Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 34 - ಕನ್ನಡ ಸತ್ಯವೇದವು C.L. Bible (BSI)


ಎಲೀಹುವನ ಎರಡನೆಯ ಭಾಷಣ

1 ಎಲೀಹುವನು ಮತ್ತೆ ಹೀಗೆಂದನು:

2 “ಜ್ಞಾನಿಗಳೇ, ನನ್ನ ಮಾತನ್ನು ಗಮನಿಸಿ: ಮೇಧಾವಿಗಳೇ, ನನಗೆ ಕಿವಿಗೊಡಿ:

3 ನಾಲಿಗೆ ಆಹಾರವನು ರುಚಿನೋಡುವಂತೆ ಕಿವಿ ನುಡಿಮಾತುಗಳನು ವಿವೇಚಿಸುತ್ತದೆ.

4 ಸರಿಯಾದುದನ್ನೇ ಆಯ್ದುಕೊಳ್ಳೋಣ ಒಳಿತಾದುದನ್ನು ನಮ್ಮ ನಮ್ಮಲ್ಲೇ ನಿಶ್ಚಯಿಸಿಕೊಳ್ಳೋಣ.

5 ಇಂತಿದೆ ಯೋಬನ ವಾದ - ‘ನಾನು ಸತ್ಯವಂತ ನನಗೆ ದೇವರಿಂದ ನ್ಯಾಯ ದೊರೆತಿಲ್ಲ.

6 ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರನೆನಿಸಿಕೊಂಡಿದ್ದೇನೆ ನಿರ್ದೋಷಿಯಾಗಿದ್ದರೂ ನನಗೆ ದೇವರ ಪೆಟ್ಟು ಬಾಣಬಿಟ್ಟಂತಿದೆ.’

7 ಈ ಯೋಬನಂಥ ಮನುಜನು ಯಾರಿದ್ದಾನೆ? ಇಗೋ, ದೇವದೂಷಣೆಯನು ನೀರಿನಂತೆ ಕುಡಿಯುತ್ತಾನೆ!

8 ಇವನು ದುರ್ಜನರ ಸಂಗಡ ಸಂಚರಿಸುವವನು ಕೆಡುಕರ ಸಂಗಡ ನಡೆದಾಡುವವನು.

9 ದೇವರನು ಪ್ರೀತಿಸಿ ಬಾಳುವುದರಿಂದ ಪ್ರಯೋಜನವಿಲ್ಲವೆಂಬುದು ಇವನ ವಾದ.

10 ಹೀಗಿರಲು ಬುದ್ದಿವಂತರೇ, ನನ್ನ ಮಾತುಗಳಿಗೆ ಕಿವಿಗೊಡಿ ದೇವರು ಕೆಟ್ಟದ್ದನ್ನು ಮಾಡಿಯಾನೆಂಬ ಯೋಚನೆ ದೂರವಿರಲಿ ಸರ್ವಶಕ್ತನು ಅನ್ಯಾಯವನು ಎಸಗಿಯಾನೆಂಬ ಭಾವನೆ ಬಾರದಿರಲಿ.

11 ದೇವರು ನರನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲವನ್ನೀಯುತ್ತಾನೆ ಪ್ರತಿಯೊಬ್ಬನು ಅವನವನ ಕರ್ಮಕ್ಕೆ ತಕ್ಕಂತೆ ಅನುಭವಿಸಮಾಡುತ್ತಾನೆ.

12 ಹೌದು, ದೇವರು ಎಂದಿಗೂ ಕೆಡುಕನು ಮಾಡನು ಸರ್ವಶಕ್ತನು ಎಂದಿಗೂ ನೇರವಾದುದನು ಡೊಂಕುಮಾಡನು.

13 ಭೂಲೋಕವನು ಆತನ ವಶಕ್ಕೆ ಕೊಟ್ಟವನುಂಟೆ? ಆತನಲ್ಲದೆ ಭೂಮಂಡಲವನು ಕ್ರಮಪಡಿಸಿದವನುಂಟೆ?

14 ದೇವರು ಮನಸ್ಸುಮಾಡಿ ತನ್ನ ಆತ್ಮವನ್ನು ಹಿಂದಕ್ಕೆ ತೆಗೆದುಕೊಂಡನಾದರೆ ತನ್ನ ಶ್ವಾಸವನ್ನು ಹಿಂದಕೆ ಎಳೆದುಕೊಂಡನಾದರೆ,

15 ಸಮಸ್ತಜನರು ಒಟ್ಟಾಗಿ ಅಳಿದುಹೋಗುವರು ಮರಳಿ ಮನುಷ್ಯರೆಲ್ಲರೂ ಮಣ್ಣಾಗಿ ಮಾರ್ಪಡುವರು.

16 ಬುದ್ದಿಯಿದ್ದರೆ ಇದನು ಕೇಳಿ ನನ್ನ ಮಾತಿನ ದನಿಗೆ ಕಿವಿಗೊಡಿ.

17 ನ್ಯಾಯವನ್ನು ದ್ವೇಷಿಸುವವನು, ಶಿಸ್ತನು ಪಾಲಿಸುವನೋ? ಸತ್ಯಸ್ವರೂಪಿ, ಸರ್ವಶಕ್ತ ಆದ ದೇವರನು ಕೆಟ್ಟವನೆನ್ನುವಿಯೋ?

18 ದೇವರು ರಾಜನಿಗೆ “ಮೂರ್ಖ’ ಎಂದು ಹೇಳಬಲ್ಲನು ಪ್ರಭುಗಳನ್ನು “ದುಷ್ಟರು” ಎಂದು ಕರೆಯಬಲ್ಲನು.

19 ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸುವನು ಬಡವ-ಬಲ್ಲಿದನೆಂಬ ಭೇದವನ್ನು ಮಾಡನು. ಏಕೆಂದರೆ ಅವರೆಲ್ಲರು ಆ ದೇವನಿಂದಲೇ ಸೃಷ್ಟಿಯಾದವರು.

20 ಕ್ಷಣಮಾತ್ರದೊಳು, ನಡುರಾತ್ರಿಯೊಳು ಸತ್ತುಹೋಗುವರು ನಾಡಿನ ಪ್ರಜೆಗಳು ತಲ್ಲಣಗೊಂಡು ಇಲ್ಲದೆಹೋಗುವರು ಮನುಷ್ಯರ ಕೈಸೋಂಕದೆಯೆ ಪರಾಕ್ರಮಿಗಳು ಮಾಯವಾಗುವರು.

21 ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ ಅವನ ಹೆಜ್ಜೆಗಳೆಲ್ಲ ಗೋಚರವಾಗಿವೆ ಆತನಿಗೆ.

22 ಆತನ ದೃಷ್ಟಿಯಿಂದ ದುರುಳರು ಅಡಗಿಕೊಳ್ಳುವಂತಿಲ್ಲ ಅಂಥವರನ್ನು ಅಡಗಿಸಬಲ್ಲ ಇರುಳಿಲ್ಲ ಕಾರಿರುಳೂ ಇಲ್ಲ.

23 ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ ಅವನನ್ನು ನ್ಯಾಯವಿಚಾರಣೆಗೆ ಕರೆಯುವ ಅವಶ್ಯಕತೆ ಇಲ್ಲ.

24 ವಿಚಾರಣೆ ಇಲ್ಲದೆಯೆ ಪರಾಕ್ರಮಿಗಳನು ಸದೆಬಡಿಯುವನು ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸಬಲ್ಲನು.

25 ದುಷ್ಕಾರ್ಯಗಳು ಆತನಿಗೆ ತಿಳಿದಿರುವ ಕಾರಣ ಇರುಳಲ್ಲೇ ದುರುಳರನು ಕೆಡವಿ ನಾಶಕ್ಕೆ ಗುರಿಮಾಡುವನು.

26 ಅಪರಾಧಿಗಳಂತೆ ಅವರನು ದಂಡಿಸುವನು ಎಲ್ಲರು ನೋಡುವಂತೆ ಅವರನು ಖಂಡಿಸುವನು.

27 ದೇವರ ಮಾರ್ಗಗಳೆಲ್ಲವನು ಅವರು ಅಲಕ್ಷ್ಯಮಾಡಿದರು ಆತನಿಗೆ ವಿಧೇಯರಾಗದೆ ತಿರುಗಿಬಿದ್ದರು.

28 ಬಡವರ ಗೋಳಾಟ ದೇವರಿಗೆ ಮುಟ್ಟುವಂತೆ ಮಾಡಿದ್ದರು ದಿಕ್ಕಿಲ್ಲದವರ ಗೋಗರೆತ ಆತನ ಕಿವಿಗೆ ಬೀಳುವಂತೆ ಮಾಡಿದ್ದರು.

29 ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?

30 ಭಕ್ತಿಹೀನನು ಜನರನು ಆಳಬಾರದು ಅಂಥವನು ಜನರಿಗೆ ಉರುಲಾಗಬಾರದು.

31 ಅಂಥ ಮನುಷ್ಯನು ದೇವರಿಗೆ: ‘ಪ್ರಾಯಶ್ಚಿತ್ತ ಮಾಡಿರುವೆ, ಇನ್ನು ಮುಂದೆ ಪಾಪಮಾಡೆ.

32 ಕಾಣದಿರುವ ಮಾರ್ಗವನ್ನು ತೋರೆನಗೆ ತಪ್ಪುಮಾಡಿದ್ದರೂ ಮತ್ತೆ ಮಾಡೆ’ ಎಂದು ಹೇಳಿದ್ದಾದರೆ,

33 ದೇವರು ಅಂಥವರನ್ನು ದಂಡಿಸಬೇಕೆನ್ನುತ್ತೀಯೋ? ಆತನ ತೀರ್ಪನ್ನು ನೀನೇ ಅಲ್ಲಗಳೆದಿರುವೆಯಲ್ಲವೆ? ಈಗ ನಾನು ಹೇಳಲಾರೆ, ನೀನೇ ಹೇಳು, ನಿನ್ನ ಅಭಿಪ್ರಾಯವನು ನಮಗೆ ತಿಳಿಸು.

34 ಬುದ್ದಿವಂತರು, ನನ್ನನಾಲಿಸಿದ ಜ್ಞಾನಿಗಳು ನಿನ್ನ ವಿಷಯವಾಗಿ ಹೇಳುವ ಮಾತುಗಳಿವು:

35 ‘ಯೋಬನು ತಿಳುವಳಿಕೆಯಿಲ್ಲದೆ ನುಡಿದಿದ್ದಾನೆ ಅವನ ಮಾತುಗಳಲ್ಲಿ ಬುದ್ದಿವಂತಿಕೆ ಇಲ್ಲ.

36 ಅವನ ಪರಿಶೋಧನೆ ಇನ್ನೂ ಮುಂದುವರೆದರೆ ಒಳಿತು ಅವನು ಕೊಟ್ಟ ಉತ್ತರ ದುರುಳರಿಗೆ ತಕ್ಕುದಾದುದು.

37 ಅವನು ಅಪರಾಧಿ ಮಾತ್ರವಲ್ಲ, ದೇವದ್ರೋಹವೆಸಗಿದ್ದಾನೆ ನಮ್ಮ ಮಧ್ಯೆ ಸಂದೇಹವನು ಎಬ್ಬಿಸಿದ್ದಾನೆ ದೇವರಿಗೆ ವಿರುದ್ಧವಾಗಿ ಅಧಿಕ ಪ್ರಸಂಗಮಾಡುತ್ತಾನೆ’.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು