Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಈ ಗ್ರಂಥವು ಪಾಪ-ಪ್ರಾಯಶ್ಚಿತ್ತ ಕುರಿತ ಒಂದು ಕವನ. ಒಬ್ಬನು ಸತ್ಯವಂತನಾಗಿದ್ದರೂ ಕಷ್ಟದುಃಖಗಳಿಗೆ ಏಕೆ ಈಡಾಗಬೇಕು? ಯೋಬನು ಒಬ್ಬ ಶ್ರೀಮಂತ ಹಾಗೂ ಸತ್ಪುರುಷ. ಆದರೂ ನಾನಾ ಅನಾಹುತಗಳಿಗೆ ಈಡಾಗುತ್ತಾನೆ. ಮಡದಿ ಮಕ್ಕಳನ್ನು ಕಳೆದುಕೊಳ್ಳುತ್ತಾನೆ. ಅವನ ಆಸ್ತಿಪಾಸ್ತಿಯೆಲ್ಲ ನಾಶವಾಗುತ್ತದೆ; ಅದು ಮಾತ್ರವಲ್ಲ, ಅವನ ದೇಹ ಭೀಕರ ವ್ಯಾಧಿಗೆ ತುತ್ತಾಗುತ್ತದೆ. ಇಂಥ ಅನ್ಯಾಯಕ್ಕೆ ಯೋಬನ ಹಾಗೂ ಅವನ ಗೆಳೆಯರ ಪ್ರತಿಕ್ರಿಯೆ ತದ್ವಿರುದ್ಧವಾಗಿರುತ್ತದೆ. ಅವರ ಪ್ರತಿಕ್ರಿಯೆಗಳನ್ನು ಗ್ರಂಥಕರ್ತನು ಕವನ ರೂಪದಲ್ಲಿ, ಸಂವಾದ ಶೈಲಿಯಲ್ಲಿ ವ್ಯಕ್ತಪಡಿಸುತ್ತಾನೆ. ಮಾನವ ಜೀವನದ ಆಗುಹೋಗುಗಳಲ್ಲಿ ದೇವರ ಪಾತ್ರವೇನು ಎಂಬುದು ಈ ಸಂವಾದಗಳ ಮುಖ್ಯ ಅಂಶ. ಅಂತಿಮವಾಗಿ ದೇವರೇ ಯೋಬನಿಗೆ ಪ್ರತ್ಯಕ್ಷರಾಗುತ್ತಾರೆ.
ಯೋಬನಿಗೆ ಒದಗಿದ ಕಷ್ಟಕಾರ್ಪಣ್ಯಗಳಿಗೆ ಕಾರಣವನ್ನು ಅವನ ಗೆಳೆಯರು ಸಾಂಪ್ರದಾಯಿಕ ಮಾತುಕತೆಗಳಲ್ಲಿ ವಿವರಿಸುತ್ತಾರೆ. ದೇವರು ಯಾವಾಗಲೂ ಸತ್ಕಾರ್ಯಗಳಿಗೆ ಸಂಭಾವನೆಯನ್ನೂ ದುಷ್ಕೃತ್ಯಗಳಿಗೆ ದಂಡನೆಯನ್ನೂ ನೀಡುವವರಾಗಿದ್ಪಾರೆ. ಆದುದರಿಂದ ಘೋರ ಕಷ್ಟನಷ್ಟಗಳನ್ನು ಅನುಭವಿಸುತ್ತಿರುವ ಯೋಬನು ಪಾಪಿಷ್ಠನೇ ಆಗಿರಬೇಕು ಎಂಬುದು ಮಿತ್ರರ ತೀರ್ಮಾನ. ಆದರೆ ನಿಜಕ್ಕೂ ತನ್ನ ಜೀವನ ನೀತಿಯುತವಾದುದು, ಸತ್ಯಸಮಂಜಸವಾದುದು ಎಂಬ ಪ್ರಜ್ಞೆಯಿಂದ ಕೂಡಿದ ಯೋಬನಿಗೆ ಅವರ ವಾದ ಹಿಡಿಸುವುದಿಲ್ಲ. ತನ್ನಂಥ ಸತ್ಪುರುಷನಿಗೆ ಇಂಥ ಕ್ರೂರವಾದ ಕೇಡನ್ನು ದೇವರು ಹೇಗೆ ತಾನೇ ಬರಮಾಡಬಲ್ಲರು? ಆದರೆ, ಇಂಥ ಪರಿಸ್ಥಿತಿಯಲ್ಲೂ ಅವನು ದೇವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ. ತನಗೆ ನ್ಯಾಯ ದೊರಕಬೇಕೆಂದು ಹಂಬಲಿಸುತ್ತಾನೆ. ಸತ್ಪುರುಷನಿಗೆ ಸಲ್ಲತಕ್ಕ ಪ್ರತಿಫಲ ತನಗೆ ದೊರಕಬೇಕೆಂದು ಹಾತೊರೆಯುತ್ತಾನೆ.
ದೇವರು ಯೋಬನ ಪ್ರಶ್ನೆಗಳಿಗೆ ನೇರವಾದ ಉತ್ತರ ಕೊಡುವುದಿಲ್ಲ, ಬದಲಿಗೆ ಅವನ ವಿಶ್ವಾಸವನ್ನು ಮೆಚ್ಚಿಕೊಳ್ಳುತ್ತಾರೆ; ತಮ್ಮ ದೈವಶಕ್ತಿಯನ್ನೂ ಜ್ಞಾನಸ್ವರೂಪವನ್ನೂ ಕವನ ರೂಪದಲ್ಲಿ ವರ್ಣಿಸುತ್ತಾರೆ. ಆಗ ಯೋಬನು ದೇವರ ಮಹತ್ವಕ್ಕೂ ಜ್ಞಾನಸಂಪೂರ್ಣತೆಗೂ ತಲೆಬಾಗಿ ತಾನು ಆಡಿದ ರೋಷಭರಿತ ಮಾತುಗಳಿಗಾಗಿ ವಿಷಾಧಿಸುತ್ತಾನೆ, ಕ್ಷಮೆ ಕೋರುತ್ತಾನೆ.
ಕಟ್ಟಕಡೆಗೆ ಯೋಬನು ತನಗೆ ಸೌಭಾಗ್ಯವನ್ನು ಮರಳಿ ಪಡೆಯುತ್ತಾನೆ. ಅದಕ್ಕೂ ಇಮ್ಮಡಿ ಹೆಚ್ಚಾಗಿ ಪಡೆಯುತ್ತಾನೆ. ಯೋಬನ ಕಷ್ಟದುಃಖಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆಹೋದ ಅವನ ಮಿತ್ರರನ್ನು ದೇವರು ಖಂಡಿಸುತ್ತಾರೆ. ಎಲ್ಲ ಸನಾತನ ಧರ್ಮಗಳಿಗಿಂತಲೂ ತರ್ಕಬದ್ಧ ವಿಚಾರಗಳಿಗಿಂತಲೂ ದೇವರು ದೊಡ್ಡವರು ಎಂಬುದು ಯೋಬನಿಗೆ ಮನದಟ್ಟಾಗುತ್ತದೆ.
ಪರಿವಿಡಿ
ಪೀಠಿಕೆ 1:1—2:13
ಯೋಬ ಮತ್ತು ಮಿತ್ರರು 3:1—31:40
1) ಯೋಬನ ದೂರು 3:1—3:26
2) ಮೊದಲನೇ ಸಂವಾದ 4:1—14:22
3) ಎರಡನೇ ಸಂವಾದ 15:1—21:34
4) ಮೂರನೇ ಸಂವಾದ 22:1—27:23
5) ದೈವಜ್ಞಾನದ ಸ್ತುತಿ 28:1-28
6) ಯೋಬನ ಕೊನೆಯ ಹೇಳಿಕೆ 29:1—31:40
7) ಎಲೀಹುವಿನ ಭಾಷಣ 32:1—37:24
8) ಯೋಬನಿಗೆ ದೇವರಿತ್ತ ಉತ್ತರ 38:1—42:6
9) ಸಮಾಪ್ತಿ 42:7-17

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು