ಯೋಬ 35 - ಕನ್ನಡ ಸತ್ಯವೇದವು C.L. Bible (BSI)ಎಲೀಹುವನ ಮೂರನೇ ಭಾಷಣ 1 ಎಲೀಹುವನು ಮತ್ತೆ ಹೀಗೆಂದು ಹೇಳಿದನು: 2 “’ಸಜ್ಜನನಾಗಿ ಬಾಳಿ ನನಗಾದ ಪ್ರಯೋಜನವೇನು? ಪಾಪರಹಿತನಾಗಿ ಜೀವಿಸಿ ನನಗೆ ಬಂದ ಲಾಭವೇನು’ 3 ಈ ರೀತಿ ನೀನು ನುಡಿಯುವುದು ನ್ಯಾಯವೆಂದು ಊಹಿಸುತ್ತೀಯೋ? ನಿನ್ನ ನೀತಿ ದೇವರ ನೀತಿಗಿಂತ ಮಿಗಿಲಾದುದೆನ್ನುತ್ತೀಯೋ? 4 ನಾನು ನಿನಗೆ ಉತ್ತರಕೊಡುತ್ತೇನೆ ನಿನ್ನ ಮಿತ್ರರಿಗೂ ಪ್ರತ್ಯುತ್ತರ ನೀಡುತ್ತೇನೆ. 5 ಗಗನ ಮಂಡಲವನು ಕಣ್ಣೆತ್ತಿ ನೋಡು ನಿನಗೂ ಎಷ್ಟೋ ಎತ್ತರವಾದ ಮೇಘ ಮಾರ್ಗವನು ದಿಟ್ಟಿಸಿ ನೋಡು. 6 ನೀನು ಪಾಪಮಾಡದಿದ್ದರೆ ದೇವರಿಗೇನು ಮಾಡಿದಂತಾಯಿತು? ನಿನ್ನ ದ್ರೋಹಗಳು ಹೆಚ್ಚಿದರೆ ಅವರಿಗಾದ ನಷ್ಟವೇನು? 7 ನೀನು ಸಜ್ಜನನಾಗಿದ್ದರೆ ಅವರಿಗೇನು ಕೊಟ್ಟಂತಾಯಿತು? ನಿನ್ನ ಕೈಯಿಂದ ಅವರಿಗೆ ದೊರಕಿದ ಲಾಭ ಯಾವುದು? 8 ನಿನ್ನ ನೀಚತನದಿಂದ ನಿನ್ನಂಥವನಿಗೇ ನಷ್ಟ ನಿನ್ನ ಸಜ್ಜನಿಕೆಯಿಂದ ನರಜನ್ಮದವನಿಗೇ ಲಾಭ. 9 ಅಪಾರ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾರೆ. ಬಲಿಷ್ಠರ ಭುಜಬಲದಿಂದ ಪೀಡಿತರು ಕಿರಿಚಿಕೊಳ್ಳುತ್ತಾರೆ. 10 ಆದರೆ ‘ನಮ್ಮನ್ನು ಸೃಷ್ಟಿಸಿದ ಕರ್ತನೆಲ್ಲಿ? ಕತ್ತಲಲ್ಲೂ ಕೀರ್ತನೆ ಹಾಡಬಲ್ಲವನೆಲ್ಲಿ? 11 ಕಾಡುಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನೀಯುವವನೆಲ್ಲಿ? ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ದಿಕಲಿಸುವನೆಲ್ಲಿ? ಎನ್ನುವುದೇ ಇಲ್ಲ. 12 ಎಂತಲೆ ದುರುಳರ ಸೊಕ್ಕನ್ನು ಮುಂದಿಟ್ಟು ಗೋಳಿಟ್ಟರೂ ದೇವರು ಅವರಿಗೆ ಉತ್ತರ ಕೊಡುವುದಿಲ್ಲ. 13 ದೇವರು ಪೊಳ್ಳುಮಾತಿಗೆ ಕಿವಿಗೊಡನು ಸರ್ವಶಕ್ತನು ಅದಕ್ಕೆ ಎಂದಿಗೂ ಲಕ್ಷ್ಯಕೊಡನು. 14 ಇಂತಿರಲು ನೀನು, ‘ಆತ ಕಾಣನು, ನನ್ನ ವ್ಯಾಜ್ಯ ಆತನ ಮುಂದಿದೆ ಆತನಿಗಾಗಿ ಕಾದಿರುವೆ’ ಎಂದುಕೊಂಡರೂ ಆತ ಕೇಳಿಯಾನೆ? 15 ‘ದೇವರು ಸಿಟ್ಟುಗೊಂಡು ಶಿಕ್ಷಿಸುವುದಿಲ್ಲ ದ್ರೋಹಗಳನ್ನು ಅಷ್ಟಾಗಿ ಗಣನೆಗೆ ತಂದುಕೊಳ್ಳುವುದಿಲ್ಲ’ 16 ಎಂದು ಹೇಳುತ್ತಾ ಯೋಬನು ಬಾಯಿತೆರೆಯುತ್ತಾನೆ ವ್ಯರ್ಥವಾಗಿ ತಿಳುವಳಿಕೆಯಿಲ್ಲದೆ ಮಾತಾಡುತ್ತಾನೆ ಬಹಳವಾಗಿ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India