Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಯೇಲ 2 - ಕನ್ನಡ ಸತ್ಯವೇದವು C.L. Bible (BSI)


ಸರ್ವೇಶ್ವರಸ್ವಾಮಿಯ ದಿನದ ಮುನ್ಸೂಚನೆ

1 ಸಿಯೋನಿನಲ್ಲಿ ಕೊಂಬೂದಿರಿ; ನನ್ನ ಪರಿಶುದ್ಧಪರ್ವತದಲ್ಲಿ ಎಚ್ಚರಿಕೆಯ ವಾಣಿ ಮೊಳಗಲಿ; ಸಮಸ್ತ ದೇಶನಿವಾಸಿಗಳು ಹೆದರಿ ನಡುಗಲಿ; ಸರ್ವೇಶ್ವರಸ್ವಾಮಿಯ ದಿನ ಬರಲಿದೆ. ಸನ್ನಿಹಿತವಾಗಿದೆ.

2 ಅದು ಕಾರಿರುಳಿನ ಕರಾಳ ದಿನ, ಕಾರ್ಮುಗಿಲ ಕಾರ್ಗತ್ತಲ ದಿನ. ಮುಂಬೆಳಕು ಗುಡ್ಡದಿಂದ ಗುಡ್ಡಕ್ಕೆ ಹರಡುವಂತೆ ಪ್ರಬಲವಾದ ದೊಡ್ಡಸೈನ್ಯವೊಂದು ಬರುತ್ತಿದೆ; ಇಂಥ ಸೈನ್ಯ ಹಿಂದೆಂದೂ ಬಂದಿಲ್ಲ, ತಲತಲಾಂತರಕ್ಕೂ ಬರುವಂತಿಲ್ಲ.

3 ಅದರ ಮುಂದೆ ಕಬಳಿಸುವ ಬೆಂಕಿ; ಅದರ ಹಿಂದೆ ಧಗಧಗಿಸುವ ಜ್ವಾಲೆ. ಅದು ಬರುವ ಮುನ್ನ ನಾಡು ಏದೆನ್ ಉದ್ಯಾನವನ; ಅದು ದಾಟಿದ ನಂತರ ಸುಡುಗಾಡು. ಅದರ ಆಪತ್ತಿನಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.

4 ಅವು ಕುದುರೆಗಳಂತೆ ಕಾಣಿಸಿಕೊಳ್ಳುತ್ತವೆ; ಸಮರದ ಸವಾರರಂತೆ ಓಡಾಡುತ್ತವೆ.

5 ಬೆಟ್ಟಗಳ ತುತ್ತತುದಿಯಲ್ಲಿ ಹಾರಾಡುತ್ತವೆ; ರಥಗಳಂತೆ ಚೀತ್ಕಾರಮಾಡುತ್ತವೆ; ಕೂಳೆಸುಡುವ ಬೆಂಕಿಯಂತೆ ಚಟಪಟ ಮಾಡುತ್ತವೆ; ಸಮರಕ್ಕೆ ಸಿದ್ಧವಾದ ಶೂರರ ಸೈನ್ಯದಂತಿವೆ.

6 ಅವುಗಳ ನೋಟ, ರಾಷ್ಟ್ರಗಳಿಗೆ ಪ್ರಾಣಸಂಕಟ; ಎಲ್ಲರ ಮುಖಗಳಿಗೆ ಮಂಕಾಟ.

7 ಅವು ಶೂರರಂತೆ ಹೋರಾಡುತ್ತವೆ, ಯೋಧರಂತೆ ಗೋಡೆಗಳನ್ನೇರುತ್ತವೆ, ಸಾಲುಸಾಲಾಗಿ ನಡೆದು, ಕ್ರಮತಪ್ಪದೆ ಸಾಗುತ್ತವೆ.

8 ನೂಕುನುಗ್ಗಲಿಲ್ಲದೆ, ಸಾಲುಸಾಲಾಗಿ ನಡೆಯುತ್ತವೆ, ಸಾಲುಗಳನ್ನು ಒಡೆಯದೆ ಆಯುಧಗಳ ನಡುವೆ ನುಗ್ಗುತ್ತವೆ.

9 ಪಟ್ಟಣಗಳ ಮೇಲೆ ಹಾರಾಡುತ್ತವೆ, ಗೋಡೆಗಳ ಮೇಲೆ ಓಡಾಡುತ್ತವೆ, ಮನೆಗಳನ್ನು ಹತ್ತಿ, ಕಳ್ಳರಂತೆ ಕಿಟಕಿಗಳಲ್ಲಿ ನುಗ್ಗುತ್ತವೆ.

10 ಅವುಗಳ ಮುಂದೆ ಭೂಮಂಡಲ ಕಂಪಿಸುತ್ತದೆ, ಆಕಾಶಮಂಡಲ ನಡುಗುತ್ತದೆ. ಸೂರ್ಯಚಂದ್ರಗಳು ಮಂಕಾಗುತ್ತವೆ, ನಕ್ಷತ್ರಗಳು ಕಾಂತಿಗುಂದುತ್ತವೆ.

11 ಸರ್ವೇಶ್ವರ ಗರ್ಜಿಸಿ ತಮ್ಮ ಸೈನ್ಯಕ್ಕೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ದೊಡ್ಡದು. ಅವರ ಆಜ್ಞೆಯನ್ನು ಪಾಲಿಸುವವನು ಬಲಾಢ್ಯನು. ಸರ್ವೇಶ್ವರಸ್ವಾಮಿಯ ದಿನ ಮಹತ್ತರ; ಅತಿ ಭಯಂಕರ; ಅದರೆದುರಿಗೆ ನಿಲ್ಲಲು ಯಾರಿಗಿದೆ ಧೈರ್ಯ?


ಪಶ್ಚಾತ್ತಾಪಕ್ಕೆ ಕರೆ

12 ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.”

13 ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ, ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು.

14 ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು.

15 ಸಿಯೋನ್ ಶಿಖರದ ಮೇಲೆ ನಿಂತು ಕೊಂಬೂದಿರಿ. ಉಪವಾಸ ದಿನವನ್ನು ಘೋಷಿಸಿರಿ. ಮಹಾಸಭೆಯನ್ನು ಕರೆಯಿರಿ.

16 ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ.

17 ಸರ್ವೇಶ್ವರಸ್ವಾಮಿಯ ಪರಿಚಾರಕರಾದ ಯಾಜಕರು ದೇವಾಲಯದ ದ್ವಾರಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಶೋಕತಪ್ತರಾಗಿ ಹೀಗೆಂದು ಪ್ರಾರ್ಥಿಸಲಿ: “ಕರುಣೆ ತೋರು, ಹೇ ಸರ್ವೇಶ್ವರಾ, ನಿನ್ನ ಪ್ರಜೆಗೆ ನಿಂದೆಯಾಗದಿರಲಿ ನಿನ್ನ ಸ್ವಂತ ಜನತೆಗೆ ಗುರಿಯಾಗದಿರಲಿ ಅವರು ಅನ್ಯರ ತಾತ್ಸಾರಕೆ ‘ನಿಮ್ಮ ದೇವನೆಲ್ಲಿ?’ ಎಂಬ ಪರಕೀಯರ ಹೀಯಾಳಿಕೆಗೆ”


ಸುಭಿಕ್ಷೆಯ ವಾಗ್ದಾನ

18 ಆಗ ಸರ್ವೇಶ್ವರ ತಮ್ಮ ದೇಶದ ಮೇಲೆ ಅಭಿಮಾನಗೊಂಡು, ತಮ್ಮ ಜನರಿಗೆ ಕರುಣೆತೋರಿ ಹೀಗೆಂದರು:

19 “ನಿಮಗೆ ಧಾನ್ಯ, ದ್ರಾಕ್ಷಾರಸ, ತೈಲಗಳನ್ನು ಅನುಗ್ರಹಿಸುವೆನು; ನೀವು ಸಂತೃಪ್ತರಾಗುವಿರಿ; ನಿಮ್ಮನ್ನೆಂದಿಗೂ ಅನ್ಯಜನರ ನಿಂದೆಗೆ ಗುರಿಮಾಡೆನು.

20 “ಉತ್ತರದಿಂದ ಬಂದ ಮಿಡತೆಗಳ ಸೈನ್ಯವನ್ನು ನಿಮ್ಮಿಂದ ತೊಲಗಿಸುವೆನು; ಹಾಳುಬಿದ್ದ ಬಂಜರುಭೂಮಿಗೆ ಅದನ್ನು ಓಡಿಸುವೆನು. ಅದರ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ ಹಿಂಭಾಗವನ್ನು ಪಶ್ಚಿಮದ ಸಮುದ್ರಕ್ಕೂ ತಳ್ಳಿಬಿಡುವೆನು. ಅದು ನಿಮಗೆ ಮಾಡಿದ ಘೋರದುಷ್ಕೃತ್ಯಗಳಿಗಾಗಿ ದಂಡಿಸುವೆನು. ಅದರ ಹೆಣಗಳ ದುರ್ವಾಸನೆ ಏರುವುದು; ಗಬ್ಬು ನಾರುವುದು.”

21 “ಭೂನಿವಾಸಿಗಳೇ, ಭಯಪಡಬೇಡಿರಿ; ಹರ್ಷಿಸಿ ಆನಂದಿಸಿರಿ. ಸರ್ವೇಶ್ವರ ಮಹತ್ಕಾರ್ಯಗಳನ್ನು ಎಸಗಿದ್ದಾರೆ.

22 ಭೂಜಂತುಗಳೇ ಅಂಜಬೇಡಿ, ವನವೃಕ್ಷಗಳು ಫಲಭರಿತವಾಗಿರುವುವು; ಅಂಜೂರ, ದ್ರಾಕ್ಷಿಗಳೆಲ್ಲವೂ ತುಂಬಿ ತುಳುಕುವುವು.

23 “ಸಿಯೋನಿನ ಜನರೇ, ಹರ್ಷಿಸಿರಿ; ಸ್ವಾಮಿ ದೇವರಾದ ಸರ್ವೇಶ್ವರ ನಿಮಗೆ ಮಾಡಿದ ಉಪಕಾರಗಳಿಗಾಗಿ ಆನಂದಿಸಿರಿ. ನಿಮಗೆ ಅವರು ಮುಂಗಾರು ಮಳೆಯನ್ನು ಸಾಕಷ್ಟು ಕೊಡುವರು; ಮುಂಗಾರು ಹಿಂಗಾರು ಮಳೆಗಳನ್ನು ಸುರಿಸುವರು.

24 ಕಣಗಳಲ್ಲಿ ಗೋದಿ ರಾಶಿರಾಶಿಯಾಗಿರುವುದು. ತೊಟ್ಟಿಗಳಲ್ಲಿ ದ್ರಾಕ್ಷಾರಸ, ತೈಲಗಳು ತುಂಬಿರುವುವು.

25 ಗುಂಪುಮಿಡತೆ, ಕಂಬಳಿಮಿಡತೆ, ಚೂರಿಮಿಡತೆ, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಿಮಗೆ ಭರಿಸಿಕೊಡುವೆನು.

26 ನೀವು ಹೊಟ್ಟೆತುಂಬ ಊಟಮಾಡಿ ತೃಪ್ತರಾಗುವಿರಿ; ನಿಮಗಾಗಿ ಮಹತ್ಕಾರ್ಯಗಳನ್ನು ಎಸಗಿದ ದೇವರಾದ ಸರ್ವೇಶ್ವರಸ್ವಾಮಿಯ ನಾಮವನ್ನು ಕೊಂಡಾಡುವಿರಿ; ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.

27 ನಾನೇ ಇಸ್ರಯೇಲಿನ ಮಧ್ಯೆ ನೆಲೆಯಾಗಿ ಇರುವವನು ನಾನೇ ನಿಮ್ಮ ಸರ್ವೇಶ್ವರನಾದ ದೇವರು; ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು ಎಂದು ನಿಮಗೆ ಮನದಟ್ಟಾಗುವುದು.


ಪವಿತ್ರಾತ್ಮ ಪ್ರವಾಹ

28 “ತರುವಾಯ ಎಲ್ಲಾ ಮಾನವರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಪುತ್ರಪುತ್ರಿಯರು ಪ್ರವಾದನೆ ಮಾಡುವರು; ನಿಮ್ಮ ಹಿರಿಯರು ಸ್ವಪ್ನಶೀಲರಾಗುವರು; ನಿಮ್ಮ ಯುವಕರಿಗೆ ದಿವ್ಯದರ್ಶನಗಳಾಗುವುವು.

29 ಆ ದಿನಗಳಲ್ಲಿ ದಾಸದಾಸಿಯರ ಮೇಲೂ ನನ್ನ ಆತ್ಮವನ್ನು ಸುರಿಸುವೆನು.

30 ಭೂಮ್ಯಾಕಾಶಗಳಲ್ಲಿ ಸೂಚಕಕಾರ್ಯಗಳನ್ನು ಮಾಡುವೆನು. ರಕ್ತಧಾರೆ, ಅಗ್ನಿಪ್ರಳಯ, ಧೂಮಕೇತು ಕಾಣಿಸುವಂತೆ ಮಾಡುವೆನು.

31 ಸರ್ವೇಶ್ವರಸ್ವಾಮಿಯ ಭಯಂಕರ ಮಹಾದಿನದ ಮುಂಚೆ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ರಕ್ತಗೆಂಪಾಗುವನು.

32 ಆದರೆ ಸರ್ವೇಶ್ವರಸ್ವಾಮಿಯ ನಾಮಸ್ಮರಣೆ ಮಾಡುವವರೆಲ್ಲರೂ ಜೀವೋದ್ಧಾರವನ್ನು ಪಡೆಯುವರು. ಅವರೇ ತಿಳಿಸಿರುವಂತೆ ಸಿಯೋನ್ ಪರ್ವತದಲ್ಲೂ ಜೆರುಸಲೇಮಿನಲ್ಲೂ ಅನೇಕರಿಗೆ ಮುಕ್ತಿ ದೊರಕುವುದು. ಅಳಿದುಳಿದವರಲ್ಲಿ ಆ ಸ್ವಾಮಿಯ ಕರೆಹೊಂದಿದವರು ಬದುಕುವರು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು