ರೋಮಾಪುರದವರಿಗೆ 10 - ಕನ್ನಡ ಸತ್ಯವೇದವು C.L. Bible (BSI)1 ಸಹೋದರರೇ, ನನ್ನ ಸ್ವಜನರಾದ ಇಸ್ರಯೇಲರು ಜೀವೋದ್ಧಾರ ಹೊಂದಬೇಕೆಂದೇ ನನ್ನ ಹಾರ್ದಿಕ ಹಂಬಲ. ನಾನು ದೇವರಲ್ಲಿ ಮಾಡುವ ಪ್ರಾರ್ಥನೆಯೂ ಇದೇ. 2 ದೇವರ ವಿಷಯದಲ್ಲಿ ಅವರು ಬಹಳ ನಿಷ್ಠಾವಂತರು ಎಂದು ಒತ್ತಿಹೇಳಬಲ್ಲೆ. ಆದರೆ ಆ ನಿಷ್ಠೆ ನೈಜಜ್ಞಾನವನ್ನು ಆಧರಿಸಿಲ್ಲ. 3 ದೇವರೊಡನೆ ಸತ್ಸಂಬಂಧವನ್ನು ಪಡೆಯುವ ಮಾರ್ಗವನ್ನು ಅರಿಯದೆ ತಮ್ಮದೇ ಆದ ಧರ್ಮವನ್ನು ಸ್ಥಾಪಿಸಲು ಅವರು ಪ್ರಯತ್ನಿಸಿದರು. ಎಂದೇ ಅವರು ದೈವ ಸತ್ಸಂಬಂಧಕ್ಕೆ ಬಾಹಿರರಾದರು. 4 ದೇವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನಿಗೂ ಆ ಸತ್ಸಂಬಂಧ ದೊರಕುವಂತೆ ಕ್ರಿಸ್ತಯೇಸು ಧರ್ಮಶಾಸ್ತ್ರವನ್ನು ಇತಿಗೊಳಿಸಿದರು. ಜಗತ್ತಿಗೆಲ್ಲಾ ಜೀವೋದ್ಧಾರ 5 ಧರ್ಮಶಾಸ್ತ್ರ ಪಾಲನೆಯಿಂದ ಲಭಿಸುವ ಸತ್ಸಂಬಂಧದ ಬಗ್ಗೆ ಮೋಶೆ ಹೀಗೆ ಬರೆದಿದ್ದಾನೆ: “ಧರ್ಮಶಾಸ್ತ್ರದ ನೇಮನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವಿಸುವನು.” 6 ಆದರೆ ವಿಶ್ವಾಸದ ಮೂಲಕ ದೊರಕುವ ಸತ್ಸಂಬಂಧದ ಬಗ್ಗೆ ಹೀಗೆ ಬರೆಯಲಾಗಿದೆ: “ಕ್ರಿಸ್ತಯೇಸುವನ್ನು ಕೆಳಕ್ಕೆ ಕರೆತರಲು ಸ್ವರ್ಗಕ್ಕೆ ಏರಿಹೋಗುವವರು ಯಾರು?” ಎಂದಾಗಲೀ, 7 “ಕ್ರಿಸ್ತಯೇಸುವನ್ನು ಸಾವಿನಿಂದ ಮೇಲಕ್ಕೆ ಕರೆತರಲು ಪಾತಾಳಕ್ಕೆ ಇಳಿದುಹೋಗುವವರು ಯಾರು?” ಎಂದಾಗಲೀ ನಿನ್ನ ಮನದಲ್ಲಿ ನೀನು ಪ್ರಶ್ನಿಸಿಕೊಳ್ಳಬೇಕಾಗಿಲ್ಲ. 8 ಧರ್ಮಗ್ರಂಥವು ಹೇಳುವುದಿಷ್ಟೆ; ದೇವರ ವಾಕ್ಯ ನಿನ್ನ ಸಮೀಪದಲ್ಲೇ ಇದೆ. ಅದು ನಿನ್ನ ಬಾಯಲ್ಲೂ ಹೃದಯದಲ್ಲೂ ಇದೆ. ಅದೇ ನಾವು ನಿಮಗೆ ಬೋಧಿಸುವ ವಿಶ್ವಾಸದ ವಾಕ್ಯ. 9 “ಯೇಸುಸ್ವಾಮಿಯೇ ಪ್ರಭು” ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ. 10 ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆ; ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ. 11 ಏಕೆಂದರೆ, “ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ,” ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ. 12 ಈ ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ. ಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ. 13 “ಪ್ರಭುವಿನ ನಾಮಸ್ಮರಣೆಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ,” ಎಂದು ಲಿಖಿತವಾಗಿದೆ. 14 ಪ್ರಭುವಿನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರ ನಾಮಸ್ಮರಣೆ ಮಾಡುವುದಾದರೂ ಹೇಗೆ? ಅವರ ವಿಷಯವನ್ನು ಕುರಿತು ಕೇಳದಿದ್ದರೆ ಅವರನ್ನು ವಿಶ್ವಾಸಿಸುವುದಾದರೂ ಹೇಗೆ? ಬೋಧಿಸುವವರು ಇಲ್ಲದಿದ್ದರೆ ಅವರ ವಿಷಯವನ್ನು ಕುರಿತು ಕೇಳುವುದಾದರೂ ಹೇಗೆ? 15 ಬೋಧಿಸುವವರನ್ನು ಕಳುಹಿಸದೆಹೋದರೆ, ಅವರು ಶುಭಸಂದೇಶವನ್ನು ಬೋಧಿಸುವುದಾದರೂ ಹೇಗೆ? “ಶುಭಸಂದೇಶವನ್ನು ತರುವವರ ಬರುವಿಕೆ ಎಷ್ಟೋ ಶುಭದಾಯಕ,” ಎಂದು ಪವಿತ್ರಗ್ರಂಥದಲ್ಲೇ ಬರೆಯಲಾಗಿದೆ. 16 ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಂಗೀಕರಿಸಲಿಲ್ಲ. ಆದ್ದರಿಂದಲೇ, ಯೆಶಾಯನು, “ಪ್ರಭುವೇ, ನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?” ಎಂದು ಮೊರೆಯಿಟ್ಟಿದ್ದಾನೆ. 17 ಇಂತಿರಲು, ಶುಭಸಂದೇಶವನ್ನು ಆಲಿಸುವುದರಿಂದ ವಿಶ್ವಾಸ ಮೂಡುತ್ತದೆ; ಶುಭಸಂದೇಶ ಕ್ರಿಸ್ತಯೇಸುವನ್ನು ಬೋಧಿಸುವುದರ ಮೂಲಕ ಪ್ರಕಟವಾಗುತ್ತದೆ. 18 ಈಗ ನನ್ನದೊಂದು ಪ್ರಶ್ನೆ: “ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೆ?” ನಿಶ್ಚಯವಾಗಿ ಇತ್ತು. ಪವಿತ್ರಗ್ರಂಥದಲ್ಲಿ ಹೇಳಿರುವಂತೆ: “ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು. ಅವರ ನುಡಿ ಭೂಮಿಯ ತುತ್ತತುದಿಯನ್ನು ಮುಟ್ಟಿತು.” 19 ಹಾಗೆಂದ ಮೇಲೆ ಇಸ್ರಯೇಲರು ಆ ಶುಭಸಂದೇಶವನ್ನು ಅರ್ಥಮಾಡಿಕೊಳ್ಳಲಿಲ್ಲ. ಎನ್ನೋಣವೆ? ಮೊದಲನೆಯದಾಗಿ, ಮೋಶೆಯ ಮಾತಿನಲ್ಲಿ ಉತ್ತರಿಸುವುದಾದರೆ: “ ‘ಜನಾಂಗ’ ಎನಿಸಿಕೊಳ್ಳದವರನ್ನು ನೋಡಿ ನೀವು ಅಸೂಯೆಪಡುವಂತೆ ಮಾಡುತ್ತೇನೆ; ಮತಿಹೀನರೆನಿಸಿಕೊಂಡ ಜನಾಂಗವನ್ನು ನೋಡಿ ನೀವು ಕೆರಳುವಂತೆ ಮಾಡುತ್ತೇನೆ.” 20 ಯೆಶಾಯನು ಮತ್ತಷ್ಟು ದಿಟ್ಟತನದಿಂದ ಈ ರೀತಿ ಹೇಳಿದ್ದಾನೆ: “ನನ್ನನ್ನು ಅರಸದವರಿಗೂ ನಾನು ಕಾಣಿಸಿಕೊಂಡೆ ನನ್ನ ಬಗ್ಗೆ ವಿಚಾರಿಸದವರಿಗೂ ನಾನು ಪ್ರತ್ಯಕ್ಷನಾದೆ.” 21 ಆದರೆ ಇಸ್ರಯೇಲರನ್ನು ಕುರಿತು: “ಅವಿಧೇಯರೂ ಪ್ರತಿಭಟಿಸುವವರೂ ಆದ ಈ ಜನಾಂಗವನ್ನು ದಿನವೆಲ್ಲಾ ನಾನು ಕೈಚಾಚಿ ಕರೆದೆ,” ಎಂದು ಪ್ರವಾದಿಸಿದ್ದಾನೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India