ಯೋಬ 8 - ಕನ್ನಡ ಸತ್ಯವೇದವು C.L. Bible (BSI)1 ಆಗ ಶೂಹ್ಯನಾದ ಬಿಲ್ದದನು ಇಂತೆಂದನು: 2 “ಇನ್ನೆಷ್ಟರವರೆಗೆ ಹೀಗೆ ನುಡಿಯುತ್ತಿರುವೆ? ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ? 3 ಅನ್ಯಾಯವಾದ ತೀರ್ಪನು ಕೊಡುತ್ತಾನೆಯೆ ದೇವರು? ಸತ್ಯವನ್ನು ಡೊಂಕುಮಾಡುತ್ತಾನೆಯೆ ಸರ್ವಶಕ್ತನು? 4 ಬಹುಶಃ ನಿನ್ನ ಮಕ್ಕಳು ಆತನ ವಿರುದ್ಧ ಪಾಪಮಾಡಿರಬೇಕು ಎಂದೇ ಆತ ಅವರನು ಆ ದ್ರೋಹದ ನಿಮಿತ್ತ ದಂಡಿಸಿರಬೇಕು. 5 ಶುದ್ಧನೂ ಸತ್ಯವಂತನೂ ನೀನಾಗಿದ್ದರೆ ದೇವರ ಪ್ರಸನ್ನತೆಯನು ಅರಸಿದೆಯಾದರೆ ಆ ಸರ್ವಶಕ್ತನನು ವಿಜ್ಞಾಪಿಸಿದೆಯಾದರೆ, 6 ನಿಶ್ಚಯವಾಗಿ ನಿನಗೋಸ್ಕರ ಎಚ್ಚೆತ್ತು ಬರುವನು ಸತ್ಯವಂತನ ಮನೆಮಾರನು ಸಮೃದ್ಧಿಗೊಳಿಸುವನು. 7 ಆಗ ನಿನ್ನ ಭವಿಷ್ಯ ಎಷ್ಟು ಉಜ್ವಲವಾಗಿರುತ್ತದೆಂದರೆ ನಿನ್ನ ಮೊದಲಿನ ಸ್ಥಿತಿ ಕೂಡ ಅತ್ಯಲ್ಪವಾಗಿ ಕಾಣುವುದು ನಿನಗೆ. 8 ವಿಚಾರಿಸಿ ನೋಡು ಪುರಾತನ ಕಾಲವನು ಧ್ಯಾನಿಸಿ ನೋಡು ಪೂರ್ವಜರ ಅನುಭವವನು. 9 ನಾವಾದರೋ ನಿನ್ನೆ ಹುಟ್ಟಿದವರು, ಏನೂ ಅರಿಯದವರು ಭೂಲೋಕದಲ್ಲಿನ ನಮ್ಮ ಬಾಳು ಕೇವಲ ನೆರಳು. 10 ನಿನಗೆ ಬೋಧಿಸಿ ಬುದ್ಧಿಹೇಳುವರು ಪೂರ್ವಜರು ಅವರ ಅನುಭವದಿಂದ ಬಂದ ವಚನಗಳಿವು: 11 ಕೆಸರಿಲ್ಲದೆ ಆಪುಹುಲ್ಲು ಬೆಳೆಯುವುದುಂಟೆ? ಜವುಗಿಲ್ಲದೆ ಜಂಬು ಹುಲ್ಲು ಮೊಳೆಯುವುದುಂಟೆ 12 ಆದರೂ ಮಿಕ್ಕ ಎಲ್ಲ ಸಸಿಗಳಿಗಿಂತ ಬಲು ಮುಂಚಿತವಾಗಿಯೆ ಒಣಗಿಹೋಗುತ್ತವೆ ಅವು ಯಾರೂ ಕೊಯ್ಯದೆಯೆ. 13 ದೇವರನ್ನು ಮರೆಯುವವರೆಲ್ಲರ ಗತಿ ಇದುವೆ ಭಕ್ತಿಹೀನನ ನಿರೀಕ್ಷೆ ನಿರರ್ಥಕವೆ. 14 ಅಂಥವನ ಭರವಸೆ ಭಂಗವಾಗುವುದು ಅವನ ನಿವಾಸ ಜೇಡರ ಗೂಡಿನಂತಾಗುವುದು. 15 ಒರಗಿಕೊಂಡರೆ ಆ ಮನೆ ನಿಲ್ಲದು ಹಿಡಿದುಕೊಂಡರೆ ಅದು ಬಿಗಿಯಿರದು. 16 ಅಂಥವನು ಬಿಸಿಲಿನಲ್ಲೂ ಹಸಿರಾಗಿರುವ ಬಳ್ಳಿಯಂತೆ ಹರಡಿಕೊಳ್ಳುವನು ತೋಟದೊಳಗೆ ಕವಲೊಡೆದು; 17 ಕಲ್ಲುಕುಪ್ಪೆಯ ಮೇಲೂ ಬೇರುಗಳನ್ನು ಹೆಣೆದುಕೊಳ್ವನು ಕಲ್ಲಿನ ಸಂದಿಗೊಂದಿಗಳ ನಡುವೆ ನುಗ್ಗಬಲ್ಲನು ಅವನು; 18 ಅಲ್ಲಿಂದ ಅವನನ್ನು ಕಿತ್ತುಹಾಕಿದ್ದೇ ಆದರೆ ಅವನನ್ನು ಕಂಡದ್ದೇ ಇಲ್ಲ ಎಂದು ಬೊಂಕುವುದು ಆ ಸ್ಥಳ. 19 ಇದುವೇ ಅಂಥವನಿಗೆ ಗಿಟ್ಟುವ ಸುಖ ಬೇರೆಯವರು ಮೊಳೆವರು ಅವನಿದ್ದ ಆ ನೆಲದಿಂದ. 20 ದೇವರು ನಿರ್ದೋಷಿಯನು ತ್ಯಜಿಸಿಬಿಡುವುದಿಲ್ಲ ಕೆಡುಕರಿಗೆ ನೆರವಾಗಲು ಆತ ಕೈ ನೀಡುವುದಿಲ್ಲ. 21 ತುಂಬಿಸುವನಾತ ನಿನ್ನ ಬಾಯನು ನಗೆಯಿಂದ ನಿನ್ನ ತುಟಿಗಳನ್ನು ಉತ್ಸಾಹಧ್ವನಿಯಿಂದ. 22 ಅವಮಾನ ಮುಸುಕುವುದು ನಿನ್ನ ಹಗೆಗಳನ್ನು ದುರುಳರಾ ನಿವಾಸವಾದರೋ ನಿರ್ಮೂಲವಾಗುವುದು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India