Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 42 - ಕನ್ನಡ ಸತ್ಯವೇದವು C.L. Bible (BSI)

1 ಆಗ ಯೋಬನು ಸರ್ವೇಶ್ವರಸ್ವಾಮಿಗೆ ಕೊಟ್ಟ ಉತ್ತರ ಇದು:

2 “ತಾವು ಎಲ್ಲಾ ಕಾರ್ಯಗಳನು ನಡೆಸಲು‍ ಶಕ್ತರೆಂದು ನಾನು ಬಲ್ಲೆ ಯಾವ ಯೋಜನೆಯು ನಿಮಗೆ ಅಸಾಧ್ಯವಿಲ್ಲವೆಂದು ನಾನು ಅರಿತಿರುವೆ.

3 ‘ಅಜ್ಞಾನದ ಮಾತುಗಳನ್ನಾಡುವ ನೀನು ಯಾರು?’ ‘ಸತ್ಯಾಲೋಚನೆಗಳನು ಮಂಕುಮಾಡುವ ನೀನಾರು?’ ಈ ನಿಮ್ಮ ನುಡಿಯಂತೆ ಅರ್ಥಹೀನ ಮಾತುಗಳನು ನಾನಾಡಿದೆ ನನ್ನ ಬುದ್ಧಿಗೆಟುಕದ ಪವಾಡಗಳನ್ನು ಟೀಕಿಸಿದೆ.

4 ‘ನಾನಾಡುವುದನು ಕಿವಿಗೊಟ್ಟು ಕೇಳು ನನ್ನ ಪ್ರಶ್ನೆಗೆ ಉತ್ತರ ನೀಡು’ ಎಂದು ನೀವು ಕೊಟ್ಟಿರಿ ಅಪ್ಪಣೆಯನು.

5 ಈವರೆಗೆ ನಿಮ್ಮನು ಕುರಿತು ನಾನು ಕೇಳಿದ್ದು ಬೇರೆಯವರಿಂದ ಈಗಲಾದರೊ ನಿಮ್ಮನು ಕಂಡಿದ್ದೇನೆ ನನ್ನ ಕಣ್ಣುಗಳಿಂದ.

6 ಆದುದರಿಂದ ನಾನು ಹೇಳಿದ್ದೆಲ್ಲಕ್ಕಾಗಿ ವಿಷಾದಿಸುತ್ತೇನೆ ಬೂದಿಯಲು, ಧೂಳಿನಲು ಕುಳಿತು ಪಶ್ಚಾತ್ತಾಪಪಡುತ್ತೇನೆ.”


ಸಮಾಪ್ತಿ

7 ಸರ್ವೇಶ್ವರಸ್ವಾಮಿ ಈ ಮಾತುಗಳನ್ನು ಯೋಬನಿಗೆ ಹೇಳಿದ ಮೇಲೆ ತೇಮಾನ್ಯನಾದ ಎಲೀಫಜನಿಗೆ, “ನಿನ್ನ ಮೇಲೂ ನಿನ್ನ ಗೆಳೆಯರಿಬ್ಬರ ಮೇಲೂ ನನಗೆ ಕೋಪವಿದೆ! ನನ್ನ ದಾಸ ಯೋಬನಂತೆ ನೀವು ನನ್ನ ವಿಷಯವಾಗಿ ಸರಿಯಾದುದನ್ನು ಆಡಲಿಲ್ಲ.

8 ಆದುದರಿಂದ ನೀವು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ದಾಸ ಯೋಬನ ಬಳಿಗೆ ಬನ್ನಿರಿ; ನಿಮ್ಮ ದೋಷಪರಿಹಾರಕ್ಕಾಗಿ ದಹನಬಲಿಯನ್ನು ಅರ್ಪಿಸಿರಿ. ನನ್ನ ದಾಸ ಯೋಬ ನಿಮ್ಮ ಪರವಾಗಿ ಪ್ರಾರ್ಥನೆ ಮಾಡುವನು; ನಾನು ಅವನ ವಿಜ್ಞಾಪನೆಯನ್ನು ಆಲಿಸಿ ನಿಮ್ಮ ನಿಮ್ಮ ಮೂರ್ಖತನಕ್ಕೆ ತಕ್ಕ ದಂಡನೆಯನ್ನು ವಿಧಿಸುವುದಿಲ್ಲ. ನನ್ನ ದಾಸ ಯೋಬನು ನನ್ನ ವಿಷಯದಲ್ಲಿ ಸತ್ಯವನ್ನು ನುಡಿದಂತೆ ನೀವು ನುಡಿಯಲಿಲ್ಲ,” ಎಂದರು.

9 ಆಗ ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು ಮತ್ತು ನಾಮಾಥ್ಯನಾದ ಚೋಫರನು ಹೋಗಿ ಸರ್ವೇಶ್ವರ ತಮಗೆ ಆಜ್ಞಾಪಿಸಿದಂತೆ ಮಾಡಿದರು. ಸರ್ವೇಶ್ವರ ಯೋಬನ ವಿಜ್ಞಾಪನೆಯನ್ನು ಆಲಿಸಿದರು.

10 ಯೋಬನು ತನ್ನ ಮಿತ್ರರಿಗೋಸ್ಕರ ಪ್ರಾರ್ಥಿಸಿದ ಬಳಿಕ ಸರ್ವೇಶ್ವರಸ್ವಾಮಿ ಅವನ ದುಸ್ಥಿತಿಯನ್ನು ಹೋಗಲಾಡಿಸಿದರು. ಅವನ ಆಸ್ತಿಪಾಸ್ತಿಯನ್ನು ಮೊದಲಿಗಿಂತ ಇಮ್ಮಡಿಯಾಗಿಸಿದರು.

11 ಅವನ ಎಲ್ಲಾ ಅಣ್ಣತಮ್ಮಂದಿರು, ಅಕ್ಕತಂಗಿಯರು, ಹಿಂದಿನ ಪರಿಚಿತರು ಅವನನ್ನು ಕಾಣಬಂದು ಔತಣದಲ್ಲಿ ಭಾಗವಹಿಸಿದರು. ಅವನಿಗೆ ಸರ್ವೇಶ್ವರನಿಂದ ಒದಗಿದ್ದ ಆಪತ್ತಿಗಾಗಿ ಅನುತಾಪ ವ್ಯಕ್ತಪಡಿಸಿ, ಸಂತೈಸಿದರು. ಪ್ರತಿಯೊಬ್ಬರೂ ಒಂದೊಂದು ಬೆಳ್ಳಿ ನಾಣ್ಯವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಅವನಿಗೆ ಕೊಟ್ಟರು.

12 ಸರ್ವೇಶ್ವರ ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಅಧಿಕಗೊಳಿಸಿ ಆಶೀರ್ವದಿಸಿದರು.

13 ಅವನಿಗೆ ಹದಿನಾಲ್ಕು ಸಾವಿರ ಕುರಿಗಳು, ಆರು ಸಾವಿರ ಒಂಟೆಗಳು, ಒಂದು ಸಾವಿರ ಜೋಡಿ ಎತ್ತುಗಳು, ಒಂದು ಸಾವಿರ ಕತ್ತೆಗಳು ದೊರಕಿದವು.

14 ಅಲ್ಲದೆ ಏಳು ಮಂದಿ ಗಂಡುಮಕ್ಕಳು, ಮೂರು ಮಂದಿ ಹೆಣ್ಣುಮಕ್ಕಳು ಹುಟ್ಟಿದರು. ಮೊದಲನೆಯವಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್ಹಪ್ಪೂಕ್ ಎಂದು ಹೆಸರಿಟ್ಟನು.

15 ಯೋಬನ ಮಕ್ಕಳಷ್ಟು ಸುಂದರವಾದ ಹೆಣ್ಣುಗಳು ಆ ನಾಡಿನಲ್ಲೆಲ್ಲೂ ಸಿಕ್ಕುತ್ತಿರಲಿಲ್ಲ. ಅವರ ತಂದೆ, ಅವರ ಅಣ್ಣತಮ್ಮಂದಿರಿಗೆ ಕೊಟ್ಟ ಹಾಗೆ ಅವರಿಗೂ ಸೊತ್ತನ್ನು ಹಂಚಿದನು.

16 ತರುವಾಯ ಯೋಬನು ನೂರನಾಲ್ವತ್ತು ವರ್ಷ ಬಾಳಿದನು. ನಾಲ್ಕು ತಲೆಮಾರು ತನಕ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಂಡನು.

17 ಹಣ್ಣು ಹಣ್ಣು ಮುದುಕನಾಗಿ ಸತ್ತನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು