ಮುನ್ನುಡಿ
“ನ್ಯಾಯಸ್ಥಾಪಕರು” ಎಂಬ ಪವಿತ್ರ ಬೈಬಲಿನ ಭಾಗ, ಇಸ್ರಯೇಲ್ ಜನಾಂಗದ ಚರಿತ್ರೆಯಲ್ಲಿ ಹಿಂಸಾಚಾರದಿಂದ ಕೂಡಿದ ಒಂದು ಕಾಲಾವಧಿಯನ್ನು ವರ್ಣಿಸುತ್ತದೆ. ಇದರ ಹಿನ್ನೆಲೆಯಲ್ಲಿ ಶಾಂತಿಯುತವಾದ ರೂತಳ ಈ ಚಿಕ್ಕ ಚರಿತ್ರೆ ಕಣ್ಣಿಗೆ ಕಟ್ಟುವಂತೆ ಎದ್ದು ನಿಲ್ಲುತ್ತದೆ.
ರೂತಳು ಪರಕೀಯಳು; ಮೋವಾಬ್ ನಾಡಿಗೆ ಸೇರಿದವಳು. ಆದರೂ, ಒಬ್ಬ ಇಸ್ರಯೇಲ್ ವಂಶಜನನ್ನು ಮದುವೆಯಾಗುತ್ತಾಳೆ. ಅವನು ಕಾಲವಾದ ಮೇಲೆ ಆಕೆ ತನ್ನ ಅತ್ತೆಯ ಬಗ್ಗೆ ಅಸಾಧಾರಣವಾದ ಗೌರವವನ್ನೂ ಪ್ರಾಮಾಣಿಕತೆಯನ್ನೂ ತೋರಿಸುತ್ತಾಳೆ. ಅದು ಮಾತ್ರವಲ್ಲ, ಇಸ್ರಯೇಲರ ದೇವರಾದ ಸರ್ವೇಶ್ವರಸ್ವಾಮಿಯಲ್ಲಿ ಅಪೂರ್ವವಾದ ವಿಶ್ವಾಸವನ್ನು ವ್ಯಕ್ತಪಡಿಸುತ್ತಾಳೆ. ಕ್ರಮೇಣ, ತನ್ನ ದಿವಂಗತ ಪತಿಯ ಹತ್ತಿರದ ಸಂಬಂಧಿಕರಲ್ಲಿ ಒಬ್ಬನನ್ನು ವಿವಾಹ ಮಾಡಿಕೊಳ್ಳುತ್ತಾಳೆ. ಇದರ ಪರಿಣಾಮವಾಗಿ ಇಸ್ರಯೇಲರ ಉನ್ನತೋನ್ನತ ರಾಜನಾದ ದಾವೀದನಿಗೆ ಮುತ್ತಜ್ಜಿಯಾಗುತ್ತಾಳೆ. ಲೋಕೋದ್ಧಾರಕ ಯೇಸುಸ್ವಾಮಿ ಜನಿಸಿದ್ದು ಈ ವಂಶದಲ್ಲೇ.
ದೇವರಿಂದ ದೂರವಾದ ಇಸ್ರಯೇಲರಿಗೆ ಬಂದೊದಗಿದ ಅನಾಹುತಗಳನ್ನು “ನ್ಯಾಯಸ್ಥಾಪಕರು” ಎಂಬ ಬೈಬಲ್ ಭಾಗ ಬಣ್ಣಿಸುತ್ತದೆ. ರೂತಳ ಈ ಪುಟ್ಟ ಚರಿತ್ರೆಯಾದರೋ ದೇವರಿಗೆ ಹತ್ತಿರವಾಗುವ, ದೇವರೊಡನೆ ಒಂದಾಗುವ, ಹೊರನಾಡಿಗರಿಗೆ ದೊರಕುವ ವರಪ್ರಸಾದವನ್ನು ಒತ್ತಿಹೇಳುತ್ತದೆ.
ಪರಿವಿಡಿ
ನವೊಮಿ ರೂತಳ ಸಮೇತ ಬೆತ್ಲೆಹೇಮಿಗೆ ಹಿಂದಿರುಗುತ್ತಾಳೆ 1:1-22
ರೂತ್ ಮತ್ತು ಬೋವಜನ ಭೇಟಿ 2:1—3:18
ಬೋವಜ ಮತ್ತು ರೂತಳ ವಿವಾಹ 4:1-22