Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಯೇಲ 3 - ಕನ್ನಡ ಸತ್ಯವೇದವು C.L. Bible (BSI)


ರಾಷ್ಟ್ರಗಳಿಗೆ ನ್ಯಾಯತೀರ್ಪು

1 ಸರ್ವೇಶ್ವರಸ್ವಾಮಿಯ ನುಡಿಯಿದು: “ಆ ದಿನಗಳಲ್ಲಿ ಜುದೇಯ ಹಾಗೂ ಜೆರುಸಲೇಮಿನ ಸಿರಿಸಂಪತ್ತನ್ನು ಮರಳಿ ಕೊಡುವೆನು.

2 ಎಲ್ಲಾ ರಾಷ್ಟ್ರಗಳನ್ನು ನ್ಯಾಯತೀರ್ಪಿನ ಜೊಸೆಫಾತ್ ಕಣಿವೆಗೆ ಬರಮಾಡುವೆನು. ನನ್ನ ಪ್ರಜೆಯೂ ಸ್ವಜನರೂ ಆದ ಇಸ್ರಯೇಲರಿಗೆ ಅವರು ಮಾಡಿದ ಹಿಂಸೆಗಾಗಿ ನ್ಯಾಯಕೇಳುವೆನು. ಅವರು ನನ್ನ ಪ್ರಜೆಯನ್ನು ದೇಶವಿದೇಶಗಳಿಗೆ ಚದರಿಸಿದ್ದಾರೆ. ನನ್ನ ನಾಡನ್ನು ಹಂಚಿಕೊಂಡಿದ್ದಾರೆ.

3 ನನ್ನ ಜನರಿಗಾಗಿ ಚೀಟುಹಾಕಿದ್ದಾರೆ. ವೇಶ್ಯಾಚಾರಕ್ಕಾಗಿ, ಮದ್ಯಪಾನಕ್ಕಾಗಿ, ಗಂಡುಮಕ್ಕಳನ್ನೂ ಹೆಣ್ಣುಮಕ್ಕಳನ್ನೂ ಮಾರಾಟ ಮಾಡಿದ್ದಾರೆ.

4 “ಟೈರ್, ಸಿದೋನ್ ಮತ್ತು ಫಿಲಿಷ್ಟಿಯ ಪ್ರಾಂತ್ಯಗಳೇ, ನನ್ನ ಮೇಲೆ ನಿಮಗಿರುವ ದೂರು ಯಾವುದು? ನನಗೆ ಪ್ರತೀಕಾರ ಮಾಡಬೇಕೆಂದಿರುವಿರೋ? ಹಾಗೇನಾದರೂ ಮಾಡಿದ್ದೇ ಆದರೆ, ನೀವು ಮಾಡಿದ ಕೇಡನ್ನು ತಡಮಾಡದೆ ನಿಮ್ಮ ತಲೆಗೇ ತರುವೆನು.

5 ನನ್ನ ಬೆಳ್ಳಿಬಂಗಾರಗಳನ್ನು ಅತ್ಯಮೂಲ್ಯವಾದ ಬೊಕ್ಕಸಗಳನ್ನು ದೋಚಿಕೊಂಡು ನಿಮ್ಮ ದೇವಾಲಯಗಳಿಗೆ ಕೊಂಡೊಯ್ದಿದ್ದೀರಿ.

6 ಜುದೇಯ ಮತ್ತು ಜೆರುಸಲೇಮಿನ ಜನರನ್ನು ಗ್ರೀಕರಿಗೆ ಮಾರಿಬಿಟ್ಟಿದ್ದೀರಿ; ಅವರನ್ನು ತಾಯ್ನಾಡಿನಿಂದ ದೂರಮಾಡಿದ್ದೀರಿ.

7 ಇಂತಿರಲು, ನೀವು ಅವರನ್ನು ಮಾರಿದ ಊರುಗಳಿಂದ ದಂಗೆಯೆದ್ದು ಹೊರಬರುವಂತೆ ಅವರನ್ನು ಹುರಿದುಂಬಿಸುವೆನು. ನೀವು ಮಾಡಿದ ಕೇಡನ್ನು ನಿಮ್ಮ ತಲೆಗೇ ತರುವೆನು.

8 ನಿಮ್ಮ ಪುತ್ರಪುತ್ರಿಯರನ್ನು ಯೆಹೂದ್ಯರಿಗೆ ಮಾರುವೆನು, ಅವರು ಆ ಮಕ್ಕಳನ್ನು ದೂರದಲ್ಲಿರುವ ಶೆಬದವರಿಗೆ ಮಾರಿಬಿಡುವರು. ಸರ್ವೇಶ್ವರನಾದ ನನ್ನ ನುಡಿಯಿದು.”

9 “ರಾಷ್ಟ್ರಗಳಿಗೆ ಹೀಗೆ ಪ್ರಕಟಿಸಿರಿ: ರಾಷ್ಟ್ರಗಳೇ, ಯುದ್ಧಸನ್ನದ್ಧರಾಗಿರಿ. ಶೂರರನ್ನು ಎಚ್ಚರಗೊಳಿಸಿರಿ; ಯೋಧರೆಲ್ಲರೂ ಒಟ್ಟುಗೂಡಲಿ; ಯುದ್ಧಕ್ಕೆ ಹೊರಡಲಿ.

10 ನಿಮ್ಮ ನೇಗಿಲುಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿ ಮಾಡಿರಿ; ಕುಡುಗೋಲುಗಳನ್ನು ಭರ್ಜಿಗಳನ್ನಾಗಿ ಮಾರ್ಪಡಿಸಿರಿ; ಬಲಹೀನನು ಸಹ ಬಲಾಢ್ಯನಂತೆ ಯುದ್ಧಕ್ಕೆ ನಿಂತುಕೊಳ್ಳಲಿ.

11 ಸುತ್ತಮುತ್ತಲಿನ ರಾಷ್ಟ್ರಗಳೇ, ನೀವೆಲ್ಲರೂ ತ್ವರೆಮಾಡಿ ಕೂಡಿಬನ್ನಿ,” ಸರ್ವೇಶ್ವರ, ನಿಮ್ಮ ಯೋಧರನ್ನು ರಣರಂಗಕ್ಕೆ ಇಳಿಸಿರಿ.

12 “ರಾಷ್ಟ್ರಗಳು ಎಚ್ಚೆತ್ತು ಸರ್ವೇಶ್ವರಸ್ವಾಮಿಯ ನ್ಯಾಯತೀರ್ಪಿನ ಕಣಿವೆಗೆ ಇಳಿಯಲಿ. ಸುತ್ತಮುತ್ತ ನೆರೆದಿರುವ ರಾಷ್ಟ್ರಗಳಿಗೆ ನ್ಯಾಯತೀರಿಸಲು ಅಲ್ಲಿ ನಾನು ಆಸೀನನಾಗಿರುವೆನು.

13 ಸ್ವಾಮಿಯ ಶೂರರೇ, ಕುಡುಗೋಲನ್ನು ಹಾಕಿರಿ; ಫಲ ಪಕ್ವವಾಗಿದೆ. ಬನ್ನಿ, ದ್ರಾಕ್ಷಿಯನ್ನು ತುಳಿಯಿರಿ; ಆಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ರಾಷ್ಟ್ರಗಳ ದುಷ್ಟತನವು ಮಿತಿಮೀರಿದೆ.

14 “ಇಗೋ, ನ್ಯಾಯತೀರ್ಪಿನ ಕಣಿವೆಯಲ್ಲಿ ತಂಡೋಪತಂಡವಾದ ಜನಸ್ತೋಮ! ತೀರ್ಪಿನ ಕಣಿವೆಯಲ್ಲಿರುವವರಿಗೆ ಸರ್ವೇಶ್ವರನ ದಿನ ಸನ್ನಿಹಿತ!

15 ಸೂರ್ಯಚಂದ್ರಗಳು ಮಂಕಾಗುತ್ತವೆ. ನಕ್ಷತ್ರಗಳು ಕಾಂತಿಗುಂದುತ್ತವೆ.

16 ಸ್ವಾಮಿ ಸಿಯೋನಿನಿಂದ ಗರ್ಜಿಸುತ್ತಾರೆ, ಜೆರುಸಲೇಮಿನಿಂದ ಅವರ ಧ್ವನಿ ಮೊಳಗುತ್ತದೆ. ಭೂಮ್ಯಾಕಾಶಗಳು ನಡುಗುತ್ತವೆ. ಆದರೂ ಸರ್ವೇಶ್ವರ ತಮ್ಮ ಜನರಿಗೆ ಆಶ್ರಯ; ಇಸ್ರಯೇಲರಿಗೆ ರಕ್ಷಣಾ ದುರ್ಗ.


ದೇವಜನರಿಗೆ ದೀರ್ಘಾಶೀರ್ವಾದ

17 “ಇಸ್ರಯೇಲರೇ, ಕೇಳಿ, ಪವಿತ್ರಪರ್ವತವಾದ ಸಿಯೋನಿನಲ್ಲಿ ನೆಲೆಯಾಗಿರುವ ನಿಮ್ಮ ಸರ್ವೇಶ್ವರಸ್ವಾಮಿ ದೇವರು ನಾನೇ ಎಂದು ಆಗ ನಿಮಗೆ ಮನದಟ್ಟಾಗುವುದು. ಜೆರುಸಲೇಮ್ ಪುಣ್ಯಕ್ಷೇತ್ರವೆನಿಸಿಕೊಳ್ಳುವುದು. ಪರಕೀಯರು ಅದನ್ನೆಂದಿಗೂ ಆಕ್ರಮಿಸರು.

18 ಆ ದಿನಗಳಲ್ಲಿ ಬೆಟ್ಟಗುಡ್ಡಗಳಿಂದ ದ್ರಾಕ್ಷಾರಸ ಮತ್ತು ಹಾಲುತುಪ್ಪ ಹರಿಯುವುದು. ಜುದೇಯ ನಾಡಿನ ಹಳ್ಳಕೊಳ್ಳಗಳು ನೀರಿನಿಂದ ತುಂಬಿರುವುವು. ದೇವಾಲಯದಿಂದ ನೀರು ಚಿಮ್ಮಿಬಂದು ಆಕಾಚಿಯದ ಹಳ್ಳವನ್ನು ತಂಪಾಗಿಸುವುದು.

19 “ಈಜಿಪ್ಟ್ ಪಾಳುಬೀಳುವುದು, ಎದೋಮ್ ಬೆಂಗಾಡಾಗುವುದು. ಕಾರಣ, ಈ ಎರಡು ಪಟ್ಟಣದವರು ಜುದೇಯ ನಾಡಿನ ಮೇಲೆ ಧಾಳಿಮಾಡಿದ್ದಾರೆ. ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ.

20 ಹತರಾದವರು ನಿರ್ದೋಷಿಗಳೆಂದು ನಿರ್ಣಯಿಸುವೆನು. ಕೊಲೆಪಾತಕರನ್ನು ದಂಡಿಸಿಯೇ ತೀರುವೆನು.

21 ಆದರೆ ಜುದೇಯ ನಾಡು, ಜೆರುಸಲೇಮ್ ನಗರ ಜನಭರಿತವಾಗಿ ಇರುವುದು. ಸರ್ವೇಶ್ವರಸ್ವಾಮಿಯಾದ ನಾನು ಸಿಯೋನ್ ಪರ್ವತದಲ್ಲಿ ನೆಲೆಯಾಗಿರುವೆನು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು