ಯೋಬ 4 - ಕನ್ನಡ ಸತ್ಯವೇದವು C.L. Bible (BSI)ಮೊದಲನೇ ಸಂವಾದ 1 ಆಗ ತೇಮಾನ್ಯನಾದ ಎಲೀಫಜನು ಹೀಗೆಂದನು: 2 “ಯಾರಾದರೂ ನಿನ್ನೊಡನೆ ಮಾತನಾಡಿದರೆ ಬೇಸರವೇಕೆ ನಿನಗೆ? ಆದರೂ ಯಾರಿಂದಾದೀತು ಮಾತನಾಡದೆ ಸುಮ್ಮನಿರುವುದಕ್ಕೆ? 3 ನೋಡು, ನೀನೇ ಅನೇಕರಿಗೆ ಶಿಕ್ಷಣವಿತ್ತೆ ಜೋಲುಬಿದ್ದ ಕೈಗಳಿಗೆ ಶಕ್ತಿಯನ್ನಿತ್ತೆ. 4 ನಿನ್ನ ನುಡಿ ಎಡವಿಬೀಳುವವರನ್ನು ನಿಲ್ಲಗೊಳಿಸಿತು ಕುಸಿದುಬೀಳುವ ಮೊಣಕಾಲುಗಳನ್ನು ಬಲಪಡಿಸಿತು. 5 ಈಗಲಾದರೂ ಆ ದುರಿತಗಳಿಂದ ನೀನೇ ಧೃತಿಗೆಟ್ಟಿರುವೆ ಅವು ನಿನಗೆ ತಗಲಿ ನೀನೇ ತಲ್ಲಣಗೊಂಡಿರುವೆ! 6 ನಿನ್ನ ನಂಬಿಕೆಗೆ ಆಧಾರ ನಿನ್ನ ಭಯಭಕ್ತಿಯಲ್ಲವೆ? ನಿನ್ನ ನಿರೀಕ್ಷೆಗೆ ಅಸ್ತಿವಾರ ನಿನ್ನ ಆದರ್ಶವಲ್ಲವೆ? 7 ಆಲೋಚಿಸಿ ನೋಡು, ನಿರಪರಾಧಿ ಎಂದಾದರೂ ನಾಶವಾದುದುಂಟೆ ಸತ್ಯ-ಸಂಧರು ಎಲ್ಲಿಯಾದರೂ ನಿರ್ಮೂಲವಾದುದುಂಟೆ? 8 ನನಗೆ ತಿಳಿದಮಟ್ಟಿಗೆ, ಕೆಟ್ಟದ್ದನ್ನು ನೆಡುವವರು, ದುಷ್ಟತನವನು ಬಿತ್ತುವವರು, ಅದನ್ನೆ ಕೊಯ್ಯುವರು. 9 ಅಂಥವರು ದೇವರ ಉಸಿರಿನಿಂದಲೆ ನಾಶವಾಗುವರು ಆತನ ಸಿಟ್ಟಿನಿಂದಲೆ ಸತ್ತುಹೋಗುವರು. 10 ಸಿಂಹಗರ್ಜನೆ, ಭೀಕರ ಸಿಂಹದಾರ್ಭಟಗಳು ಅಡಗುವವು ಯುವಸಿಂಹದ ಕೋರೆಗಳು ಮುರಿದುಹೋಗುವವು. 11 ಬೇಟೆಯಿಲ್ಲದೆ ಮೃಗರಾಜ ಸಾಯುವನು ಸಿಂಹದ ಮರಿಗಳು ಚದರಿಹೋಗುವವು. 12 ನನಗೆ ವಿಷಯವೊಂದು ಗುಟ್ಟಾಗಿ ತಿಳಿದುಬಂತು ಪಿಸುಪಿಸುಮಾತಾಗಿ ಅದು ನನ್ನ ಕಿವಿಗೆ ಬಿತ್ತು. 13 ಜನರಿಗೆ ಗಾಢನಿದ್ರೆ ಹತ್ತುವ ಹೊತ್ತಿನಲಿ ರಾತ್ರಿಕಾಲದ ಸ್ವಪ್ನಯೋಚನೆಗಳ ಸುಳಿಯಲಿ 14 ಭೀಕರ ದಿಗಿಲು ಉಂಟಾಯಿತು ನನ್ನೆಲುಬುಗಳೆಲ್ಲವನ್ನು ನಡುಗಿಸಿತು. 15 ಆಗ ಆತ್ಮವೊಂದು ಮುಖದ ಮುಂದೆ ಹಾದುಹೋಯಿತು ನನ್ನ ಮೈಯೆಲ್ಲ ನಿಲುಗೂದಲಾಯಿತು. 16 ರೂಪವೊಂದು ನನ್ನ ಕಣ್ಮುಂದೆ ನಿಂತಿತ್ತು ಆದರೂ ಅದೇನೆಂಬುದು ನನಗೆ ತಿಳಿಯದೆಹೋಯಿತು ಸೂಕ್ಷ್ಮವಾಣಿಯೊಂದು ನನಗೆ ಕೇಳಿಬಂತು: 17 “ದೇವರ ದೃಷ್ಟಿಯಲ್ಲಿ ಸತ್ಯವಂತನಾಗಿರಲು ಮಾನವನಿಗೆ ಸಾಧ್ಯವೆ? ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಲು ಅವನಿಂದ ಸಾಧ್ಯವೆ?” 18 ತನ್ನ ಸೇವಕರಲ್ಲೂ ದೇವರು ನಂಬಿಕೆಯಿಡುವುದಿಲ್ಲವಲ್ಲಾ! ತನ್ನ ದೂತರ ಮೇಲೂ ಆತನು ತಪ್ಪುಹೊರಿಸುತ್ತಾನಲ್ಲಾ! 19 ಇಂತಿರಲು ದೂಳಿನಲ್ಲಿ ತಳವೂರಿ, ಮಣ್ಣಿನೊಡಲ ಹೊಕ್ಕು ಬಾಳಿ ಹುಳುವಿನಷ್ಟು ಸುಲಭವಾಗಿ ಅಳಿದುಹೋಗುವವರಲ್ಲಿ ಮತ್ತೆಷ್ಟು ತಪ್ಪೆಣಿಸಲಾರನಾತ ಅಂಥ ನರಮಾನವರಲ್ಲಿ? 20 ಅವರು ಉದಯಾಸ್ತಮಾನಗಳ ನಡುವೆ ಜಜ್ಜಿಹೋಗುವರು ಯಾರ ಲಕ್ಷ್ಯವೂ ಇಲ್ಲದೆ ನಿತ್ಯವಿನಾಶ ಹೊಂದುವರು. 21 ಅವರ ಗುಡಾರದ ಗೂಟವನ್ನು ಕೀಳಲಾಗುವುದು ಬುದ್ಧಿಹೀನರಾಗಿಯೆ ಅವರು ಸತ್ತುಹೋಗುವರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India