Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 37 - ಕನ್ನಡ ಸತ್ಯವೇದವು C.L. Bible (BSI)

1 “ಇದನ್ನು ನೋಡಿದಾಗ ನನ್ನ ಎದೆ ತತ್ತರಗೊಳ್ಳುತ್ತದೆ. ನನ್ನ ಗುಂಡಿಗೆ ಎದೆಬಿಟ್ಟು ಮಿಡಿಯುತ್ತದೆ.

2 ದೇವರ ಧ್ವನಿಯ ಗರ್ಜನೆಯನು ಕಿವಿಗೊಟ್ಟು ಕೇಳು ಆತನ ಬಾಯಿಂದ ಹೊರಡುವ ಮಾತನು ಆಲಿಸು.

3 ಅದನ್ನು ಗಗನಮಂಡಲದೊಳು ಹರಡುತ್ತಾನೆ ಜಗದ ಅಂಚಿನ ತನಕ ಮಿಂಚು ಹೊಳೆಯುವಂತೆ ಮಾಡುತ್ತಾನೆ.

4 ಮಿಂಚಿನ ಬಳಿಕ ಕೇಳಿಬರುವುದು ಗರ್ಜನೆಯ ಶಬ್ದ ಗುಡುಗಿನಂಥ ಗಂಭೀರವಾದ ಆತನ ಕಂಠನಾದ ಆತನ ಸ್ವರ ಕೇಳುವಾಗ ನಿಲ್ಲದು ಮಿಂಚಿನ ಹೊಳೆತ.

5 ದೇವರಕಂಠ ತನ್ನ ಅದ್ಭುತಕಾರ್ಯಗಳನು ಘೋಷಿಸುತ್ತದೆ ನಮ್ಮಿಂದರಿಯಲಾಗದ ಮಹಾತ್ಕಾರ್ಯಗಳನು ಎಸಗುತ್ತಾನೆ.

6 ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎನ್ನುತ್ತಾನೆ ಭಾರಿಮಳೆಗೆ, ‘ರಭಸದಿಂದ ಸುರಿ’ ಎನ್ನುತ್ತಾನೆ.

7 ಹೀಗೆ ಜನರೆಲ್ಲರು ಕೆಲಸ ನಿಲ್ಲಿಸುವಂತೆ ಮಾಡುತ್ತಾನೆ ತನ್ನ ಕಾರ್ಯವನು ಅರಿಯುವಂತೆ ಮಾಡುತ್ತಾನೆ.

8 ಆಗ ಮೃಗಗಳು ಗುಹೆ ಸೇರುತ್ತವೆ ಪ್ರಾಣಿಗಳು ಬಿಲಗಳಲೇ ತಂಗುತ್ತವೆ.

9 ದೇವರ ಭಂಡಾರದಿಂದ ಬಿರುಗಾಳಿ ಬೀಸುತ್ತದೆ ಉತ್ತರ ದಿಕ್ಕಿನಿಂದ ಚಳಿ ಹೊರಬರುತ್ತದೆ.

10 ದೇವರ ಉಸಿರಿನಿಂದ ನೀರು ಹಿಮಗಡ್ಡೆಯಾಗುತ್ತದೆ ಸವಿಸ್ತಾರದ ಜಲವು ಕೂಡ ಮಂಜುಗಡ್ಡೆಯಾಗುತ್ತದೆ.

11 ಮೋಡಗಳ ಮೇಲೆ ಮಂಜನು ಹೇರುತ್ತಾನೆ ಮೇಘಮಂಡಲವು ಆತನ ಮಿಂಚನು ಹರಡುತ್ತದೆ.

12 ಜಗದೊಳೆಲ್ಲ ಆತ ವಿಧಿಸಿದಂತೆ ಜರುಗಬೇಕೆಂದು ಸುತ್ತಮುತ್ತಲು ಸಿಡಿಲುಗಳು ಸಂಚರಿಸುವಂತೆ ಮಾಡುತ್ತಾನೆ.

13 ಜನರ ಶಿಕ್ಷಣಕ್ಕೆ, ಧರೆಯ ಹಿತಕೆ ತಮ್ಮ ಪ್ರೀತಿಯನ್ನು ತೋರುವುದಕೆ ಇದೆಲ್ಲ ಆಗುವಂತೆ ಮಾಡುತ್ತಾನೆ.

14 ಯೋಬನೇ, ಈ ಮಾತುಗಳನು ಕೇಳು ದೇವರ ಅದ್ಭುತಗಳನು ಮೌನದಿಂದ ಧ್ಯಾನಿಸು:

15 ದೇವರು ಹೇಗೆ ಮೋಡಗಳನು ನಿಯಂತ್ರಿಸುತ್ತಾನೆಂದು ಅರಿತಿರುವೆಯಾ? ಅವುಗಳಿಂದ ಸಿಡಿಲು ಹೇಗೆ ಹೊಳೆದುಬರುತ್ತದೆಂದು ತಿಳಿದಿರುವೆಯಾ?

16 ಮೋಡಗಳ ತೇಲಾಟವನು ಬಲ್ಲೆಯಾ? ಜ್ಞಾನಪೂರ್ಣನಾ ಅದ್ಭುತಕಾರ್ಯಗಳನು ಗ್ರಹಿಸಿರುವೆಯಾ?

17 ತೆಂಕಣಗಾಳಿಯಿಂದ ಪೊಡವಿ ತಪಿಸಿ ಸ್ತಬ್ದವಿರುವಾಗಲೆ ನಿನ್ನ ಬಟ್ಟೆಬರೆ ಬಿಸಿಯಿರುವಾಗಲೆ ಆ ಅರಿವು ನಿನಗಿರುತ್ತದೆಯೇ?

18 ದೇವರಂತೆ ಆಕಾಶಮಂಡಲವನು ನಿನ್ನಿಂದ ನಿರ್ಮಿಸಲಾದೀತೆ? ಎರಕ ಹೊಯ್ದು ಕನ್ನಡಿಯಂತೆ ಅದನು ಗಟ್ಟಿಮಾಡಲಾದೀತೆ?

19 ಆತನಿಗೆ ಹೇಳಬೇಕಾದ ಉತ್ತರವನು ನಮಗೆ ತಿಳಿಸು ಅಂಧಕಾರದಲ್ಲಿರುವ ನಮ್ಮಿಂದ ಏನೊಂದನೂ ಹೇಳಲಾಗದು.

20 ನಾನು ಮಾತಾಡಬೇಕೆಂದು ದೇವರಿಗೆ ಹೇಳಿಕಳಿಸಲಾದೀತೆ? ಹಾಗೆ ಮಾಡುವವನು ತನ್ನನ್ನೆ ನಿರ್ಮೂಲ ಮಾಡಿಕೊಂಡಂತೆ!

21 ಗಾಳಿಬೀಸಿ ಗಗನವನು ಶುಭ್ರಗೊಳಿಸಲು ಅಲ್ಲಿ ಪ್ರಜ್ವಲಿಸುವ ಬೆಳಕನು ದೃಷ್ಟಿಸಲಾಗದು.

22 ಉತ್ತರದಿಂದ ಹೊನ್ನಿನ ಹೊಳಪು ಹೊರಡುವುದು ದೇವರು ವಿಸ್ಮಯಕರ ತೇಜಸ್ಸನು ಧರಿಸಿರುವನು.

23 ಕಂಡುಹಿಡಿಯಲಾಗದು ಇಂಥ ಸರ್ವಶಕ್ತನನು ನಮ್ಮಿಂದ ಶಕ್ತಿಯಲೂ ಸತ್ಯದಲೂ ಪರಮ ಪರಾಕ್ರಮಿ ಆತ ನ್ಯಾಯಪೂರ್ಣನಾದ ಆತ ದಬ್ಬಾಳಿಕೆ ನಡೆಸುವವನಲ್ಲ ನ್ಯಾಯಕ್ಕಾಗಲೀ ಧರ್ಮಕ್ಕಾಗಲೀ ಆತ ಧಕ್ಕೆ ತರುವವನಲ್ಲ.

24 ಎಂತಲೇ ಜನರಿಗೆ ಆತನಲ್ಲಿದೆ ಭಯಭಕ್ತಿ ತಾವೇ ಜ್ಞಾನಿಗಳೆಂದುಕೊಳ್ಳುವವರಲಿ ದೇವರಿಗಿಲ್ಲ ಲಕ್ಷ್ಯ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು