Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 40 - ಕನ್ನಡ ಸತ್ಯವೇದವು C.L. Bible (BSI)

1 ಯೋಬನಿಗೆ ಸರ್ವೇಶ್ವರ ಮತ್ತೆ ಇಂತೆಂದನು:

2 “ಸರ್ವಶಕ್ತನೊಡನೆ ವ್ಯಾಜ್ಯವಾಡುವುದನು ಈಗಲಾದರು ನಿಲ್ಲಿಸುವೆಯಾ? ದೇವರೊಡನೆ ತರ್ಕಮಾಡುವಂಥ ನೀನು ಉತ್ತರಕೊಡುವೆಯಾ?”

3 ಆಗ ಯೋಬನು ಸರ್ವೇಶ್ವರಸ್ವಾಮಿಗೆ ಇಂತೆಂದನು:

4 “ಅಯ್ಯೋ, ನಾನು ಅಲ್ಪನೇ ಸರಿ ತಮಗೇನು ಪ್ರತ್ಯುತ್ತರ ಹೇಳಲಿ? ಬಾಯ ಮೇಲೆ ಕೈಯಿಡುವೆ ಮೌನತಾಳಿ.

5 ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.”

6 ಸರ್ವೇಶ್ವರ ಬಿರುಗಾಳಿಯೊಳಗಿಂದ ಯೋಬನಿಗೆ ಕೊಟ್ಟ ಪ್ರತ್ಯುತ್ತರವಿದು:

7 “ಶೂರನಂತೆ ನಡುಕಟ್ಟಿಕೊಂಡು ನನ್ನ ಪ್ರಶ್ನೆಗೆ ಉತ್ತರಕೊಡು:

8 ಏನು, ನನ್ನ ನಿರ್ಣಯವನ್ನು ನೀನು ಖಂಡಿಸುತ್ತೀಯೋ? ನೀನು ನಿರ್ದೋಷಿಯೆನಿಸಿಕೊಳ್ಳಲು ನನ್ನನ್ನು ದೋಷಿಯನ್ನಾಗಿಸುತ್ತೀಯೋ?

9 ದೇವರಾದ ನನಗಿರುವಂಥ ಭುಜಬಲ ನಿನಗಿದೆಯೋ? ನನ್ನ ಧ್ವನಿಗೆ ಸಮನಾಗಿ ನೀನು ಗುಡುಗಬಲ್ಲೆಯೋ?

10 ಮಹಿಮೆ ಘನತೆಗಳಿಂದ ಅಲಂಕರಿಸಿಕೊ! ಗೌರವ ಪ್ರಭಾವಗಳನು ಧರಿಸಿಕೊ!

11 ನಿನ್ನ ಕಡುಕೋಪವನು ಎಲ್ಲೆಡೆಯೂ ಹರಡಿಸು ಕಣ್ಣಿಟ್ಟು ಗರ್ವಿಷ್ಠರೆಲ್ಲರನು ತಗ್ಗಿಸು.

12 ಹೌದು, ಕಣ್ಣಿಟ್ಟು ಗರ್ವಿಷ್ಠರೆಲ್ಲರನು ತಗ್ಗಿಸು ದುಷ್ಟರನು ನಿಂತಲ್ಲೇ ತುಳಿದುಬಿಡು.

13 ಅವರೆಲ್ಲರನು ಧೂಳಿನಲ್ಲಿ ಒಟ್ಟಿಗೆ ಅಡಗಿಸಿಬಿಡು ಅವರ ಮುಖಕ್ಕೆ ಅಧೋಲೋಕದಲಿ ಮುಸುಕುಹಾಕು.

14 ಆಗ ನಿನ್ನ ಬಲ ನಿನ್ನನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು.

15 ಸೃಷ್ಟಿಮಾಡಿದೆನು ನೀರಾನೆಯನು ನಿನ್ನ ಹಾಗೆ ಅದು ಹುಲ್ಲನು ಮೇಯುತ್ತದೆ ಎತ್ತಿನ ಹಾಗೆ.

16 ಅದರ ಬಲ ಇರುವುದು ಸೊಂಟದಲಿ ಅದರ ತ್ರಾಣ ಹೊಟ್ಟೆಯ ನರಗಳಲಿ.

17 ಬಾಲವನ್ನು ಬಾಗಿಸುತ್ತದೆ ದೇವದಾರು ಮರದಂತೆ ಅದರ ನರಗಳೋ ಹೆಣೆದುಕೊಂಡಿವೆ.

18 ಅದರ ಮೂಳೆಗಳಿವೆ ಕಂಚಿನ ನಳಿಕೆಗಳಂತೆ ಅದರ ಎಲುಬುಗಳಿವೆ ಕಬ್ಬಿಣದ ಹಾರೆಗಳಂತೆ.

19 ದೈವಸೃಷ್ಟಿಗಳಲ್ಲಿ ಅದು ಮುಖ್ಯವಾದುದು ಸೃಷ್ಟಿಕರ್ತನು ಅದಕ್ಕೆ ಕೊಟ್ಟಿರುವನು ಕೋರೆಹಲ್ಲಿನ ಖಡ್ಗವನ್ನು.

20 ಅದಕ್ಕೆ ಮೇವು ಕೊಡುತ್ತವೆ ಬೆಟ್ಟಗುಡ್ಡಗಳು ಅಲ್ಲಿ ಅಲೆದಾಡುತ್ತಿರುತ್ತವೆ ಕಾಡು ಮೃಗಗಳು.

21 ಅದು ಮಲಗುತ್ತದೆ ತಾವರೆ ಗಿಡಗಳಡಿಯಲಿ ವಿಶ್ರಮಿಸುತ್ತದೆ ಆಪಿನ ಮರೆಯಲಿ, ಕೆಸರು ಭೂಮಿಯಲಿ.

22 ಅದಕ್ಕೆ ನೆರಳನ್ನೀಯುತ್ತವೆ ತಾವರೆ ಎಲೆಗಳು ಅದರ ಸುತ್ತಲಿರುತ್ತವೆ ನದಿಯ ನೀರವಂಜಿಗಳು.

23 ಹೊಳೆ ಉಕ್ಕಿಬಂದರೂ ಅದು ಹೆದರುವುದಿಲ್ಲ ನೋಡು ಜೋರ್ಡನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು!

24 ಅದು ನೋಡುವಾಗ ಯಾವನಾದರು ಅದನು ಹಿಡಿಯಬಲ್ಲನೆ? ಗಾಳದಿಂದ ಯಾವನಾದರು ಅದರ ಮೂಗನು ಚುಚ್ಚಬಲ್ಲನೆ?”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು