಂಭಿಸಿದಾಗ ಇದ್ದುದಕ್ಕಿಂತಲೂ ಈಗ ನಮ್ಮ ಉದ್ಧಾರವು ಸಮೀಪವಾಗಿದೆ. 12 ಇರುಳು ಬಹುಮಟ್ಟಿಗೆ ಕಳೆಯಿತು. ಹಗಲು ಸಮೀಪಿಸಿತು. ಇನ್ನು ಅಂಧಕಾರಕ್ಕೆ ಅನುಗುಣವಾದ ದುಷ್ಕೃತ್ಯಗಳನ್ನು ತ್ಯಜಿಸಿಬಿಡೋಣ. ಬೆಳಕಿಗೆ ಅನುಗುಣವಾದ ಆಯುಧಗಳನ್ನು ಧರಿಸಿಕೊಳ್ಳೋಣ. 13 ದುಂದೌತಣ - ಕುಡಿತಗಳಲ್ಲಾಗಲೀ, ಕಾಮವಿಲಾಸ-ನಿರ್ಲಜ್ಜಾಕೃತ್ಯಗಳಲ್ಲಾಗಲೀ, ಕಲಹ-ಮತ್ಸರಗಳಲ್ಲಾಗಲೀ ಕಾಲಕಳೆಯದೆ ಬೆಳಕಿನಲ್ಲಿ ಬಾಳುವವರಂತೆ ಸಭ್ಯರಾಗಿ ವರ್ತಿಸೋಣ. 14 ದೇಹದ ದುರಿಚ್ಛೆಗಳಿಗೆ ಬಲಿಯಾಗದೆ ಕ್ರಿಸ್ತಂಬರರಾಗಿರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India