Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 32 - ಕನ್ನಡ ಸತ್ಯವೇದವು C.L. Bible (BSI)


ಎಲೀಹುವನ ಭಾಷಣ ( 32:1—37:24 )

1 ಯೋಬನು ತಾನು ಸತ್ಯವಂತನೆಂದು ಸಾಧಿಸಿದ್ದನು. ಇದನ್ನು ಕೇಳಿದ ಅವನ ಮೂವರು ಮಿತ್ರರು ವಾದಿಸುವುದನ್ನು ನಿಲ್ಲಿಸಿಬಿಟ್ಟರು.

2 ಆಗ ಬೂಜ್‍ನವನಾದ ಬರಕೇಲನ ಮಗ ಎಲೀಹುವನಿಗೆ ಸಿಟ್ಟೇರಿತು. ಇವನು ರಾಮ್‍ಗೋತ್ರಕ್ಕೆ ಸೇರಿದವನು. ಯೋಬನು ತಾನು ದೇವರಿಗಿಂತ ನ್ಯಾಯವಂತನೆಂದು ಎಣಿಸಿಕೊಂಡ ಕಾರಣ ಎಲೀಹುವನಿಗೆ ಸಿಟ್ಟುಹತ್ತಿತ್ತು.

3 ಯೋಬನ ಆ ಮೂವರು ಮಿತ್ರರ ಮೇಲೂ ಅವನು ಕೋಪಗೊಂಡನು. ಏಕೆಂದರೆ ಯೋಬನಿಗೆ ತಕ್ಕ ಉತ್ತರ ಕೊಡಲಾಗದೆ ದೇವರನ್ನೇ ತಪ್ಪಿತಸ್ಥರನ್ನಾಗಿಸಿದ್ದರು.

4 ಆ ಮಿತ್ರರು ತನಗಿಂತ ಹಿರಿಯವರಾಗಿದ್ದುದರಿಂದ ಎಲೀಹುವನು ಮೊದಲೇ ಮಾತನಾಡದೆ ಈವರೆಗೂ ಕಾದುಕೊಂಡಿದ್ದನು.

5 ಆ ಮೂವರ ಬಾಯಿಯಲ್ಲಿ ಉತ್ತರವೇ ಇಲ್ಲದುದನ್ನು ಕಂಡು ಕಿಡಿಕಿಡಿಯಾದನು.

6 ಆಗ ಬೂಜಿನವನಾದ ಬರಕೇಲನ ಮಗ ಎಲೀಹುವನು ಕೊಟ್ಟ ಉತ್ತರ: “ನಾನು ಕಿರಿಯವನು, ನೀವು ಎಷ್ಟೋ ಹಿರಿಯವರು ಎಂದೇ ಸಂಕೋಚಪಟ್ಟೆನು ನನ್ನ ಅಭಿಪ್ರಾಯ ತಿಳಿಸಲು ಅಂಜಿದೆನು.

7 ದೊಡ್ಡವರು ಮಾತಾಡಲಿ ಎಂದುಕೊಂಡೆನು ವಯೋವೃದ್ಧರು ಸುಜ್ಞಾನವನು ಬೋಧಿಸಲಿ ಎಂದೆನು.

8 ಆದರೆ ಮಾನವರಿಗುಂಟು ಒಂದು ಆತ್ಮ ಸರ್ವಶಕ್ತಸ್ವಾಮಿಯ ಉಸಿರಿನ ಮೂಲಕ ಅವರಿಗೆ ದೊರಕುತ್ತದೆ ವಿವೇಕ.

9 ವಯೋವೃದ್ಧರು ಮಾತ್ರ ಜ್ಞಾನಿಗಳಲ್ಲ ಮುದುಕರು ಮಾತ್ರ ನ್ಯಾಯಬಲ್ಲವರಲ್ಲ.

10 ಆದಕಾರಣ ನನ್ನ ಕಡೆಗೂ ಕಿವಿಗೊಡಿ ನನ್ನ ಅಭಿಪ್ರಾಯ ತಿಳಿಸುತ್ತೇನೆ, ಕೇಳಿ:

11 ನೀವು ಆಡುತ್ತಿದ್ದ ಮಾತುಗಳನು, ಮಾಡುತ್ತಿದ್ದ ಆಲೋಚನೆಗಳನು ಮುಂದಿಡುತ್ತಿದ್ದ ವಾದಗಳನು ನಾನು ಕಾದು ಕೇಳುತ್ತಿದ್ದೆನು.

12 ಯೋಬನನು ಖಂಡಿಸಬಲ್ಲವನು, ಅವನಿಗೆ ತಕ್ಕ ಉತ್ತರಕೊಡಬಲ್ಲವನು ನಿಮ್ಮಲ್ಲಿ ಯಾರೂ ಇಲ್ಲದಿರುವುದನು ನಾನು ಗಮನಿಸಿದೆನು.

13 ‘ನಿಮಗೆ ಬುದ್ಧಿ ಬಂದಿದೆ’ ಎಂದುಕೊಳ್ಳಬೇಡಿ ‘ದೇವರೇ ಅವನನು ಖಂಡಿಸಲಿ, ನರನಿಂದಾಗದು,’ ಎನ್ನದಿರಿ.

14 ಯೋಬನು ನನ್ನೊಡನೆ ವಾದಮಾಡಲಿಲ್ಲ ನಿಮ್ಮ ಹಾಗೆ ಅವನಿಗೆ ನಾನು ಉತ್ತರಿಸುವುದಿಲ್ಲ.

15 “ಯೋಬನೇ, ಇವರು ಉತ್ತರಿಸದೆ ನಿಬ್ಬೆರಗಾಗಿರುವರು ಇವರ ಸೊಲ್ಲೇ ಅಡಗಿಹೋಗಿರುವುದು.

16 ಉತ್ತರ ಕೊಡಲಾಗದೆ ಇವರು ಮೌನದಿಂದಿರಲು ನಾನಿನ್ನೂ ಸುಮ್ಮನೆ ಕಾದುಕೊಂಡಿರಲಾಗದು.

17 ನಾನು ನನ್ನ ಪಾಲಿನ ಉತ್ತರವನು ಹೇಳುವೆನು ನಿನಗೆ ನನ್ನ ಅಭಿಪ್ರಾಯವನು ತಿಳಿಸುವೆನು.

18 ಹೇಳಬೇಕಾದವು ನನ್ನಲ್ಲಿ ತುಂಬಿವೆ ಹೇಳಲು ನನ್ನ ಅಂತರಾತ್ಮ ಒತ್ತಾಯಪಡಿಸುತ್ತಿದೆ.

19 ದ್ರಾಕ್ಷಾರಸ ತುಂಬಿ ಬಾಯಿಕಟ್ಟಿದ ಹೊಸಬುದ್ದಲಿಯಂತೆ ನನ್ನ ಅಂತರಂಗವು ಬಿರಿದು ಒಡೆದುಹೋಗುವ ಹಾಗಿದೆ.

20 ತುಟಿ ತೆರೆದು ನಾನು ಉತ್ತರಿಸಲೇಬೇಕು ನೆಮ್ಮದಿಯಿಂದಿರಲು ನಾನು ಮಾತಾಡಲೇಬೇಕು.

21 ನಾನಾರಿಗೂ ಮುಖದಾಕ್ಷಿಣ್ಯ ತೋರುವುದಿಲ್ಲ ಯಾವ ಮಾನವನಿಗೂ ಮುಖಸ್ತುತಿ ಸಲ್ಲಿಸುವುದಿಲ್ಲ.

22 ಮುಖಸ್ತುತಿ ಮಾಡಲು ನನ್ನಿಂದಾಗುವುದಿಲ್ಲ. ಮಾಡಿದರೆ ಸೃಷ್ಟಿಕರ್ತ ನನ್ನನು ಬೇಗ ನಿರ್ಮೂಲಮಾಡಬಲ್ಲ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು