ಯೋಯೇಲ 1 - ಕನ್ನಡ ಸತ್ಯವೇದವು C.L. Bible (BSI)1 ಪೆತುವೇಲನ ಮಗನಾದ ಯೊವೇಲನಿಗೆ ಸರ್ವೇಶ್ವರಸ್ವಾಮಿಯಿಂದ ಬಂದ ವಾಣಿ: ಮಿಡತೆಗಳ ಹಾವಳಿ - ಬೆಳೆಗಳ ವಿನಾಶ 2 ವೃದ್ಧರೇ ಕೇಳಿ: ನಾಡಿನ ನಿವಾಸಿಗಳೇ ಕಿವಿಗೊಡಿ. ನಿಮ್ಮ ಕಾಲದಲ್ಲಾಗಲೀ ನಿಮ್ಮ ಪೂರ್ವಿಕರ ಕಾಲದಲ್ಲಾಗಲೀ, ಇಂಥ ದುರ್ಘಟನೆ ಸಂಭವಿಸಿದ್ದುಂಟೇ? 3 ಇದನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ; ಅವರು ತಮ್ಮ ಮಕ್ಕಳಿಗೆ ತಿಳಿಸಲಿ; ಅವರ ಮಕ್ಕಳು ಮುಂದಿನ ತಲೆಮಾರಿಗೆ ತಿಳಿಸಲಿ. 4 ಚೂರಿಮಿಡತೆ ತಿಂದು ಉಳಿದಿದ್ದ ಬೆಳೆಯನ್ನು ಗುಂಪುಮಿಡತೆ ತಿಂದುಬಿಟ್ಟಿತು. ಗುಂಪುಮಿಡತೆ ತಿಂದುಬಿಟ್ಟಿದ್ದನ್ನು ಕುದುರೆಮಿಡತೆ ತಿಂದುಬಿಟ್ಟಿತು; ಕುದುರೆಮಿಡತೆ ಬಿಟ್ಟದ್ದನ್ನು ಕಂಬಳಿಮಿಡತೆ ತಿಂದುಬಿಟ್ಟಿತು. 5 ಅಮಲೇರಿದವರೇ, ಎಚ್ಚರಗೊಳ್ಳಿ; ಅತ್ತು ಪ್ರಲಾಪಿಸಿರಿ; ಕುಡುಕರೇ, ರೋದಿಸಿರಿ. ದ್ರಾಕ್ಷಾಬಳ್ಳಿ ನಾಶವಾಗಿದೆ; ಇನ್ನು ದ್ರಾಕ್ಷಾರಸ ದೊರಕದು. 6 ಶತ್ರುರಾಷ್ಟ್ರ ನನ್ನ ನಾಡನ್ನು ಆಕ್ರಮಿಸಿದೆ. ಆ ರಾಷ್ಟ್ರ ಪ್ರಬಲವಾದುದು; ಅದರ ಸೈನ್ಯ ಅಸಂಖ್ಯಾತವಾದುದು; ಅದರ ಹಲ್ಲುಗಳು ಸಿಂಹದ ಹಲ್ಲುಗಳು; ಅದರ ಕೋರೆಗಳು ಮೃಗರಾಜನ ಕೋರೆಗಳು. 7 ಅದು ನನ್ನ ದ್ರಾಕ್ಷಾತೋಟವನ್ನು ಹಾಳುಮಾಡಿದೆ; ನನ್ನ ಅಂಜೂರದ ಗಿಡವನ್ನು ಸೀಳಿಹಾಕಿದೆ; ಅದರ ತೊಗಟೆಗಳನ್ನು ಸುಲಿದು ಬಿಸಾಡಿಬಿಟ್ಟಿದೆ; ಅದರ ರೆಂಬೆಗಳು ಬಿಳಿಚಿಕೊಂಡಿವೆ. 8 ಮದುವೆಯಾಗಲಿದ್ದ ಯುವಕನನ್ನು ಕಳೆದುಕೊಂಡದ್ದಕ್ಕಾಗಿ ಗೋಣಿತಟ್ಟನ್ನು ಉಟ್ಟು ಗೋಳಾಡುವ ಯುವತಿಯಂತೆ ರೋದಿಸಿರಿ. 9 ಸರ್ವೇಶ್ವರಸ್ವಾಮಿಯ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ. ಆ ಸ್ವಾಮಿಯ ಪರಿಚಾರಕರಾದ ಯಾಜಕರು ದುಃಖತಪ್ತರಾಗಿದ್ದಾರೆ. 10 ಹೊಲಗದ್ದೆಗಳು ಹಾಳಾಗಿವೆ; ಧರೆ ದುಃಖಿಸುತ್ತಿದೆ; ಬಿತ್ತಿದ ದವಸಧಾನ್ಯ ಮಣ್ಣುಪಾಲಾಗಿದೆ; ದ್ರಾಕ್ಷಿಹಣ್ಣು ಒಣಗಿಹೋಗಿದೆ; ಎಣ್ಣೆ ಮರಗಳು ಬಾಡಿಹೋಗಿವೆ. 11 ರೈತರೇ, ರೋದಿಸಿರಿ; ತೋಟಗಾರರೇ, ಪರಿತಪಿಸಿರಿ; ಗೋದಿಯೂ ಜವೆಗೋದಿಯೂ ಹಾಳಾಗಿವೆ; ಹೊಲದ ಬೆಳೆ ನಾಶವಾಗಿದೆ. 12 ದ್ರಾಕ್ಷಾಲತೆ ಒಣಗಿದೆ; ಅಂಜೂರದ ಗಿಡ ಬಾಡಿಹೋಗಿದೆ; ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ. ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ. ಮನಃಪರಿವರ್ತನೆಗೆ ಕರೆ 13 ಯಾಜಕರೇ, ಗೋಣಿತಟ್ಟನ್ನುಟ್ಟು ರೋದಿಸಿರಿ; ಬಲಿಪೀಠದ ಪರಿಚಾರಕರೇ, ಪ್ರಲಾಪಿಸಿರಿ; ದೇವರ ದಾಸರೇ, ಬನ್ನಿ; ಗೋಣಿತಟ್ಟನ್ನುಟ್ಟು ಜಾಗರಣೆ ಮಾಡಿರಿ. ದೇವರ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ. 14 ಉಪವಾಸ ವ್ರತವನ್ನು ಕೈಗೊಂಡು ಮಹಾಸಭೆಯನ್ನು ಕರೆಯಿರಿ; ಹಿರಿಯರನ್ನೂ ನಾಡಿನ ಜನಸಾಮಾನ್ಯರನ್ನೂ ಸೇರಿಸಿರಿ; ದೇವರಾದ ಸರ್ವೇಶ್ವರಸ್ವಾಮಿಯ ಆಲಯಕ್ಕೆ ಬರಮಾಡಿರಿ; ಆ ಸ್ವಾಮಿಗೆ ಪ್ರಾರ್ಥನೆಮಾಡಿರಿ. 15 ಸರ್ವೇಶ್ವರಸ್ವಾಮಿಯ ದಿನ ಸಮೀಪಿಸಿದೆ. ಆ ದಿನ ಸರ್ವಶಕ್ತನಿಂದ ವಿನಾಶವನ್ನು ತರಲಿದೆ; ಎಂಥಾ ಭಯಂಕರ ದಿನವದು! 16 ದವಸಧಾನ್ಯಗಳ ವಿನಾಶವನ್ನು ಕಣ್ಣಾರೆ ಕಾಣುತ್ತಿದ್ದೇವಲ್ಲವೆ? ದೇವಾಲಯದ ಹರ್ಷ ಉತ್ಸವಗಳು ನಿಂತುಹೋಗಿವೆ. 17 ಬೀಜಗಳು ಹೆಂಟೆಗಳ ಅಡಿಯಲ್ಲೇ ಒಣಗುತ್ತಿವೆ; ಉಗ್ರಾಣಗಳು ಬರಿದಾಗಿವೆ; ದವಸಧಾನ್ಯದ ಕೊರತೆಯಿಂದ ಕಣಜಗಳು ಕುಸಿದುಬಿದ್ದಿವೆ. 18 ಪಶುಪ್ರಾಣಿಗಳು ನರಳುತ್ತಿವೆ; ದನಕರುಗಳು ಮೇವಿಲ್ಲದೆ ಕಂಗಾಲಾಗಿವೆ; ಕುರಿಮಂದೆಗಳು ಕೂಡ ಕಂಗೆಟ್ಟಿವೆ. 19 ಸರ್ವೇಶ್ವರಾ, ನಿನಗೆ ಮೊರೆಯಿಡುತ್ತೇನೆ. ಹುಲ್ಲುಗಾವಲನ್ನು ಕಾಳ್ಗಿಚ್ಚು ದಹಿಸಿಬಿಟ್ಟಿದೆ; ವನವೃಕ್ಷಗಳೆಲ್ಲ ಬೆಂಕಿಪಾಲಾಗಿವೆ. 20 ಕಾಡುಮೃಗಗಳು ನಿನ್ನ ಕಡೆಗೆ ತಲೆಯೆತ್ತಿವೆ; ಹಳ್ಳಕೊಳ್ಳಗಳು ಬತ್ತಿಹೋಗಿವೆ; ಹುಲ್ಲುಗಾವಲನ್ನು ಕಾಳ್ಗಿಚ್ಚು ದಹಿಸಿಬಿಟ್ಟಿದೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India