ಯೋಬ 38 - ಕನ್ನಡ ಸತ್ಯವೇದವು C.L. Bible (BSI)ಯೋಬನಿಗೂ ದೇವರಿಗೂ ಸಂವಾದ-ದೈವಾಜ್ಞೆಗೆ ತಲೆಬಾಗು 1 ಬಿರುಗಾಳಿಯೊಳಗಿಂದ ಸರ್ವೇಶ್ವರ ಯೋಬನಿಗೆ ಕೊಟ್ಟ ಪ್ರತ್ಯುತ್ತರ ಇದು: 2 “ಅಜ್ಞಾನದ ಮಾತುಗಳನ್ನಾಡಿ ಸತ್ಯಾಲೋಚನೆಯನು ಮಂಕುಮಾಡುವ ನೀನಾರು? 3 ಶೂರನಂತೆ ನಡುಕಟ್ಟಿ ನಿಲ್ಲು ನಾನು ಹಾಕುವ ಪ್ರಶ್ನೆಗೆ ಉತ್ತರ ನೀಡು: 4 ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನೆಲ್ಲಿದ್ದೆ? ಉತ್ತರಕೊಡು, ನೀನು ಅಷ್ಟು ಜ್ಞಾನಿಯಾಗಿದ್ದರೆ. 5 ಅದರಳತೆಯನ್ನು ಗೊತ್ತುಮಾಡಿದವನಾರೆಂದು ನಿನಗೆ ತಿಳಿದಿದೆಯೆ? ಅದರ ಮೇಲೆ ನೂಲು ಹಿಡಿದವನಾರೆಂದು ನಿನಗೆ ಗೊತ್ತಿದೆಯೆ? 6 ಉದಯ ನಕ್ಷತ್ರಗಳ ಜಯಕಾರದ ನಡುವೆ ದೇವದೂತರೆಲ್ಲರ ಆನಂದಘೋಷಣೆಯ ಮಧ್ಯೆ, 7 ಭೂಮಿಗೆ ಮೂಲೆಗಲ್ಲನು ಹಾಕಿದವನಾರು? ಅದರ ಅಡಿಗಲ್ಲು ಯಾವುದರ ಮೇಲೆ ನಿಂತಿದೆ?” ದೇವರು ಸಮುದ್ರ ಸಾಗರಕ್ಕೆ ಪ್ರಭು 8 “ಭೂಗರ್ಭವನ್ನು ಭೇದಿಸಿಕೊಂಡು ಬಂದ ಸಮುದ್ರವನು ದ್ವಾರಗಳಿಂದ ಬಂಧಿಸಿ ಮುಚ್ಚಿದವನಾರು? 9 ಅದಕ್ಕೆ ಮೋಡಗಳನು ತೊಡಿಸಿ, ಕಾರ್ಗತ್ತಲನು ಉಡಿಸಿದವನು ಯಾರು? 10 ಅದಕ್ಕೆ ಸರಹದ್ದನು ನಿಯಮಿಸಿ ಕದಗಳನೂ ಅಗುಳಿಗಳನೂ ಇಟ್ಟವನಾರು? 11 ‘ಇಲ್ಲಿಯತನಕ ಬರಬಹುದು, ಇದನು ಮೀರಿ ಬರಕೂಡದು’ ‘ಮೊರೆವ ನಿನ್ನ ತೆರೆಗೆ ಇಲ್ಲಿಗೇ ತಡೆ’ ಎಂದು ವಿಧಿಸಿದವನು ನಾನು. 12 ನಿನ್ನ ಜೀವಮಾನದಲಿ ಎಂದಾದರೂ ‘ಅರುಣೋದಯವಾಗಲಿ’ ಎಂದು ಆಜ್ಞಾಪಿಸಿರುವೆಯಾ? 13 ‘ಧರಣಿಯ ಅಂಚುಗಳನು ಹಿಡಿದು ದುರುಳರನ್ನು ಅದರೊಳಗಿಂದ ಒದರಿಬಿಡು’ ಎಂದು ಅದಕ್ಕೆ ಅಪ್ಪಣೆಮಾಡಿದೆಯಾ? 14 ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಭೂಮಿ ರೂಪತಾಳುತ್ತದೆ ಅದು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುತ್ತದೆ. 15 ದುರುಳರಿಂದ ಬೆಳಕನು ಹಿಂತೆಗೆದುಕೊಳ್ಳಲಾಗುವುದು ಅವರು ಎತ್ತಿದ ಕೈಯನು ಮುರಿಯಲಾಗುವುದು. 16 ನೀನೆಂದಾದರು ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ? 17 ಮರಣದ ದ್ವಾರಗಳು ನಿನಗೆ ಗೋಚರವಾಗಿರುವುವೋ? ಘೋರಾಂಧಕಾರದ ಕದಗಳನ್ನು ನೀನು ಕಂಡಿರುವೆಯೋ? 18 ಭೂವಿಸ್ತಾರವನ್ನು ಗ್ರಹಿಸಿರುವೆಯೋ? ಇದೆಲ್ಲವು ನಿನಗೆ ತಿಳಿದಿದ್ದರೆ ಹೇಳು, ನೋಡೋಣ! 19 ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ? 20 ನೀನು ಅವುಗಳನು ಅವುಗಳ ಪ್ರಾಂತ್ಯಕ್ಕೆ ಕರೆದೊಯ್ಯಬಲ್ಲೆಯಾ? ಅವುಗಳ ನಿವಾಸಕೆ ಹಾದಿಯನು ಕಂಡುಹಿಡಿಯಬಲ್ಲೆಯಾ? 21 ಇದನ್ನು ಬಲ್ಲೆಯಾದರೆ ನೀನು ಆಗಲೇ ಹುಟ್ಟಿದ್ದಿರಬೇಕು ಮತ್ತು ಈಗ ಬಹಳ ವೃದ್ಧನಾಗಿರಬೇಕು! 22 ಹಿಮದ ಭಂಡಾರವನು ಹೊಕ್ಕಿರುವೆಯಾ? ಕಲ್ಮಳೆಯ ಬೊಕ್ಕಸವನು ನೋಡಿರುವೆಯಾ? 23 ಇಕ್ಕಟ್ಟಿನ ಕಾಲಕ್ಕಾಗಿ ಅವುಗಳನು ನಾನು ಇಟ್ಟಿರುವೆನು ಯುದ್ಧಕದನಗಳ ದಿನಗಳಿಗಾಗಿ ನಾನು ಕಾದಿಟ್ಟಿರುವೆನು. 24 ಬೆಳಕು ಏರಿಬರುವ ಜಾಗವೆಲ್ಲಿ? ಬಿಸಿಗಾಳಿ ಬೀಸಿಬರುವ ಮಾರ್ಗವೆಲ್ಲಿ? 25 ಮನುಜರಿಲ್ಲದ ಕಾಡಿನಲ್ಲೂ ನಿರ್ಜನಪ್ರದೇಶದಲ್ಲೂ ಮಳೆಯನು ಹೊಯ್ದು, 26 ಹಾಳುಬೀಳಾದ ಭೂಮಿಯನು ತೋಯಿಸಲೆಂದು ಪಚ್ಚೆಪಸಿರಾದ ಹುಲ್ಲನು ಬೆಳೆಯಿಸಲೆಂದು, 27 ವೃಷ್ಟಿಯ ಪ್ರವಾಹಕ್ಕೆ ಕಾಲುವೆಯನು ಕಡಿದವರಾರು? ಗರ್ಜಿಸುವ ಸಿಡಿಲಿಗೆ ದಾರಿಯನು ಮಾಡಿದವರಾರು? 28 ಮಳೆಗೆ ತಂದೆಯೊಬ್ಬನಿದ್ದಾನೆಯೆ? ಮಂಜಿನ ಹನಿಗೆ ಹೆತ್ತವಳಿದ್ದಾಳೆಯೆ? 29 ಹಿಮಗಡ್ಡೆ ಹೊರಡುವುದು ಯಾರ ಗರ್ಭದಿಂದ? ಆಕಾಶದ ಇಬ್ಬನಿ ಜನಿಸುವುದು ಯಾವ ತಾಯಿಂದ? 30 ಕಲ್ಲಿನಂತೆ ನೀರು ಗಟ್ಟಿಯಾಗುತ್ತದೆ ಸಾಗರದ ಮೇಲ್ಭಾಗ ಹೆಪ್ಪುಗಟ್ಟುತ್ತದೆ. 31 ಕೃತ್ತಿಕೆಯ ಸರಪಣಿಯನು ನೀನು ಬಿಗಿಯಬಲ್ಲೆಯಾ? ಮೃಗಶಿರದ ಸಂಕೋಲೆಯನು ಬಿಚ್ಚಬಲ್ಲೆಯಾ? 32 ಆಯಾಯ ಕಾಲಕ್ಕೆ ನಕ್ಷತ್ರರಾಶಿಗಳನು ಬರಮಾಡುವೆಯಾ? ಸಪ್ತರ್ಷಿತಾರೆಗಳನು ಪರಿವಾರದೊಡನೆ ನಡೆಸುವೆಯಾ? 33 ಖಗೋಳದ ನಿಯಮಗಳನು ತಿಳಿದಿರುವೆಯಾ? ಅದರ ಆಳ್ವಿಕೆಯನು ಇಳೆಯೊಳು ಸ್ಥಾಪಿಸಿರುವೆಯಾ? 34 ನಿನ್ನಾಜ್ಞೆ ಮೋಡ ಮುಟ್ಟಿದ ಮಾತ್ರಕೆ ಹೇರಳವಾದ ನೀರು ನಿನ್ನನು ಆವರಿಸುವುದೊ? 35 ನಿನ್ನ ಅಪ್ಪಣೆಯಂತೆ ಸಿಡಿಲುಗಳು ಹೋಗಿಬಂದು ‘ಇದೋ ಬಂದಿದ್ದೇವೆ’ ಎಂದು ನಿನಗೆ ಹೇಳುತ್ತವೆಯೊ? 36 ಜ್ಞಾನವನು ದಯಪಾಲಿಸಿದವನಾರು ಇಬಿಸ್ ಪಕ್ಷಿಗೆ? ವಿವೇಕವನು ಅನುಗ್ರಹಿಸಿದವನಾರು ಕೋಳಿಹುಂಜಕ್ಕೆ 37 ಯಾರಿಗಿದೆ ಮೋಡಗಳನು ಲೆಕ್ಕಿಸುವ ಶಕ್ತಿ? ಆಕಾಶದಲ್ಲಿನ ಬುದ್ದಲಿಗಳನು ಮೊಗಚಿಹಾಕುವ ಬುದ್ಧಿಶಕ್ತಿ? 38 ದೂಳುಮಣ್ಣನು ಒತ್ತಟ್ಟಿಗೆ ಸೇರಿಸಬಲ್ಲವನಾರು? ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡಬಲ್ಲವನಾರು? 39 ಗುಹೆಯಲ್ಲಿ ಮಲಗಿರುವ ಸಿಂಹಕೆ ಬೇಟೆಯಾಡಿ ಊಟ ಒದಗಿಸಬಲ್ಲೆಯಾ ನೀನು? 40 ಪೊದೆಯಲ್ಲಿ ಹೊಂಚುಕೂತಿರುವ ಯುವಸಿಂಹಕೆ ಹಸಿವನು ನೀಗಿಸಬಲ್ಲೆಯಾ ನೀನು? 41 ಆಹಾರವನು ಒದಗಿಸುವವರಾರು ತಾಯಿ ಕಾಗೆಗೆ ಅದರ ಹಸಿದ ಮರಿಗಳು ಕೊಕ್ಕೆತ್ತಿ ದೇವರಿಗೆ ಮೊರೆಯಿಡುವಾಗ? |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India