ಯೋಬ 7 - ಕನ್ನಡ ಸತ್ಯವೇದವು C.L. Bible (BSI)1 “ಮಾನವನ ಜೀವನ ಸೈನಿಕರ ಸೇವಾವಧಿಯಂತೆ ಅವನ ದಿನಗಳು ಕಳೆಯುತ್ತವೆ ಜೀತದಾಳಿನ ದಿನಗಳಂತೆ. 2 ನಾನಿರುವೆ ಸಂಜೆಯನು ಬಯಸುವ ದಾಸನಂತೆ ಕೂಲಿಯನು ನಿರೀಕ್ಷಿಸುವ ಕೂಲಿಯಾಳಿನಂತೆ. 3 ನನ್ನ ಪಾಲಿಗೆ ಬಂದಿವೆ ಬೇಸರಿಕೆಯ ಮಾಸಗಳು ನನಗೆ ನೇಮಕವಾಗಿವೆ ಆಯಾಸದ ರಾತ್ರಿಗಳು. 4 ಮಲಗಹೋಗುವಾಗ ‘ಯಾವಾಗ ಏಳುವೆನೋ” ಎನಿಸುತ್ತದೆ ಕಾಳ ರಾತ್ರಿ ಬೆಳೆಯುತ್ತಾ ಹೋಗುತ್ತಿರುತ್ತದೆ ಉದಯದವರೆಗೆ ಅತ್ತಿತ್ತ ಹೊರಳಿ ಸಾಕಾಗುತ್ತದೆ. 5 ನನ್ನ ಮಾಂಸ ಮುಸುಕಿದೆ ಹುಳುಹುಪ್ಪಟೆಗಳಿಂದ ನನ್ನ ಚರ್ಮ ಬಿರಿದಿದೆ ಕಜ್ಜಿಕಡಿತಗಳಿಂದ. 6 ನನ್ನ ದಿನಗಳು ಮಗ್ಗದ ಲಾಳಕ್ಕಿಂತ ತ್ವರಿತ ಅವುಗಳಿಗಿದೋ ನಿರೀಕ್ಷೆಯಿಲ್ಲದ ಮುಕ್ತಾಯ. 7 ನೆನೆಸಿಕೊಳ್ಳೋ ದೇವಾ, ನನ್ನ ಜೀವ ಕೇವಲ ಉಸಿರು ನನ್ನ ಕಣ್ಣುಗಳು ಇನ್ನು ಕಾಣವು ನಲಿವು. 8 ನನ್ನನು ನೋಡುವ ಕಣ್ಣಿಗೆ ನಾನಿನ್ನು ಕಾಣಿಸುವುದಿಲ್ಲ. ನಿನ್ನ ಕಣ್ಣು ನನ್ನ ಕಡೆಗೆ ತಿರುಗಿದ್ದರೂ ನಾನು ಬದುಕಿರುವುದಿಲ್ಲ. 9 ಮೋಡ ಕರಗಿ ಮಾಯವಾಗುವಂತೆ ಪಾತಾಳಕ್ಕಿಳಿದವನು ಬಾರನು ಮತ್ತೆ. 10 ತನ್ನ ಮನೆಗವನು ಹಿಂತಿರುಗುವುದಿಲ್ಲ ಅವನ ನಿವಾಸಕ್ಕೆ ಅವನ ಗುರುತೇ ಇಲ್ಲ. 11 ಬಾಯಿ ಮುಚ್ಚಿಡಲಾಗದು ನನ್ನಿಂದ ಮಾತಾಡುತ್ತೇನೆ ಆತ್ಮವೇದನೆಯಿಂದ ಪ್ರಲಾಪಿಸುತ್ತೇನೆ ಮನೋವ್ಯಥೆಯಿಂದ. 12 ನಾನೇನು ಕಡಲೋ? ಕಡಲಿನ ಘಟಸರ್ಪವೋ? ನೀವು ನನ್ನ ಮೇಲೆ ಕಾವಲಿಡುವುದು ಸರಿಯೋ? 13 ‘ನನ್ನ ಹಾಸಿಗೆಯೆ ನನಗೆ ಸಾಂತ್ವನ’ ಎಂದೆ ‘ನನ್ನ ಮಂಚವೆ ಚಿಂತೆಗೆ ಶಮನ’ ಎಂದೆ. 14 ಆದರೂ ನೀನು ಬೆದರಿಸುತ್ತೀಯೆ ಸ್ವಪ್ನಗಳಿಂದ ಭಯಪಡಿಸುತ್ತೀಯೆ ನನ್ನನು ಕೆಟ್ಟ ಕನಸುಗಳಿಂದ. 15 ಎಂದೇ ಉಸಿರುಕಟ್ಟಿ ನಾನು ಪ್ರಾಣಬಿಡುವುದು ಲೇಸು ಮೂಳೆಮಾಂಸದ ಈ ತಡಿಕೆಬಾಳಿಗಿಂತ ಸಾವು ಲೇಸು. 16 ಬದುಕು ನನಗೆ ಬೇಸರ; ನಿರಂತರ ಬಾಳು ನನಗೆ ಅನಿಷ್ಟ ನನ್ನ ದಿನಗಳು ನಿರರ್ಥಕ, ನನ್ನ ಗೊಡವೆ ನಿನಗೆ ಬೇಕಿಲ್ಲ. 17 ಮನುಷ್ಯನಾದವನು ಎಷ್ಟರವನು ನೀನವನಿಗೆ ಘನತೆ ನೀಡಲು? ನೀನವನ ಮೇಲೆ ಗಮನ ಹರಿಸಲು? 18 ದಿನ ಬಿಡದೆ ಅವನನ್ನು ಸಂದರ್ಶಿಸಲು; ಕ್ಷಣಕ್ಷಣಕ್ಕೂ ಅವನನ್ನು ಪರೀಕ್ಷಿಸಲು? 19 ನಿನ್ನ ದೃಷ್ಟಿಯನು ನನ್ನ ಮೇಲೆ ಎಷ್ಟುಕಾಲ ಇಡುವೆ? ಗುಟುಕು ಉಗುಳನು ನುಂಗಲು ಬಿಡುವುದಿಲ್ಲವೆ? 20 ನರಮಾನವರ ಮೇಲೆ ಬೆಂಗಾವಲಿರುವವನೇ, ಭಾರವಾಗಿರುವೆನು ನನಗೆ ನಾನೇ. ನಾನು ಪಾಪಮಾಡಿದ್ದಾದರೂ ನಿನಗೇನು ಮಾಡಿದೆ? ನನ್ನನ್ನೇಕೆ ನಿನ್ನ ಹೊಡೆತಕ್ಕೆ ಗುರಿಪಡಿಸಿದೆ? 21 ನನ್ನ ಅಪರಾದವನ್ನು ನೀನು ಕ್ಷಮಿಸಬಾರದೆ? ನನ್ನ ದೋಷವನ್ನು ನೀನು ಪರಿಹರಿಸಬಾರದೆ? ಮಣ್ಣಿನೊಳಗೆ ಬಿದ್ದಿರುವೆ ನಾನು ಈಗ ನಾನು ಇಲ್ಲವಾಗಿರುವೆ ನೀ ಹುಡುಕುವಾಗ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India