ಯೋಹಾನ 1 - ಕನ್ನಡ ಸತ್ಯವೇದವು C.L. Bible (BSI)ದಿವ್ಯವಾಣಿ 1 ಜಗತ್ತು ಉಂಟಾಗುವ ಮೊದಲೇ ‘ದಿವ್ಯವಾಣಿ’ ಎಂಬವರಿದ್ದರು. ಆ ದಿವ್ಯವಾಣಿ ದೇವರಾಗಿದ್ದರು. ಆ ದಿವ್ಯವಾಣಿ ದೇವರೊಂದಿಗೆ ಇದ್ದರು; 2 ಅನಾದಿಯಿಂದಲೇ ಅವರು ದೇವರೊಂದಿಗೆ ಇದ್ದರು. 3 ದಿವ್ಯವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು. ಉಂಟಾದವುಗಳಲ್ಲಿ ಯಾವುದೂ ಆ ದಿವ್ಯವಾಣಿಯಿಂದಲ್ಲದೆ ಆದುದಿಲ್ಲ. 4 ಆ ದಿವ್ಯವಾಣಿಯಲ್ಲಿ ಸಜ್ಜೀವವಿತ್ತು. ಆ ಜೀವವೇ ಮಾನವಜನಾಂಗದ ಜ್ಯೋತಿಯಾಗಿತ್ತು. 5 ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ. 6 ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಆತನ ಹೆಸರು ಯೊವಾನ್ನ. 7 ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿನೀಡಿದನು. 8 ಈತನೇ ಜ್ಯೋತಿಯಾಗಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು. 9 ನಿಜವಾದ ಜ್ಯೋತಿ ಆ ದಿವ್ಯವಾಣಿಯೇ. ಮಾನವರೆಲ್ಲರನ್ನು ಬೆಳಗಿಸಲು ಲೋಕಕ್ಕೆ ಆಗಮಿಸಲಿದ್ದ ಜಗಜ್ಜ್ಯೋತಿ ಅವರೇ. 10 ದಿವ್ಯವಾಣಿ ಲೋಕದಲ್ಲಿ ಇದ್ದರು. ಅವರ ಮುಖಾಂತರವೇ ಲೋಕವು ಉಂಟಾಯಿತು. ಲೋಕವಾದರೋ ಅವರನ್ನು ಅರಿತುಕೊಳ್ಳದೆಹೋಯಿತು. 11 ಅವರು ತಮ್ಮ ಸ್ವದೇಶಕ್ಕೆ ಬಂದರು; ಸ್ವಜನರೇ ಅವರನ್ನು ಬರಮಾಡಿಕೊಳ್ಳದೆಹೋದರು. 12 ಕೆಲವರಾದರೋ ಅವರನ್ನು ಬರಮಾಡಿಕೊಂಡರು. ಅಂಥವರಿಗೆ, ಅಂದರೆ ಅವರಲ್ಲಿ ವಿಶ್ವಾಸ ಇಟ್ಟವರಿಗೆ, ದೇವರ ಮಕ್ಕಳಾಗುವ ಹಕ್ಕನ್ನು ಅವರು ಕೊಟ್ಟರು. 13 ಅಂಥವರ ಜನನವು ರಕ್ತಸಂಬಂಧದಿಂದ ಅಲ್ಲ, ಶಾರೀರಕ ಇಚ್ಛೆಯಿಂದ ಅಲ್ಲ. ಮಾನವ ಸಹಜ ಬಯಕೆಯಿಂದಲೂ ಅಲ್ಲ, ದೇವರಿಂದಲೇ ಆದುದು. 14 ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸಮಾಡಿದರು. ಅವರ ಮಹಿಮೆಯನ್ನು ನಾವು ನೋಡಿದೆವು, ಪಿತನಿಂದ ಪಡೆದ ಆ ಮಹಿಮೆ ಏಕೈಕ ಪುತ್ರನಿಗೆ ಮೀಸಲಾದ ಮಹಿಮೆಯೇ. ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು. 15 ಯೊವಾನ್ನನು ಅವರನ್ನು ಕುರಿತು ಸಾಕ್ಷಿ ನುಡಿಯುತ್ತಾ, “ ‘ಅವರು ನನ್ನ ಬಳಿಗೆ ಬಂದವರಾದರೂ ನನಗಿಂತ ಮೊದಲೇ ಇದ್ದವರು; ಆದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದ್ದು ಅವರನ್ನು ಕುರಿತೇ,” ಎಂದು ಘೋಷಿಸಿದನು. 16 ಅವರ ಪರಿಪೂರ್ಣತೆಯಿಂದ ನಾವೆಲ್ಲರು ವರಪ್ರಸಾದದ ಮೇಲೆ ವರಪ್ರಸಾದವನ್ನು ಪಡೆದಿದ್ದೇವೆ. 17 ಧರ್ಮಶಾಸ್ತ್ರವನ್ನು ಮೋಶೆಯ ಮುಖಾಂತರ ಕೊಡಲಾಯಿತು. ವರಪ್ರಸಾದ ಹಾಗೂ ಸತ್ಯವಾದರೋ ಯೇಸು ಕ್ರಿಸ್ತರ ಮುಖಾಂತರ ಬಂದವು. 18 ಯಾರೂ ಎಂದೂ ದೇವರನ್ನು ಕಂಡಿಲ್ಲ; ಪಿತನ ವಕ್ಷಸ್ಥಲದಲ್ಲಿರುವ, ಸ್ವತಃ ದೇವರಾಗಿರುವ ಏಕೈಕ ಪುತ್ರನೇ ಅವರನ್ನು ತಿಳಿಯಪಡಿಸಿದ್ದಾರೆ. ಸ್ನಾನಿಕ ಯೊವಾನ್ನನ ಸಾಕ್ಷ್ಯ ( ಮತ್ತಾ. 3:1-12 ; ಮಾರ್ಕ. 1:1-8 ; ಲೂಕ. 3:1-18 ) 19 ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳಿಸಿದರು. ಇವರು, “ನೀನು ಯಾರು?” ಎಂದು ಪ್ರಶ್ನಿಸಿದರು. 20 ಯೊವಾನ್ನನು ಅದಕ್ಕೆ ಉತ್ತರವಾಗಿ, “ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ,” ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ. 21 ಹಾಗಾದರೆ, “ನೀನು ಎಲೀಯನೋ?’ ಎಂದು ಕೇಳಲು ‘ಅಲ್ಲ’ ಎಂದನು. “ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?’ ಎಂದು ಅವರು ಮತ್ತೆ ಕೇಳಲು, “ಅದೂ ಅಲ್ಲ” ಎಂದು ಮರುನುಡಿದನು. 22 “ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುತ್ತೀ?’ ಎಂದು ಅವರು ಮತ್ತೊಮ್ಮೆ ಕೇಳಿದರು. 23 ಅದಕ್ಕೆ ಯೊವಾನ್ನನು, “ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು,” ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು. 24-25 ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, “ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ?” ಎಂದು ಪ್ರಶ್ನಿಸಿದರು. 26 ಪ್ರತ್ಯುತ್ತರವಾಗಿ ಯೊವಾನ್ನನು, “ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. 27 ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದನು. 28 ಯೋವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದ ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು. ದೇವರ ಯಜ್ಞಪಶು 29 ಮರುದಿನ ಯೊವಾನ್ನನು, ತಾನಿದ್ದಲ್ಲಿಗೇ ಯೇಸು ಬರುತ್ತಿರುವುದನ್ನು ಕಂಡು, “ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. 30 ಇವರು ‘ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರು; ಆದುದರಿಂದ ಇವರು ನನಗಿಂತಲೂ ಶ್ರೇಷ್ಠರು,’ ಎಂದು ನಾನು ಹೇಳಿದುದು ಇವರನ್ನು ಕುರಿತೇ. 31 ಇಸ್ರಯೇಲರಿಗೆ ಇವರನ್ನು ತೋರ್ಪಡಿಸಬೇಕೆಂದೇ ನಾನು ನೀರಿನಿಂದ ಸ್ನಾನದೀಕ್ಷೆಕೊಡುತ್ತಾ ಬಂದೆನು; ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ,” ಎಂದು ನುಡಿದನು. 32 ಯೊವಾನ್ನನು ತನ್ನ ಸಾಕ್ಷ್ಯವನ್ನು ಮುಂದುವರಿಸುತ್ತಾ, “ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದುಬಂದು ಅವರ ಮೇಲೆ ನೆಲಸುವುದನ್ನು ನಾನು ನೋಡಿದೆನು. 33 ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ. ಆದರೆ ನೀರಿನಿಂದ ಸ್ನಾನದೀಕ್ಷೆಕೊಡುವಂತೆ ನನ್ನನ್ನು ಕಳುಹಿಸಿದ ದೇವರು, ‘ಪವಿತ್ರಾತ್ಮ ಇಳಿದುಬಂದು ಯಾವ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವಾತ,’ ಎಂದಿದ್ದರು. 34 ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದುದರಿಂದ ಅವರೇ ದೇವರ ಪುತ್ರನೆಂದು ಸಾಕ್ಷಿ ನೀಡುತ್ತಿದ್ದೇನೆ,” ಎಂದು ಹೇಳಿದನು. ಪ್ರಥಮ ಶಿಷ್ಯರು 35 ಮಾರನೆಯ ದಿನ ಯೊವಾನ್ನನು ತನ್ನಿಬ್ಬರು ಶಿಷ್ಯರ ಸಂಗಡ ನಿಂತುಕೊಂಡಿರುವಾಗ, ಯೇಸು ಸ್ವಾಮಿ ಆ ಮಾರ್ಗವಾಗಿ ಹೋಗುತ್ತಿದ್ದರು. 36 ಅವರನ್ನು ನೋಡುತ್ತಲೇ ಯೊವಾನ್ನನು ತನ್ನ ಆ ಶಿಷ್ಯರಿಗೆ, “ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ,” ಎಂದು ಹೇಳಿದನು. 37 ಇದನ್ನು ಕೇಳಿದ ಆ ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38 ಯೇಸು ಸ್ವಾಮಿ, ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಿದರು. ಅವರು, “ರಬ್ಬೀ, ತಾವು ವಾಸಮಾಡುವುದೆಲ್ಲಿ?” ಎಂದು ವಿಚಾರಿಸಿದರು. (’ರಬ್ಬಿ’ ಎಂದರೆ ಗುರುದೇವ ಎಂದು ಅರ್ಥ.) 39 ಯೇಸು ಉತ್ತರವಾಗಿ, “ಬಂದು ನೋಡಿ” ಎನ್ನಲು ಅವರು ಹೋಗಿ ಯೇಸು ಸ್ವಾಮಿ ಇದ್ದ ಸ್ಥಳವನ್ನು ಕಂಡು ಆ ದಿನವನ್ನು ಅವರೊಡನೆ ಕಳೆದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು. 40 ಯೊವಾನ್ನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ್ದ ಇಬ್ಬರು ಶಿಷ್ಯರಲ್ಲಿ ಸಿಮೋನ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನು. 41 ಇವನು ಮೊದಲು ತನ್ನ ಸಹೋದರ ಸಿಮೋನನನ್ನು ಕಂಡು, “ನಮಗೆ ‘ಮೆಸ್ಸೀಯ’ ಸಿಕ್ಕಿದ್ದಾರೆ,” ಎಂದು ತಿಳಿಸಿ 42 ಅವನನ್ನು ಯೇಸುವಿನ ಬಳಿಗೆ ಕರತಂದನು. (’ಮೆಸ್ಸೀಯ’ ಎಂದರೆ ಅಭಿಷಿಕ್ತನಾದ ಲೋಕೋದ್ಧಾರಕ ಎಂದು ಅರ್ಥ). ಯೇಸು ಸಿಮೋನನನ್ನು ನೋಡಿ, “ಯೊವಾನ್ನನ ಮಗನಾದ ಸಿಮೋನನೇ, ಇನ್ನು ಮುಂದೆ ನಿನ್ನನ್ನು ಕೇಫನೆಂದು ಕರೆಯುವರು,” ಎಂದು ನುಡಿದರು. (’ಕೇಫ’ ಎಂದರೆ ‘ಪೇತ್ರ’ ಇಲ್ಲವೇ ‘ಬಂಡೆ’ ಎಂದರ್ಥ). ಫಿಲಿಪ್ಪ ಮತ್ತು ನತಾನಿಯೇಲರಿಗೆ ಕರೆ 43 ಮರುದಿನ ಯೇಸು ಸ್ವಾಮಿ ಗಲಿಲಾಯ ನಾಡಿಗೆ ಹೋಗಲು ನಿರ್ಧರಿಸಿದರು. ಅವರು ಫಿಲಿಪ್ಪನನ್ನು ಕಂಡು, “ನನ್ನೊಡನೆ ಬಾ,” ಎಂದು ಕರೆದರು. 44 ಅಂದ್ರೆಯ ಮತ್ತು ಪೇತ್ರನಂತೆ ಫಿಲಿಪ್ಪನು ಕೂಡ ಬೆತ್ಸಾಯಿದ ಎಂಬ ಊರಿನವನು. 45 ಫಿಲಿಪ್ಪನು ನತಾನಿಯೇಲನನ್ನು ಕಂಡು, “ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು,” ಎಂದು ಹೇಳಿದನು. 46 ಅದಕ್ಕೆ ನತಾನಿಯೇಲನು, “ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದು ಉಂಟೆ?” ಎಂದು ಕೇಳಲು, “ಬಂದು ನೀನೇ ನೋಡು,” ಎಂದು ಫಿಲಿಪ್ಪನು ಉತ್ತರಕೊಟ್ಟನು. 47 ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, “ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,” ಎಂದು ನುಡಿದರು. 48 ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರಕೊಟ್ಟರು. 49 ಅದಕ್ಕೆ ನತಾನಿಯೇಲನು, “ಗುರುದೇವಾ’ ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,” ಎಂದನು. 50 ಆಗ ಯೇಸು, “ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,” ಎಂದು ನುಡಿದರು. 51 ತಮ್ಮ ಮಾತನ್ನು ಮುಂದುವರೆಸುತ್ತಾ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,” ಎಂದು ಹೇಳಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India