Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 1 - ಕನ್ನಡ ಸತ್ಯವೇದವು C.L. Bible (BSI)

1-7 ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರು ಆದ ರೋಮ್‍ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತಯೇಸುವಿನ ದಾಸನೂ ಪ್ರೇಷಿತನಾಗಲು ಕರೆಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ: ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೇಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ.

2 ದೇವರು ತಮ್ಮ ಶುಭಸಂದೇಶವನ್ನು ನೀಡುವುದಾಗಿ ಪ್ರವಾದಿಗಳ ಮುಖಾಂತರ ಮುಂಚಿತವಾಗಿಯೇ ಪವಿತ್ರಗ್ರಂಥದಲ್ಲಿ ವಾಗ್ದಾನಮಾಡಿದ್ದರು.

3-4 ಈ ಸಂದೇಶ ದೇವರ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ಕುರಿತಾದುದು. ಮನುಷ್ಯತ್ವದ ಮಟ್ಟಿಗೆ ಯೇಸು ದಾವೀದನ ವಂಶಜರು; ದೈವಿಕ ಪರಿಶುದ್ಧತೆಯ ಮಟ್ಟಿಗೆ ಇವರು ದೇವರ ಶಕ್ತಿಯನ್ನು ವ್ಯಕ್ತಪಡಿಸುವ ದೇವರ ಪುತ್ರ. ಸತ್ತು ಪುನರುತ್ಥಾನ ಹೊಂದಿ ಇದನ್ನು ಖಚಿತಪಡಿಸಿದವರು.

5 ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು.

6 ಯೇಸುಕ್ರಿಸ್ತರಿಗೆ ಸ್ವಂತದವರಾಗಲು ಕರೆಹೊಂದಿರುವ ನೀವು ಕೂಡ ಈ ಸರ್ವಜನಾಂಗಗಳಲ್ಲಿ ಸೇರಿದ್ದೀರಿ.


ರೋಮ್ ನಗರಕ್ಕೆ ಹೋಗುವ ಹಂಬಲ

8 ಮೊಟ್ಟಮೊದಲನೆಯದಾಗಿ, ನಿಮ್ಮೆಲ್ಲರ ಪರವಾಗಿ ಯೇಸುಕ್ರಿಸ್ತರ ಮುಖಾಂತರ ನಾನು ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ನಿಮ್ಮ ವಿಶ್ವಾಸ ಹಾಗು ವಿಧೇಯತೆ ಇಡೀ ಜಗತ್ತಿನಲ್ಲಿ ಪ್ರಖ್ಯಾತವಾಗಿದೆ.

9-10 ನಾನು ಪ್ರಾರ್ಥನೆ ಮಾಡುವಾಗಲೆಲ್ಲ ತಪ್ಪದೆ, ನಿಮ್ಮ ಪರವಾಗಿ ವಿಜ್ಞಾಪನೆ ಮಾಡುತ್ತೇನೆ. ದೈವಚಿತ್ತದಿಂದ ನಾನು ನಿಮ್ಮಲ್ಲಿಗೆ ಬರಲು ಈಗಲಾದರೂ ಅನುಕೂಲವಾಗಲೆಂದು ಬೇಡಿಕೊಳ್ಳುತ್ತೇನೆ. ಇದಕ್ಕೆ ದೇವರೇ ಸಾಕ್ಷಿ. ಅವರ ಪುತ್ರನನ್ನೇ ಕುರಿತಾದ ಶುಭಸಂದೇಶವನ್ನು ಸಾರುತ್ತಾ ದೈವಸೇವೆಯನ್ನು ಮನಃಪೂರ್ವಕವಾಗಿ ಮಾಡಿಕೊಂಡು ಬರುತ್ತಿದ್ದೇನೆ.

11 ನಾನು ನಿಮ್ಮನ್ನು ಕಂಡು, ನಿಮ್ಮೊಡನೆ ಅಧ್ಯಾತ್ಮಿಕ ವರಗಳನ್ನು ಹಂಚಿಕೊಂಡು, ನಿಮ್ಮನ್ನು ದೃಢಪಡಿಸಲು ಅತ್ಯಾಸಕ್ತಿಯಿಂದಿದ್ದೇನೆ.

12 ಅಂದರೆ, ನನ್ನ ವಿಶ್ವಾಸದಿಂದ ನೀವೂ ನಿಮ್ಮ ವಿಶ್ವಾಸದಿಂದ ನಾನೂ - ಪರಸ್ಪರ ಪ್ರಯೋಜನವನ್ನು ಪಡೆಯಬೇಕೆಂಬುದೇ ನನ್ನ ಆಶಯ.

13 ಸಹೋದರರೇ, ಈ ವಿಷಯ ನಿಮಗೆ ತಿಳಿದಿರಲಿ; ನನ್ನ ಸೇವೆ ಇತರ ಜನರಲ್ಲಿ ಫಲಪ್ರದವಾದಂತೆ ನಿಮ್ಮಲ್ಲೂ ಫಲಪ್ರದವಾಗಬೇಕೆಂಬ ಉದ್ದೇಶದಿಂದ ನಿಮ್ಮ ಬಳಿಗೆ ಬರಲು ನಾನು ಅನೇಕ ಸಾರಿ ಪ್ರಯತ್ನಿಸಿದೆನು. ಆದರೆ, ಕಾರಣಾಂತರಗಳಿಂದ ಇದುವರೆಗೂ ಬರಲು ಸಾಧ್ಯವಾಗಲಿಲ್ಲ.

14 ಜನರು ನಾಗರೀಕರೇ ಆಗಿರಲಿ, ಅನಾಗರಿಕರೇ ಆಗಿರಲಿ, ವಿದ್ಯಾವಂತರೇ ಆಗಿರಲಿ, ಅವಿದ್ಯಾವಂತರೇ ಆಗಿರಲಿ, ಅವರೆಲ್ಲರಿಗೂ ನಾನು ಕರ್ತವ್ಯಬದ್ಧನಾಗಿದ್ದೇನೆ.

15 ಆದುದರಿಂದಲೇ ರೋಮ್ ನಗರದಲ್ಲಿರುವ ನಿಮಗೂ ಶುಭಸಂದೇಶವನ್ನು ಸಾರಲು ನಾನು ಆತುರದಿಂದ ಎದುರುನೋಡುತ್ತಿದ್ದೇನೆ.


ಶುಭಸಂದೇಶದ ಶಕ್ತಿ

16 ಶಭಸಂದೇಶದ ವಿಷಯದಲ್ಲಿ ನಾನು ನಾಚಿಕೆಪಡುವವನೇ ಅಲ್ಲ. ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ವಿಶ್ವಾಸಿಸುವ ಪ್ರತಿಯೊಬ್ಬನಿಗೂ ಈ ಶುಭಸಂದೇಶವು ಜೀವೋದ್ಧಾರವನ್ನು ತರುವ ದೇವರ ಶಕ್ತಿಯಾಗಿದೆ.

17 ದೇವರು ಮಾನವನನ್ನು ಹೇಗೆ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಶುಭಸಂದೇಶವು ಪ್ರಕಟಿಸುತ್ತದೆ. ಇಂಥ ಸಂಬಂಧವು ಆದಿಯಿಂದ ಅಂತ್ಯದವರೆಗೂ ವಿಶ್ವಾಸದಿಂದ ಮಾತ್ರ ಸಾಧ್ಯ. “ಯಾರು ದೇವರೊಡನೆ ಸತ್ಸಂಬಂಧ ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ," ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.


ಮಾನವ ಕುಲದ ಮಲಿನತೆ

18 ಮಾನವರ ಎಲ್ಲಾ ಪಾಪಾಕ್ರಮಗಳ ಮೇಲೆ ದೇವರ ಕೋಪಾಗ್ನಿ ಸ್ವರ್ಗದಿಂದ ಎರಗುವುದೆಂದು ಪ್ರಕಟವಾಗುತ್ತಿದೆ. ಏಕೆಂದರೆ, ಅವರ ಅಕ್ರಮ ನಡತೆ ಸತ್ಯವನ್ನು ಅಡಗಿಸುತ್ತಿದೆ.

19 ದೇವರ ವಿಷಯವಾಗಿ ಮಾನವರು ಏನನ್ನು ಅರಿತುಕೊಳ್ಳಲು ಸಾಧ್ಯವೋ ಅದು ಅವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ಅದನ್ನು ಅವರಿಗೆ ಸ್ಪಷ್ಟಪಡಿಸಿದ್ದಾರೆ.

20 ದೇವರು ಲೋಕವನ್ನು ಸೃಷ್ಟಿಸಿದಂದಿನಿಂದ ಅವರ ಅಗೋಚರ ಗುಣಲಕ್ಷಣಗಳು, ಅವರ ಅನಂತ ಶಕ್ತಿ ಮತ್ತು ದೈವಸ್ವಭಾವ ಮನುಷ್ಯರಿಗೆ ಸೃಷ್ಟಿಗಳ ಮೂಲಕವೇ ವೇದ್ಯವಾಗುತ್ತಿವೆ. ಆದುದರಿಂದ ಮಾನವರು ತಮ್ಮ ಅಜ್ಞಾನಕ್ಕೆ ಯಾವ ನೆಪವನ್ನು ಒಡ್ಡಲೂ ಸಾಧ್ಯವಿಲ್ಲ.

21 ದೇವರನ್ನು ಅವರು ಅರಿತಿದ್ದರೂ ದೇವರೆಂದು ಗೌರವಿಸಲಿಲ್ಲ; ದೇವರಿಗೆ ಉಪಕಾರ ಸ್ಮರಣೆಯನ್ನು ಮಾಡಲಿಲ್ಲ. ಬದಲಾಗಿ ಅವರು ವ್ಯರ್ಥ ಆಲೋಚನೆಗಳಲ್ಲಿ ಮಗ್ನರಾದರು. ಅವರ ವಿವೇಕರಹಿತ ಮನಸ್ಸು ಅಂಧಕಾರಮಯ ಆಯಿತು.

22 ತಾವೇ ಜ್ಞಾನಿಗಳೆಂದುಕೊಚ್ಚಿಕೊಳ್ಳುತ್ತ ಅವರು ನಿಜವಾಗಿಯೂ ಮೂರ್ಖರಾದರು.

23 ಅಮರದೇವರನ್ನು ಆರಾಧಿಸುವುದನ್ನು ಬಿಟ್ಟು ಅಳಿದುಹೋಗುವಂಥ ನರಮಾನವರ, ಪ್ರಾಣಿಪಕ್ಷಿಗಳ, ಸರ್ಪಾದಿಗಳ ವಿಗ್ರಹಗಳನ್ನು ಮಾಡಿ ಆರಾಧಿಸತೊಡಗಿದರು.

24 ಆದುದರಿಂದ, ಮಾನವರು ಮನಸ್ಸಿನ ಆಶಾಪಾಶಗಳಿಗೆ ಬಲಿಯಾಗಿ ತಮ್ಮ ದೇಹಗಳಿಂದ ತಮ್ಮತಮ್ಮಲ್ಲೇ ಅಶ್ಲೀಲಕೃತ್ಯಗಳೆಸಗಲೆಂದು ದೇವರು ಅವರನ್ನು ಅಶುದ್ಧ ನಡತೆಗೆ ಬಿಟ್ಟುಬಿಟ್ಟರು.

25 ಅವರು ದೇವರ ಸತ್ಯವನ್ನು ಬಿಟ್ಟು ಅಸತ್ಯವಾದುದನ್ನು ಅಂಗೀಕರಿಸಿದರು; ಸೃಷ್ಟಿಕರ್ತನನ್ನು ಆರಾಧಿಸದೆ, ಸೃಷ್ಟಿಯಾದ ವಸ್ತುಗಳನ್ನೇ ಆರಾಧಿಸಿ, ಸೇವೆಸಲ್ಲಿಸಿದರು. ಸರ್ವಕಾಲಕ್ಕೂ ಸೃಷ್ಟಿಕರ್ತರೊಬ್ಬರಿಗೇ ಸ್ತುತಿಸ್ತೋತ್ರ ಸಲ್ಲತಕ್ಕದ್ದು. ಆಮೆನ್.

26 ಮಾನವರು ಈ ರೀತಿ ವರ್ತಿಸಿದ್ದರಿಂದಲೇ ದೇವರು ಅವರನ್ನು ತುಚ್ಛವಾದ ಕಾಮಾಭಿಲಾಷೆಗಳಿಗೆ ಬಿಟ್ಟುಬಿಟ್ಟರು. ಅವರ ಸ್ತ್ರೀಯರು, ಸ್ವಾಭಾವಿಕವಾದ ಭೋಗವನ್ನು ತೊರೆದು ಸ್ವಭಾವಕ್ಕೆ ವಿರುದ್ಧವಾದ ಕಾಮಕೃತ್ಯಗಳನ್ನು ಮಾಡಿದರು.

27 ಅಂತೆಯೇ ಪುರುಷರು ಸಹ ಸ್ವಾಭಾವಿಕವಾದ ಸ್ತ್ರೀಸಂಗವನ್ನು ತೊರೆದು, ತಮ್ಮತಮ್ಮಲ್ಲಿಯೇ ಕಾಮೋದ್ರೇಕಗೊಂಡರು; ಸಲಿಂಗಕಾಮಿಗಳಾದರು; ಲಜ್ಜಾಹೀನರಾಗಿ ವರ್ತಿಸಿದರು; ತಮ್ಮ ದುರ್ನಡತೆಗೆ ತಕ್ಕ ಶಿಕ್ಷೆಯನ್ನು ತಮ್ಮ ಮೇಲೆ ಬರಮಾಡಿಕೊಂಡರು.

28 ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟರು.

29 ಸಕಲ ವಿಧವಾದ ಅನ್ಯಾಯ, ಅಕ್ರಮ, ದುರಾಶೆ, ದುರ್ನಡತೆ ಅವರಲ್ಲಿ ತುಂಬಿಕೊಂಡವು. ಮತ್ಸರ, ಕೊಲೆ, ಕಲಹ, ಕಪಟತನ, ಹಗೆತನ, ಇವೆಲ್ಲವೂ ಅವರಲ್ಲಿ ತುಂಬಿಹೋಗಿವೆ.

30 ಅವರು ಹರಟೆಮಲ್ಲರು, ಚಾಡಿಕೋರರು, ದೇವದ್ರೋಹಿಗಳು, ಗರ್ವಿಗಳು, ಅಹಂಕಾರಿಗಳು, ಜಂಭಕೊಚ್ಚಿಕೊಳ್ಳುವವರು, ಕೇಡುಬಗೆಯುವವರು, ತಂದೆತಾಯಿಗಳಿಗೆ ಅವಿಧೇಯರು ಆಗಿದ್ದಾರೆ.

31 ಮಾತ್ರವಲ್ಲ, ಅವರು ಅವಿವೇಕಿಗಳು, ಅಪ್ರಾಮಾಣಿಕರು, ನಿಷ್ಕರುಣಿಗಳು ಮತ್ತು ನಿರ್ದಯಿಗಳು.

32 ಇಂಥವುಗಳನ್ನು ಮಾಡುವವರು ಮರಣದಂಡನೆಗೆ ಪಾತ್ರರು ಎಂಬ ದೈವನಿಯಮವನ್ನು ಅರಿತಿದ್ದರೂ ಇಂಥ ಹೀನ ಕೃತ್ಯಗಳನ್ನು ಮಾಡುತ್ತಾರೆ. ತಾವು ಮಾಡುವುದೇ ಅಲ್ಲದೆ ಹಾಗೆಮಾಡುವ ಇತರರನ್ನೂ ಪ್ರೋತ್ಸಾಹಿಸುತ್ತಾರೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು